ಡಬ್ಬಿಂಗ್ ವಿರೋಧಿ ಕನ್ನಡ ದ್ರೋಹಿ ಪಡೆಗೊಂದು ಧಿಕ್ಕಾರ!

 

ಕನ್ನಡ ನುಡಿಯ ರಕ್ಷಕರು ಎನ್ನುವಂತೆ ಮಾತಾಡುತ್ತಾ ಡಬ್ಬಿಂಗನ್ನು ವಿರೋಧಿಸಿ ವೀರಾವೇಶದ ಮಾತಾಡುವ ಕನ್ನಡ ಚಿತ್ರರಂಗದ ಜನರನ್ನು ನೋಡಿದರೆ ಇವರನ್ನು ಕನ್ನಡದ್ರೋಹಿ ಅಶಾಢಭೂತಿ ಸ್ವಾರ್ಥದ ಮೊಟ್ಟೆಗಳು ಅನ್ನದೆ ಬೇರಾವ ಹೆಸರಲ್ಲೂ ಕರೆಯುವುದು ಅಸಾಧ್ಯ ಎನ್ನಿಸುತ್ತದೆ! ಇಂದು ಕರ್ನಾಟಕದಲ್ಲಿ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿ, ಬೆಂಗಳೂರೊಂದರಲ್ಲೇ ಮೊದಲದಿನ ತೆಲುಗಿನಲ್ಲಿ ೩೭೦ಕ್ಕೂ ಹೆಚ್ಚು ಪ್ರದರ್ಶನ, ತಮಿಳಿನಲ್ಲಿ ೬೯ ಪ್ರದರ್ಶನ ಹಾಗೂ ಮಲಯಾಳದಲ್ಲಿ ೫ ಪ್ರದರ್ಶನ ಕಾಣುತ್ತಿರುವ, ಆ ಮೂಲಕ ಬೆಂಗಳೂರಿನಲ್ಲಿ ಮೊದಲದಿನವೇ ೪೪೪ ಪ್ರದರ್ಶನಗಳನ್ನು ದಕ್ಕಿಸಿಕೊಂಡಿರುವ “ಸ್ಪೈಡರ್” ಹೆಸರಿನ ಚಿತ್ರವೊಂದನ್ನು ಕಂಡಾಗ ಈ ಬಣ್ಣದ ಮಂದಿಯ ಬೂಟಾಟಿಕೆಯ ಬಗ್ಗೆ ಅಸಹ್ಯವಾಗುತ್ತದೆ.

ಡಬ್ಬಿಂಗ್ ತಡೆಯಲು ಇವರು ಕೊಟ್ಟ ಕಾರಣಗಳು ಕನ್ನಡ ಚಿತ್ರರಂಗ ಮುಚ್ಚಿ ಹೋಗುತ್ತದೆ ಎನ್ನುವುದು. ಇಲ್ಲಿನ ಚಲನಚಿತ್ರ ಕಾರ್ಮಿಕರು ಕೆಲಸವಿಲ್ಲದೆ ಬೀದಿಪಾಲಾಗುತ್ತಾರೆ ಎನ್ನುವುದು. ಇವರ ವಾದ ನಿಂತಿರುವುದು ಕನ್ನಡಕ್ಕೆ ಪರಭಾಷೆಯ ಚಿತ್ರಗಳು ಡಬ್ ಆಗಿ ಬಂದರೆ ಇಲ್ಲಿ ಯಾರೂ ಕನ್ನಡ ಸಿನಿಮಾ ತೆಗೆಯುವುದಿಲ್ಲ! ಎಲ್ಲರೂ ಡಬ್ ಮಾಡಲು ಶುರು ಮಾಡುತ್ತಾರೆ. ಹಾಗಾಗಿ ಇಲ್ಲಿನ ಕಾರ್ಮಿಕರು ಬೀದಿಪಾಲಾಗುತ್ತಾರೆ ಎನ್ನುವುದು. ಆದರೆ ಐವತ್ತು ವರ್ಷದ ಡಬ್ಬಿಂಗ್ ಬ್ಯಾನಿನಿಂದ ಇವರು ಸಾಧಿಸಿದ್ದಾದರೂ ಏನು? ಕನ್ನಡ ಚಿತ್ರ ತೆಗೆಯುವವರು ಇರುವುದಿಲ್ಲ ಎನ್ನುವ ಕಾರಣ ನೀಡುತ್ತಾ ಕನ್ನಡ ಚಿತ್ರ ನೋಡುವವರಿಲ್ಲದ ಪರಿಸ್ಥಿತಿಗೆ ತಂದಿಡುತ್ತಿದ್ದಾರೆ. ಹೀಗೆ ಕನ್ನಡದ ನೆಲದಲ್ಲಿ ಪರಭಾಷೆ ಮೊಳಗಿದರೆ ಇವರಿಗೆ ಕನ್ನಡ ನಾಶವಾದಂತೆ ಅನ್ನಿಸುವುದಿಲ್ಲ. ಬದಲಿಗೆ ಅಜಿತ್, ಮಹೇಶ್ ಬಾಬು, ರಜನಿ, ಕಮಲ್, ಸಲ್ಮಾನ್, ಅಮಿತಾಬ್, ಅರ್ನಾಲ್ಡ್… ಮೊದಲಾದವರ ಪಾತ್ರಗಳು ಕನ್ನಡದಲ್ಲಿ ಮಾತಾಡಿದರೆ ಕನ್ನಡ ನಾಶವಾಗುತ್ತದೆ. ಕನ್ನಡವನ್ನು ಗುತ್ತಿಗೆಗೆ ತೆಗೆದುಕೊಂಡಂತೆ ಆಡುತ್ತಾ ಕನ್ನಡದ ಹಿತ ಕಾಪಾಡುತ್ತೇವೆ ಎನ್ನುವ ಬೂಸಿ ಬಿಡುತ್ತಾ ಪರಭಾಷಾ ಚಿತ್ರಗಳ ಈ ಮಟ್ಟದ ಬಿಡುಗಡೆಯನ್ನು ಮನೆಯ ಮೂಲೆಯಲ್ಲಿ ಅಡಗಿ ಕೂತು ಸಂಭ್ರಮಿಸುತ್ತಾ, ಮೊದಲದಿನದ ಪ್ರದರ್ಶನಕ್ಕೆ ತಮಗೊಂದು ಟಿಕೆಟ್ ಸಿಕ್ಕರೆ ಸಾಕೆಂದು ಅವರಿವರಲ್ಲಿ ಹಲ್ಲು ಗಿಂಜುತ್ತಾ, ಸಿನಿಮಾ ನೋಡಿಬಂದು ಟ್ವಿಟರಿನಲ್ಲಿ ನಾಚಿಕೆ ಬಿಟ್ಟು ಸಂಭ್ರಮಿಸುತ್ತಾ ಸೆಲ್ಫಿ ಹಾಕಿಕೊಳ್ಳುತ್ತಾ, ತೆಲುಗು ಚಿತ್ರದ ಐವತ್ತರ ಸಮಾರಂಭಕ್ಕೆ ಹೋಗಿ ಕನ್ನಡ ತೆಲುಗು ಭಾಯಿ ಭಾಯಿ ಎಂದು ಹಾರ ಹಾಕಿಸಿಕೊಳ್ಳುತ್ತಾ ಕನ್ನಡದ ನಾಶಕ್ಕೆ ಮುಂದಾಗುತ್ತಿರುವ ಈ ಡಬ್ಬಿಂಗ್ ಹತೋಟಿ ಕೂಟದ ಕುತಂತ್ರಿ ಜನರ ಹಿಡಿತದಿಂದ ಕನ್ನಡವನ್ನು ಬಿಡಿಸಿಕೊಳ್ಳಬೇಕಾಗಿದೆ.

ಸಿನಿಮಾದಲ್ಲಿ ಕನ್ನಡದ ಬಾವುಟ ಹಿಡಿದು ನಾಡಿಗಾಗಿ ಪ್ರಾಣ ಕೊಡುತ್ತೇವೆ ಎನ್ನುವುದೂ ಕೂಡಾ ಜನರು ಮೆಚ್ಚಲಿ, ಆ ಮೂಲಕ ತಮ್ಮ ಸಿನಿಮಾ ಗೆಲ್ಲಲಿ, ಆ ಮೂಲಕ ತಮ್ಮ ಮಾರುಕಟ್ಟೆ ಬೆಲೆ ಹೆಚ್ಚಲಿ ಎನ್ನುವ ಸ್ವಾರ್ಥಕ್ಕಾಗೇ ಎನ್ನಿಸುವುದು.. ಈ ಮಟ್ಟದಲ್ಲಿ ಕನ್ನಡೇತರ ಚಿತ್ರವೊಂದು ನಮ್ಮ ನಾಡಿನ ಸಿನಿಮಾ ಮಂದಿರಗಳನ್ನು ಆಕ್ರಮಿಸಿಕೊಳ್ಳುತ್ತಿರುವುದಕ್ಕೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿರುವ ಇದರ ಬಗ್ಗೆ ತುಟಿಪಿಟಕ್ಕೆನ್ನದೆ ಇರುವುದರಿಂದಲೇ!

ಕನ್ನಡನಾಡಲ್ಲಿ ಇದೀಗ ಸ್ಪೈಡರ್ ಕನ್ನಡಕ್ಕೆ ಡಬ್ ಆಗಿ ಬಂದಿದ್ದರೆ ಈ ೪೪೪ ಪ್ರದರ್ಶನಗಳಲ್ಲಿ ಕಡೇಪಕ್ಷ ಅರ್ಧದಷ್ಟು ಕನ್ನಡದಲ್ಲಿ ಇರುತ್ತಿತ್ತೇನೊ. ಇಂದಿಗೂ ಈ ೪೪೪ ಚಿತ್ರಮಂದಿರಗಳಿಗೆ ಹೋಗುತ್ತಿರುವವರು ತಲುಗು, ತಮಿಳು, ಮಲಯಾಳಿ ಜನರಲ್ಲ. ಬದಲಿಗೆ ಕನ್ನಡಿಗರು! ಡಬ್ಬಿಂಗ್ ವಿರೋಧಿಸಿ ಕನ್ನಡಿಗರು ಪರಭಾಷೆಯಲ್ಲಿ ಮನರಂಜನೆ ಪಡೆದುಕೊಳ್ಳುವಂತೆ ಮಾಡುವ ಮೂಲಕ ಕನ್ನಡ ಚಿತ್ರೋದ್ಯಮದ ಜನರು ಕನ್ನಡ ಪ್ರೇಕ್ಷಕರನ್ನು ಕನ್ನಡದ ಮನರಂಜನೆಯಿಂದ ದೂರ ತಳ್ಳಿ, ಆ ಮೂಲಕ ಕನ್ನಡ ಚಿತ್ರರಂಗಕ್ಕೊಂದು ಅಂತಿಮ ಚರಣ ಬರೆಯಲು ಮುಂದಾಗುತ್ತಿದ್ದಾರೆ. ಅದು ಅವರ ಹಣೆಬರಹ ಅಂದುಕೊಂಡು ತೆಪ್ಪಗಿರೋಣ ಅನ್ನುವ ಹಾಗಿಲ್ಲ. ಇವರ ಈ ಸ್ಪರ್ಧೆಯನ್ನೆದುರಿಸಲಾಗದ ಸ್ವಾರ್ಥದ ನಡೆಯಿಂದ ಕನ್ನಡಿಗರು ಕನ್ನಡದ ಮನರಂಜನೆಯಿಂದ ದೂರಸರಿಯುತ್ತಾರೆ. ಇದಕ್ಕಿಂತಲೂ ಮುಖ್ಯವಾಗಿ ಪರಭಾಷಿಕರು ಕನ್ನಡದ ಮುಖ್ಯವಾಹಿನಿಗೆ ಬರುವಲ್ಲಿ ಡಬ್ಬಿಂಗ್ ಇಲ್ಲದಿರುವುದು ದೊಡ್ಡ ಹಿನ್ನಡೆಯಾಗುತ್ತದೆ..

ಈ ನಿಟ್ಟಿನಲ್ಲಿ ಬನವಾಸಿ ಬಳಗ ಹಮ್ಮಿಕೊಂಡಿರುವ ನಾಳಿನ ಟ್ವಿಟರ್ ಚಳವಳಿ ಮಹತ್ವದ್ದಾಗಿದೆ. ಇದನ್ನು ಗೆಲ್ಲಿಸುವ ಮೂಲಕ ಡಬ್ಬಿಂಗ್ ವಿರೋಧಿ ಹತೋಟಿಕೂಟಕ್ಕೆ ನಾವು ನಿಮ್ಮ ಹುನ್ನಾರ ಬಲ್ಲೆವು, ನಿಮ್ಮ ಜೊತೆ ನಾವಿಲ್ಲ ಎನ್ನುವ ಸಂದೇಶ ನೀಡಬೇಕಾಗಿದೆ.

Advertisements

ಸತ್ಯದೇವ ತೆರೆದಿಟ್ಟ ಸತ್ಯ!

review

(ಫೋಟೊ ಕೃಪೆ: ವಿಜಯ ಕರ್ನಾಟಕ ದಿನಪತ್ರಿಕೆ)

ಇಂದು ಕನ್ನಡ ಇತಿಹಾಸದಲ್ಲಿ ಮಹತ್ವದ ದಿನ. ಕಳೆದ ೫೦ಕ್ಕೂ ಹೆಚ್ಚು ವರ್ಷಗಳಿಂದ ಅಕ್ರಮವಾಗಿ, ಅಸಂವಿಧಾನಿಕವಾಗಿ, ಕಾನೂನು ಬಾಹಿರವಾಗಿ ತಡೆಹಿಡಿಯಲಾಗಿದ್ದ “ಡಬ್ಬಿಂಗ್” ಕನ್ನಡ ಹಿರಿತೆರೆಗೆ ಪ್ರವೇಶಿಸಿರುವುದನ್ನು ಕನ್ನಡನಾಡಿನ ಮುಂಚೂಣಿಯ ದಿನಪತ್ರಿಕೆಗಳಲ್ಲೊಂದಾದ “ವಿಜಯ ಕರ್ನಾಟಕ” ದಿನಪತ್ರಿಕೆಯಲ್ಲಿ, ಡಬ್ಬಿಂಗ್ ಚಿತ್ರವಾದ “ಸತ್ಯದೇವ್ IPS” ಚಿತ್ರಕ್ಕೆ ವಿಮರ್ಶೆಯನ್ನು ಬರೆಸಿ ಪ್ರಕಟಿಸುವ ಮೂಲಕ… ಡಬ್ಬಿಂಗ್ ಮತ್ತೆ ಶುರುವಾಗಿರುವುದಕ್ಕೆ ಅಧಿಕೃತ ಮಾನ್ಯತೆಯನ್ನು ಕೊಟ್ಟಿದ್ದಾರೆ. ಇದು ಮಹತ್ವದ ಬೆಳವಣಿಗೆ. ಧನ್ಯವಾದಗಳು – ವಿಜಯ ಕರ್ನಾಟಕ.

ವಿಮರ್ಶೆ ಬಂದಿರುವುದೇನೋ ಸರಿಯೇ! ಇದರ ಹಿಂದಿನ ಉದ್ದೇಶ? ಸದರಿ ವಿಮರ್ಶೆಯನ್ನೇ ವಿಮರ್ಶೆ ಮಾಡಿ ನೋಡಬೇಕಾದ ಸನ್ನಿವೇಶ ಬಂದಂತಿದೆ. ವಿಮರ್ಶಕರು  ಬರಹದ ತಲೆಬರಹದಲ್ಲೇ ತಮ್ಮ ಪೂರ್ವಾಗ್ರಹವನ್ನು ಕಾರಿಕೊಂಡಿದ್ದಾರೆ ಮತ್ತು ಕನ್ನಡ ಚಿತ್ರವಿಮರ್ಶೆಯಲ್ಲಿ ಹೊಸದೊಂದು ಮಾನದಂಡ ಹುಟ್ಟುಹಾಕಿದ್ದಾರೆ. ವಿಮರ್ಶೆಯಲ್ಲಿ “ಕನ್ನಡದ ನೇಟಿವಿಟಿ ಅಂತಾ ನೋಡಿದರೆ ನಿರಾಸೆಯಾಗುತ್ತೆ. ಪಾತ್ರಗಳೆಲ್ಲಾ ಕನ್ನಡ ಮಾತಾಡಿದರೂ ಅದು ಕನ್ನಡ ಅನ್ನಿಸದು, ಹಾಡುಗಳಲ್ಲಿ ಕನ್ನಡತನ ಒಂದಿಷ್ಟೂ ಇಲ್ಲ, ಡಬ್ ಮಾಡಿರುವ ಕಲಾವಿದರು ಸಾಕಷ್ಟು ಸರ್ಕಸ್ ಮಾಡಿದಂತೆ ತೋರುತ್ತದೆ. ಪಾತ್ರಗಳು ಪಕ್ಕಾ ತಮಿಳಾದ್ದರಿಂದ ಕನ್ನಡದ ಲೇಪ ಹಚ್ಚಲು ಕಷ್ಟಪಟ್ಟಿದ್ದಾರೆ. ಬಹುತೇಕ ಕಡೆ ನಮ್ಮ ಭಾಷೆಗೆ ಪಾತ್ರಗಳು ಸಿಂಕ್ ಆಗುವುದೇ ಇಲ್ಲ.” ಇಂತಿಷ್ಟು ಕೊಂಕುಗಳನ್ನೆತ್ತಿರುವ ಈ ಬರಹದ ಸಾರಾಂಶ “ಸತ್ಯದೇವ್ IPS ಎನ್ನುವ ಈ ಡಬ್ ಆದ ಚಿತ್ರದ ಮೂಲಚಿತ್ರ ಅದ್ಭುತವಾದ ತಾರಾಗಣ, ನಟನೆ, ಛಾಯಾಗ್ರಹಣ, ಸಂಗೀತ, ಕಥನಗಳಿಂದ ಕೂಡಿರುವ ದೃಶ್ಯಕಾವ್ಯವಾಗಿದೆ ಆದರೆ ಇದನ್ನು ಡಬ್ ಮಾಡುವ ಮೂಲಕ ನೇಟಿವಿಟಿ ಇಲ್ಲದ್ದು ಮನಸ್ಸಿಗೆ ತಟ್ಟಿ ಈ ಸಿನಿಮಾವನ್ನು ಕನ್ನಡ ಸಿನಿಮಾ ಎಂಬುದಾಗಿ ಒಪ್ಪಲಾಗುತ್ತಿಲ್ಲ” ಎಂಬುದಾಗಿದೆ.

ಸತ್ಯದೇವ್ ಚಿತ್ರ ತಮಿಳುನಾಡಿನ ನೇಟಿವಿಟಿಯಂತಿದೆ ಎಂದು ಹೇಳಲು ಸಾಧ್ಯವಿಲ್ಲ. ಮಹಾನಗರದಲ್ಲಿನ ಪೊಲೀಸು, ಗೂಂಡಾ, ಮಾಫ಼ಿಯಾ, ಹೊಡೆದಾಟಗಳು ಇದೀಗ ಯಾವುದೇ ಒಂದು ನೇಟಿವಿಟಿಯ ಮಾನದಂಡಕ್ಕೆ ಅನ್ವಯವಾಗುತ್ತದೆಯೇ ಎಂಬುದೇ ಪ್ರಶ್ನೆ. ರಿಮೇಕಿನ ಮೂಲಕ ಪರಭಾಷೆಯಿಂದ ಫ್ರೇಮ್ ಟು ಫ್ರೇಮ್ ಅಚ್ಚಾಗಿರುವ ನೂರಾರು ಕನ್ನಡ ಚಿತ್ರಗಳಲ್ಲಿ ಒಂದರ ಬಗ್ಗೆಯಾದರೂ ಇಂಥಾ ನೇಟಿವಿಟಿಯ ಮಾನದಂಡ ಬಳಸಿರುವುದು ಕಂಡಿಲ್ಲ. ಡಬ್ ಮಾಡಿರುವ ಕಲಾವಿದರ ಬಗ್ಗೆ ಕೊಂಕು ಮಾತಾದಿರುವುದರ ಬಗ್ಗೆಯೂ ಅಷ್ಟೇ! ಕನ್ನಡದಲ್ಲಿ ತಮ್ಮದೇ ಧ್ವನಿ ನೀಡುವ ಸಾಯಿಕುಮಾರ್, ರವಿಶಂಕರ್, ಪೂಜಾಗಾಂಧಿ ಮೊದಲಾದವರ ಸಂಭಾಷಣೆಯ ಬಗ್ಗೆ ಎಂದಾದರೋ ಇವರು ವಿಮರ್ಶೆ ಮಾಡಿದ್ದಾರಾ? ಪರಭಾಷೆಯ ಗಾಯಕರ ಕನ್ನಡ ಉಚ್ಚರಣೆಯ ಬಗ್ಗೆ ಬರೆದಿದ್ದಾರಾ? ಬಹುತೇಕ ಕನ್ನಡಚಿತ್ರಗಳ ನಾಯಕಿಯರ ಸಂಭಾಷಣೆಗಳಿಗೆ ಡಬ್ಬಿಂಗ್ ನಡೆದಿದೆಯಲ್ಲಾ ಅದರ ಸರ್ಕಸ್ ಬಗ್ಗೆ ಇವರ ಮಾತಿಲ್ಲ. ಯಾಕೆಂದರೆ ಸತ್ಯದೇವ್ ಚಿತ್ರಕ್ಕೆ ಡಬ್ ಮಾಡಿರುವ ಕಲಾವಿದರೆಲ್ಲಾ ಇಂಥಾ ನೂರಾರು ಚಿತ್ರಗಳ ಹಲವಾರು ಕನ್ನಡಬಾರದ ನಟರಿಗೆ ಡಬ್ಬಿಂಗ್ ಮಾಡಿ ಜೀವತುಂಬಿದ ಅನುಭವಿಗಳೇ ಆಗಿದ್ದಾರೆ. ಹೀಗಿರುವಾಗ ಸಂಭಾಷಣೆಗೆ ಕನ್ನಡ ಲೇಪಿಸಲು ಸರ್ಕಸ್ ಮಾಡಿದ್ದಾರೆ ಎನ್ನುವುದನ್ನು ಹೇಗೆ ತೀರ್ಮಾನಿಸಿಬಿಡುತ್ತಾರೆ?

ಹಾಡುಗಳಲ್ಲಿ ಕನ್ನಡತನ ಒಂದಿಷ್ಟೂ ಇಲ್ಲ ಎಂಬುದರ ಅರ್ಥವೇನು? ಇವರು ದೃಶ್ಯ, ಕುಣಿತ, ಜಾಗಗಳ ಕುರಿತು ಮಾತಾಡಿದ್ದರೆ ಈ ಮಾನದಂಡವನ್ನು ಇಂದಿನ  ಎಲ್ಲಾ ಕನ್ನಡ ಚಿತ್ರಗಳಿಗೂ ಅನ್ವಯಿಸಬೇಕಾಗುತ್ತದೆ. ಇನ್ನು ಹಾಡಿನ ಸಾಹಿತ್ಯದ ಬಗ್ಗೆ ಹೀಗೆ ಅಂದಿದ್ದರೆ ಈ ವಿಮರ್ಶಕರಿಗೆ ಡಬ್ಬಿಂಗ್ ಬಗ್ಗೆ ಪರಮದ್ವೇಶವಿದೆ, ಹೊಟ್ಟೆಕಿಚ್ಚಿದೆ ಎನ್ನಬೇಕಾಗುತ್ತದೆ. ಯಾಕೆಂದರೆ ತಿತಲಿ ತಿತಲಿ ಎಂದಾಗಲೀ, ಜೀನಾ ಜೀನಾ ಯಹಾ, ಮುಝೆ ಕುಚು ಕುಚು ಹೋಗಯಾ.. ಎಂದಾಗಲಾಗಲೀ ಕನ್ನಡ ಚಿತ್ರಗಳಲ್ಲಿ ಹಾಡಿನ ಸಾಹಿತ್ಯ ಬಂದಾಗ ಒಂದೇ ಒಂದು ಬಾರಿ ದನಿಯೆತ್ತದ ಇವರು ಕನ್ನಡವೇ ತುಂಬಿತುಳುಕುತ್ತಿರುವ ಸತ್ಯದೇವ್ ಚಿತ್ರದ ಹಾಡುಗಳಲ್ಲಿ ಅದ್ಯಾವ ಇಲ್ಲದ ಕನ್ನಡತನ ಹುಡುಕುತ್ತಿದ್ದಾರೋ ಏನೋ? ಇದೆಕ್ಕೆಲ್ಲಾ ಕಲಶವಿಟ್ಟಂತೆ ಇಲ್ಲಿನ ಪಾತ್ರಗಳು ಕನ್ನಡಕ್ಕೆ ಸಿಂಕ್ ಆಗುತ್ತಿಲ್ಲ ಎಂಬ ಟಿಪ್ಪಣಿ ಬೇರೆ! ಏನದು ಪಾತ್ರಗಳು ಕನ್ನಡಕ್ಕೆ ಸಿಂಕ್ ಆಗುವುದು ಅಂದರೆ? ಇದೂ ಕೂಡಾ ಚಿತ್ರವಿಮರ್ಶೆಯ ಹೊಸ ಮಾನದಂಡ!

ಇಂದು ಕನ್ನಡ ಇತಿಹಾಸದಲ್ಲಿ ಮಹತ್ವದ ದಿನ. ಯಾಕೆಂದರೆ ಡಬ್ಬಿಂಗ್ ವಿರೋಧಿ ಹತೋಟಿಕೂಟವೊಂದು ನಮ್ಮ ನಾಡಲ್ಲಿ ಕೆಲಸ ಮಾಡುತ್ತಿದೆ ಎನ್ನುವುದು ಅನುಮಾನಕ್ಕೆಡೆಯಿಲ್ಲದಂತೆ ಸಾಬೀತಾಗಿದೆ. ಈ ಹತೋಟಿ ಕೂಟ ಕನ್ನಡ ಹೋರಾಟಗಾರರೆಂಬ ಹೆಸರಿನ ಮುಸುಕಿನ ಕಳ್ಳರನ್ನು ಬಳಸಿ, ಡಬ್ ಮಾಡಿದ ಚಿತ್ರ ಪ್ರದರ್ಶಿಸಿದರೆ ಇನ್ಮುಂದೆ ನೇರ ಚಿತ್ರ ಕೊಡುವುದಿಲ್ಲ ಎಂದು ಬ್ಲಾಕ್ ಮೇಲ್ ಮಾಡಿ, ಚಿತ್ರಮಂದಿರಗಳಿಗೆ ಬೆಂಕಿ ಹಾಕುತ್ತೇನೆ ಎಂದೂ, ಚಿತ್ರಮಂದಿರಕ್ಕೆ ನುಗ್ಗಿ ಬಿಡುಗಡೆಯಾಗದಂತೆ ತಡೆಯಿರಿ ಎನ್ನುವ ಪ್ರಚೋದನೆಯನ್ನು ಮಾಧ್ಯಮಗಳ ಮೂಲಕ ಮಾಡಿ ತಾವಾಗೇ ಪುರಾವೆ ಒದಗಿಸಿದ್ದಾರೆ. ಕನ್ನಡ ನಾಡಿನ ಹಲವಾರು ಟಿವಿ ಮಾಧ್ಯಮಗಳು ಏಕಪಕ್ಷೀಯವಾಗಿ ನಡೆದುಕೊಳ್ಳುವ ಮೂಲಕ ಡಬ್ಬಿಂಗ್ ವಿರೋಧಿ ಹತೋಟಿಕೂಟದ ಮುಖವಾಣಿಗಳಾಗಿ ಹೊರಹೊಮ್ಮಿವೆ. ಇದೀಗ ಇಂಥಾ ಕಳಪೆ ಅನಿಸಿಕೆಯ ವಿಮರ್ಶೆಗಳ ಮೂಲಕ ವಿಜಯ ಕರ್ನಾಟಕದಂತಹ ಗಣ್ಯ ದಿನಪತ್ರಿಕೆಗಳ ಸಿನಿಮಾ ವಿಭಾಗದ ಒಳಗೆ ಕೂತಿರುವ ಕೆಲಮಂದಿಯೂ ಹತೋಟಿ ಕೂಟದ ತೆಕ್ಕೆಯಲ್ಲಿರುವವರೇ ಎಂಬುದನ್ನು ಸಾಬೀತು ಮಾಡಿದ್ದಾರೆ. ಈ ಬೆಳವಣಿಗೆಗಳೆಲ್ಲವೂ ಡಬ್ಬಿಂಗ್ ಹೋರಾಟದ ದೃಷ್ಟಿಯಿಂದ ಮೇಲ್ನೋಟದ ಹಿನ್ನಡೆಯಂತೆ ತೋರಿದರೂ ನಿಜ ಅರ್ಥದಲ್ಲಿ ಗೆಲುವುಗಳೇ ಆಗಿವೆ. ಇಲ್ಲದಿದ್ದರೆ ನಾಡಿನ ಮುಂಚೂಣಿ ಪತ್ರಿಕೆಗಳಲ್ಲಿ ಒಂದಾದ ವಿಜಯ ಕರ್ನಾಟಕದಂಥಾ ದೊಡ್ಡ ಪತ್ರಿಕೆಯಲ್ಲಿ ಡಬ್ ಆದ ಚಿತ್ರವೊಂದರ ವಿಮರ್ಶೆ ಪ್ರಕಟವಾಗೋದೂ ಅಂದರೇನು? ಅಲ್ಲವೇ!

ಡಬ್ಬಿಂಗ್: ಭೂತವೂ ಅಲ್ಲ ಭವಿಶ್ಯವೂ ಅಲ್ಲ.. ವರ್ತಮಾನ!

vishwavani_dubbing

(ಚಿತ್ರಕೃಪೆ: ವಿಶ್ವವಾಣಿ)

“ಡಬ್ಬಿಂಗ್ ಎಂಬುದು ಭೂತವೋ? ಭವಿಶ್ಯವೋ?” ಎಂಬ ಹೆಸರಿನ ಬರಹವೊಂದು ಇಂದಿನ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಮೇಲುನೋಟಕ್ಕೆ ಬಾಯಿಮಾತಿಗೆ ನಿಷ್ಪಕ್ಷಪಾತ ಬರಹ, ಚರ್ಚೆಯೊಂದಕ್ಕೆ ಮುನ್ನುಡಿ ಎನ್ನುವಂತೆ ಬರೆದಿದ್ದರೂ ಸದರಿ ಬರಹದ ಆಳದಲ್ಲಿ ಬರಹಗಾರರು ಡಬ್ಬಿಂಗ್ ಬಗ್ಗೆ ಹೊಂದಿರುವ ಪೂರ್ವಾಗ್ರಹ, ಗೊಂದಲ ಮತ್ತು ಸರಿಯಾದ ಮಾಹಿತಿಯ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿ ಈ ಬರಹದ ಬಗ್ಗೆ “ಡಬ್ಬಿಂಗ್: ಕನ್ನಡಿಗರ ಆಯ್ಕೆ ಸ್ವಾತಂತ್ರದ ಹಕ್ಕೊತ್ತಾಯ” ಪುಸ್ತಕ ಬರೆದ ಮೇಲೂ, ಆ ಪುಸ್ತಕದಲ್ಲೇ ಇವರ ಎಲ್ಲಾ ಗೊಂದಲ, ಪೂರ್ವಾಗ್ರಹಗಳಿಗೆ ಉತ್ತರ ಮತ್ತು ಅಗತ್ಯ ಮಾಹಿತಿಗಳನ್ನು ನೀಡಿದ್ದರೂ ಮತ್ತೊಮ್ಮೆ ಬರೆಯಬೇಕಾಗಿದೆ.

ಶ್ರೀಯುತರ ಬರಹ ಆರಂಭವಾಗಿರುವುದೇ ಅಸಹನೆ ತುಂಬಿದ ವ್ಯಂಗ್ಯದೊಂದಿಗೆ… ಇರಲಿ.. ಸಿನಿಮಾ ಹೆಸರುಗಳ ಬಗ್ಗೆ ಇವರು ವ್ಯಕ್ತಪಡಿಸಿರುವ ಅನಿಸಿಕೆಗಳನ್ನು ಬದಿಗಿಟ್ಟು ಮುಂದೆ ನೋಡೋಣ. ಸಿ ಸಿ ಐ ಅಂದರೆ ಭಾರತೀಯ ಸ್ಪರ್ಧಾ ಆಯೋಗವು ಡಬ್ಬಿಂಗ್ ನಿಶೇಧ ಎನ್ನುವುದು ಕಾನೂನು ಬಾಹಿರ ಎನ್ನುವ ತೀರ್ಪನ್ನು ನೀಡಿಲ್ಲ. ಬದಲಿಗೆ ಕರ್ನಾಟಕದಲ್ಲಿರುವ ಚಿತ್ರೋದ್ಯಮಕ್ಕೆ ಸಂಬಂಧಿಸಿದ ಕೆಲವು ಸಂಸ್ಥೆಗಳು ಡಬ್ ಆದ ಕಂಟೆಂಟನ್ನು ಪ್ರಸಾರ ಮಾಡಲು ಕಾನೂನು ಬಾಹಿರವಾಗಿ ತಡೆಯೊಡ್ಡುತ್ತಿರುವುದು ಸ್ಪರ್ಧಾನಿಯಮಗಳನ್ನು ಕಡೆಗಣಿಸಿ, ಹತೋಟಿಕೂಟವಾಗಿ ನಡೆದುಕೊಂಡಿರುವುದು ಸಾಬೀತಾಗಿದೆ ಎಂದು ತೀರ್ಪಿತ್ತು ಆ ಸಂಸ್ಥೆಗಳಿಗೆ ದಂಡ ವಿಧಿಸಿ… ತಕ್ಷಣದಿಂದಲೇ ಅಂತಹ ನಡೆಗಳನ್ನು ಕೈಬಿಡಬೇಕೆಂದು (ಸೀಜ್ & ಡಿಸಿಸ್ಟ್) ಕಟ್ಟಪ್ಪಣೆ ಮಾಡಿದೆ. ಬರಹಗಾರರು ಹೇಳುವಂತೆ ಕನ್ನಡ ಚಿತ್ರರಂಗದ ಅನೇಕರು ರಾತ್ರೋರಾತ್ರಿ ಹಿಟ್ ಮತ್ತು ಕೆಟ್ ಚಿತ್ರಗಳನ್ನು ಡಬ್ ಮಾಡಿಸಿ ತೆರೆಗೆ ತರಲು ರೆಡಿಯಾಗಿಬಿಟ್ಟಿದ್ದಾರೆ ಎಂಬುದೇ ನಿಜವಾದರೆ ದಯಮಾಡಿ ಅಂತಾ ಚಿತ್ರಗಳ/ ನಿರ್ಮಾಪಕರ ಪಟ್ಟಿಯನ್ನು ಬಿಡುಗಡೆ ಮಾಡಲಿ. ಬೇಗ ಸಿನಿಮಾ ಬಿಡುಗಡೆ ಮಾಡಿಸೋಣವಂತೆ!

ಇನ್ನು ಡಬ್ಬಿಂಗ್ ವಿರೋಧಿಗಳ ಪಟ್ಟಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡರ ಹೆಸರನ್ನು ಸೇರಿಸಿ ಬರೆದಿರುವನ್ನು ನೋಡಿದರೆ ಬರಹಗಾರರ ಉದ್ದೇಶವೇ ಗೊಂದಲ ಹುಟ್ಟಿಸುವುದು ಎಂಬಂತೆ ತೋರುತ್ತದೆ. ಡಬ್ಬಿಂಗ್ ಕನ್ನಡ ನಾಡಿಗೆ ಉಂಟು ಮಾಡುವ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಿದಂದಿನಿಂದ ಇದುವರೆವಿಗೂ ಡಬ್ಬಿಂಗ್ ಬಗ್ಗೆ ತಟಸ್ಥ ನಿಲುವು ತೋರಿ ಇದನ್ನು ಒಪ್ಪುವುದು ಬಿಡುವುದು ಕನ್ನಡ ಜನತೆಗೆ ಸೇರಿದ್ದು ಎಂಬ ನಿಲುವನ್ನಲ್ಲದೆ ಬೇರಾವ ನಿಲುವನ್ನು ತೋರಿರದ ನಾರಾಯಣ ಗೌಡರ ಬಗ್ಗೆ ಯಾಕಾಗಿ ಹುಸಿಯಾಡಿದರೋ ದೇವರೇ ಬಲ್ಲ! ಇನ್ನು ಡಬ್ಬಿಂಗ್ ವಿರೋಧಿಗಳು ಸುಮ್ಮನಾಗಿರುವುದರ ಕಾರಣ ತಿಳಿದಿಲ್ಲ ಎಂದಿದ್ದಾರೆ.. ಅವರ ಮೌನಕ್ಕೆ ಕಾರಣವಾಗಿರುವುದು ನ್ಯಾಯಾಲಯ ಮತ್ತು ಸಿಸಿಐಗಳ ನಿಲುವು, ಡಬ್ಬಿಂಗ್ ವಿರೋಧ ಎನ್ನುವುದು ಕಾನೂನು ಬಾಹಿರವಾದದ್ದು ಎಂಬ ತಿಳಿವು, ಕನ್ನಡಿಗರಲ್ಲಿ ಡಬ್ಬಿಂಗ್ ವಿರೋಧಿ ಹತೋಟಿಕೂಟದ ಬಗ್ಗೆ ಮೂಡಿರುವ ಅರಿವುಗಳೇ ಆಗಿವೆ.

ಡಬ್ಬಿಂಗ್ ಬಂದರೆ ಮೂಲಚಿತ್ರದಲ್ಲಿ, ಮೂಲ ಭಾಷೆಯ ಸೊಗಡನ್ನು ಸವಿಯಲು ಸಾಧ್ಯವಾಗದು ಎನ್ನುವ ರಸಗ್ರಾಹಿಯ ಕಾಳಜಿ ತೋರಿದ್ದಾರೆ. ಡಬ್ಬಿಂಗ್ ಚಿತ್ರ ಬಿಡುಗಡೆಯಾದರೆ ಕನ್ನಡದಲ್ಲೇ ಪರಭಾಷೆಯ ಚಿತ್ರಗಳನ್ನು ನೋಡಬೇಕೆನ್ನುವವರಿಗೆ ಅದು ಸಾಧ್ಯವಾಗುತ್ತದೆ..ಅಂತೆಯೇ ಮೂಲಚಿತ್ರವನ್ನು ಮೂಲಭಾಷೆಯಲ್ಲೇ ನೋಡುವವರನ್ನು ಅದು ತಡೆಯುವುದಿಲ್ಲ! ಹಾಗಾಗಿ ರಸಗ್ರಾಹಿಗಳು ಮೂಲಭಾಷೆಯಲ್ಲಿ ನೋಡಿ ತಮಗೆ ಬೇಕಾದ ರಸಾನುಭವವನ್ನು ಪಡೆದುಕೊಳ್ಳುವುದಕ್ಕೆ ಅಡ್ಡಿಯಾದೀತು ಎಂದು ಆತಂಕ ಪಡಬೇಕಾಗಿಲ್ಲ.

ತುಟಿಚಲನೆ ಹೊಂದದೆ ಅಸಹ್ಯವೆನ್ನಿಸಿದರೆ ಖಂಡಿತಾ ಜನರು ಅಂಥಾ ಅಸಹ್ಯವನ್ನು ಸಹಿಸೋಲ್ಲ ಬಿಡಿ. ಇಷ್ಟಕ್ಕೂ ದಬ್ಬಿಂಗ್ ಚಿತ್ರಗಳನ್ನು ನೋಡಲೇಬೇಕೆಂಬ ಕಟ್ಟುಪಾಡನ್ನು ಯಾರೂ ಮಾಡುತ್ತಿಲ್ಲವಲ್ಲ. ಈ ರೀತಿಯ ವಾದಕ್ಕೆ ಉತ್ತರವೆಂಬಂತೆ ಲಿಪ್ ಸಿಂಕಿಂಗ್ ಟೆಕ್ನಾಲಜಿ ಎನ್ನುವುದು ಮೂಡಿಬಂದಿದೆ. ಯಾರಿಗಾದರೋ ತಾವು ಡಬ್ ಮಾಡಿದ ಚಿತ್ರ ಗೆಲ್ಲಲು ಇದು ಸಹಕಾರಿ ಎನ್ನಿಸಿದರೆ ಆ ತಂತ್ರಜ್ಞಾನವನ್ನೂ ಬಳಸಿಕೊಳ್ಳದೆ ಬಿಡುತ್ತಾರೆಯೇ? ಇಷ್ಟಕ್ಕೂ ಇಂದಿನ ಕನ್ನಡ ಚಿತ್ರಗಳಲ್ಲಿ ದಂಡಿ ದಂಡಿಯಾಗಿ ನಟಿಸುತ್ತಿರುವ ಪರಭಾಷಾ ನಟನಟಿಯರ ತುಟಿಚಲನೆ ಮತ್ತು ಸಂಭಾಷಣೆ ಪ್ರತಿಬಾರಿ ಸಿಂಕ್ ಆಗುತ್ತಿದೆಯೇ? ಎಷ್ಟೋ ನಟನಟಿಯರು ಸಂಭಾಷಣೆಯ ಬದಲು “a,b,c,d,e…” ಎಂದು ಹೇಳುವುದೂ ಇದೆ ಎನ್ನುವುದು ಲಿಪ್ ಸಿಂಕಿಂಗ್ ವಾದದ ಪೊಳ್ಳುತನ ತೋರುತ್ತದೆ. ಇಷ್ಟರ ಮೇಲೆ ಡಬ್ ಆದ  ಚಿತ್ರಗಳನ್ನು ಲಿಪ್ ಸಿಂಕಿಂಗ್ ಸರಿಯಿಲ್ಲ ಎನ್ನುವ ಕಾರಣಕ್ಕೆ ನೋಡದಿರುವ ಸ್ವಾತಂತ್ರ್ಯ ನೋಡುಗರಿಗೆ ಇದ್ದೇ ಇದೆಯಲ್ಲವೇ!

ಪರಭಾಷೆಯ ನಟರನ್ನು, ಊರು, ದೃಶ್ಯ, ಬೋರ್ಡು ಮೊದಲಾದವುಗಳನ್ನೂ, ಅವರು ಅವರದ್ಯಾವುದೋ ಬಾವುಟ ಹಿಡಿದುಕೊಂಡು ಹಾಡುವುದನ್ನೂ ನಾವ್ಯಾಕೆ ಅರಗಿಸಿಕೊಳ್ಳಬೇಕು/ ಸಹಿಸಿಕೊಳ್ಳಬೇಕು ಎನ್ನುವರ್ಥದ ಮಾತುಗಳನ್ನು ಬರೆದಿದ್ದಾರೆ. ನಿಜಾ. ನಿಮಗೆ ಇಷ್ಟವಿಲ್ಲದಿದ್ದರೆ ನೋಡಬೇಡಿ ಬಿಡಿ. ಇಂದಿನ ತಂತ್ರಜ್ಞಾನದಲ್ಲಿ ಡಬ್ ಮಾಡುವಾಗ ಹಿನ್ನೆಲೆಯ ದೃಶ್ಯಗಳನ್ನು ತಿದ್ದುವ ಅವಕಾಶವೂ ಇದೆ ಎನ್ನುವುದನ್ನು ಮರೆಯಬಾರದು ಅಷ್ಟೆ.. ಇಷ್ಟಕ್ಕೂ ನೋಡುಗ ಮಹಾಪ್ರಭು ಅಂಥಾ ದೃಶ್ಯಗಳಿರುವ ಸಿನಿಮಾಗಳನ್ನು ನೋಡಬೇಕೇ ಬೇಡವೇ,  ಗೆಲ್ಲಿಸಬೇಕೇ ಸೋಲಿಸಬೇಕೇ ಎಂಬ ತೀರ್ಪನ್ನು ಗಲ್ಲಾಪೆಟ್ಟಿಗೆಯ ಲೆಕ್ಕದ ಮೂಲಕವೇ ಕೊಡುತ್ತಾನಲ್ಲವೇ!

ಇಂಥಿಂಥ ಕಾರ್ಯಕ್ರಮಗಳು ಡಬ್ ಆಗಿ ಬರಬಹುದು, ಇಂಥವು ಬರಬಾರದು ಎನ್ನಲು ನಾವು ಯಾವೂರಿನ ದೊಣೆನಾಯಕರು? ನಿರ್ಮಾಪಕ ತನಗೆ ಯಾವುದು ಲಾಭ ತಂದುಕೊಡಬಲ್ಲದು ಎನ್ನಿಸುತ್ತದೆಯೋ ಅದನ್ನು ಮಾಡುತ್ತಾನೆ. ಇದುವರೆವಿಗೂ ಚಿತ್ರೋದ್ಯಮ ನಡೆದಿರುವುದೇ ಹಾಗಲ್ಲವೇ? ಬರೀ ಚಿತ್ರೋದ್ಯಮವೇಕೆ, ಉದ್ಯಮಗಳು ನಡೆಯುವುದೇ ಹಾಗಲ್ಲವೇ? ನಾವಿಲ್ಲೆಲ್ಲೋ ಕೂತು ಮೊದಲಿಗೆ ಒಳ್ಳೇ ಚಿತ್ರಗಳು ಬರುತ್ತವೆ, ಆಮೇಲೆ ಕಳಪೆ ಸೆಕ್ಸ್ ಚಿತ್ರಗಳೇ ಬರುತ್ತವೆ ಎಂದು ಭವಿಶ್ಯವಾಣಿ ನುಡಿಯುವುದು ಎಷ್ಟು ಸರಿ? ಇಷ್ಟಕ್ಕೂ ಅದೇ ಆಗುವುದಾದರೆ ನೋಡುಗರು ಅಂಥಾ ಚಿತ್ರಗಳನ್ನು ಗೆಲ್ಲಿಸುವ/ ಸೋಲಿಸುವ ಅವಕಾಶವನ್ನಂತೂ ಹೊಂದಿರುತ್ತಾನಲ್ಲವೇ? ನೋಡುಗರನ್ನು ದಡ್ಡರಂತೆಣಿಸಿ ಇವರು ಇಂಥದ್ದನ್ನು ನೋಡಬೇಕು, ಇಂಥದ್ದನು ನೋಡಬಾರದು ಎಂದು ಅವರ ಪರವಾಗಿ ತೀರ್ಪುಕೊಡುವ ಹಕ್ಕನ್ನು ಯಾರಿಗಾದರೋ ಯಾರು ಕೊಟ್ಟಿದ್ದಾರೆ? ಜನರನ್ನು ತಲೆಯಿಲ್ಲದ ಕುರಿಗಳು ಎಂದು ಭಾವಿಸಿ ನೀಡುವ ಇಂಥಾ ನಿರ್ಣಯಾತ್ಮಕ ಹೇಳಿಕೆಗಳ ಹಿಂದೆ ಹತೋಟಿಕೂಟದ ಹುನ್ನಾರವಿರುವಂತೆ ತೋರುವುದಿಲ್ಲವೇ! ಡಬ್ಬಿಂಗಿಗೆ ಬದಲಿಯಾಗಿ ಪ್ಯಾರಾಡಬ್ಬಿಂಗ್, ಸಬ್ ಟೈಟಲ್ ಏರ್ಪಾಟುಗಳು ಬರಲಿ, ಕನ್ನಡದಲ್ಲಿ ಸ್ವಮೇಕ್ ಮಾತ್ರಾ ಬರಲಿ, ರಿಮೇಕು ನಿಲ್ಲಲಿ, ಸ್ಟಾರ್ ನಟರುಗಳ ಕೊಬ್ಬು ಇಳಿಯಲಿ ಅಂತೆಲ್ಲಾ ಮಾತಾಡುವುದು ಬಾಲಿಶ. ಕನ್ನಡದಲ್ಲಿ ಸ್ವಮೇಕ್ ಬರಲಿ, ರಿಮೇಕ್ ಬರಲಿ, ಡಬ್ಬಿಂಗ್ ಬರಲಿ, ನಮ್ಮ ನಟರು ಪರಭಾಷೆಯಲ್ಲೂ ಮಿಂಚಲಿ, ಬೇಕಾದಷ್ಟು ಸಂಪಾದಿಸಲಿ… ನೋಡುಗರ ಅವಕಾಶಗಳ ಬಾಗಿಲು ಎಣೆಯಿರದಷ್ಟು ವಿಸ್ತಾರವಾಗಲಿ.. ಅಷ್ಟೇ!

ಡಬ್ಬಿಂಗ್ ಬರುವುದರಿಂದ ಕನ್ನಡಿಗರಿಗೆ ತಮ್ಮ ನೆಚ್ಚಿನ ಕಾರ್ಯಕ್ರಮಗಳನ್ನು/ ಚಿತ್ರಗಳನ್ನು ತಮ್ಮ ತಾಯ್ನುಡಿಯಲ್ಲಿ ನೋಡುವ ಅವಕಾಶ ಸಿಗುತ್ತದೆ. ದಶಕಗಳಿಂದ ಕಾನೂನು ಬಾಹಿರವಾಗಿ ಕಸಿದುಕೊಂಡಿದ್ದ ಆಯ್ಕೆಯ ಸ್ವಾತಂತ್ರ್ಯ ದಕ್ಕುತ್ತದೆ. ಡಬ್ ಆದ ಚಿತ್ರಗಳು ಮಾರುಕಟ್ಟೆಯಲ್ಲಿ ಗೆಲ್ಲುವುದರಿಂದ ಕನ್ನಡ ಚಿತ್ರೋದ್ಯಮಕ್ಕೆ ನಾಳೆ ಏನಾಗುತ್ತದೋ ಬಲ್ಲವರಿಲ್ಲ. ಅದು ಚಿತ್ರೋದ್ಯಮ ಸ್ಪರ್ಧೆಯನ್ನು ಗುಣಾತ್ಮಕವಾಗಿ ಹೇಗೆ ಎದುರಿಸುತ್ತದೆ ಎಂಬುದರ ಮೇಲೆ ನಿಂತಿದೆ. ಆದರೆ ಕನ್ನಡ ನಾಡು, ಕನ್ನಡಿಗ ಸಮಾಜ ಚಿತ್ರೋದ್ಯಮಕ್ಕಿಂತ ಬಹಳ ದೊಡ್ಡದು ಮತ್ತು ಮುಖ್ಯವಾದದ್ದು ಎನ್ನುವುದನ್ನು ಲೆಕ್ಕಕ್ಕಿಟ್ಟುಕೊಂಡು ನೋಡಿದರೆ ನಾಳೆಗಳು ಸಕಾರಾತ್ಮಕವಾಗೇ ಕಾಣುತ್ತವೆ.

ಹಿಂದೀ ಸ್ವದೇಶಿ, ಇಂಗ್ಲೀಷ್ ಪರದೇಶಿ ಅನ್ನೋದೂ ಒಂದು ತಂತ್ರ!

mujafar

ಮೊನ್ನೆ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಶ್ರೀ ಮುಜಫರ್ ಹುಸೇನ್ ಅವರ ಮಾತುಗಳನ್ನು ನೋಡಿದಾಗ ಈ ಮಂದಿ ಹಿಂದೀ ಪ್ರಚಾರಕ್ಕೆ ಯಾವ ವೇದಿಕೆಯಾದರೂ ಸರಿ, ಯಾವ ನೆಪವಾದರೂ ಸರಿ.. ಸಿಕ್ಕ ಅವಕಾಶ ಬಿಡದೆ ಮರುಳು ಮಾಡೋಕೆ ಮುಂದಾಗ್ತಾರೆ ಅನ್ನಿಸಿತು!

ಸುಳ್ಳಿನ ಸರಮಾಲೆ!

ಇಂಗ್ಲೀಷು ಕನ್ನಡದ ದೊಡ್ಡಶತ್ರು. ಹಿಂದೀ ಸೋದರಿ ಭಾಷೆ. ಸಂಸ್ಕೃತ ಹೃದಯದ ಭಾಷೆ, ತಾಯಿ ಭಾಷೆ ಎಂದೆಲ್ಲಾ ಆಣಿಮುತ್ತು ಉದುರಿಸಿದ್ದಾರೆ. ಸಂಸ್ಕೃತದ ಹಿರಿಮೆಯನ್ನು ಕೊಂಡಾಡುತ್ತಾ ಸಂಸ್ಕೃತವನ್ನು ಭಾರತದ ಎಲ್ಲಾ ಭಾಷೆಗಳ ತಾಯಿ ಎನ್ನುವ ಹಸಿ ಹಸಿ ಸುಳ್ಳನ್ನು ಹರಿಯಬಿಟ್ಟಿರುವ ಮುಜಫರ್ ಹುಸೇನ್ ಸಾಹೇಬರು, ಭಾರತೀಯ ಭಾಷೆಗಳಲ್ಲಿರುವ ಸಂಸ್ಕೃತ ಪದಗಳನ್ನು ತೆಗೆದು ಹಾಕಿದರೆ ಅವು ಭಾಷೆ ಎನ್ನಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಆ ಮೂಲಕ ಕನ್ನಡಕ್ಕೆ ಸಂಸ್ಕೃತವನ್ನು ಎದುರಾಳಿಯಾಗಿ ನಿಲ್ಲಿಸುವ ಬೇಡದ ಮಾತಾಡಿದ್ದಾರೆ. ಈ ಮೆರೆಸುವಿಕೆ ಮುಂದುವರೆಸುತ್ತಾ ಸಂಸ್ಕೃತವನ್ನು ಹೃದಯದ ಭಾಷೆ ಎಂದು ಕರೆದಿದ್ದಾರೆ. ಜೊತೆಗೆ ಇಂಗ್ಲೀಷ್ ಇಲ್ಲದೆ ಜೀವಿಸಬಹುದು, ನಿಮ್ಮ ತಾಯ್ನುಡಿಯ ನಂತರದ ಸ್ಥಾನವನ್ನು ಹಿಂದೀಗೆ ಕೊಡಿ ಎಂದು ಬೇತುಕೊಂಡಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಹಿಂದೀಯನ್ನು ಅರ್ಥಮಾಡಿಕೊಳ್ಳುತ್ತಾರೆ ಅದಕ್ಕಾಗಿ ಹಿಂದೀಯನ್ನು ಹೆಚ್ಚೆಚ್ಚು ಬಳಸಿ ಎಂದು ಸಲಹೆ ನೀಡಿದ್ದಾರೆ.

ಎದುರಾಳಿ ನಿಲ್ಲಿಸುವ ಹುಚ್ಚು!

ನಿಜವಾಗಿ ನೋಡಿದರೆ ಇಂಗ್ಲೀಷು ಕನ್ನಡಿಗರಿಗೆ ಶತ್ರುವೂ ಅಲ್ಲ, ಹಿಂದೀ ಸೋದರಿಯೂ ಅಲ್ಲ, ಸಂಸ್ಕೃತ ತಾಯಿಯೂ ಅಲ್ಲ. ಎಲ್ಲವೂ ಭಾಷೆಗಳು ಅಷ್ಟೆ. ಕನ್ನಡಿಗರಿಗೆ ಕನ್ನಡವಲ್ಲದ ಬೇರೆಲ್ಲಾ ನುಡಿಗಳೂ ಪರಕೀಯವೇ! ವಾದ ಮಾಡುವವರು ಅದು ಶತ್ರು, ನಮ್ಮದು ಸೋದರಿ ಅದಕ್ಕಾಗಿ ನಮ್ಮ ನುಡಿಯನ್ನು ಒಪ್ಪಿಕೊಳ್ಳಿ ಅನ್ನುತ್ತಾರೆ ಎಂದರೆ ಅದರಲ್ಲಿ ಖಂಡಿತವಾಗಿಯೂ ಹುನ್ನಾರವಿದೆ ಎಂದೇ ಅರ್ಥ. ಯಾಕೆಂದರೆ ಜನರು ಸ್ವಾಭಾವಿಕವಾಗಿ ತಮಗೆ ಅನುಕೂಲಕರವಾದ ಭಾಷೆಯನ್ನು ಬಳಸುತ್ತಾರೆ. ನಾಡಿನ ಸರ್ಕಾರಗಳು ಜನರ ನುಡಿಯಲ್ಲಿ ಹೆಚ್ಚೆಚ್ಚು ಸೇವೆಗಳನ್ನು ಒದಗಿಸುವುದು ಜನರಿಗೆ ಮಾಡಬಹುದಾದ ಬಹುದೊಡ್ಡ ಉಪಕಾರ ಎನ್ನಬಹುದು.

ಕನ್ನಡದಿಂದ ಸಂಸ್ಕೃತವನ್ನು ತೆಗೆದು ಹಾಕುವ ಕಲ್ಪನೆಯೇ ಹುಚ್ಚುತನದ್ದು! ವಾಸ್ತವವಾಗಿ ಯಾವ ಭಾಷೆಯೂ ಬೇರೆ ಭಾಷೆಗಳಿಂದ ಎರವಲು ಪದಗಳನ್ನು ಪಡೆಯದೇ ಇರಲು ಸಾಧ್ಯವೇ ಇಲ್ಲ. ಕನ್ನಡದಿಂದ ಸಂಸ್ಕೃತವನ್ನೋ, ಪರ್ಷಿಯಾ ನುಡಿಯ ಪದಗಳನ್ನೋ ಇಂಗ್ಲೀಷನ್ನೋ ತೆಗೆದು ಹಾಕಬೇಕೆನ್ನುವುದೇ ಮೂರ್ಖತನ! ಆದರೆ ಕನ್ನಡದಲ್ಲಿ ಸಂಸ್ಕೃತ ಪದಗಳಿವೆ ಎನ್ನುವ ಕಾರಣಕ್ಕೆ (ಎಷ್ಟು ಪದಗಳಿವೆ, ಆಡು ಮಾತಲ್ಲಿ ಎಷ್ಟಿವೆ, ಸಾಹಿತ್ಯದಲ್ಲಿ ಎಷ್ಟಿವೆ ಎನ್ನುವುದು ಬೇರೆಯೇ ಚರ್ಚೆಯ ವಿಷಯ) ಸಂಸ್ಕೃತವನ್ನು ತಾಯಿ ಎಂದು ವಿಶೇಷವಾಗಿ ಗೌರವಿಸಬೇಕಾದ ಅಗತ್ಯವಿಲ್ಲ. ಗೌರವಿಸುವುದು ಬೇಡ ಎಂದರೆ ಅಗೌರವ ತೋರಿಸಬೇಕೂ ಅಂತಾನೂ ಅಲ್ಲ! ಸಂಸ್ಕೃತ ಭಾಷೆಯ ಶ್ರೀಮಂತಿಕೆಯ ಕಾರಣಕ್ಕಾಗಿ, ಅದರೊಳಗಿರುವ ಸಾಹಿತ್ಯ ಭಂಡಾರ, ಅದರ “ಸಂಯಕ್ ಕೃತ” ಸ್ವಭಾವಕ್ಕಾಗಿ ಅದನ್ನು ಗೌರವಿಸುವುದನ್ನೂ, ಕಲಿಯುವುದನ್ನೂ ಯಾರೂ ವಿರೋಧಿಸುವುದಿಲ್ಲ. ನುಡಿಯೊಂದಕ್ಕೆ ಮತ್ತೊಂದು ನುಡಿಯನ್ನು ಶತ್ರು ಎಂಬಂತೆ ಬಿಂಬಿಸುವುದನ್ನು ಮಾತ್ರಾ ಬಾಲಿಶವಾದ ಮನಸ್ಥಿತಿ ಎನ್ನಬಹುದಷ್ಟೇ!

ಇಂಗ್ಲೀಷ್ ಇಲ್ಲದೆ ಬದುಕಬಹುದು ಎನ್ನುವ ಮಾತು ಭಾವುಕವಾಗಿ ಆಡಬಹುದು ಅಷ್ಟೇ! ಇವತ್ತು ಇಂಗ್ಲೀಷ್ ಇಲ್ಲದೆ ಒಬ್ಬನೇ ಒಬ್ಬನಿಗೂ ಭಾರತದಲ್ಲಿ ಬದುಕಲು ಸಾಧ್ಯವಿಲ್ಲ! ಹಿಂದೀಯನ್ನು ಇಂಗ್ಲೀಷಿನ ಸಮನಾಗಿ ನಿಲ್ಲಿಸುತ್ತಿರುವ ಮೂರ್ಖರು ತಿಳಿಯಬೇಕಾದ್ದು ಏನೆಂದರೆ ಇಂಗ್ಲೀಷಿಗಿರುವ ಉಪಯುಕ್ತತೆಯ ಎದುರು ಹಿಂದೀಯೂ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳೂ ತೀರಾ ಕೆಳಮಟ್ಟದಲ್ಲಿವೆ ಎನ್ನುವುದು ವಾಸ್ತವ. ಇಂಗ್ಲೀಷಿಗಿಂತಾ ಹಿಂದೀ ಹೆಚ್ಚು ಉಪಯುಕ್ತವಾಗಿದ್ದಿದ್ದರೆ ಯಾಕಾಗಿ ಹಿಂದೀ ನಾಡುಗಳಲ್ಲೂ ಜನತೆ, ಇಂಗ್ಲೀಷ್ ಮಾಧ್ಯಮದ ಕಲಿಕೆಯ ಹಿಂದೆ ಬಿದ್ದಿದ್ದಾರೆ? ಕನ್ನಡಿಗರು ಇಂದು ಕಲಿಕೆ, ದುಡಿಮೆ, ವ್ಯವಹಾರಗಳಿಗಾಗಿ ಇಂಗ್ಲೀಷಿನ ಮೇಲೆ ಅವಲಂಬಿತರಾಗಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳಬೇಕು ಅನ್ನುವ ಮಾತು ಒಪ್ಪತಕ್ಕದ್ದೇ ಆಗಿದೆ. ಹೀಗೆ ಕಡಿಮೆ ಮಾಡಿಕೊಳ್ಳುವುದು ಎಂದರೆ ಆ ಜಾಗದಲ್ಲೆಲ್ಲಾ ಕನ್ನಡ ಬರುವುದು ಎಂದು ಅರ್ಥವೇ ಹೊರತು ಇಂಗ್ಲೀಷಿನ ಬದಲಾಗಿ ಹಿಂದೀ/ ಸಂಸ್ಕೃತವನ್ನು ತಂದು ಕೂಡಿಸುವುದು ಎಂದಲ್ಲ! ಕಣ್ಣಿಗೆ ಚುಚ್ಚುತ್ತಿರುವ ಸೂಜಿ ಪಕ್ಕದ ಮನೆಯದ್ದಾದರೂ, ನಮ್ಮ ಮನೆಯದ್ದಾದರೂ ಒಂದೇ ಅಲ್ಲವೇನು? ಅಥವಾ ಬಂಗಾರದ ಸೂಜಿ ಎಂದು ಕಡಿಮೆ ನೋವಾಗುವುದೇನು?

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಿಂದೀಯನ್ನು ಎಲ್ಲರೂ ಅರ್ಥಮಾಡಿಕೊಳ್ಳುತ್ತಾರೆ ಎನ್ನುವುದು ಹಸಿ ಸುಳ್ಳು! ಮೊನ್ನೆ ತಾನೇ ದಾವಣಗೆರೆಯ ಸಮಾವೇಶದಲ್ಲಿ ಮೋದಿಯ ಹಿಂದೀ ಭಾಷಣ ಅರ್ಥವಾಗುತ್ತಿಲ್ಲ ಎಂದು ತಡಬಡಿಸಿದ ರೈತರ ಅಭಿಪ್ರಾಯ ಇದಕ್ಕೊಂದು ಉದಾಹರಣೆ! ಹತ್ತನೇ ತರಗತಿಯ ಪರೀಕ್ಷೆಗಳಲ್ಲಿ ಇಂದಿಗೂ ಹಿಂದೀ ಭಾಷೆಯ ಪರೀಕ್ಷೆಯಲ್ಲಿ ನಪಾಸಾಗುವವರು ದೊಡ್ಡಸಂಖ್ಯೆಯಲ್ಲಿದ್ದಾರೆ. ಎಪ್ಪತ್ತು ವರ್ಷಗಳ ಕಾಲ ಕೋಟಿ ಕೋಟಿ ಹಣ ಖರ್ಚು ಮಾಡಿ ಹಿಂದೀ ಪ್ರಚಾರಕ್ಕೊಂದು ಇಲಾಖೆ ಕಟ್ಟಿ, ಪ್ರತಿ ಇಲಾಖೆಯಲ್ಲೊಂದು ಹಿಂದೀ ಪ್ರಚಾರ ಇಲಾಖೆ ಕಟ್ಟಿ, ಕಂಡ ಕಂಡಲ್ಲಿ ಹಿಂದೀ ತುರುಕಿ, ಹಿಂದೀ ಕಲಿಕೆಯನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಿ ಈಗ ದೇಶದ ಎಲ್ಲರಿಗೂ ಹಿಂದೀ ಬರುತ್ತೆ, ಅದಕ್ಕಾಗಿ ಹಿಂದೀ ಬಳಸಿ ಅನ್ನೋ ಮಾತಾಡೋದು ನಿಜಕ್ಕೂ ಕ್ರೌರ್ಯ! ’ಭಾರತದ ಮೇಲೆ ಪ್ರೀತಿ ಇದ್ದರೆ ಹಿಂದೀ ಕಲೀರಿ’ ಅನ್ನೋರು ನಿಜವಾದ ದೇಶವಿರೋಧಿಗಳು. ವೈವಿಧ್ಯತೆಯನ್ನು ಅಳಿಸಿ ಎಲ್ಲೆಡೆ ಹಿಂದೀ ಸಾಮ್ರಾಜ್ಯ ಸ್ಥಾಪಿಸಲು ಹವಣಿಸೋರನ್ನು ಜನರು ಅಟ್ಟಾಡಿಸಿಕೊಂಡು ಹೊಡೆಯೋ ನಾಳೆಗಳು ಬಂದರೂ ಆಶ್ಚರ್ಯವಿಲ್ಲ! ಅದಕ್ಕೆ ಮೊದಲು ಇಂಥವರು ತಾಯಿ, ತಂಗಿ ಅಂತಾ ಕಥೆ ಹೊಡೆಯೋದನ್ನು ಬಿಟ್ಟು ’ಕನ್ನಡನಾಡಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಕನ್ನಡಿಗರು ಕನ್ನಡವನ್ನು ಕಲಿಕೆ ದುಡಿಮೆ ಆಡಳಿತವೇ ಮೊದಲಾದ ಎಲ್ಲೆಡೆ ಬಳಸುವಂತೆ ಚೆನ್ನಾಗಿ ಕಟ್ಟಿಕೊಳ್ಳಿ’ ಎನ್ನುವ ಮಾತಾಡುವುದು ಸ್ವಲ್ಪ ವಿವೇಕ ಅನ್ನಿಸುತ್ತದೆ!

ನೋಟು ಬೆಲೆಯಳಿಕೆ ಮತ್ತು ಕಪ್ಪುಹಣದ ನಿರ್ಮೂಲನೆ!

2000

ಕೇಂದ್ರಸರ್ಕಾರ ನವೆಂಬರ್ ೮ರಂದು ನಟ್ಟಿರುಳಿನಿಂದ ಜಾರಿಯಾಗುವಂತೆ ೧೦೦೦ ಮತ್ತು ೫೦೦ ರೂಪಾಯಿಗಳ ನೋಟುಗಳ ಬೆಲೆಯಳಿಕೆ ಮಾಡಿದೆ. ಇದರಿಂದಾಗಿ ಸದರಿ ನೋಟುಗಳು ಚಲಾವಣೆ ಕಳೆದುಕೊಂಡಿದೆ. ಈ ನಿಲುವು ಇಡೀ ದೇಶದ ಜನರ ಬದುಕಿನ ಮೇಲೆ ತಕ್ಷಣಕ್ಕೆ ಉಂಟುಮಾಡಿರುವ ಪರಿಣಾಮಗಳು ಮತ್ತು ದೇಶದ ಆರ್ಥಿಕತೆಯ ಮೇಲೆ ಉಂಟುಮಾಡಬಹುದಾದ ಪರಿಣಾಮಗಳ ಬಗ್ಗೆ ವಾದ ವಿವಾದಗಳು ನಡೆದಿವೆ. ಕೇಂದ್ರಸರ್ಕಾರದ ಈ ನಡೆಗಿರುವ ನಾನಾ ಆಯಾಮಗಳನ್ನು ನೋಡೋಣ.

ಕಪ್ಪುಹಣ!

ಭಾರತದಲ್ಲಿ ಸುಮಾರು ೪.೮೦ ಲಕ್ಷ ಕೋಟಿ ರೂಪಾಯಿಗಳಷ್ಟು ಕಪ್ಪುಹಣವಿದ್ದು ಇದು ಕಪ್ಪುಹಣ ಹೆಚ್ಚಿರುವ ದೇಶಗಳ ಪಟ್ಟಿಯಲ್ಲಿ ಪ್ರಪಂಚದಲ್ಲೇ ಒಂಬತ್ತನೇ ಸ್ಥಾನಕ್ಕೇರಿಸಿದೆ! ಕಪ್ಪುಹಣ ಎಂದರೆ ಸರ್ಕಾರಕ್ಕೆ ತೆರಿಗೆ ಕಟ್ಟಿರುವ ಲೆಕ್ಕ ಇಲ್ಲದಿರುವ ಹಣ. ಕಪ್ಪುಹಣ ಅಂದೊಡನೆ ಅದನ್ನು ನೋಟು ಎಂದುಕೊಳ್ಳುವ ಹಾಗಿಲ್ಲ. ಇದು ನಾನಾ ರೂಪದಲ್ಲಿರುತ್ತದೆ. ನಗದು ರೂಪದಲ್ಲಿರಬಹುದು. ಬಂಗಾರದ ರೂಪದಲ್ಲಿರಬಹುದು. ಆಸ್ತಿಯಾಗಿ, ಉದ್ದಿಮೆಗಳಲ್ಲಿ ಬಂಡವಾಳವಾಗಿರಬಹುದು, ವಿದೇಶಿ ಬ್ಯಾಂಕುಗಳ ಖಾತೆಗಳಲ್ಲಿ ಜಮೆಯಾಗಿರಬಹುದು! ನಗದು ರೂಪದಲ್ಲಿ ಚಲಾವಣೆಯಾಗುವ ಹಣಕ್ಕೆ ಶಾಶ್ವತವಾದ ಕಪ್ಪು ಅಥವ ಬಿಳಿ ಎನ್ನುವ ಹಣೆಪಟ್ಟಿ ಇರುವುದಿಲ್ಲ. ಕಪ್ಪುಹಣವು ಸಾಮಾನ್ಯರ ಕೈಗೆ ಬಂದು ತೆರಿಗೆ ಕಟ್ಟಿದೊಡನೆ ಬಿಳಿಯಾಗುತ್ತದೆ, ತೆರಿಗೆ ಕಟ್ಟದೆ ಹೋದೊಡನೆಯೇ ಕಪ್ಪಾಗುತ್ತದೆ. ಉದಾಹರಣೆಗೆ ನೀವೊಂದು ಆಸ್ತಯನ್ನು ನಿರ್ದಿಷ್ಟ ಮೊತ್ತಕ್ಕೆ ಮಾರಿ, ಆ ಬೆಲೆಗೇ ನೋಂದಣಿ ಮಾಡಿಸಿದ್ದರೆ ಬಂದ ಪೂರ್ತಿ ಹಣ ಬಿಳಿಯಾಗಿರುತ್ತದೆ. ಅದೇ ಹಣ ಬಳಸಿ ಅದೇ ಮೊತ್ತಕ್ಕೆ ಮತ್ತೊಂದು ಆಸ್ತಿ ಖರೀದಿಸಿ ಅರ್ಧ ಮೊತ್ತಕ್ಕೆ ನೋಂದಣಿ ಮಾಡಿಸಿ ಉಳಿದ ಹಣವನ್ನು (ಉಳಿದ ಅರ್ಧ ಮೊತ್ತಕ್ಕೆ ತಗಲುವ ತೆರಿಗೆ/ ಶುಲ್ಕ ತಪ್ಪಿಸಿ) ಕೈಬದಲಾಯಿಸಿದರೆ ಅದೇ ಹಣ ಕಪ್ಪಾಗುತ್ತದೆ. ಅದೇ ರೀತಿ ನಿಮ್ಮಿಂದ ಕಪ್ಪು ಹಣ ಪಡೆದ ವ್ಯಕ್ತಿ ಅದೇ ಹಣವನ್ನು ಬಳಸಿ ಮಗದೊಂದು ಆಸ್ತಿ ಖರೀದಿಸಿ ಅದಕ್ಕೆ ಸಂಪೂರ್ಣ ತೆರಿಗೆ/ ಶುಲ್ಕ ಕಟ್ಟಿದೊಡನೆ ಆ ಹಣ ಬಿಳಿಯಾಗಿ ಮಾರ್ಪಡುತ್ತದೆ. ಆದರೆ ಹೆಚ್ಚಿನ ಬಾರಿ ಭ್ರಷ್ಟಾಚಾರದ ಮೂಲಕ ಗಳಿಸುವ, ಆದಾಯದ ಮೂಲ ತೋರಿಸಲಾಗದ ಸಂಪಾದನೆಯನ್ನು ಆಸ್ತಿ ಖರೀದಿಗೆ/ ಕಂಡವರ ಹೆಸರಲ್ಲೋ, ಸುಳ್ಳು ಹೆಸರಲ್ಲೋ ಆಸ್ತಿ ಖರೀದಿ ಮಾಡುವ ಕದೀಮರು ಹೆಚ್ಚು. ಇದು ಬೇನಾಮಿ ಆಸ್ತಿ ಎಂದೇ ಗುರುತಾಗಿದೆ. ದೇಶದಲ್ಲಿರುವ ಕಪ್ಪುಹಣದ ಒಟ್ಟು ಪ್ರಮಾಣದಲ್ಲಿ ನಗದು ರೂಪದಲ್ಲಿರುವುದು ಬರಿಯ ೬% ಎನ್ನುವುದು ಒಂದು ಅಂದಾಜು. ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪುಹಣದ ಪ್ರಮಾಣ ೩ ಲಕ್ಷ ಕೋಟಿ ರೂಪಾಯಿಗಳೆಂಬುದಾಗಿ ಸಿಬಿಐ ೨೦೧೧ರಲ್ಲಿ ಅಂದಾಜು ಮಾಡಿದೆ. ಇದೀಗ ಸರ್ಕಾರ ಕೈಗೊಂಡಿರುವ ಕ್ರಮ ನಗದು ರೂಪದಲ್ಲಿರುವ ಕಪ್ಪುಹಣವನ್ನು ಗುರಿಯಾಗಿಸಿಕೊಂಡಿದೆ.

ನೋಟು ಬೆಲೆಯಳಿಕೆಗೆ ಸಮರ್ಥನೆ!

ಈಗ ಚಲಾವಣೆಯಲ್ಲಿರುವ ೫೦೦, ೧೦೦೦ ಮುಖಬೆಲೆಯ ನೋಟುಗಳಾ ಚಲಾವಣೆಯನ್ನು ರದ್ದು ಮಾಡುವ ಮೂಲಕ ಸರ್ಕಾರವು ಕಪ್ಪುಹಣವನ್ನು ನಿರ್ಮೂಲ ಮಾಡುವುದಾಗಿ ಹೇಳಿಕೊಳ್ಳುತ್ತಿದೆ. ಜೊತೆಗೆ, ಚಲಾವಣೆಯಲ್ಲಿರುವ ನಕಲಿ ನೋಟುಗಳು ಇಲ್ಲವಾಗುತ್ತವೆ, ಉಗ್ರಗಾಮಿ ಹಾಗೂ ದೇಶವಿರೋಧಿ ಚಟುವಟಿಕೆ ನಿಲ್ಲುತ್ತದೆ..ಮೊದಲಾಗಿ ಸರ್ಕಾರ ಘೋಷಿಸಿ.. ಸದರಿ ಬದಲಾವಣೆಯಿಂದ ಸಾರ್ವಜನಿಕರಿಗೆ ಆಗುವ ತಾತ್ಕಾಲಿಕ ತೊಂದರೆಯನ್ನು ಸಹಿಸಿಕೊಂಡು ಕಪ್ಪುಹಣ ನಿರ್ಮೂಲನೆಗೆ ಸಹಕರಿಸುವಂತೆ ದೇಶದ ಜನರಲ್ಲಿ ಮನವಿಯನ್ನೂ ಮಾಡುತ್ತಿದೆ.

ಚಲಾವಣೆಯಲ್ಲಿರುವ ದೊಡ್ಡಮೊತ್ತದ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಾಗ ಇಂತಹ ನೋಟುಗಳನ್ನು ಹೊಂದಿರುವ ಸಾರ್ವಜನಿಕರು ಬ್ಯಾಂಕುಗಳಿಗೆ ಆ ನೋಟುಗಳನ್ನು ಹಿಂತಿರುಗಿಸಿ ಬದಲಿ ನೋಟುಗಳನ್ನು ಪಡೆಯಬೇಕಾಗುತ್ತದೆ ಅಥವಾ ಗೊತ್ತುಮಾಡಿದ ಹೊತ್ತಿನೊಳಗೆ ತಮ್ಮ ಖಾತೆಗೆ ಜಮಾ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಆದಾಯದ ಮೂಲವನ್ನು ಸರ್ಕಾರಕ್ಕೆ ತಿಳಿಸಲೇಬೇಕಾಗುತ್ತದೆ. ಈ ಸಲುವಾಗಿ ಸರ್ಕಾರ ಕೆಲವು ನಿಯಮಗಳನ್ನು ಘೋಷಿಸಿದೆ. ೨.೫ ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಯಾವುದೇ ಖಾತೆಗೆ ಜಮಾ ಮಾಡಿದರೆ ಅಂಥವರು ಆದಾಯದ ಮೂಲವನ್ನು ತಿಳಿಸಬೇಕು. ಇಲ್ಲದಿದ್ದರೆ ೯೦% ಮೊತ್ತವನ್ನು (೩೦% ತೆರಿಗೆ + ದುಪ್ಪಟ್ಟು ದಂಡ) ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ನಿಯಮ ಮಾಡಿದೆ. ಇದು ನಗದು ರೂಪದಲ್ಲಿ ತೆರಿಗೆ ತಪ್ಪಿಸಿದ ಹಣ ಇಟ್ಟುಕೊಂಡವರನ್ನು ಸಂಕಷ್ಟಕ್ಕೆ ದೂಡುವುದು ಖಂಡಿತ. ಹಾಗಾಗಿ ಇಂಥವರು ಇಲ್ಲವೇ ೯೦% ದಂಡ ಕಟ್ಟಬೇಕು ಇಲ್ಲವೇ ಇರುವ ಹಣವನ್ನು ರದ್ದಿಗೆ ಹಾಕಬೇಕು ಎನ್ನುವ ಪರಿಸ್ಥಿತಿಗೆ ದೂಡಲ್ಪಡುತ್ತಾರೆ. ಇದು ಸರ್ಕಾರದ ಲೆಕ್ಕಾಚಾರ.

ನೋಟು ಬೆಲೆಯಳಿಕೆಯ ಪ್ರಸ್ತುತತೆ !

೧೯೭೮ರಲ್ಲಿ ಜನತಾ ಸರ್ಕಾರವಿದ್ದಾಗ ೧೦೦೦ ಮತ್ತು ಹೆಚ್ಚಿನ ಬೆಲೆಯ ನೋಟುಗಳನ್ನು ನಿಶೇಧಿಸಿ, ಇಂತಹುದೇ ಕ್ರಮ ಕೈಗೊಂಡಿತ್ತು. ಅಂದು ಪರಿಣಾಮಕಾರಿಯಾಗಿದ್ದ ಈ ನಡೆ ಇಂದಿಗೂ ಪರಿಣಾಮಕಾರಿಯೇ ಎಂಬುದನ್ನು ಅರಿಯಲು ಅಂದಿಗೂ ಇಂದಿಗೂ ಪರಿಸ್ಥಿತಿಯಲ್ಲಿ ಆಗಿರುವ ಬದಲಾವಣೆಗಳನ್ನು ನಾವು ಗಮನಿಸಬೇಕಾಗಿದೆ. ಅಂದು ಒಟ್ಟು ಚಲಾವಣೆಯಲ್ಲಿದ್ದ ನೋಟುಗಳಲ್ಲಿ ೨% ಮಾತ್ರಾ ೧೦೦೦ಕ್ಕಿಂತ ಹೆಚ್ಚಿನ ಮೌಲ್ಯದ್ದಾಗಿದ್ದವು. ಜನಸಾಮಾನ್ಯರ ಆದಾಯವಾಗಲೀ, ಖರ್ಚುವೆಚ್ಚವಾಗಲೀ ನಾಲ್ಕಂಕೆಯಲ್ಲಿರಲೇ ಇಲ್ಲ. ಅಂದರೆ ಹೆಚ್ಚು ಮೌಲ್ಯದ ನೋಟುಗಳು ಇದ್ದದ್ದೇ ಕೆಲವು ಮಂದಿ ಸಾಹುಕಾರರ ಬಳಿಯಲ್ಲಿ. ಅದು ಬಳಕೆಯಾದದ್ದೇ ಕೂಡಿಡುವ ಸಲುವಾಗಿ. ಏಕೆಂದರೆ ಅಂದು ಎಲೆಕ್ಟ್ರಾನಿಕ್ ವ್ಯವಹಾರ ಇರಲಿಲ್ಲ ಮತ್ತು ಇದ್ದ ವ್ಯವಹಾರವೆಲ್ಲಾ ನೋಟುಗಳಲ್ಲೇ ಇದ್ದವು. ಚಿನ್ನದ ಖರೀದಿಯು ಆಮದು ಮೇಲಿನ ನಿಯಂತ್ರಣಗಳ ಕಾರಣದಿಂದಾಗಿ ಸುಲಭವಾಗಿರಲಿಲ್ಲ. ಹೊರದೇಶಕ್ಕೆ ಸಾಗಿಸುವುದೂ ಸರಳವಾಗಿರಲಿಲ್ಲ. ಹಾಗಾಗಿ ಕಪ್ಪುಹಣವು ಹೆಚ್ಚಾಗಿ ನಗದು ರೂಪದಲ್ಲೇ ಇತ್ತು.

ಇಂದಿನ ಪರಿಸ್ಥಿತಿ ಸಂಪೂರ್ಣವಾಗಿ ಬೇರೆಯೇ ಆಗಿದೆ. ಒಟ್ಟು ಚಲಾವಣೆಯಲ್ಲಿ ೫೦೦, ೧೦೦೦ದ ನೋಟುಗಳ ಪ್ರಮಾಣ ೮೬%. ಬಡವ ಬಲ್ಲಿದನೆನ್ನದೆ ಎಲ್ಲರ ನಡುವೆಯೂ ಈ ನೋಟುಗಳ ಚಲಾವಣೆಯಿದೆ. ಎಲೆಕ್ಟ್ರಾನಿಕ್ ಹಣಕಾಸು ವಹಿವಾಟು ಸಾಧ್ಯವಿರುವ ಇಂದು ನಗದಿನ ಅಗತ್ಯವೇ ಇಲ್ಲದೆ ವ್ಯವಹಾರ ನಡೆಯುತ್ತದೆ. ಜಮೀನು, ಚಿನ್ನದ ರೂಪಕ್ಕೆ ಕಪ್ಪುಹಣ ಬದಲಾಗುವುದು ಸರಳ.. ಸಲೀಸು.. ಇದಕ್ಕೂ ಮೀರಿದ ದಾರಿಯೆಂದರೆ ಹವಾಲ ವಹಿವಾಟಿನ ಮೂಲಕ ಹೊರದೇಶಕ್ಕೆ ಸಂಪತ್ತಿನ ವರ್ಗಾವಣೆ. ಈ ಹಿನ್ನೆಲೆಯಲ್ಲಿ ನೋಡಿದಾಗ ದೇಶದಲ್ಲಿನ ಕಪ್ಪುಹಣದ ನಿರ್ಮೂಲನೆಯೆನ್ನುವುದು ಬರಿಯ ನೋಟು ಬೆಲೆಯಳಿಕೆಯಿಂದ ಆಗುವಂಥದ್ದಲ್ಲ. ಇನ್ನು ಈ ಕ್ರಮ ಉಂಟುಮಾಡಬಹುದಾದ ಉಪಕಾರ ಮತ್ತು ಅಪಕಾರಗಳ ದೃಷ್ಟಿಯಿಂದ ನೋಡಬೇಕಾಗಿದೆ.

ಕಪ್ಪುಹಣದ ಸಮಸ್ಯೆ ಮತ್ತು ಪರಿಹಾರಗಳು?

ತೆರಿಗೆ ತಪ್ಪಿಸಿದ ಹಣವನ್ನು ಕಪ್ಪುಹಣ ಎನ್ನುವಾಗ ದೇಶದಲ್ಲಿ ನಡೆಯುವ ತೆರಿಗೆ ತಪ್ಪಿಸಿದ ಪ್ರತಿ ವಹಿವಾಟಿನ ಆದಾಯವೂ ಕಪ್ಪುಹಣವೇ ಆಗುತ್ತದೆ. ಆದರೆ ಆದಾಯದ ಮಿತಿ ಗೊತ್ತುಮಾಡಿರುವ ಕಾರಣದಿಂದ ಒಂದು ಮೊತ್ತದವರೆಗಿನ ತೆರಿಗೆ ತಪ್ಪಿಸಿದ ಹಣಕ್ಕೆ ಎಣಿಕೆಯು ಇಲ್ಲ, ಅದರತ್ತ ಗಮನವೂ ಇಲ್ಲ. ಉದಾಹರಣೆಗೆ ತೆರಿಗೆಯ ಕಟ್ಟುಪಾಡಿಲ್ಲದ ಕೃಷಿ ಉತ್ಪನ್ನಗಳನ್ನು ಹೊರತು ಪಡಿಸಿ ನಾವು ಬಿಲ್ ಇಲ್ಲದೆ ಪಡೆಯುವ ಪ್ರತಿಯೊಂದು ವಹಿವಾಟು ಕೂಡಾ ತೆರಿಗೆ ತಪ್ಪಿಸಿದ ವಹಿವಾಟೇ ಆಗಿದೆ. ಹೀಗೆ ತೆರಿಗೆ ತಪ್ಪಿಸಿದ ಹಣ ಮಾರುಕಟ್ಟೆಯಲ್ಲಿಯೇ ಓಡಾಡುತ್ತಾ ಚಲಾವಣೆಯಾಗ್ತಾನೇ ಇರುತ್ತೆ. ಇದೇ ಒಂದು ಅರ್ಥವ್ಯವಸ್ಥೆಯಾಗಿ ಬಿಡುತ್ತದೆ. ಇಂಥಾ ವ್ಯವಸ್ಥೆಯನ್ನು ಸಮಾನ ಆರ್ಥಿಕತೆ ಎಂದು ಕರೆಯುತ್ತಾರೆ. ಪ್ರಪಂಚದ ಯಾವ ದೇಶವೂ ಇದರಿಂದ ಹೊರತಾಗಿಲ್ಲ. ಭಾರತದ ಆರ್ಥಿಕತೆಯ ೨೩~೨೬% ಪ್ರಮಾಣ ಇದೇ. ಪ್ರಪಂಚದ ಸರಾಸರಿ ೩೮% ಇದೆ. ಹೀಗಿರುವಾಗ ಕಪ್ಪುಹಣದ ಪಿಡುಗು ಬಹುಶಃ ಅಳಿಸಲಾಗದ ಪಿಡುಗು ಎನ್ನಿಸಿಬಿಡುತ್ತದೆ. ಸಾಮಾನ್ಯವಾಗಿ ಕಪ್ಪುಹಣವನ್ನು ಕಡಿಮೆ ಮಾಡುವ ಕ್ರಮಗಳು ಪ್ರಮುಖವಾಗಿ ಮೂರು ಹಂತಗಳಲ್ಲಿರುತ್ತವೆ. ಮೊದಲಿಗೆ ಇನ್ಮುಂದೆ ಕಪ್ಪುಹಣ ಹುಟ್ಟುವುದನ್ನು ತಡೆಯುವಂತಹ ಕ್ರಮಗಳನ್ನು ಕೈಗೊಳ್ಳಬೇಕು. ಎರಡನೆಯದಾಗಿ ಈಗಿರುವ ಕಪ್ಪುಹಣವನ್ನು ಸಕ್ರಮಗೊಳಿಸಲು ಜನತೆಯನ್ನು ಪ್ರೋತ್ಸಾಹಿಸುವುದು. ಕೊನೆಯದಾಗಿ ಅಡಗಿಸಿಟ್ಟ ಕಪ್ಪುಹಣವನ್ನು ಚಲಾವಣೆಗೆ ಯೋಗ್ಯವಲ್ಲದಂತೆ ಮಾಡುವುದು.

ಸರ್ಕಾರದ ಸಮರ್ಥನೆಯ ನಿಜಾಯಿತಿ!

ನೋಟುಗಳ ಬೆಲೆಯಿಳಿಕೆಯಿಂದ ನಕಲಿ ನೋಟುಗಳ ಹಾವಳಿ ತಪ್ಪುತ್ತದೆ ಎನ್ನುವ ಸರ್ಕಾರದ ಮಾತುಗಳು ಬರಿಯ ತೋರಿಕೆಯದ್ದು ಅಷ್ಟೇ. ಉದಾಹರಣೆಗೆ ನೆರೆಯ ದೇಶದಲ್ಲಿ ಅಚ್ಚಾಗುವ ನಕಲಿ ನೋಟು ಈಗಾಗಲೇ ನಮ್ಮ ಜನರ ನಡುವೆ ಚಲಾವಣೆಯಲ್ಲಿದ್ದರೆ ಅದೂ ಕೂಡಾ ಈಗ ಬ್ಯಾಂಕುಗಳಲ್ಲಿ ವಿನಿಮಯದ ಮೂಲಕ ಸರ್ಕಾರಿ ಖಜಾನೆ ಸೇರಿಬಿಟ್ಟಿರುತ್ತದೆ. ನಾವು ಈಗ ಹಳೆಯ ನೋಟುಗಳನ್ನು ಬ್ಯಾಂಕಿಗೆ ಕಟ್ಟುತ್ತಿರುವ ಸಂದರ್ಭದಲ್ಲಿ ಅದರ ಸಾಚಾತನದ ಪರೀಕ್ಷೆಯೇನೂ ಆಗುತ್ತಿಲ್ಲದಿರುವುದು ಇದಕ್ಕೆ ಕಾರಣ. ಆದರೆ ಈಗಾಗಲೇ ಅಚ್ಚಾಗಿ, ಜನರ ಮಧ್ಯೆ ನುಸುಳಲು ಕಾದಿರುವ ನೋಟುಗಳು ಕೆಲಸಕ್ಕೆ ಬಾರದವಾಗುತ್ತದೆ. ೪೦ ರೂಪಾಯಿ ವೆಚ್ಚ ಮಾಡಿ ಅಚ್ಚುಹಾಕಿದ ನೋಟನ್ನು ೪೦೦ ರೂಪಾಯಿಗೆ ಮಾರಿಕೊಳ್ಳುವ ದಂಧೆಯವರಿಗೆ ೨೦೦೦ ರೂಪಾಯಿ ಬೆಲೆಯ ನೋಟನ್ನು ಜಾರಿ ಮಾಡುವ ಮೂಲಕ ದುಪ್ಪಟ್ಟು ಲಾಭದ ಅವಕಾಶವನ್ನು ಸರ್ಕಾರವೇ ಮಾಡಿಕೊಟ್ಟಂತಾಗಿದೆ. ಇನ್ನು ಕಳ್ಳನೋಟನ್ನು ಹೊಂದಿದವರ ಹಣವನ್ನು ಬಿಳಿಯಾಗಿಸಿಕೊಳ್ಳಲು ನಮ್ಮ ಜನ ಮಾಡುತ್ತಿರುವ ನಾನಾ ದಂಧೆಗಳನ್ನೂ ನೋಡುತ್ತಿದ್ದೇವೆ. ವಾಸ್ತವವಾಗಿ ನೋಟು ನಿಶೇಧವಾದ ಕ್ಷಣದಲ್ಲಿ ಎಷ್ಟು ಕಪ್ಪುಹಣ ನಗದಾಗಿತ್ತೋ ಅವಷ್ಟಕ್ಕೆ ಮಾತ್ರವೇ ರದ್ದಾಗುವ ಭೀತಿ ಇತ್ತು. ಅದನ್ನು ಬಿಳಿಯಾಗಿಸಿಕೊಳ್ಳಲು ಕಂಡವರಿಗೆ ಸಾಲ ನೀಡುವ, ಕಂಡವರ ಖಾತೆಗೆ ಹಣಹಾಕುವ ಅಕ್ರಮ ದಾರಿಗಳನ್ನು ಬಳಸುತ್ತಿರುವ ಬಗ್ಗೆ ನೋಡುತ್ತಿದ್ದೇವೆ. ಹಾಗಾಗಿ ಈಗಿರುವ ಒಟ್ಟು ಕಪ್ಪುಹಣದ ೬% ಮಾತ್ರ ನಗದು ರೂಪದಲ್ಲಿದ್ದಲ್ಲಿ, ಅದರಲ್ಲಿ ರದ್ದಾಗುವ ಕಪ್ಪುಹಣದ ಪ್ರಮಾಣ ಎಷ್ಟೆನ್ನುವುದು ಕುತೂಹಲಕಾರಿ. ಸರ್ಕಾರದ ನಡೆ ಬೆಟ್ಟ ಅಗೆದು ಸುಂಡಿಲಿಯನ್ನು ಹಿಡಿಯುವ ಯತ್ನದಂತೆ ಕಾಣುತ್ತಿದೆಯಷ್ಟೆ. ಇನ್ನು ಮುಂದಿನ ದಿನಗಳಲ್ಲಿ ಕಪ್ಪುಹಣದ ಕದೀಮರು ಎಚ್ಚೆತ್ತುಕೊಂಡು ಉಳಿದ ೯೪%ನ್ನು ಭದ್ರ ಮಾಡಿಕೊಳ್ಳುತ್ತಾರೆ ಅಷ್ಟೆ. ತೊಂದರೆ ಅನುಭವಿಸುವವರು ಕಪ್ಪುಹಣ ಬಂಡವಾಳವಾಗಿ ಮಾರುಕಟ್ಟೆಯಲ್ಲಿ ಚಾಲ್ತಿಗೆ ಬಂದು ಅದು ಹುಟ್ಟುಹಾಕುವ ಉದ್ದಿಮೆಗಳಿಂದ ಹುಟ್ಟುವ ಉದ್ಯೋಗಗಳ ಮೇಲೆ ಅವಲಂಬಿತರಾಗುವ ಬಡ/ ಮಧ್ಯಮ ಜನರಷ್ಟೇ! ಇಂಥವರ ಪ್ರಮಾಣ ಎಷ್ಟೆಂಬುದು ದೇಶದ ಆರ್ಥಿಕತೆಯ ಮೇಲೆ ದೀರ್ಘಾವಧಿಯಲ್ಲಿ ಉಂಟಾಗಬಹುದಾದ ಪರಿಣಾಮಗಳನ್ನು ತೀರ್ಮಾನಿಸುತ್ತದೆ.

ಸರ್ಕಾರದ ನಡೆಗೆ ಟೀಕೆ ಮತ್ತು ಮುಂದಿನ ಸವಾಲು!

ನಾಡಿನ ೮೬% ಬಳಕೆಯಲ್ಲಿರುವ ನೋಟುಗಳ ಬೆಲೆಯಳಿಸಿ ಅವನ್ನು ಚಲಾವಣೆಯಿಂದ ಹಿಂಪಡೆಯಲು ಮುಂದಾಗುವವರಲ್ಲಿ ಅಪಾರವಾದ ಎದೆಗಾರಿಕೆ ಅಥವಾ ಅವಿವೇಕ ತುಂಬಿರಬೇಕು. ಭಾರತ ಸರ್ಕಾರದ ಕ್ರಮದಿಂದಾಗಿ ಜನಸಾಮಾನ್ಯರಲ್ಲಿ ಇದ್ದಕ್ಕಿದ್ದಂತೆ ಹುಟ್ಟಿದ ಅಭದ್ರತೆಯ ಭಾವನೆ, ಬ್ಯಾಂಕುಗಳ ಮುಂದೆ ಸರದಿಯಲ್ಲಿ ನಿಲ್ಲಬೇಕಾದ ಸಂಕಟ, ಎರಡು ಸಾವಿರ ರೂಪಾಯಿ ನೋಟುಗಳನ್ನು ಎ.ಟಿ.ಎಂಗಳಲ್ಲಿ ವಿತರಿಸಲಾಗದ ತಾಂತ್ರಿಕ ಅಡಚಣೆ (ಇದಂತೂ ಸರ್ಕಾರದ ಯೋಗ್ಯತೆಯನ್ನೇ ಪ್ರಶ್ನೆಗೆ ಒಡ್ಡಿದ ತೊಡಕು)ಯಂತಹ ಜನರ ಮೇಲೆ ಆಗಬಹುದಾದ ತಾತ್ಕಾಲಿಕ ಪರಿಣಾಮಗಳನ್ನು ಹೇಗೋ ದೇಶ ಸಹಿಸಿಬಿಡುತ್ತದೆ. ಇದಕ್ಕೆ ಪೂರಕವಾಗಿ ನಮ್ಮ ದೇಶಭಕ್ತಗಣ ಜನರ ಮನಸ್ಸಲ್ಲಿ ಈ ತೊಡಕನ್ನು ಸೈನಿಕರ ಕಷ್ಟದೊಂದಿಗೆ ಹೋಲಿಸುತ್ತಾ ಜನರನ್ನು ಇದೊಂದು ದೇಶಕ್ಕಾಗಿ ಮಾಡುತ್ತಿರುವ ತ್ಯಾಗ ಎನ್ನುವ ಪವಿತ್ರ ಭಾವನೆ ಹುಟ್ಟಿಸುತ್ತಿರುವುದು ಕೂಡಾ ನಿಜ. ಹಾಗಾಗೇ ತಮ್ಮ ಕಷ್ಟಗಳನ್ನು ಸಹಿಸುವ ಮನಸ್ಥಿತಿ, ಸರ್ಕಾರದ ಈ ಕ್ರಮ ದೇಶವನ್ನು ಕಪ್ಪುಹಣದಿಂದ ಮುಕ್ತಗೊಳಿಸಿಬಿಡುತ್ತದೆ ಎನ್ನುವ ನಂಬಿಕೆಯನ್ನು ಹುಟ್ಟುಹಾಕಿದೆ.

ಆದರೆ ಕೇಂದ್ರಸರ್ಕಾರದ ಈ ನಡೆ ಪ್ರಾಮಾಣಿಕವಾದದ್ದೇ ಆಗಿದ್ದಲ್ಲಿ ಕಪ್ಪುಹಣ ತಡೆಯಲು ಬೇನಾಮಿ ಆಸ್ತಿಗೆ ಕಡಿವಾಣ ಹಾಕುವ, ಹೆಚ್ಚು ಹೆಚ್ಚು ನಗದು ರಹಿತ ವಹಿವಾಟನ್ನು ಜಾರಿ ಮಾಡುವ, ಕಪ್ಪುಹಣ ಸಕ್ರಮಗೊಳಿಸುವ ಕ್ರಮಗಳೂ ಅಗತ್ಯ ಏನೇ ಆದರೂ ಮೊದಲಿಗೇ ನೋಟು ಬೆಲೆಯಳಿಕೆ ಮಾಡಿದ್ದು ಜಾಣನಡೆ ಅಲ್ಲ. ಬೇರೆ ಬೇರೆ ರೂಪದಲ್ಲಿರುವ ಕಪ್ಪುಹಣವನ್ನು ಮಟ್ಟಹಾಕದೇ ಜನ ಜೀವನ ಅಸ್ತವ್ಯಸ್ತ ಮಾಡುವ ನೋಟು ಬೆಲೆಯಳಿಕೆ ಆರ್ಥಿಕ ಹಿಂಜರಿತಕ್ಕೆ ಕಾರಣವಾಗುವ ಅಪಾಯವಿದೆ. 

ಅಂದರೆ ಕಪ್ಪುಹಣದ ಸಮಾನಾಂತರ ಆರ್ಥಿಕತೆಯು ದೇಶದ ಜಿಡಿಪಿ ಬೆಳವಣಿಗೆಯ ಮೇಲೆ ಬೀರಬಹುದಾದ ನಕಾರಾತ್ಮಕ ಪರಿಣಾಮ, ಮುಂದಿನ ದಿನಗಳಲ್ಲಿ ದೇಶದ ಅರ್ಥವ್ಯವಸ್ಥೆ ಕುಸಿದು ಹಿನ್ನಡೆಯಾಗಬಹುದಾದ ಆತಂಕಗಳಂತೂ ಇದ್ದೇ ಇದೆ. ಏನೇ ಅಂದರೂ ಮುಂದಿನ ಒಂದೆರಡು ವರ್ಷಗಳಲ್ಲಿ ಈ ಕ್ರಮದ ನಿಜ ಪರಿಣಾಮಗಳನ್ನು ಕಾಣಬಹುದಾಗಿದೆ. ಮಾರುಕಟ್ಟೆಯಲ್ಲಿ ಹಣದ ವಹಿವಾಟು ಕುಸಿಯದಂತೆ, ಜನರ ಆದಾಯ ಕಡಿಮೆಯಾಗದಂತೆ, ತೆರಿಗೆ ಹೊರೆಯಾಗದಂತೆ, ಬೆಲೆಗಳು ಕಡಿಮೆಯಾಗುವಂತೆ ತುರ್ತಾಗಿ ಮಾಡದೇ ಇದ್ದರೆ ನಾಳೆಗಳು ಕಷ್ಟಕರವಾಗಲಿವೆ ಮತ್ತು ಕಪ್ಪುಹಣದ ಸಮಸ್ಯೆಯೂ ಹಾಗೇ ಮುಂದುವರೆಯಲಿದೆ. ವಾಸ್ತವದಲ್ಲಿ ಕಪ್ಪುಹಣದ ಪಿಡುಗು ದೇಶದ ಆರ್ಥಿಕ ವ್ಯವಸ್ಥೆಯ ಹರಿವಿಗೆ  ಅಡ್ಡವಾಗಿ ಆಗಾಗ ಕಟ್ಟಿಕೊಳ್ಳುವ ಮೋರಿಯಂತೆ.. 20-30 ವರ್ಷಕ್ಕೊಮ್ಮೆ ಸ್ವಚ್ಚ ಮಾಡುತ್ತಲೇ  ಇರಬೇಕು.ಈ ಹಿನ್ನೆಲೆಯಲ್ಲಿ ಕಪ್ಪುಹಣ ಕಡಿಮೆ ಮಾಡುವ ಗೊತ್ತು ಮಾಡಿದ ಬಗೆಯೊಂದನ್ನು ರೂಪಿಸಿಕೊಳ್ಳಬೇಕು.

ಹುಸಿ ರಾಷ್ಟ್ರೀಯತೆಯ ವಕ್ತಾರಿಕೆ ಅಂದ್ರೆ ಇದೇ…

shankaramurthy

ಇತ್ತೀಚಿಗೆ ರಾಯಚೂರಿನಲ್ಲಿ ನಡೆದ, ಪ್ರೌಢಶಾಲೆಯ ಹಿಂದೀ ಶಿಕ್ಷಕರು ಸೇರಿದ್ದ ಹಿಂದೀ ದಿನಾಚರಣೆಯ ಒಂದು ಕಾರ್ಯಕ್ರಮದಲ್ಲಿ ಮಾತಾಡ್ತಾ ನಾಡಿನ ಹಿರಿಯ ರಾಜಕಾರಣಿಗಳಾದ ಶ್ರೀಯುತ ಶಂಕರಮೂರ್ತಿಗಳು “ಹಿಂದೀ ಭಾಷೆಯನ್ನು ವಿರೋಧಿಸುವುದೆಂದರೆ ರಾಷ್ಟ್ರೀಯ ಏಕತೆಯನ್ನು ವಿರೋಧಿಸಿದಂತೆ” ಎಂಬ ಮಾತುಗಳನ್ನು ಆಡಿದ್ದಾರೆ. ಇದನ್ನು ಸಮರ್ಥಿಸಲು ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಹಿಂದೀ ಭಾಷೆಯ ಕುರಿತಾಗಿ ಹೊಂದಿದ್ದ ನಿಲುವನ್ನು ತಮ್ಮ ಮಾತಿನಲ್ಲಿ ಹೇಳಿದ್ದಾರೆ.

ಭಾಷೆಯನ್ನು ಹರಡಬೇಕೆನ್ನುವುದೇ ಅನ್ಯಾಯ!

ಹಿಂದೀ ಭಾಷೆಯ ಪ್ರಸಾರಕ್ಕೆ ರಾಷ್ಟ್ರದ ಏಕತೆಯ ಮಂತ್ರ ಹೇಳೋದು ಪಕ್ಕಾ ಹುನ್ನಾರ. ಹಿಂದೀಯನ್ನು ಒಪ್ಪಿ ಎಂದು ಪ್ರಚಾರ ಮಾಡಬೇಕಾದರೆ ದೊಡ್ಡವರ ಮಾತುಗಳನ್ನು ಹೆಸರಿಸೋದು, ದೇಶಭಕ್ತಿ, ದೇಶದ ಏಕತೆಯ ಕಾರಣಗಳನ್ನು ಹೇಳೋದು.. ಹಿಂದೀಯನ್ನು ರಾಷ್ಟ್ರಭಾಷೆ ಅಂತಾ ಸುಳ್ಳು ಹೇಳೋದು… ಇವೆಲ್ಲಾ ಮಾಡ್ತಿದಾರೆ ಅಂದರೆ ಇದರ ಹಿಂದೆ ದೊಡ್ಡ ಹುನ್ನಾರವೇ ಇದೆ ಅನ್ನೋದನ್ನು ಗುರುತಿಸಬಹುದಾಗಿದೆ. ಇರಲಿ, ಅದನ್ನು ಪಕ್ಕಕ್ಕಿಟ್ಟೇ ನೋಡಿದರೆ ಒಂದು ಭಾಷೆಯನ್ನು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಆ ಭಾಷೆ ಬಳಕೆಯಲ್ಲಿರದ ನಾಡಿನಲ್ಲಿ, ಆ ಭಾಷೆಯನ್ನು ಬಳಸದ ಜನರ ನಡುವೆ ಪಸರಿಸಬೇಕು ಎನ್ನುವ ಮನಸ್ಥಿತಿಯೇ ಅನ್ಯಾಯದ್ದು!

ಹಿಂದೀ ಹರಡುವುದು ದೇಶದ್ರೋಹ! ವೈವಿಧ್ಯತೆಗೆ ಎಸಗುವ ದ್ರೋಹ!

ಹಿಂದೀಯೇತರ ನಾಡಿನ ಜನರಿಗೆ ಹಿಂದೀಯನ್ನು ಕಲಿಸಬೇಕೆನ್ನುವುದರ ಉದ್ದೇಶವೇನು? ಕಲಿತು ನಾವು ಆ ಭಾಷೆಯನ್ನು ಬಳಸುವುದು ಯಾರ ಜೊತೆ? ನಾವು ಬೇರೆ ನಾಡಿಗೆ ವಲಸೆ ಹೋದಾಗ ಬಳಸಬೇಕೆಂದೇ? ನಾವೇನು ಹಿಂದೀ ನಾಡಿಗೆ ಮಾತ್ರಾ ವಲಸೆ ಹೋಗುತ್ತೇವೆಯೇ? ಮಹಾರಾಷ್ಟ್ರಕ್ಕೋ, ತಮಿಳುನಾಡಿಗೋ, ಗುಜರಾತಿಗೋ, ಅಸ್ಸಾಮಿಗೋ, ಬಂಗಾಳಕ್ಕೋ ವಲಸೆ ಹೋಗುವುದಾದರೆ ನಾವು ಹಿಂದೀ ಮಾತಾಡಿಕೊಂಡು ಹೋಗಬೇಕೋ ಅಥವಾ ಆಯಾ ನಾಡಿನ ಭಾಷೆ ಕಲಿತು ಹೋಗಬೇಕೋ? ಇದು ಕರ್ನಾಟಕಕ್ಕೂ ಅನ್ವಯಿಸುತ್ತದೆ. ನಮ್ಮ ನಾಡಿಗೆ ವಲಸೆ ಬರುವ ಬೆಂಗಾಲಿ, ಮರಾಟಿಗ, ತಮಿಳ, ಮಲಯಾಳಿ, ಒಡಿಯಾದವನು, ಪಂಜಾಬಿ.. ಇಲ್ಲಿಗೆ ಬಂದಾಗ ನಮ್ಮೊಡನೆ ಕನ್ನಡದಲ್ಲಿ ವ್ಯವಹರಿಸುವುದೇ ಸರಿಯಾದದ್ದು ಎಂಬ ಸಣ್ಣ ಸರಳ ವಿಷಯವನ್ನು ಯೋಚಿಸಲಾರದಷ್ಟು ಮೊದ್ದುತನ ಯಾಕೆ? ಇಷ್ಟು ಮೂಲಭೂತ ವಿಷಯದ ಪಾಟ ನಮ್ಮ ಶಂಕರಮೂರ್ತಿಗಳಿಗೆ ಅವರ ಮೂಲಮನೆ ಸಂಘದಲ್ಲಿ ಆಗಿಲ್ಲವೇ?

ಹಿಂದೀ ಹೇಗೆ ದೇಶದ ಏಕತೆಯನ್ನು ಹೆಚ್ಚಿಸುತ್ತದೆ?

ಹಿಂದೀ ಭಾಷೆಯನ್ನು ಇಡೀ ದೇಶಕ್ಕೆ ಕಲಿಸುವುದರಿಂದ ಅದು ಹೇಗೆ ಭಾರತದ ಏಕತೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ಶಂಕರಮೂರ್ತಿಗಳು ಮತ್ತವರ ನಿಲುವಿನ ಸಮರ್ಥಕರು ತಿಳಿಸಬೇಕಾಗುತ್ತದೆ. ಇಡೀ ಭಾರತದ ಎಲ್ಲಾ ಭಾಷೆಯ ಜನರಿಗೂ ಹಿಂದೀಯನ್ನು ಕಲಿಸಿದರೆ ಒಬ್ಬರ ಮಾತು ಇನ್ನೊಬ್ಬರಿಗೆ ಅರ್ಥವಾಗಿಬಿಡುತ್ತದೆ ಎನ್ನುವುದು ಮೇಲ್ನೋಟಕ್ಕೆ ಏಕತೆಯಂತೆ ಕಂಡರೆ ಅದು ಹಾಗೆಂದುಕೊಳ್ಳುವವರ ದೃಷ್ಟಿದೋಷ ಅನ್ನಬಹುದು. ಹೀಗೆ ಇಡೀ ದೇಶದ ಎಲ್ಲಕಡೆ ಹಿಂದೀ ಭಾಷೆಯನ್ನು ಹರಡಿದರೆ ಆಯಾ ನಾಡುಗಳ ನುಡಿಯ ಕಥೆ ಏನಾದೀತು ಎನ್ನುವುದನ್ನು ಯೋಚಿಸಬೇಕಾಗಿದೆ. ಭಾರತದ ಯಾವುದೇ ಹಿಂದೀಯೇತರ ನಾಡಿಗೆ ಬರುವ ನಾನಾ ಭಾಷೆಯ ಜನರೆಲ್ಲಾ ಹಿಂದೀಯನ್ನು ಕಲಿತು ಬರುವುದರ ಜೊತೆಗೆ ಆಯಾ ನಾಡಿನ ಜನರೂ ಹಿಂದೀ ಭಾಷೆಯನ್ನು ಕಲಿತು ತಮ್ಮ ನಾಡಿಗೆ ಬರುವ ವಲಸಿಗರ ಜೊತೆ ಹಿಂದೀಯಲ್ಲೇ ವ್ಯವಹರಿಸಬೇಕು ಎನ್ನುವ ನಿರೀಕ್ಷೆ ಈ ನಿಲುವಿನ ಹಿಂದಿದೆ. ಹೀಗಾದರೆ ಕನ್ನಡ ನಾಡಿನ ವ್ಯವಹಾರದ ಭಾಷೆ ಯಾವುದಾಗುತ್ತದೆ? ನಮ್ಮೂರಿನ ಬಸ್ಸು, ರೈಲು, ಆಟೋ, ಅಂಗಡಿ, ಮಾಲುಗಳ ಭಾಷೆ ಯಾವುದಾಗುತ್ತದೆ? ನಮ್ಮ ನಾಡಿನ ಮಕ್ಕಳಿಗೆ ಕೆಲಸ ಸಿಗಬೇಕೆಂದರೆ ತಮ್ಮದಲ್ಲದ ಹಿಂದೀ ಭಾಷೆಯನ್ನು ಕಲಿಯುವುದು ಕಡ್ಡಾಯವಾಗುವುದಿಲ್ಲವೇ? ಯಾಕಾದರೂ ಮುಂದಿನ ಜನಾಂಗ ತಮ್ಮ ತಮ್ಮ ತಾಯ್ನುಡಿಗಳನ್ನು ಕಲಿಯಬೇಕು? ಈ ಏಕತೆಯ ಹುಚ್ಚು ಹಿಂದೀಯೇತರ ನಾಡುಗಳ ಜನರನ್ನು ಎರಡನೆಯ ದರ್ಜೆಯ, ಹಿಂದೀ ಮಾತಾಡುವವರ ಚಾಕರಿ ಮಾಡುವ ಗುಲಾಮರ ಮಟ್ಟಕ್ಕೆ ಇಳಿಸುವುದಿಲ್ಲವೇ? ಹಿಂದೀಯೇತರ ನುಡಿಗಳ ನಿಧಾನ ಸಾವಿಗೆ ಕಾರಣವಾಗದೇ?

ಶಂಕರಮೂರ್ತಿಗಳಂತಹ ಹಿರಿಯರು ಕಲಿತು ಪ್ರಚಾರ ಮಾಡುತ್ತಿರುವ ಈ ಸಿದ್ಧಾಂತ ಕನ್ನಡ ದ್ರೋಹದ ನಿಲುವಲ್ಲೇ ಅಲ್ಲ. ಭಾರತದ ನುಡಿ ವೈವಿಧ್ಯತೆಯನ್ನು ಅಳಿಸುವ, ೭೦% ಜನತೆಯನ್ನು ಎರಡನೇ ದರ್ಜೆಯ ಪ್ರಜೆಗಳಾಗಿಸುವ ದೇಶದ್ರೋಹದ ನಿಲುವು ಎನ್ನುವುದನ್ನು ಅರಿಯಬೇಕಾಗಿದೆ. ಶಂಕರಮೂರ್ತಿಗಳು ಮತ್ತವರ ಸಿದ್ಧಾಂತದ ಮೂಲಮನೆ ಸ್ವಲ್ಪ ಆಳವಾಗಿ ವಿಚಾರ ಮಾಡಿ ಭಾರತದ ಏಕತೆ ಅದರ ವೈವಿಧ್ಯತೆಗಳನ್ನು ಉಳಿಸುವುದರಲ್ಲಿದೆ ಎನ್ನುವುದನ್ನು ಅರಿಯಬೇಕಾಗಿದೆ.

ಮಹದಾಯಿ: ಕೇಳಿದ್ದು ಕುಡಿಯೋ ನೀರು, ಸಿಕ್ಕಿದ್ದು ಕಣ್ಣೀರು!

kalasa_work1

ಮಹದಾಯಿ ನ್ಯಾಯಾಧಿಕರಣದ ಮುಂದೆ ಕರ್ನಾಟಕ ಸರ್ಕಾರವು ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ಸುದೀರ್ಘ ವಿಚಾರಣೆ ಮುಗಿದು ಅರ್ಜಿಯನ್ನು ತಿರಸ್ಕರಿಸಿದ ತೀರ್ಪು ಬಂದಿದೆ. ತೀರ್ಪು ಮಧ್ಯಂತರ. ಇದೇನು ಅಂತಿಮವಲ್ಲಾ ಎನ್ನುವ ಮುಖ್ಯಮಂತ್ರಿಗಳ ಮಾತು ಸಹಜ ಮತ್ತು ನಿರೀಕ್ಷಿತ. ಈ ಸಂದರ್ಭದಲ್ಲಿ ತೀರ್ಪಿನ ನಂತರ ನಾಡಿನ ತುಂಬಾ ಪ್ರತಿಭಟನೆಗಳು ಶುರುವಾಗಿರುವುದು ಕೂಡಾ ಸಹಜ ಮತ್ತು ನಿರೀಕ್ಷಿತ. ಈ ಹೊತ್ತಲ್ಲಿ ವರ್ಷದಿಂದ ನರಗುಂದದ ರೈತ ಸ್ಮಾರಕದ ಬಳಿ ಪ್ರತಿಭಟನೆ ಧರಣಿ ಮಾಡುತ್ತಿರುವ ಹೋರಾಟಗಾರರ ಪ್ರತಿಕ್ರಿಯೆ ಬಹಳ ಅರ್ಥಪೂರ್ಣವಾಗಿದೆ. “ಕುಡಿಯುವ ನೀರಿಗಾಗಿ ಕರ್ನಾಟಕ ಮೊರೆ ಇಟ್ಟರೂ ನಮ್ಮ ಜನರ ಪಾಲಿಗೆ ಸಿಕ್ಕಿದ್ದು ಕಣ್ಣೀರು ಮಾತ್ರಾ” ಎನ್ನುತ್ತಾರೆ ರೈತ ಮುಖಂಡರಾದ ಶ್ರೀ ಶಂಕರಪ್ಪ ಅಂಬಲಿಯವರು.

“ನ್ಯಾಯಾಧಿಕರಣದ ಮುಂದೆ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದು ಕಳೆದ ಡಿಸೆಂಬರ್ ಒಂದರಂದು. ಅದೇ ದಿನ ಅರ್ಜಿಯನ್ನು ತಿರಸ್ಕರಿಸಿಬಿಟ್ಟಿದ್ದರೆ ಆರು ತಿಂಗಳ ಸಮಯವಾದರೂ ಉಳಿಯುತ್ತಿತ್ತು. ಈ ಮಧ್ಯಂತರ ಅರ್ಜಿಯ ಕಾಲದಲ್ಲಿ ನದಿನೀರು ಹಂಚಿಕೆಯ ಮೂಲ ವಾದವೇ ನಡೆಯದೆ ಸುಮ್ಮನೆ ಕಾಲಹರಣವಾಯಿತು. ಈ  ಕಳಸಾ ಬಂಡೂರಿ ಕುರಿತ ಇಂದಿನ ತೀರ್ಪು ಮೇಲ್ನೋಟಕ್ಕೆ ಹಿನ್ನಡೆಯಾಗಿ ಕಂಡರೂ ನಮ್ಮ ಜನರಲ್ಲಿ ನಮ್ಮ ರಾಜಕೀಯ ಪಕ್ಷಗಳ ಬೂಟಾಟಿಕೆಯನ್ನು ಬಯಲು ಮಾಡಿ ತೋರಿಸುವಲ್ಲಿ ಯಶಸ್ವಿಯಾಗುತ್ತಿದೆ. ಇನ್ನೇನಿದ್ದರೂ ನಮ್ಮ ಹೋರಾಟ ನಮ್ಮ ಜನಪ್ರತಿಧಿಗಳ ವಿರುದ್ಧ. ಹದಿನೇಳು ಸಂಸದರ ಭಾರತೀಯ ಜನತಾಪಕ್ಷದ ಸಂಸದರು ಪ್ರಧಾನಮಂತ್ರಿಗಳ ಮನವೊಲಿಸಿ ಮಾತುಕತೆಯ ಮೂಲಕ, ಕಡೆಯಪಕ್ಷ ಕುಡಿಯುವ ನೀರನ್ನಾದರೂ ಕೊಡಿಸಬೇಕು. ರಾಜ್ಯದ ರಾಜಕಾರಣಿಗಳು ಕಾಂಗ್ರೆಸ್ಸು, ಬಿಜೆಪಿ ಅಥವಾ ಜನತಾದಳವೆನ್ನುವ ಪಕ್ಷಭೇದವಿಲ್ಲದೆ ಮಹದಾಯಿ ವಿಷಯವಾಗಿ ಮಾಡಿರುವ ಒಂದೇ  ಒಂದು ಕೆಲಸವೆಂದರೆ ಅದು ಮತ ರಾಜಕಾರಣ. ಪ್ರತಿಯೊಬ್ಬರಿಗೂ ಇರುವುದು, ಎದುರಾಳಿಗಳದ್ದೇ ತಪ್ಪು ಎಂದು ಬಿಂಬಿಸುವ ಉತ್ಸಾಹ ಮಾತ್ರ. ಅದರ ಬದಲಿಗೆ ಮಹದಾಯಿ ನೀರನ್ನು ನಮ್ಮ ಹೊಲಗಳಿಗೆ ಹರಿಸಿದ್ದಿದ್ದರೆ ನಾವು ಇವರ ಫೋಟೋ ಹಾಕಿಕೊಂಡು ಪೂಜೆ ಮಾಡುತ್ತಿದ್ದೆವು” ಅನ್ನುತ್ತಾರೆ.

ಈ ವಿವಾದ ವ್ಯವಸ್ಥಿತ ರಾಜಕೀಯ ಸಂಚೇ?

ಮಹದಾಯಿಯಿಂದ ಮಲಪ್ರಭೆಗೆ ನೀರುಹರಿಸುವ ಯೋಜನೆಗೆ ಗೋವಾ ಕೂಡಾ ಒಪ್ಪಿದ್ದಂಥಾ ಸಮಯದಲ್ಲಿ, ಅಂದರೆ ರಾಣೆ-ಬೊಮ್ಮಾಯಿ ಒಪ್ಪಂದವಾಗಿದ್ದ ಕಾಲದಲ್ಲಿ ಕರ್ನಾಟಕದ ರಾಜಕಾರಣಿಗಳು ಒಪ್ಪಿಗೆಯಾಗಿದ್ದ ಯೋಜನೆಯನ್ನು ಸದ್ದಿಲ್ಲದೆ ಮಾಡಿ ಮುಗಿಸದೆ ರಾಜಕೀಯ ಲಾಭ ಪಡೆದುಕೊಳ್ಳಲು ದೊಡ್ಡಪ್ರಚಾರಕ್ಕೆ ಇಳಿದದ್ದರಿಂದಲೇ ಇದು ಗೋವಾದಲ್ಲಿ ಹೆಚ್ಚು ಚುನಾವಣಾ ವಿಷಯವಾಯಿತು ಎನ್ನುತ್ತಾರೆ ಬಲ್ಲವರು.

ಮಹದಾಯಿ ಮತ್ತು ಗೋವಾದ ಚುನಾವಣೆಗೂ ಸಂಬಂಧವಿರುವುದು ಕಾಣುತ್ತಿರುವುದು ಕಾಕತಾಳೀಯ ಎನ್ನುವುದಾದರೆ ಅನ್ನಬಹುದು. ಅಥವಾ ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ರಾಜಕೀಯ ಪಕ್ಷಗಳ ರಾಜಕಾರಣದ ಹೊಲಸು ವಾಸನೆ ಮೂಗಿಗೆ ರಾಚಿದರೂ ರಾಚೀತು! ಏನೇ ಆದರೂ ಮೊದಲಿಗೆ ಇದನ್ನು ಗೋವಾ ಚುನಾವಣೆಯ ವಿಷಯವಾಗಿಸಿ “ಕರ್ನಾಟಕಕ್ಕೆ ಒಂದು ಹನಿ ನೀರನ್ನು ಹರಿಸಲು ಬಿಡುವುದಿಲ್ಲ” ಎಂಬ ಹೇಳಿಕೆಯನ್ನು ೨೦೦೭ರ ಜೂನ್ ತಿಂಗಳಲ್ಲಿ ಕೊಟ್ಟಿದ್ದು ಕಾಂಗ್ರೆಸ್ಸಿನ ಶ್ರೀಮತಿ ಸೋನಿಯಾಗಾಂಧಿಯವರು. ಆಗ ಕರ್ನಾಟಕದಲ್ಲಿ ಇದ್ದಿದ್ದು ಜನತಾ – ಬಿಜೆಪಿ ಸರ್ಕಾರ. ಆಗ ಗೋವಾದಲ್ಲಿ ಅಧಿಕಾರಕ್ಕೆ ಬಂದಿದ್ದು ಕಾಂಗ್ರೆಸ್ ಪಕ್ಷ!

karnataka_CMs

ಮುಂದೆ ಮಹದಾಯಿ ನ್ಯಾಯಾಧಿಕರಣ ರಚಿಸಿದ  ಸಮಯವನ್ನು ಗಮನಿಸಿ. ಕೇಂದ್ರದ ಕಾಂಗ್ರೆಸ್ ಮುಂದಾಳ್ತನದ ಯುಪಿಎ ಸರ್ಕಾರ ೨೦೧೦ರಲ್ಲಿ ನ್ಯಾಯಾಧಿಕರಣವನ್ನು ರಚಿಸಿದ್ದು ಕೂಡಾ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದು, ಗೋವಾ ಚುನಾವಣೆಯ ಹೊಸ್ತಿಲಲ್ಲಿದ್ದಾಗಲೇ! ಅಂದಿನ ಮಂತ್ರಿಗಳಾಗಿದ್ದ ಮೊಯ್ಲಿಯವರು ಎಷ್ಟು ಚೆನ್ನಾಗಿ ನ್ಯಾಯಾಧಿಕರಣದ ರಚನೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದನ್ನು ನೋಡಿ. ಪಾಪ. ಕಾಂಗ್ರೆಸ್ಸಿನ ದುರಾದೃಷ್ಟಕ್ಕೆ ಅಲ್ಲಿ ಬಿಜೆಪಿ ಗೆದ್ದುಬಂದಿತು. ಗೋವಾದಲ್ಲಿ ಬಿಜೆಪಿ, ಇಲ್ಲಿ ನಮ್ಮ ನಾಡಲ್ಲೂ ಬಿಜೆಪಿ ಅನ್ನುವ ಹೊತ್ತಿನಲ್ಲಿ ಮಾತುಕತೆ ನಡೆದೀತೇನೋ ಎಂದುಕೊಳ್ಳುವಷ್ಟರಲ್ಲಿ ಇಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಗೋವಾ, ಮಹಾರಾಷ್ಟ್ರ ಮತ್ತು ಕೇಂದ್ರಗಳಲ್ಲಿ ಬಿಜೆಪಿಯ ಸರ್ಕಾರಗಳು ರಚನೆಯಾದವು.

Goa_CMs

ವಿವಾದ ನ್ಯಾಯಾಧಿಕರಣದಲ್ಲಿರುವಾಗ ಒಂದು ವಿಚಿತ್ರ ನಡೆಯಿತು. ಗೋವಾದ ಪರ ವಕೀಲರಾದ ಗೋವಾದ ಅಡ್ವೋಕೇಟ್ ಜನರಲ್ ಆಗಿದ್ದ ಶ್ರೀ ಆತ್ಮಾರಾಂ ನಾಡಕರ್ಣಿಯವರು ೨೦೧೬ರಲ್ಲಿ ಕೇಂದ್ರದ ಅಡಿಶನಲ್ ಸಾಲಿಸಿಟರ್ ಜನರಲ್ ಹುದ್ದೆಗೆ ನೇಮಕವಾದರು. ಇವರು ಇಂದಿಗೂ ಗೋವಾದ ಪರ ವಾದ ಮಾಡುವ ವಕೀಲರಾಗಿದ್ದಾರೆ. ವಿಷ್ಪಕ್ಷಪಾತವಾದ ನ್ಯಾಯ ವಿಚಾರಣೆ ನಡೆಯುತ್ತದೆ ಎಂಬ ಭರವಸೆ ನಮ್ಮ ರಾಜಕಾರಣಿಗಳಿಗೆ ಇದ್ದಿರಬಹುದಾದರೂ ನೈತಿಕವಾಗಿ ಅವರು ಒಂದು ರಾಜ್ಯದ ಪರ ವಾದ ಮಾಡುವುದನ್ನು ಸರಿಯೆಂದು ಒಪ್ಪಲಾಗುವುದೇ? ನ್ಯಾಯಾಧಿಕರಣದ ಬಗ್ಗೆ ಜನರ ನಂಬಿಕೆ ಕಡಿಮೆಯಾಗಲು ಇದು ಕಾರಣವಾಗಬಹುದಲ್ಲವೇ? ಈ ಕುರಿತಾಗಿ ರಾಜ್ಯದ ರಾಜಕೀಯ ಪಕ್ಷಗಳು ದನಿ ಎತ್ತಿಲ್ಲ ಎನ್ನುವುದು ವಿಚಿತ್ರವಾಗಿ ತೋರುವುದಿಲ್ಲವೇ?

ನ್ಯಾಯಾಧಿಕರಣದ ಮುಂದೆ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದು ಕಳೆದವರ್ಷ ಡಿಸೆಂಬರ್ ತಿಂಗಳಲ್ಲಿ. ಇದೂ ಕೂಡಾ ಸಮಯ ಪಡೆಯುವ ಹುನ್ನಾರವೇ ಅನ್ನಿಸುತ್ತದೆ. ರಾಜ್ಯದ ವಿರೋಧಪಕ್ಷವಾದ ಬಿಜೆಪಿಯ ತೀವ್ರ ಒತ್ತಡಕ್ಕೆ ಮಣಿದ ಕಾಂಗ್ರೆಸ್ ಸರ್ಕಾರ ಕುಡಿಯುವ ನೀರಿಗಾಗಿ ಮಧ್ಯಂತರ ಮನವಿಯನ್ನು ಸಲ್ಲಿಸುವ ಮೂಲಕ ತಪ್ಪು ಮಾಡಿತೇ? ಕೇಂದ್ರಸರ್ಕಾರದ ಮೇಲೆ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿ ಎಂದು ಕರ್ನಾಟಕದ ನಿಯೋಗ ಹೋದಾಗ ಕೇಂದ್ರ ಮಂತ್ರಿ ಶ್ರೀಮತಿ ಉಮಾಭಾರತಿಯವರು ನೀಡಿಕೆ ಹೇಳಿಕೆ ಗಮನಿಸಿ ನೋಡಿ, ಈಗ ನಾವು ಮಧ್ಯಸ್ಥಿಕೆ ವಹಿಸದಿರಲು ನ್ಯಾಯಾಧಿಕರಣದ ಮುಂದೆ ವಿಚಾರಣೆ ನಡೆಯುತ್ತಿರುವುದು ಕಾರಣ ಎಂದಿದ್ದಾರೆ. ಈಗ ಮಧ್ಯಂತರ ಅರ್ಜಿಗೆ ವ್ಯತಿರಿಕ್ತ ತೀರ್ಪು ಬಂದಾಗ ರಾಜ್ಯ ಮಂತ್ರಿಗಳು ನೀಡಿರುವ ಸಮರ್ಥನೆ ನೋಡಿ. ಹೇಗೆ ತಪ್ಪಲ್ಲಿ ವಿರೋಧಪಕ್ಷದ ಪಾಲಿರುವುದನ್ನೂ ಹೇಳಿ ತಮ್ಮ ಹೊಣೆ ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ತಿಳಿಯುತ್ತದೆ.

ಮುಂದಿನವರ್ಷ ಗೋವಾದಲ್ಲಿ ಚುನಾವಣೆ ನಡೆಯಲಿದೆ ಎನ್ನುವುದು ನಮ್ಮ ಜನರಲ್ಲಿ ಈ ಅನುಮಾನ ಹುಟ್ಟಲು ಕಾರಣವಾಗಿದೆ. ಮಧ್ಯಂತರ ಅರ್ಜಿ ಸಲ್ಲಿಸುವಂತೆ ಮಾಡುವುದು, ಆಮೇಲೆ ಅದರ ವಿಚಾರಣೆಗಾಗಿ ಒಂದು ವರ್ಷ ಸವೆಸುವುದು, ಗೋವಾ ಚುನಾವಣೆ ಹತ್ತಿರವಾಗುವಷ್ಟರಲ್ಲಿ ಅರ್ಜಿ ತಿರಸ್ಕಾರವಾಗುವುದು.. ಹೀಗೆಲ್ಲಾ ಆಗುತ್ತಿರುವುದನ್ನು ನೋಡಿದರೆ ಇಂಥದ್ದೊಂದು ಹುನ್ನಾರದ ವಾಸನೆ ಜನರ ಮೂಗಿಗೆ ಬಡಿಯುವುದಿಲ್ಲವೇ? ಬಹುಶಃ ಗೋವಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆದ್ದು, ೨೦೧೮ರ ಕರ್ನಾಟಕದ ಚುನಾವಣೆಯ ಹೊತ್ತಿಗೆ ರಾಜ್ಯಕ್ಕೆ ಸ್ವಲ್ಪ ಅನುಕೂಲವಾಗುವ ಬೆಳವಣಿಗೆಗಳು ನಡೆಯಬಹುದೇ? ಯಾಕಂದರೆ ಆ ವರ್ಷ ಕರ್ನಾಟಕದಲ್ಲಿ ಚುನಾವಣೆ. ಆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಹೇಗೆ ಮಹದಾಯಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವುದು ಎಂಬುದನ್ನು ಸರಿಯಾಗಿ ಯೋಚಿಸುತ್ತಲೇ ಇರುತ್ತವೆ! ಕರ್ನಾಟಕದ ಜನರು ನಿಜವಾಗಿ ನಾಡಿನ ಹಿತ ಕಾಪಾಡುವ ರಾಜಕೀಯ ಪಕ್ಷಗಳಿಲ್ಲದ ಕಾರಣಕ್ಕೆ ಪದೇ ಪದೇ ಮಂಗಗಳಾಗುತ್ತಲೇ ಇರುತ್ತಾರೆ… ಇಂಥಾ ಅನ್ಯಾಯದ ಸರಪಳಿಗಳನ್ನು ಕಂಡಾಗ ಕನ್ನಡಿಗರ ರಕ್ತ ಕುದಿಯದೇ? ತಮಿಳುನಾಡಿಗೆ ನೀರು ಬಿಡಬೇಕು ಎನ್ನುವ ವಿಷಯ ಬಂದಾಗ ಮಾನವೀಯ ನೆಲೆಯ ಮಾತಾಡುವ ತೀರ್ಪುಗಳು, ಕಾವೇರಿ ನೀರು ಬಳಕೆಯಾಗದೆ ಸಮುದ್ರ ಸೇರುವುದು ವ್ಯರ್ಥ ಎನ್ನುವ ಅನಿಸಿಕೆಗಳು ಮಹದಾಯಿ ವಿಷಯಕ್ಕೆ ಬಂದಾಗ ಕಾಣೆಯಾಗಿ ಬಿಡುತ್ತದೆ. ಇಂಥಾ ಒಂದಕ್ಕೊಂದು ವಿರುದ್ಧವಾದ ತೀರ್ಪುಗಳನ್ನು ಕಂಡಾಗ ಜನರಿಗೆ ನ್ಯಾಯಾಂಗದ ಮೇಲೆ ವಿಶ್ವಾಸ ಕರಗಿಹೋಗಿ ಬಿಡುವ ಅಪಾಯವಿದೆ.

ಮಹದಾಯಿ: ವರುಷದ ಕೂಗು!

[೧೯೮೦ರ ರೈತಬಂಡಾಯಕ್ಕೆ ಹೆಸರಾದ ಗದಗ ಜಿಲ್ಲೆಯ ನರಗುಂದದಲ್ಲಿ, ಮಹದಾಯಿ ನದಿ ನೀರಿಗಾಗಿ ಆ ಭಾಗದ ರೈತಾಪಿ ಜನರು ನಡೆಸುತ್ತಿರುವ ಹೋರಾಟಕ್ಕೆ ಒಂದು ವರ್ಷ ತುಂಬಲಿದೆ. ಇದೇ ಸಂದರ್ಭದಲ್ಲಿ ಹೋರಾಟದ ಮುಂಚೂಣಿಯಲ್ಲಿರುವ ರೈತನಾಯಕ ಶ್ರೀ ಶಂಕರಪ್ಪ ಅಂಬಲಿಯವರನ್ನು ಭೇಟಿ ಮಾಡಿದ್ದು, ಮಹದಾಯಿ ಹೋರಾಟದ ಕಥನವನ್ನು ಹೋರಾಟಗಾರನ ಕಣ್ಣಿನ ಮೂಲಕ ಕಂಡಂತಾಗಿ ಅದರ ಬರಹದ ರೂಪ ನಿಮ್ಮ ಓದಿಗೆ..]

naragunda1ಹಿನ್ನೆಲೆ:

ಕಳಸಾ ಬಂಡೂರಿ ಯೋಜನೆಯನ್ನು ಮಹದಾಯಿ ಯೋಜನೆ ಎನ್ನಬೇಕೆಂದು ಆಗ್ರಹಿಸುವ ಶ್ರೀ ಶಂಕರಪ್ಪ ಅಂಬಲಿಯವರನ್ನು ಭೇಟಿಯಾಗಿ ಮಾತಿಗೆ ಕುಳಿತಾಗ ಪ್ರವಾಹದಂತೆ ಅಡೆತಡೆಯಿಲ್ಲದೆ ಹೊರಬಂದ ಮಾತುಗಳು ಮಹದಾಯಿ ನೀರಿಗಾಗಿ ರೈತರು ನಡೆಸುತ್ತಿರುವ ಹೋರಾಟದ ಹಿಂದುಮುಂದುಗಳನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟಿತು. ರೈತರ ಈ ಹೋರಾಟದ ಸಂಪೂರ್ಣ ಚಿತ್ರಣ ದೊರೆಯಲು ಇತಿಹಾಸದ ಪುಟಗಳನ್ನು ತಿರುಗಿಸುವುದು ಅನಿವಾರ್ಯ. ೧೯೦೮ರಲ್ಲೇ ಮಲಪ್ರಭಾ ನದಿಗೆ ಅಣೆಕಟ್ಟುವ ಯೋಜನೆ ಮಾಡಲಾಗಿತ್ತಾದರೂ ಅರ್ಧಶತಮಾನ ಅದು ಮುಂದುವರೆಯದೆ ತಣ್ಣಗೆ ಮಲಗಿತ್ತು. ಇದೀಗ ಭುಗಿಲೆದ್ದಿರುವ ಈ ಹೋರಾಟದ ಬೀಜ ಅಂದೇ ಅಂಕುರಿಸಿತ್ತು. ಈ ಸರಣಿ ಬರಹದ ಮೂಲಕ ಮಹದಾಯಿ ಹೋರಾಟದ ಬಗ್ಗೆ ತಿಳಿಯೋಣ.

ಕರ್ನಾಟಕದ ಉತ್ತರದ ಬಯಲುಸೀಮೆಯ ನೆಲ ಕರಿಮಣ್ಣು. ಇಲ್ಲಿ ಮಳೆಯ ಕೊರತೆಯೂ ತೀವ್ರ. ಈ ಭಾಗದಲ್ಲಿ ವ್ಯವಸಾಯವನ್ನು ನಂಬಿ ಬದುಕುತ್ತಿರುವವರೇ ಹೆಚ್ಚು. ಮಳೆರಾಯನನ್ನೇ ನಂಬಿದ ಈ ರೈತರು ಸತತ ಬರಗಾಲದಿಂದ ಬವಣೆ ಅನುಭವಸುತ್ತಿರುವವರು. ಹೀಗಿದ್ದಾಗ ಈ ಭಾಗದ ಜನರ ಬದುಕಲ್ಲಿ ತುಸು ಬೆಳಕು ಮೂಡುವ ಆಸೆ ಹುಟ್ಟಿದ್ದು ಮಲಪ್ರಭಾ ನದಿಗೆ ನವಿಲುಕೊಳ್ಳದಲ್ಲೊಂದು ಅಣೆಕಟ್ಟೆ ಕಟ್ಟಿ ಈ ಭಾಗದ ಬರಡು ನೆಲಕ್ಕೆ ನೀರು ಹರಿಸುವ ಯೋಜನೆ ರೂಪುಗೊಂಡಾಗ. ೧೯೬೨ರಲ್ಲಿ ಶುರುವಾದ ಈ ಅಣೆಕಟ್ಟೆಯ ಮೂಲ ಲೆಕ್ಕಾಚಾರದಲ್ಲಿ ೪೫ ಟಿಎಂಸಿ ನೀರು ಹಿಡಿದುಕೊಳ್ಳಬೇಕಿತ್ತು. ನವಿಲುತೀರ್ಥವೆಂಬಲ್ಲಿ ಹೀಗೆ ಕಟ್ಟಲಾದ ಅಣೆಕಟ್ಟೆಗೆ ರೇಣುಕಾ ಸಾಗರವೆಂದು ಹೆಸರಿಡಲಾಯ್ತು. ಒಂದುಲಕ್ಷ ತೊಂಬತ್ಮೂರು ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಕರ್ಯ ಒದಗಿಸುವ ಉದ್ದೇಶ ಹೊಂದಿದ್ದ ಈ ಯೋಜನೆ ಕಾರ್ಯಗತವಾಗುವ ಹೊತ್ತಿಗೆ ಯೋಜಿಸಿದ್ದ ೪೭ ಟಿಎಂಸಿ ನೀರಿಗೆ ಬದಲಾಗಿ ೩೭ ಟಿಎಂಸಿ ನೀರನ್ನಷ್ಟೇ ಹಿಡಿದಿಟ್ಟುಕೊಳ್ಳವಷ್ಟು ಸಾಮರ್ಥ್ಯಕ್ಕೆ ಕುಸಿಯಿತು. ಹೆಸರಾಂತ ನೀರಾವರಿ ಇಂಜಿನಿಯರ್ ಶ್ರೀ ಬಾಳೆಕುಂದ್ರಿಯವರು ಈ ಅಣೆಕಟ್ಟೆಯ ನಿರ್ವಹಣಾಧಿಕಾರಿಯಾಗಿದ್ದರು. ಈಗ ಹೂಳು ತುಂಬಿರುವ ಕಾರಣ ಇಂದು ಇದರ ಸಾಮರ್ಥ್ಯ ೩೪ ಟಿಎಂಸಿಯಷ್ಟು ಮಾತ್ರ. ಪಾತ್ರೆ ಎಷ್ಟು ದೊಡ್ಡದಿದ್ದರೇನು? ಹಿಡಿದಿಡಲು ನೀರು ಬೇಕಲ್ಲ! ೧೯೭೩ರಲ್ಲಿ ಪೂರ್ಣಗೊಂಡ ಈ ರೇಣುಕಾ ಸಾಗರ ಅಣೆಕಟ್ಟೆ ಇದುವರೆವಿಗೆ ಪೂರ್ತಿಯಾಗಿ ತುಂಬಿರುವುದು ಬರಿಯ ಮೂರು ಬಾರಿ ಮಾತ್ರ! ಒಂದು ಅಂದಾಜಿನಂತೆ ಇದುವರೆವಿಗೂ ಸುಮಾರು ಐವತ್ತು ಸಾವಿರ ಹೆಕ್ಟೇರ್ ಪ್ರದೇಶಕ್ಕಷ್ಟೆ ನೀರು ಒದಗಿಸಲು ಸಾಧ್ಯವಾಗಿದೆ.

ಉದ್ದೇಶಿತ ೧೯೩೦೦೦ ಹೆಕ್ಟೇರ್ ಪ್ರದೇಶವನ್ನು ಮುಟ್ಟಲು ಸುಮಾರು ೩೫೦ ಕಿಮೀ ಕಾಲುವೆಯನ್ನು ಕೂಡಾ ತೋಡಲಾಯಿತು. ಆದರೆ ಬಹುತೇಕ ಜಮೀನುಗಳಿಗೆ ನೀರು ಮಾತ್ರಾ ಹರಿಯಲೇ ಇಲ್ಲ. ಸರ್ಕಾರವು ಈ ೧೯೩೦೦೦ ಹೆಕ್ಟೇರ್ ಪ್ರದೇಶವನ್ನು ನೀರಾವರಿ ಪ್ರದೇಶವೆಂದು ಘೋಷಿಸಿ ಇಲ್ಲಿನ ರೈತರ ಮೇಲೆ ಬೆಟರ್ಮೆಂಟ್ ಲೆವಿ ಎನ್ನುವ ತೆರಿಗೆಯನ್ನು ಕೂಡಾ ಹೇರಿತು. ರೈತರು ನೀರೇ ಬರದೆ ಇದೆಂಥ ಕರವೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿ ಪ್ರತಿಭಟನೆ ಮಾಡಿದರು. ಕೊನೆಗೆ ಇತಿಹಾಸ ಪ್ರಸಿದ್ಧವಾದ ನರಗುಂದ ರೈತ ಬಂಡಾಯ ನಡೆದು ೨೧ನೇ ಜುಲೈ ೧೯೮೦ರಲ್ಲಿ ಶ್ರೀ ಈರಪ್ಪ ಬಸಪ್ಪ ಕಡ್ಲಿಕೊಪ್ಪ ಎಂಬ ಯುವಕ ಪೊಲೀಸರ ಗುಂಡಿಗೆ ಬಲಿಯಾಗುವ ಮೂಲಕ ಕರ್ನಾಟಕದಲ್ಲಿ ರೈತ ಚಳವಳಿ ದೊಡ್ಡಪ್ರಮಾಣದಲ್ಲಿ ಶುರುವಾಯ್ತು. ಈ ಚಳವಳಿ ಮುಂದೆ ದೊಡ್ಡದಾಗಿ ಬೆಳೆದು ಅಂದಿನ ಕಾಂಗ್ರೆಸ್ ಸರ್ಕಾರವು ಚುನಾವಣೆಯಲ್ಲಿ ಸೋಲುಕಂಡು ಶ್ರೀ ರಾಮಕೃಷ್ಣ ಹೆಗ್ಡೆಯವರ ಮುಂದಾಳ್ತನದ ಜನತಾ ಸರಕಾರ ಅಧಿಕಾರಕ್ಕೇರಲು ಕಾರಣವಾಯ್ತು. ಜನತಾ ಸರ್ಕಾರ ರೈತರ ಮೇಲೆ ಹೇರಿದ್ದ ಅನ್ಯಾಯದ ತೆರಿಗೆಯನ್ನು ತೆಗೆದುಹಾಕಿತು. ಆದರೇನು, ರೈತರ ಜಮೀನಿಗೆ ನೀರು ಹರಿಯುವ ಕನಸು, ನನಸಾಗದೆ ಹಾಗೇ ಉಳಿಯಿತು.

ಮಹದಾಯಿ ಯೋಜನೆ

ಈ ನಡುವೆ ೧೯೭೫~೧೯೭೮ರ ನಡುವೆ ಗುಳೇದಗುಡ್ದದಿಂದ ಶಾಸಕರಾಗಿದ್ದ ಶ್ರೀ ಬಿ ಎಂ ಹೊರಕೇರಿಯವರು ಶ್ರೀ ಬಾಳೆಕುಂದ್ರಿಯವರ ಜೊತೆಗೂಡಿ ಮಲಪ್ರಭಾ ಅಣೆಕಟ್ಟೆ ತುಂಬಲು ಈಗಿರುವ ನೀರು ಸಾಲದು, ಇದಕ್ಕೆ ಪಶ್ಚಿಮಘಟ್ಟದ ಮಹದಾಯಿ ನದಿಯ ನೀರಿನಿಂದ, ಸಾಮಾನ್ಯ ಕೊರತೆಯನ್ನು ತುಂಬುವಷ್ಟು ನೀರನ್ನು ಮಲಪ್ರಭೆಗೆ ಹರಿಸಬೇಕು ಎನ್ನುವ ಯೋಜನೆಯನ್ನು ಮೊದಲ ಬಾರಿಗೆ ರೂಪಿಸಿ, ಫೆಬ್ರವರಿ ೧೯೭೬ರಲ್ಲಿ ವಿಧಾನ ಮಂಡಲದಲ್ಲಿ ಪ್ರಸ್ತಾಪ ಮಂಡಿಸಿದರು. ವಿರೋಧ ಪಕ್ಷದ ನಾಯಕರಾಗಿದ್ದ ಶ್ರೀ ಎಸ್. ಆರ್. ಬೊಮ್ಮಾಯಿ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಯ್ತು. ಈ ಸಮಿತಿಯು ಮಹದಾಯಿ ನದಿಯಿಂದ ನೀರನ್ನು ಮಲಪ್ರಭೆಗೆ ಸೇರಿಸುವ ಯೋಜನೆಯನ್ನು ಮಂಡಿಸಿತು.

೧೯೮೯ರಲ್ಲಿ ಶ್ರೀ ಎಸ್. ಆರ್ ಬೊಮ್ಮಯಿಯವರು ಮುಖ್ಯಮಂತ್ರಿಗಳಾದ ನಂತರ ಯೋಜನೆಗೆ ಚಾಲನೆ ಸಿಕ್ಕಿತು. ಬೆಳಗಾವಿ ಜಿಲ್ಲೆಯ ಖಾನಾಪುರದ ಸಮೀಪದ  ದೇವಗಾಂವ್ ಎಂಬಲ್ಲಿ ಹುಟ್ಟುವ ಮಹದಾಯಿ ನದಿಯು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ. ಕೇಂದ್ರೀಯ ನೀರು ಆಯೋಗದ ಪ್ರಕಾರ ಈ ನದಿಯಲ್ಲಿ ಸುಮಾರು ೧೮೦ರಿಂದ ೨೨೦ ಟಿಎಂಸಿ ನೀರಿದ್ದು ನದಿಪಾತ್ರದ ಹರವು (ಜಲಾನಯನ ಪ್ರದೇಶ: ಕರ್ನಾಟಕ – ೩೭೫ ಚ.ಕಿ.ಮಿ, ಮಹಾರಾಷ್ಟ್ರ – ೭೭ ಚ.ಕಿ,ಮಿ. ಗೋವಾ – ೧೫೮೦ ಚ.ಕಿ.ಮಿ), ಮಹದಾಯಿ ನದಿಗೆ ಹಲವಾರು ತೊರೆಗಳು, ಉಪನದಿಗಳಿವೆ. ಸರಳಾ ನದಿ, ಕೊಟ್ಟೆ, ಬಯಲುನಾಡು, ಬಂಡೂರಾ ನಾಲೆ, ಕಾರಂಜೋಳ ಇವುಗಳು ಪ್ರಮುಖವಾದವುಗಳು, ನದಿಗೆ ಸೇರುವ ನೀರಿನ ಲೆಕ್ಕದಂತೆ ಕರ್ನಾಟಕದ ಪಾಲು ಸುಮಾರು ೪೭ ಟಿಎಂಸಿಯಷ್ಟಿದೆ. ಈ ಕಾರಣದಿಂದಾಗಿ ಕರ್ನಾಟಕದ ಮಲಪ್ರಭೆಗೆ ಇಲ್ಲಿನ ನೀರು ಹರಿಯುವಂತೆ ಮಾಡುವುದು ಮತ್ತು ಇದಕ್ಕಾಗಿ ಅಣೆಕಟ್ಟನ್ನು ಕಟ್ಟುವುದು ಎಂದು ಯೋಜಿಸಿತು. ಆ ಮೂಲಕ ವಿದ್ಯುತ್ ಉತ್ಪಾದಿಸಿ, ಸದರಿ ವಿದ್ಯುತ್ತನ್ನು ಗೋವೆಗೆ ಕೊಡುವುದೆಂದೂ ನೀರನ್ನು ಮಲಪ್ರಭೆಗೆ ಹರಿಸುವುದೆಂದೂ ಯೋಜನೆ ಮಾಡಿಕೊಂಡು, ಅಂದು ಗೋವಾದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಪ್ರತಾಪ್ ಸಿಂಗ್ ರಾಣೆಯವರ ಸರ್ಕಾರದ ಜೊತೆಯಲ್ಲಿ ಒಪ್ಪಂದಕ್ಕೂ ಸಹಿ ಹಾಕಲಾಯಿತು. ದುರದೃಷ್ಟವಶಾತ್ ರಾಷ್ಟ್ರಪತಿಗಳ ಆಳ್ವಿಕೆ ಹೇರಲ್ಪಟ್ಟು ಬೊಮ್ಮಾಯಿಯವರ ಸರ್ಕಾರ ಬಿದ್ದುಹೋದದ್ದು ಇಡೀ ಯೋಜನೆ ನೆನೆಗುದಿಗೆ ಬೀಳಲು ಕಾರಣವಾಯ್ತು.

ಕಳಸಾ ಬಂಡೂರಿ ಯೋಜನೆ

kalasa-mapಮುಂದೆ ಎಸ್.ಎಂ ಕೃಷ್ಣ ಅವರ ಸರ್ಕಾರ ಅಧಿಕಾರಕ್ಕೆ ಬಂದು ಶ್ರೀ ಎಚ್. ಕೆ ಪಾಟೀಲರು ನೀರಾವರಿ ಸಚಿವರಾದ ನಂತರ ಮಹದಾಯಿ ನದಿಗೆ ತಿರುವು ಕೊಡುವುದಕ್ಕೆ ಗೋವಾ ಎತ್ತಿದ ತಕರಾರನ್ನು ಪರಿಗಣಿಸಿ, ಕಡೆಯ ಪಕ್ಷ ಹುಬ್ಬಳ್ಳಿ ಧಾರವಾಡ ಸೇರಿದಂತೆ ಹಲವು ಊರುಗಳ ಜನರಿಗೆ ಕುಡಿಯುವ ನೀರಿಗಾದರೂ ಅನುಕೂಲವಾಗಲೆಂದು, ಕರ್ನಾಟಕವು ತನ್ನ ನೆಲದಲ್ಲಿ ಹುಟ್ಟಿ ಮಹದಾಯಿಗೆ ಸೇರುವ ಸುಮಾರು ಹದಿನೆಂಟು ತೊರೆಗಳಲ್ಲಿ ಕೆಲವುಗಳನ್ನು ಜಾಲವಾಗಿಸಿ, ಬಂಡೂರಾ ನಾಲಾ, ಸಿಂಗಾರ ನಾಲಾ ಮತ್ತು ನರ್ಸಾ ನಾಲೆಗಳಿಂದ ನೀರನ್ನು ಬಂಡೂರಾ ಸಮೀಪದ ಕಟ್ಟಲಾಗುವ ಅಣೆಕಟ್ಟೆಗೆ ಹರಿಸಿ ಅಲ್ಲಿಂದ ಮಲಪ್ರಭ ನದಿಗೆ ಸೇರಿಸುವ ಯೋಜನೆಯನ್ನೂ ರೂಪಿಸಲಾಯಿತು. ಇದಕ್ಕಾಗಿ ಬಂಡೂರಿಯಲ್ಲೊಂದು ಅಣೆಕಟ್ಟೆ ಕಟ್ಟುವುದೆಂದು ತೀರ್ಮಾನಿಸಲಾಯಿತು. ಇದರಿಂದಾಗಿ ಕಳಸಾ ನಾಲೆಯಿಂದ ೩.೫೬ ಟಿಎಂಸಿ (ಕಳಸಾದಿಂದ ೨.೧೬ ಟಿಎಂಸಿ, ಸುರ್ಲಾ ನಾಲೆಯಿಂದ ೦.೫೫ ಹಲ್ತಾರದಿಂದ ೦.೮೫ ಟಿಎಂಸಿ) ಹಾಗೂ ಬಂಡೂರಿಯಿಂದ ೪ ಟಿಎಂಸಿ ನೀರನ್ನು ಪಡೆಯಲು ಯೋಜಿಸಲಾಯ್ತು. ಇದಕ್ಕಾಗೆ ಕಳಸ ಮತ್ತು ಬಂಡೂರಿ ಎಂಬ ಎರಡು ಕಡೆ ಅಣೆಕಟ್ಟುಗಳನ್ನು ನಿರ್ಮಿಸಲು ಉದ್ದೇಶಿಸಲಾಯ್ತು.

ಕಾಲಾಂತರದಲ್ಲಿ ಇದಕ್ಕೆ ದೊರೆತ ಹುಸಿಪ್ರಚಾರದಿಂದಾಗಿ ಮಹದಾಯಿ ಯೋಜನೆ ಎರಡೂ ರಾಜ್ಯಗಳಲ್ಲಿ ರಾಜಕೀಯ ಬಣ್ಣ ಪಡೆದುಕೊಂಡು ಇದನ್ನು ಗೋವಾ ವಿರೋಧಿಸಲು ಮುಂದಾಯಿತು. ಮಹದಾಯಿಯಲ್ಲಿರುವ ೨೧೦ ಟಿಎಂಸಿ ನೀರಲ್ಲಿ ಕರ್ನಾಟಕದ ನ್ಯಾಯಯುತವಾದ ಪಾಲು ೪೭ ಟಿಎಂಸಿ ನೀರನ್ನು ಕರ್ನಾಟಕ ಬಳಸಿಕೊಳ್ಳುವುದಕ್ಕೆ ಗೋವಾ ತಕರಾರು ಎತ್ತುತ್ತಿರುವುದಕ್ಕೆ – ಈ ಯೋಜನೆಯಿಂದಾಗಿ ಗೋವಾದ ಜೈವಿಕ ವೈವಿಧ್ಯಕ್ಕೆ ಧಕ್ಕೆತರುವ ಮಟ್ಟದಲ್ಲಿ ಅರಣ್ಯ ನಾಶವಾಗಲಿದೆ ಎನ್ನುವುದು, ಗೋವಾದ ಸಾಂಪ್ರದಾಯಿಕ ಸಿಹಿನೀರು ಮೀನುಗಾರಿಕೆಗೆ ಧಕ್ಕೆಯಾಗುತ್ತದೆ ಎನ್ನುವುದು ಪ್ರಮುಖವಾದ ಕಾರಣಗಳಾಗಿದ್ದವು. ನ್ಯಾಷನಲ್ ಎನ್ವಿರಾನ್ಮೆಂಟ್ ಎಂಜಿನಿಯರಿಂಗ್ ರೀಸರ್ಚ್ ಇನ್ಸ್ಟಿಟ್ಯೂಟ್ (ನೀರಿ) ಸಂಸ್ಥೆಯು ಅಧ್ಯಯನ ನಡೆಸಿ ಕರ್ನಾಟಕದ ಈ ಯೋಜನೆ ಪರಿಸರಕ್ಕೆ ಹಾನಿ ಮಾಡದೆಂದು ವರದಿಯನ್ನು ನೀಡಿತು. ಇದಕ್ಕೆ ಗೋವಾ ತಕರಾರು ಎತ್ತಿ ಸದರಿ ಅಧ್ಯಯನವನ್ನು ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಒಶನಾಲಜಿ ಸಂಸ್ಥೆಯೇ ಮಾಡಬೇಕೆಂದಿತು. ಆ ಸಂಸ್ಥೆಯೂ ಕೂಡಾ ನೀರಿ ವರದಿಯನ್ನು ಅಕ್ಷರಶಃ ಅನುಮೋದಿಸಿತು. ಗೋವಾ ರಾಜ್ಯವು ಅರಣ್ಯ ಇಲಾಖೆ, ಪರಿಸರ ಇಲಾಖೆಗಳ ಅನುಮೋದನೆಯಲ್ಲೂ ಕೈಯ್ಯಾಡಿಸಿತು. ಒಂದು ಹಂತದಲ್ಲಿ ಗೋವಾ ಅರಣ್ಯ ಇಲಾಖೆಯ ಅನುಮೋದನೆಯನ್ನು ಕರ್ನಾಟಕಕ್ಕೆ ತಲುಪಿಸುವುದನ್ನು ಕೂಡಾ ವಿಳಂಬಿಸುವ ಕುತಂತ್ರ ಮಾಡಿತು ಎನ್ನುತ್ತಾರೆ ಅಂದಿನ ನೀರಾವರಿ ಮಂತ್ರಿಗಳಾಗಿದ್ದ ಶ್ರೀ ಎಚ್. ಕೆ ಪಾಟೀಲರು. ಕರ್ನಾಟಕವು ಕೇಂದ್ರಸರ್ಕಾರದ ಜೊತೆ ನಿರಂತರ ಸಂವಾದ ನಡೆಸಿ ಅನುಮತಿಯನ್ನು ಪಡೆದುಕೊಂಡಿತು. ಕೇಂದ್ರದ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಮುಂದಾಳ್ತನದ ಸರ್ಕಾರ ಕುಡಿಯುವ ನೀರಿಗಾಗಿ ಸದ್ಯಕ್ಕೆ ೭.೫೬ ಟಿಎಂಸಿ ನೀರು ಬಳಸಿಕೊಳ್ಳುವ ಕಳಸಾ ಬಂಡೂರ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿತು. ಅದರಂತೆ ಮುಂದೆ ನದಿನೀರು ಹಂಚಿಕೆಯಾದಾಗ ದೊರೆಯುವ ೪೭ ಟಿಎಂಸಿ ನೀರಿನಲ್ಲಿ ೭.೫೬ ಟಿಎಂಸಿಯನ್ನು ಕಳೆದುಕೊಂಡು ಬಾಕಿ ಹಂಚಿಕೆ ಮಾಡಬಹುದು, ಮಾನ್ಸೂನ್ ಋತುವಿನಲ್ಲಿ ಅಂದರೆ ಮಳೆಗಾಲದಲ್ಲಿ ಮಾತ್ರಾ ನೀರನ್ನು ಹರಿಸಿಕೊಳ್ಳಬಹುದೆಂಬ ಕರಾರುಗಳು ಅದರಲ್ಲಿತ್ತು.

ಆದರೆ ಗೋವಾ ರಾಜ್ಯವು ಎಲ್ಲಾ ವೈಜ್ಞಾನಿಕ ಅಧ್ಯಯನದ ವರದಿಗಳ ಮೇಲೂ ಅವಿಶ್ವಾಸ ವ್ಯಕ್ತಪಡಿಸುತ್ತಾ ಯೋಜನೆಯನ್ನು ವಿರೋಧಿಸಿತು. ಈ ವಿರೋಧದ ಕಾರಣದಿಂದಾಗಿ ತಾನೇ ನೀಡಿದ್ದ ತಾತ್ವಿಕ ಒಪ್ಪಿಗೆಯನ್ನು ನಾಲ್ಕೇ ತಿಂಗಳ ಅಂತರದಲ್ಲಿ ಭಾರತ ಸರ್ಕಾರ ವಾಪಸ್ಸು ಪಡೆದುಕೊಂಡಿತು. ಇದಾದ ನಂತರ ಗೋವಾ ನಿರಂತರವಾಗಿ ವಿರೋಧ ತೋರಿಸುತ್ತಲೇ ನದಿನೀರು ಹಂಚಿಕಗಾಗಿ ಟ್ರಿಬ್ಯೂನಲ್ ಒಂದನ್ನು ರಚಿಸುವಂತೆ ಬೇಡಿಕೆಯಿಟ್ಟಿತು. ಇತ್ತ ಕರ್ನಾಟಕದಲ್ಲಿ ಜಾತ್ಯಾತೀತ ಜನತಾದಳ ಮತ್ತು ಭಾರತೀಯ ಜನತಾ ಪಕ್ಷಗಳ ಜಂಟಿ ಸರ್ಕಾರ ಶ್ರೀ ಕುಮಾರಸ್ವಾಮಿಯವರ ಮುಂದಾಳ್ತನದಲ್ಲಿ ಅಧಿಕಾರಕ್ಕೆ ಬಂತು. ಅಂದು ನೀರಾವರಿ ಮಂತ್ರಿಗಳಾಗಿದ್ದ ಶ್ರೀ ಕೆ ಎಸ್ ಈಶ್ವರಪ್ಪನವರು ೨೦೦೬ರಲ್ಲಿ ಕಣಕುಂಬಿಯಲ್ಲಿ ಕಳಸಾ ಬಂಡೂರಾ ನಾಲೆಯ ಯೋಜನೆಗೆ ಶಂಕುಸ್ಥಾಪನೆಯನ್ನೂ ಮಾಡಿದರು. ಇದುವರೆವಿಗೆ ಕರ್ನಾಟಕ ಸರ್ಕಾರವೂ ಕೂಡಾ ಮಹದಾಯಿಯ ನೀರನ್ನು ಕೃಷಿಗಾಗಿ ಎಂಬುದಾಗಿ ಎಲ್ಲಿಯೂ ಕೇಳಿಲ್ಲದಿರುವುದರಿಂದ ಇದನ್ನು ಬರಿಯ ಕುಡಿಯುವ ನೀರಿನ ಯೋಜನೆಯೆಂದೇ ಪರಿಗಣಿಸುವಂತಾಯ್ತು. ಕಣಕುಂಬಿಯಲ್ಲಿನ ಶಂಕುಸ್ಥಾಪನೆಯಿಂದ ಕನಲಿದ ಗೋವಾ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ಮುಂದೆ ಮತ್ತೆ ದೂರನ್ನು ಒಯ್ದಿತು. ಮೂರೂ ರಾಜ್ಯಗಳ ಒಪ್ಪಿಗೆಯ ನಂತರ, ೨೦೦೯ರಲ್ಲಿ ಮಹದಾಯಿ ನದಿನೀರು ಹಂಚಿಕೆಗಾಗಿ ನ್ಯಾಯಾಧಿಕರಣವನ್ನು ರಚಿಸುವಂತೆ ಸರ್ವೋಚ್ಚ ನ್ಯಾಯಾಲಯ ನಿರ್ದೇಶಿಸಿತು. ಇದರಂತೆ ಭಾರತ ಸರ್ಕಾರ ೨೦೧೦ರಲ್ಲಿ ನ್ಯಾಯಾಧಿಕರಣದ ಸ್ಥಾಪನೆಯನ್ನೂ ಮಾಡಿತು.

ನ್ಯಾಯಾಧಿಕರಣದತ್ತ ಮಹದಾಯಿ

ಮಹದಾಯಿಯಲ್ಲಿ ನಮ್ಮ ಪಾಲು ೪೭ ಟಿಎಂಸಿಯಷ್ಟಿದ್ದರೂ, ಕರ್ನಾಟಕದ ರೈತ ಸಮುದಾಯ ಬಳಸಲು ಬಯಸುತ್ತಿರುವುದು ಇದಿಷ್ಟೂ ನೀರನ್ನಲ್ಲ. ಮಲಪ್ರಭೆಗೆ ಕೊರತೆಯಿರುವ ೧೬ ಟಿಎಂಸಿ ನೀರನ್ನು ಮಾತ್ರಾ. ಕರ್ನಾಟಕ ಸರ್ಕಾರ ತನ್ನ ಯೋಜನೆಯಲ್ಲಿ ಕೇಳಿದ್ದು ಕುಡಿಯುವ ಸಲುವಾಗಿ ೭.೫೬ ಟಿಎಂಸಿ, ಕಾಳಿ ನದಿ ಯೋಜನೆಗಾಗಿ ೫.೨೫, ೧೫ ಟಿಎಂಸಿ ಮಹದಾಯಿ ಪಾತ್ರದಲ್ಲಿ ಜಲವಿದ್ಯುತ್ ಯೋಜನೆಗಾಗಿ ೧೫ ಟಿಎಂಸಿ ಸೇರಿದಂತೆ ಒಟ್ಟಾಗಿ ೨೪ ಟಿಎಂಸಿ ನೀರನ್ನು ಬಳಸಲು ಯೋಜನೆಯನ್ನು ರೂಪಿಸಿ ಅಷ್ಟನ್ನು ಬೇಡಿತು. ಇದುವರೆವಿಗೂ ಕರ್ನಾಟಕ ಸರ್ಕಾರ, ನೀರಾವರಿಗಾಗಿ ಮಹದಾಯಿ ನೀರು ಬೇಕೆಂಬುದಾಗಿ ಎಲ್ಲಿಯೂ ಕೇಳಿರಲಿಲ್ಲ ಎನ್ನುತ್ತಾರೆ ಹೋರಾಟಗಾರರು. ನಮ್ಮ ರಾಜ್ಯಕ್ಕೆ ಪರಿಶೀಲನೆಗೆ ಭೇಟಿ ಕೊಟ್ಟ ಅಧಿಕಾರಿಗಳ ತಂಡ, ಯಾಕಾಗಿ ನೀವು ಕಾಲುವೆ ತೋಡುತ್ತಿದ್ದೀರಿ ಎಂದಾಗ ಸರ್ಕಾರವು ಕಳಸಾ ನಾಲೆಯಿಂದ ಬರುವ ಹೆಚ್ಚುವರಿ ನೀರಿಗಾಗಿ ಎಂದಿತ್ತು. ಕೊನೆಗೆ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಅಲ್ಲೊಂದು ತಡೆಗೋಡೆಯನ್ನು ಕಟ್ಟಿತು. ಆ ಮೂಲಕ ಸಾಂಕೇತಿಕವಾಗಿ ತಾನು ನೀರನ್ನು ಅಕ್ರಮವಾಗಿ ಹರಿಸುವುದಿಲ್ಲ ಎಂಬುದನ್ನು ಸಾರಿತು. ಇದೇ ಅಧಿಕಾರಿಗಳ ಸಮ್ಮುಖದಲ್ಲಿ ರೈತ ಮುಖಂಡರು ಕರ್ನಾಟಕ ಸರ್ಕಾರವು ನೀರಾವರಿಗಾಗಿ ನೀರನ್ನು ಕೇಳಿಲ್ಲದಿರುವುದನ್ನು ಗಮನಕ್ಕೆ ತಂದಾಗ, ಅದಕ್ಕಾಗಿ ಬೇಡಿಕೆ ಇಟ್ಟಲ್ಲಿ ಪರಿಗಣಿಸಬಹುದು ಎಂದು ಅಧಿಕಾರಗಳು ನುಡಿದು, ಅದರ ಆಧಾರದ ಮೇಲೆ ಬೇಡಿಕೆಗೆ ತಿದ್ದುಪಡಿಯನ್ನು ಮಾಡಿಸಲಾಯಿತು. ನದಿನೀರು ಹಂಚಿಕೆಯಲ್ಲಿ ಆದ್ಯತೆಯ ಲೆಕ್ಕದಲ್ಲಿ ಮೊದಲಿಗೆ ಕುಡಿಯುವ ನೀರು, ನಂತರ ವ್ಯವಸಾಯ, ಮೀನುಗಾರಿಕೆ, ಜಲಸಾರಿಗೆ ಮತ್ತು ಕೈಗಾರಿಕೋದ್ಯಮ ಬರುತ್ತದೆ. ಇದರ ಅರ್ಥ ನೀರಾವರಿಗೆ ಕೇಳಬಾರದು ಅಂತೇನಿಲ್ಲ. ಕರ್ನಾಟಕದ ಬೇಡಿಕೆಯಲ್ಲಿ ನೀರಾವರಿಗಾಗಿ ನೀರನ್ನು ೨೦೧೪ರ ಡಿಸೆಂಬರ್ ತಿಂಗಳಲ್ಲಿ ಸೇರಿಸಲಾಯ್ತು. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಅದುವರೆವಿಗೆ ಆಗಿದ್ದ ಕಳಸಾ ಬಂಡೂರ ನಾಲೆಯ ಕಾಮಗಾರಿ ನಿಂತುಹೋಯಿತು.

ಮಹದಾಯಿ ನ್ಯಾಯಾಧಿಕರಣವನ್ನು ೨೦೧೦ರಲ್ಲಿ ಶುರುಮಾಡಿ ಅದಕ್ಕೆ ಆರು ವರ್ಷಗಳ ಕಾಲಾವಧಿಯನ್ನು ನೀಡಲಾಯಿತು. ಬಹುದಿನಗಳ ಕಾಲ ನ್ಯಾಯಾಧಿಕರಣಕ್ಕೆ ಸೂಕ್ತ ಸವಲತ್ತುಗಳನ್ನು ಒದಗಿಸದ ಕಾರಣ ವಿಚಾರಣೆಯೇ ಮಂದಗತಿಯಲ್ಲಿ ಸಾಗುತ್ತಿತ್ತು. ಇದೇ ಹೊತ್ತಿನಲ್ಲಿ ನರಗುಂದ ಭಾಗದ ರೈತರು “ರೈತ ಸೇನೆ ಕರ್ನಾಟಕ”ದ ಹೆಸರಿನ ಸಂಘಟನೆಯನ್ನು ಮಾಡಿಕೊಂಡು ಮಹದಾಯಿ ನೀರಿಗಾಗಿ ಹೋರಾಟ ಶುರುಮಾಡಿದರು. ಈ ಹೋರಾಟ ಸಮಿತಿಯ ವತಿಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಅಕ್ಟೋಬರ್ ೩, ೨೦೧೩ರಂದು ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯನ್ನು ಹೂಡಲಾಗಿ ನ್ಯಾಯಾಧಿಕರಣದ ಚಟುವಟಿಕೆ ಚುರುಕುಗೊಂಡಿತು. ಇದಾದ ನಂತರ ರೈತಸೇನೆ ತನ್ನ ಅರ್ಜಿಯನ್ನು ಹಿಂಪಡೆಯಿತು.

ರೈತರ ಹೋರಾಟ: ಮಹದಾಯಿ ವರುಶದ ಕೂಗು

ಜುಲೈ ೧೬, ೨೦೧೫ರಂದು ರೈತ ಸೇನೆ ಕರ್ನಾಟಕದ ವತಿಯಿಂದ ಕಳಸಾ ಬಂಡೂರ ಹೋರಾಟ ಸಮನ್ವಯ ಸಮಿತಿಯು ನರಗುಂದದ ರೈತ ಸ್ಮಾರಕದ ಎದಿರು ಧರಣಿ ಸತ್ಯಾಗ್ರಹವನ್ನು ಶುರುಮಾಡಿತು. ಈ ಪ್ರತಿಭಟನೆಗೆ ಇದೀಗ ಒಂದು ವರ್ಷ ತುಂಬಲಿದೆ. ಇಷ್ಟು ಸಮಯದಲ್ಲಿ ಮಲಪ್ರಭೆಯಲ್ಲಿ ಸಾಕಷ್ಟು ನೀರು ಹರಿದುಹೋಯಿತು ಎನ್ನಲಾಗದಂತೆ ಇಲ್ಲಿ ನೀರೇ ಇಲ್ಲದ ಪರಿಸ್ಥಿತಿ ಇನ್ನೂ ಇರುವುದು ದುರಂತ.

ಧರಣಿ ಸತ್ಯಾಗ್ರಹ ಶುರುವಾದ ಮೂರ್ನಾಲ್ಕು ದಿನಗಳ ಕಾಲ ನೀರಸವಾಗಿದ್ದ ಜನಸ್ಪಂದನೆ ನಂತರ ತುರುಸು ಪಡೆಯಿತು. ಸಾವಿರಾರು ಜನರು ಬಂದು ಸೇರತೊಡಗಿದರು. ೬೦೦ಕ್ಕೂ ಹೆಚ್ಚು ಸಂಘಸಂಸ್ಥೆಗಳು ಈ ಹೋರಾಟಕ್ಕೆ ಬೆಂಬಲ ಕೊಟ್ಟವು. ೩೭ನೇ ದಿವಸ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಯಿತು. ಹಿಂದೆ ತೆಲುಗುಗಂಗಾ, ನರ್ಮದಾ, ಚನ್ನೈಗೆ ಕೃಷ್ಣಾ ನೀರು ಕೊಟ್ಟ ಘಟನೆಗಳ ಉದಾಹರಣೆಯ ಹಿನ್ನೆಲೆಯಲ್ಲಿ ಮಹದಾಯಿ ವಿವಾದವನ್ನು ಪ್ರಧಾನಮಂತ್ರಿಗಳ ಮಧ್ಯಸ್ಥಿಕೆಯಲ್ಲಿ ಬಗೆಹರಿಸಬೇಕೆಂಬ ಮನವಿ ನೀಡಲಾಯಿತು. ಉಪವಾಸ, ಧರಣಿ ಮೊದಲಾದವುಗಳ ಬೆನ್ನಲ್ಲೇ ಸುಮಾರು ೭೩೦ ಕಿಮೀ ದೂರದಷ್ಟು ಜಾಗೃತಿ ಜಾಥಾವನ್ನು ಕೂಡಲ ಸಂಗಮದಿಂದ ಕಣಕುಂಬಿಯವರೆಗೆ, ಮಹದಾಯಿ ಜಲಾನಯನ ಪ್ರದೇಶದ ನೂರೈವತ್ತಾರು ಹಳ್ಳಿಗಳ ಮೂಲಕ ನಡೆಸಲಾಯ್ತು. ಚಳವಳಿಯ ಅಂಗವಾಗಿ ರಾಜಧಾನಿ ಬೆಂಗಳೂರಲ್ಲಿ ಒಂದುವಾರ ಕಾಲ ಧರಣಿ ಸತ್ಯಾಗ್ರಹವನ್ನು ನಡೆಸಲಾಯ್ತು. ಆಗಸ್ಟ್ ೨೪ರಂದು ಪ್ರಧಾನಮಂತ್ರಿಗಳನ್ನು ಭೇಟಿಮಾಡಿ ಮಧ್ಯಸ್ಥಿಕೆ ವಹಿಸುವಂತೆ ಕೋರಲು ಒಂದು ನಿಯೋಗವನ್ನು ದೆಹಲಿಗೆ ಒಯ್ದು ಭೇಟಿ ಮಾಡಲಾಯಿತಾದರೂ ಅದರಿಂದ ನಿರೀಕ್ಷಿತ ಫಲವೇನೂ ಸಿಗಲಿಲ್ಲ. ಆ ಭಾಗದ ಸಂಸದರ, ಪ್ರಮುಖ ರಾಜಕಾರಣಿಗಳಿಗೆ ಘೇರಾವ್ ಹಾಕುವ ಮೂಲಕ, ಮುತ್ತಿಗೆ ಹಾಕುವ ಕಾರ್ಯಕ್ರಮಗಳೂ ನಡೆದವು. ರೈಲು ತಡೆಯ ಕಾರ್ಯಕ್ರಮಗಳೂ ನಡೆದವು. ನರಗುಂದದ ರೈತ ಹುತಾತ್ಮ ಮೈದಾನದಲ್ಲಿ ರೈತ ಸೇನೆಯ ವತಿಯಿಂದ ದಿನಾಂಕ ೨೧ನೇ ಜುಲೈ ೨೦೧೫ರಿಂದ ನಡೆಸಲಾಗುತ್ತಿರುವ ಮಹದಾಯಿಗಾಗಿ ಹೋರಾಟವು ವಾಸ್ತವವಾಗಿ ಬರಿಯ ಕಳಸ ಬಂಡೂರಿ ಹೋರಾಟವಲ್ಲ. ಇದು ೭.೫೬ ಟಿಎಂಸಿ ಪ್ರಮಾಣದ ಕುಡಿಯುವ ನೀರಿಗಾಗಿ ನಡೆಯುತ್ತಿರುವ ಹೋರಾಟವಲ್ಲ. ಇದು ೧೯೬೨ರಲ್ಲೇ ಯೋಜಿಸಿ ಅಣೆಕಟ್ಟೆ ಕಟ್ಟಿ, ಕಾಲುವೆಗಳನ್ನು ತೋಡಿ, ನೀರಾವರಿ ಪ್ರದೇಶವೆಂದು ಕರ ವಸೂಲಿ ಮಾಡಿ ಮೂಗಿಗೆ ತುಪ್ಪ ಸವರಿದ ಮೂಲ ಮಲಪ್ರಭಾ ಯೋಜನೆಯನ್ನು, ಮಹದಾಯಿ ನೀರನ್ನು ತರುವ ಮೂಲಕ ಸಂಪೂರ್ಣವಾಗಿ ಜಾರಿಮಾಡಬೇಕೆಂದು ನಡೆಸುತ್ತಿರುವ ಹೋರಾಟ.

ನರಗುಂದ ಹೋರಾಟಗಾರರು, ಕೆಲ ಸ್ವಘೋಷಿತ ನಾಯಕರುಗಳು ಕಳಸಾ ನಾಲೆಯ ಗೋಡೆ ಒಡೆದೆವು, ಒಡೆಯುತ್ತೇವೆ ಮುಂತಾಗಿ ನೀಡುವ ಹೇಳಿಕೆಗಳನ್ನು ಹೋರಾಟದ ದಾರಿ ತಪ್ಪಿಸುವ ದುರುದ್ದೇಶದ ಕ್ರಮ ಎಂದೇ ಪರಿಗಣಿಸುತ್ತಾರೆ. ಹಾಗೆ ಗೋಡೆ ಒಡೆಯುವುದರಿಂದ ನೀರು ಸಿಗುವುದಾದರೆ ರೈತರು ಈ ಕೆಲಸವನ್ನು ಯಾವಾಗಲೋ ಮಾಡುತ್ತಿದ್ದರು. ನಮ್ಮ ಹೋರಾಟವಿರುವುದು ಸರ್ಕಾರಗಳು ನ್ಯಾಯಾಧಿಕರಣದ ಕಲಾಪಗಳನ್ನು ಬೇಗ ಬೇಗ ಮಾಡುವಂತೆ ಎಲ್ಲಾ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸುವುದಕ್ಕಾಗಿ ಮಾತ್ರಾ ಎನ್ನುತ್ತಾರೆ. ಇದುವರೆವಿಗೆ ಮಹದಾಯಿ ನೀರು ತರುತ್ತೇವೆ ಎಂದು ಭಾವುಕವಾಗಿ ಮಾತನ್ನಾಡಿ ಜನರಿಂದ ಮತ ಗಳಿಸಿ ಗೆದ್ದ ರಾಜಕಾರಣಿಗಳನ್ನು ನಂಬದೆ, ನ್ಯಾಯಾಲಯದ ತೀರ್ಪಷ್ಟೇ ನಂಬಿ ಇನ್ಮುಂದೆ ಯಾವುದೇ ರಾಜಕಾರಣಿ ಮಹದಾಯಿಯನ್ನು ಮತಕ್ಕಾಗಿ ಬಳಸಿಕೊಳ್ಳದಂತೆ ನೋಡಿಕೊಳ್ಳುತ್ತೇವೆ ಎನ್ನುತ್ತಾರೆ, ಈ ನಡುವೆ ಕೆಲವು ನಾಯಕರು ಮಹದಾಯಿ ಹೋರಾಟವನ್ನು ಬಳಸಿಕೊಂಡು ಪ್ರತ್ಯೇಕತೆಯ ಮಾತನ್ನಾಡಿರುವುದನ್ನು ಖಂಡಿಸಿ “ಬೇರೆ ರಾಜ್ಯವಾದರೆ ಮಹದಾಯಿ ಬಂದುಬಿಡುತ್ತಾಳೇನು? ಇದೆಲ್ಲಾ ಕಿಡಿಗೇಡಿತನಕ್ಕೆ ನಮ್ಮ ಸಹಮತವಿಲ್ಲ” ಎನ್ನುತ್ತಾರೆ ಶಂಕರಪ್ಪ ಅಂಬಲಿಯವರು. ಈ ಹೋರಾಟ ಆರಂಭವಾದಂದಿನಿಂದ ನಮ್ಮ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳವರೂ ಬಂದು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಎನ್ನುವ ಇವರು, ಹಾಗಾದರೆ ಯೋಜನೆಯನ್ನು ಜಾರಿಮಾಡಬೇಕಾದವರು ಇವರಲ್ಲದೆ ಪಾಕಿಸ್ತಾನದವರಾ? ಅಥವಾ ಅಮೇರಿಕದವರಾ? ಎನ್ನುವ ಮೂಲಕ ಎಲ್ಲಾ ರಾಜಕೀಯ ಪಕ್ಷಗಳ ಬಣ್ಣ ಬಯಲು ಮಾಡುತ್ತಾರೆ. ಈ ಹೋರಾಟವನ್ನು ಹತ್ತಿಕ್ಕುವ, ನಾಯಕರುಗಳನ್ನು ಬಗ್ಗುಬಡಿಯುವ ಅನೇಕ ಯತ್ನಗಳು ನಡೆದಿವೆ, ಇವಕ್ಕೆಲ್ಲಾ ನಾವು ಬಗ್ಗುವುದಿಲ್ಲಾ ಎನ್ನುತ್ತಾರೆ ಅಂಬಲಿಯವರು. ಪ್ರಧಾನಮಂತ್ರಿಯವರು ಮಧ್ಯಸ್ಥಿಕೆ ವಹಿಸಲು ನಿರಾಕರಿಸಲು ಕಾರಣ ಮಹದಾಯಿ ಸಮಸ್ಯೆಯನ್ನು ವಿವರಿಸಲು ನಮ್ಮ ಸಂಸದರು ಎಡವಿದ್ದೇ ಕಾರಣ ಎನ್ನುತ್ತಾರೆ. ಇದೇ ಸಮಯದಲ್ಲಿ ಈ ಹೋರಾಟದ ಒಂದುವರ್ಷದ ಅವಧಿಯಲ್ಲಿ ಪ್ರಾಣ ಬಿಟ್ಟ ಧರ್ಮಣ್ಣ ಮತ್ತು ಚಿತ್ತರಂಜನ್ ಎಂಬುವರ ತ್ಯಾಗವನ್ನೂ ನೆನೆಯುತ್ತಾರೆ.

ಮುಂದಿನ ನಡೆ

ಕರ್ನಾಟಕ ಸರ್ಕಾರ ತನ್ನ ವಿಸ್ತೃತ ಮೂಲಯೋಜನೆಯಲ್ಲಿ ಹುಬ್ಬಳ್ಳಿ ಧಾರವಾಡದ ಕುಡಿವ ನೀರಿಗಾಗಿ ೨.೫ ಟಿಎಂಸಿ ಬೇಕು ಎಂಬುದಾಗಿ ಹೇಳಿದ್ದರೂ ವಾಸ್ತವವಾಗಿ ಇಂದು ಅದಕ್ಕಿಂತ ಹೆಚ್ಚು ನೀರು ಬಳಕೆಯಾಗುತ್ತದೆ. ಇಂದಿನ ಲೆಕ್ಕದಲ್ಲಿ ಈ ಭಾಗದ ಜನರ ಕುಡಿಯುವ ನೀರಿನ ಅಗತ್ಯಕ್ಕಾಗೇ ಸುಮಾರು ೧೫ ಟಿಎಂಸಿಯಷ್ಟು ನೀರು ಬೇಕು. ಇನ್ನು ನೀರಾವರಿಗೆ ನೀರೆಲ್ಲಿದೆ ಎನ್ನುವುದು ರೈತ ಹೋರಾಟಗಾರರ ಪ್ರಶ್ನೆ. ಇದೀಗ ಕಾನೂನು ಹೋರಾಟದಲ್ಲಿ ತಾನೂ ತೊಡಗಿಕೊಳ್ಳುವ ಮೂಲಕ, ಸರ್ಕಾರ ತಪ್ಪುಹಾದಿ ಹಿಡಿಯದಂತೆ ಕಾಯುವ ಕೆಲಸವನ್ನು ಒಂದೆಡೆ ಮಾಡುತ್ತಿದ್ದರೆ ಮತ್ತೊಂದೆಡೆ ಜನರಲ್ಲಿ ಅವರಿಗೆ ಆಗಿರುವ ಅನ್ಯಾಯದ ಬಗ್ಗೆ ಜಾಗೃತಿಯನ್ನು ಮೂಡಿಸುವತ್ತ ಗಮನ ಹರಿಸಿದೆ. ಈಗ ಹೋರಾಟಗಾರರ ಗಮನ ಮಹದಾಯಿ ನ್ಯಾಯಾಧಿಕರಣ ನೀಡಬಹುದಾದ ತೀರ್ಪಿನತ್ತ ನೆಟ್ಟಿದೆ. ಇದೇ ಜುಲೈ ೧೨ರಂದು ಆಯೋಗಕ್ಕೆ ವಿಚಾರಣೆ ಮುಂದೂಡಲು ಮನವಿ ಸಲ್ಲಿಸುವ ಮೂಲಕ ನ್ಯಾಯಾಧಿಕರಣದ ಕೆಂಗಣ್ಣಿಗೆ ಗುರಿಯಾದ ಗೋವಾದ ಬೂಟಾಟಿಕೆಯನ್ನು ಬಯಲುಮಾಡಬೇಕಾಗಿದೆ. ಪರಿಸರ ನಾಶವಾಗುವುದೆನ್ನುವ ಕಾರಣವನ್ನು ಮುಂದಿಟ್ಟಿರುವ ಇದೇ ಗೋವಾ, ಮಹದಾಯಿ ನದಿಯ ತಟದಲ್ಲಿ ಜಲವಿದ್ಯುತ್ ಯೋಜನೆ ಯೋಜಿಸಿರುವ, ಜಲಸಾರಿಗೆಗಾಗಿ ನಾಲೆ ತೋಡಿರುವ, ಬೆಳಗಾವಿ ಪಣಜಿಯ ನಡುವೆ ರಸ್ತೆ ಅಗಲಿಸುವ ಕೆಲಸಕ್ಕಾಗಿ ೪೦೦೦ಕ್ಕೂ ಹೆಚ್ಚು ಮರಗಳನ್ನು ಕಡಿಯುವುದಕ್ಕೆ ಕೇಂದ್ರವು ಒಪ್ಪಿಗೆ ಕೊಡುವಾಗ ತೋರಿಸದ ಕಾಳಜಿಯನ್ನು ಮಹದಾಯಿ ಯೋಜನೆ ಮಾಡುವಾಗ ಯಾಕೆ ತೋರಿಸುತ್ತಿದೆ ಎನ್ನುವುದನ್ನು ಬಯಲುಮಾಡಬೇಕಿದೆ. ಬರುವ ನವೆಂಬರ್ ತಿಂಗಳ ೨೦ನೇ ತಾರೀಕಿಗೆ ಈ ನ್ಯಾಯಾಧಿಕರಣಕ್ಕೆ ಆರು ವರ್ಷವಾಗಲಿದ್ದು ಅವಧಿ ಪೂರ್ಣಗೊಳ್ಳಲಿದೆ. ಈಗ ಮುಂದಿರುವ ಆಯ್ಕೆಯೆಂದರೆ ಹೆಚ್ಚುವರಿ ಅವಧಿ ನೀಡುವುದು ಅಥವಾ ನವೆಂಬರ್ ಇಪ್ಪತ್ತಕ್ಕೆ ಮೊದಲು ತೀರ್ಪು ನೀಡುವುದು ಮಾತ್ರವೇ ಆಗಿದೆ. ಹೀಗೆ ಅವಧಿಯನ್ನು ನ್ಯಾಯಾಧಿಕರಣದ ಅವಧಿಯನ್ನು ವಿಸ್ತರಿಸುವುದಕ್ಕೆ ರೈತ ಮುಖಂಡರು ವಿರೋಧ ತೋರಿಸುತ್ತಾ ನವೆಂಬರ್ ೨೦ಕ್ಕೆ ಮೊದಲೇ ತೀರ್ಪು ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಕರ್ನಾಟಕದ ಜನಪ್ರತಿನಿಧಿಗಳು ಗೋವಾದ ಜೊತೆ, ಪ್ರಧಾನಮಂತ್ರಿಗಳ ಮಧ್ಯಸ್ಥಿತಿಯ ಮೂಲಕ ಮಾತುಕತೆಯನ್ನಾಡಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿನ ಜನಪ್ರತಿನಿಧಿಗಳ ವಿರುದ್ಧವಾಗಿ ಪ್ರತಿಭಟಿಸುವ, ಹಳ್ಳಿಹಳ್ಳಿಗಳಿಗೆ ರಾಜಕಾರಣಿಗಳು ಕಾಲಿಡದಂತೆ ಮಾಡುವ ಮೂಲಕ ಈ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆಯಿದೆ. ಸದಾ ಬರಗಾಲದಿಂದ ನರಳುವ, ಹೊಟ್ಟೆಪಾಡಿಗಾಗಿ ಹಪಹಪಿಸುವ ಜನರ ಪಾಲಿಗೆ ಮಹದಾಯಿ ಮಹಾತಾಯಿ ಆಗಬೇಕಾಗಿದೆ. ಕುಡಿಯುವ ನೀರಿನ ದಾಹ ತಣಿಸುವ ಅಮೃತಮಯಿ ಆಗಬೇಕಿದೆ. ಇದೆಲ್ಲಕ್ಕಿಂತಾ ಮಿಗಿಲಾಗಿ ಪ್ರಾದೇಶಿಕ ರಾಜಕೀಯ ಪಕ್ಷವೊಂದರ ಕೊರತೆಯನ್ನು ಕನ್ನಡನಾಡು ತುಂಬಿಕೊಳ್ಳಬೇಕಾದ ಅಗತ್ಯ ಹಿಂದೆಂದಿಗಿಂತಲೂ ತೀವ್ರವಾಗಿದೆ.

“ಕಬಾಲಿ ಡಾ” ಅನ್ನೋದ್ನ ಕೇಳೋಕೆ ಸೂಪರ್!

kabali

(pc: Internet)

ಕಬಾಲಿ ಭಾರಿ ಗದ್ದಲದಲ್ಲಿ ಬಿಡುಗಡೆಯಾಗಿದೆ. ಆ ಮೂಲಕ ಕನ್ನಡನಾಡಿಗೆ ಬಲುದೊಡ್ಡ ಉಪಕಾರ ಮಾಡಿ, ನಿಜವಾದ ಕನ್ನಡಿಗನಿಗೆ ಸರಿ ತಪ್ಪು ಆಲೋಚನೆ ಮಾಡೋಕೆ ಅನುವು ಮಾಡಿಕೊಟ್ಟಿದೆ. ಕನ್ನಡಪರರೆಂದು ನಾಟಕವಾಡುತ್ತಿರುವ ಕತ್ತೆ, ನಾಯಿ ಕಟ್ಕೊಂಡು ಹೋರಾಡೋ ಹೋರಾಟಗಾರರ ಸೋಗಲಾಡಿತನವನ್ನೂ, ಒಂದೆಡೆ ನಾಡುನುಡಿಯ ರಕ್ಷಣೆಯ ಹರಿಕಾರನಂತೆ ತೋರಿಸಿಕೊಂಡು ಊರವರನ್ನೆಲ್ಲಾ ತರಾಟೆಗೆ ತೊಗೊಂಡು ಝಾಡಿಸುತ್ತಾ ಮತ್ತೊಂದೆಡೆ ಇಪ್ಪತ್ನಾಲ್ಕು ಗಂಟೇನೂ ಕಬಾಲಿ ಕಬಾಲಿ ಅಂತಾ ಕವಾಲಿ ಹಾಡ್ತಿರೋ ಟಿವಿ ವಾಹಿನಿಗಳವರ ಬೂಟಾಟಿಕೆಯನ್ನೂ, ಸಿನಿಮಾದಲ್ಲಿ ಕನ್ನಡ ಕನ್ನಡ ಅಂತಾ ಬಡ್ಕೊಂಡು ಮೊದಲದಿನವೇ ತಮಿಳು ಸಿನಿಮಾ ನೋಡಿ ಧನ್ಯತೆಯಿಂದ ತೇಲಾಡುತ್ತಿರುವ ಬಣ್ಣದ ನಾಯಕ ಮಂದಿಯ ಬಣ್ಣವನ್ನೂ ಕಳಚಿ ನಿಜವಾದ ತೊಗಲಿನ ದರ್ಶನ ಮಾಡಿಸಿದೆ. ಹಾಗಾಗಿ ಕಬಾಲಿಯ ರಜನಿಕಾಂತ್ “ಕಬಾಲಿ ಡಾ” ಅನ್ನೋದನ್ನು ಕಂಡಾಗೆಲ್ಲಾ ಒಂಥರ ಪುಳಕ! ಹಿಗ್ಗು!

ಪಾಪ! ನಮ್ಮ ನಟರದ್ದೇನೂ ತಪ್ಪಿಲ್ಲಾ ಬಿಡಿ. ಅವರದ್ದು ಹೇಗಿದ್ದರೂ ತೆರೆಯ ಮೇಲಿನ ನಾಟಕದ ಕನ್ನಡಪ್ರೇಮ. ತೆರೆಯ ಹಿಂದೂ ಅದೇ ಕನ್ನಡಪರತೆ ಇರಬೇಕು ಎಂದರೆ ಹೇಗೆ? ಅವರ ಕೈಯ್ಯಲ್ಲಿ ಕನ್ನಡ ಬಾವುಟ ಹಾರಾಡಿದ್ದೂ, ಕನ್ನಡ ಕನ್ನಡ ಅಂತಾ ಹಾಡಿ ಕುಣಿದಿದ್ದೂ ಅಭಿಮಾನದಿಂದಲ್ಲ, ನಿರ್ಮಾಪಕರು ಕೊಡೋ ಕಾಸಿಗಾಗಿ ಅನ್ನೋದನ್ನು ಅರ್ಥಮಾಡಿಕೊಳ್ಳದೆ ಅವರು ಅಂದಿದ್ದನ್ನೆಲ್ಲಾ ದಿಟವೆಂದು ನಂಬಿ… ಊರೂರಲ್ಲಿ ಕರೆದು ಸಂಘ ಕಟ್ಟಿಕೊಂಡು ಸನ್ಮಾನ ಮಾಡಿ ಬಿರುದು ಬಾವಲಿಗಳನ್ನಿತ್ತು ಮಂಗಗಳಾಗಿರೋ ಅಭಿಮಾನಿ ದೇವರುಗಳದ್ದು! ಇವರು ಡಬ್ಬಿಂಗ್ ವಿರುದ್ಧ ಗುಡುಗಿದರೆ ಅದು ಕನ್ನಡದ ಉಳಿವಿಗಾಗಿ ಎಂದು ನಂಬೋ ಮುಗ್ಧರೂ ಕೂಡಾ ಈಗೀಗ ಅದೆಲ್ಲಾ ತಮ್ಮ ಪರಭಾಷಿಕ ಉದ್ಯಮಿ ಗೆಳೆಯರ ಗೆಳೆತನಕ್ಕಾಗಿ, ತಮ್ಮ ಉದ್ದಿಮೆಯಲ್ಲಿನ ಸ್ವಹಿತಾಸಕ್ತಿಯ ಹತೋಟಿಕೂಟದ ಹಿತಕಾಪಾಡಲು ತೊಡುವ ಮೇಕಪ್ಪುಗಳು ಮಾತ್ರಾ ಅನ್ನೋದನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ನಮ್ಮೂರಿನ ಟಿವಿಗಳದ್ದೂ ತಪ್ಪಿಲ್ಲ! ಅವುಗಳ ಮಾಲಿಕರೋ, ಪಾಲುದಾರರೋ ಮತ್ಯಾರೋ ಸ್ವಜನರು ಕಷ್ಟಪಟ್ಟು ಕಾಸು ಹಾಕಿ ಸಿನಿಮಾ ತೆಗೆದಾಗ ಅದನ್ನು ಪ್ರಚಾರ ಮಾಡೋದು ತಪ್ಪಾ? ಅನ್ನವಿಡುವ ಯಜಮಾನರು ಹಾಕಿದ ಗೆರೆ ದಾಟಿ ಕನ್ನಡನಾಡಿನ, ಕನ್ನಡ ಚಿತ್ರರಂಗದ ಹಿತ ಕಾಪಾಡಬೇಕು ಅಂತಾ ಅಂದುಕೊಳ್ಳೋಕೆ ಅವರಿಗೆಲ್ಲಾ ಹುಚ್ಚುನಾಯಿ ಕಡಿದಿಲ್ಲಾ ಅಲ್ವಾ? ಇಷ್ಟಕ್ಕೂ ಅಂಥಾ ಸಿನಿಮಾಗಳ ಬಗ್ಗೆ ಟಿವಿಯಲ್ಲಿ ಕೂತು ಮಾತಾಡಿ “ಇದು ಅತ್ಯದ್ಭುತ! ಇದಕ್ಕೆ ಸಮನಿಲ್ಲ! ಕಲೆಗೆ ಭಾಷೆಯಿಲ್ಲಾ ಅನ್ನೋದನ್ನು ಇದು ತೋರಿಸಿದೆ” ಅಂತೆಲ್ಲಾ ಭಜನೆ ಮಾಡುವ ಹೊಗಳುಭಟ ಪತ್ರಕರ್ತ ಕತೆಗಾರರೂ ಇದಕ್ಕಾಗೇ ಟಿವಿಗಳ ಬಾಗಿಲಲ್ಲಿ ತುದಿಗಾಲಲ್ಲಿ ಕಾಯ್ತಾ ನಿಂತಿದ್ದಾರಲ್ಲಾ! ಅಂಥದ್ರಲ್ಲಿ ಟಿವೀಲಿ ಕಬಾಲಿ ಕಬಾಲಿ ಅಂತ ಇವರು ಜಪಿಸದೇ ಇರೋಕೆ ತಾನೇ ಹೇಗೆ ಸಾಧ್ಯ?

ತಾನು ಕನ್ನಡಪರ ಅನ್ನುತ್ತಾ ಕಬಾಲಿ ಸಿನಿಮಾ ಟಿಕೆಟ್ಟಿಗೆ ಬೆಲೆ ಜಾಸ್ತಿ, ನೂರು ರೂಪಾಯಿಗೆ ಟಿಕೆಟ್ ಕೊಡಬೇಕು ಅನ್ನುತ್ತಾ ಮುನ್ನೂರು ಟಾಕೀಸಿನಲ್ಲಿ ಸಿನಿಮಾ ಬಿಡುಗಡೆ ಆದ ಮೇಲೆ ಗೊಂಬೆ ಸುಡುವ ನಾಯಿಪಡೆ ಹೋರಾಟಗಾರರದ್ದೂ ತಪ್ಪಿಲ್ಲಾ ಬಿಡಿ. ಕನ್ನಡಿಗರು ಕಬಾಲಿಯನ್ನು ತಮಿಳು, ತೆಲುಗು, ಹಿಂದೀ ಭಾಷೆಗಳಲ್ಲಿ ನೋಡಲಿ.. ಆದರೆ ಕನ್ನಡದಲ್ಲಿ ಮಾತ್ರಾ ನೋಡುವುದನ್ನು ಸಹಿಸುವುದಿಲ್ಲಾ…. ಇದರಿಂದ ಕನ್ನಡ ಸಂಸ್ಕೃತಿ, ಭಾಷೆ, ಸಾಹಿತ್ಯಗಳಿಗೆ ಧಕ್ಕೆ ಬರುತ್ತೆ ಅಂತಾ ತಾನೇ ಇವರು ವಿರೋಧ ಮಾಡ್ತಿರೋದು!

ಕಬಾಲಿ ಚಿತ್ರದಿಂದ ಈ ಮೂರೂ ಮಂದಿಯ ಬಣ್ಣ ಬಯಲಾಗಿದೆ. ಕನ್ನಡ ಉಳಿಸೋಕೆ ತಮಿಳು, ತೆಲುಗು , ಹಿಂದೀಲಿ ಸಿನಿಮಾ ನೋಡಿ ಅನ್ನುವ ನಗೆಪಾಟಲಿನ ಮಾತಾಡೋ ಈ ಹೋರಾಟಗಾರರು ಇಷ್ಟು ವರ್ಷ ಮಾಡಿದ ಪ್ರಹಸನಗಳ, ಕನ್ನಡದ ಹೆಸರಲ್ಲಿ ಮಾಡಿದ ಹೋರಾಟಗಳ ನಿಜಾಯಿತಿ ಜನರಿಗೆ ಅರ್ಥವಾಗುತ್ತಿದೆ. ನಮ್ಮದು ಅಂದುಕೊಂಡ ಟಿವಿಗಳು ನಿಜಕ್ಕೂ ನಮ್ಮವಲ್ಲಾ! ಇವರ ಕನ್ನಡಪ್ರೇಮವೆಲ್ಲಾ ಬರೀ ಟಿಆರ್ಪಿ ಹೆಚ್ಚಿಸಲು ಬಳಕೆಯಾದ “ಸೋಪು ಧಾರಾವಾಹಿ” ಅನ್ನೋದು ಜನಕ್ಕೆ ಗೊತ್ತಾಗಿದೆ. ಇನ್ನು ಸಿನಿಮಾದ ಮಂದಿಯ ಕನ್ನಡ ಪ್ರೇಮ ನಮ್ಮ ಭಾವನೆಯನ್ನು ಕೆರಳಿಸಿ ಕಾಸು ಮಾಡೋ ಸರಕು ಅಂತಾನೂ ಜನರಿಗೆ ಗೊತ್ತಾಗಿದೆ.

ರಜನೀಕಾಂತ್ “ಕನ್ನಡಿಗರೇ, ನಿಮ್ಮ ಜನಗಳ ಬಂಡವಾಳಾನಾ ಹೆಂಗೆ ಬಯಲು ಮಾಡ್ದೆ. ನಾನು ಕಬಾಲಿ ಡಾ” ಅನ್ನೋದು ಸೂಪರ್ರಾಗೇ ಇದೆ! ಹಾಗಾಗಿ, ಕಬಾಲಿಗೆ ಒಂದು ಥ್ಯಾಂಕ್ಸು!!

 

ಕುತಂತ್ರ, ದುಷ್ಟತನಗಳ ಕಳ್ಳಬೆಕ್ಕು – ಭಾರತ ಸರ್ಕಾರ

ಭಾರತದ ಸ್ವರೂಪವೇ ಒಂದು ರೀತಿಯಲ್ಲಿ ಬರೀ ಪುಸ್ತಕದ ಬದನೆಕಾಯಿಯಂತೆ ಬೊಗಳೆತನದ್ದು. ಇದಕ್ಕೊಂದು ಅದ್ಭುತವಾದ ಸಂವಿಧಾನವಿದೆ. ಸಂವಿಧಾನದಲ್ಲೂ ಟೊಳ್ಳುತನದ ಅನೇಕ ಕಾಲಮ್ಮುಗಳಿವೆ. ವಿರೋಧಾಭಾಸಗಳಿವೆ. ಹಾಗಾಗಿ ಬೇಕಾದಷ್ಟು ಹುಳುಕು ಅದರಲ್ಲಿದೆ. ಹೆಸರಿಸಬೇಕೆಂದರೆ ಭಾರತ ಸಂವಿಧಾನದಲ್ಲಿ ಎಲ್ಲ ಪ್ರಜೆಗಳೂ ಸಮಾನರು, ಅವರನ್ನು ಪ್ರದೇಶ, ಭಾಷೆ, ಜಾತಿ, ಧರ್ಮಗಳ ಆಧಾರದ ಮೇಲೆ ಭೇದಭಾವ ಮಾಡಬಾರದು ಎಂಬ ದೊಡ್ಡ ಆದರ್ಶದ ಮಾತುಗಳಿವೆ. ಆದರೆ ಅದೇ ಪುಸ್ತಕದಲ್ಲಿ ಹಿಂದೀ ಭಾಷೆಗೆ ಹೆಚ್ಚಿನ ಸ್ಥಾನಮಾನ ನೀಡುತ್ತಾ ಹಿಂದೀಯನ್ನು ದೇಶದ ತುಂಬಾ ಹರಡಲು ಭಾರತದ ಕೇಂದ್ರಸರ್ಕಾರ ಬದ್ಧವಾಗಿರತಕ್ಕದ್ದು ಎಂದು ಬರೆಲಾಗಿದೆ. ಹೇಗೆ ತಾನೆ ಇವೆರಡೂ ಒಟ್ಟಿಗೆ ಸಾಧಿಸಲು ಸಾಧ್ಯ? ಒಂದು ನುಡಿಯನ್ನು ಆ ನುಡಿಯಾಡದ ಪ್ರದೇಶದಲ್ಲಿ ಹರಡು ಎನ್ನುವುದೇ ಸರ್ವಾಧಿಕಾರಿ, ಆಕ್ರಮಣಕಾರಿ, ದಾಳಿಕೋರ ಮನಸ್ಥಿತಿಯ ಪ್ರತೀಕ. ಇಂತಹ ಹುಳುಕು, ಬದಲಾವಣೆಗೆ ಸಂಪೂರ್ಣವಾಗಿ ಅರ್ಹವಾದದ್ದಾಗಿದೆ.

ಇಂತಹ ಹುಳುಕಿನ ಸಂವಿಧಾನವನ್ನು ಅದರಲ್ಲಿರುವಂತೆಯೇ, ಆದರ ಆಶಯಕ್ಕೆ ಪೂರಕವಾಗಿ ಪ್ರಾಮಾಣಿಕವಾಗಿ ಯಾರಾದರೋ ಜಾರಿಮಾಡಲು ಮುಂದಾಗುವುದಾದರೆ ಅದು ಬ್ರಿಟೀಷರ ಆಳ್ವಿಕೆಗಿಂತಲೂ ಕ್ರೂರ, ಅನ್ಯಾಯದ ಆಡಳಿತವಾಗಿಬಿಡುತ್ತದೆ. ನಮ್ಮ ಅದೃಷ್ಟವೆಂದರೆ ನಮ್ಮ ದೇಶವನ್ನು ಅರವತ್ತೈದು ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕವೂ ಆಗಿರಲಿಲ್ಲ! ದಕ್ಷವೂ ಆಗಿರಲಿಲ್ಲ! ಹಾಗಾಗಿ, ಇವರ ಭ್ರಷ್ಟತನ ಈ ವಿಷಯದಲ್ಲಿ ನಮಗೆ ಅನುಕೂಲವನ್ನೇ ಮಾಡಿದೆ. ಇವರ ಅದಕ್ಷತೆಯ ಕಾರಣದಿಂದಲೇ ಇಷ್ಟು ವರ್ಷ ಭಾರತ ಸರ್ಕಾರ ಕಳ್ಳಬೆಕ್ಕಿನಂತೆ ನಡೆದುಕೊಂಡಿದೆ. ಹಿಂದೀ ಭಾಷೆಯನ್ನು ಭಾರತದ ಆಡಳಿತ ಭಾಷೆಯನ್ನಾಗಿಸಬೇಕು ಎನ್ನುವ ಮನಸ್ಥಿತಿಯೇ ದಬ್ಬಾಳಿಕೆಯ, ಸಾಮ್ರಾಜ್ಯ ವಿಸ್ತರಣೆಯ ದಾಹದ ಹೆಗ್ಗುರುತು. ಇಂತಹ ಉದ್ದೇಶದ ಭಾರತ ಸರ್ಕಾರ ಸದಾ ಕಾಲ ಎಲ್ಲೆಲ್ಲಿ ಎಷ್ಟೆಷ್ಟು ಆಗುತ್ತದೆಯೋ ಅಷ್ಟಷ್ಟು ಹಿಂದೀಯನ್ನು ನುಗ್ಗಿಸುತ್ತಲೇ ಬಂದಿದೆ. ತಮಿಳುನಾಡಿನಲ್ಲಿ ಅದಕ್ಕೆ ಪ್ರತಿರೋಧ ಎದುರಾಯ್ತು ಅಂದರೆ ಅಲ್ಲಿ ಹೇರಿಕೆಯನ್ನು ನಿಧಾನ ಮಾಡೋದು. ಕನ್ನಡನಾಡಲ್ಲಿ ವಿರೋಧ ಇಲ್ಲಾ ಅಂದರೆ ಕನ್ನಡಿಗರ ನೆತ್ತಿಯನ್ನು ಚೆನ್ನಾಗಿ ಸವರಿ ಕನ್ನಡದವರೇ ಹಿಂದೀ ಬೇಕು ಎನ್ನುವಂತೆ ಮಾಡಿ ಹಿಂದೀ ಸಾಮ್ರಾಜ್ಯಶಾಹಿಯ ಸಂಸ್ಥಾಪನೆಗೆ, ಸಾಮ್ರಾಜ್ಯ ವಿಸ್ತರಣೆಗೆ ಮುಂದಾಗೋದು. ಹೀಗೇ ನಡೆದು ಬಂದಿತ್ತು. ವಾಸ್ತವದಲ್ಲಿ ಹೆಸರಿಗೆ ಸಮಾಜವಾದಿ ಸಿದ್ಧಾಂತವನ್ನು ಹೊಂದಿದ್ದರೂ ಕಾಂಗ್ರೆಸ್ಸಿಗೆ ಯಾವ ಸಿದ್ಧಾಂತವೂ ಇಲ್ಲ. ಇರುವುದೆಲ್ಲಾ ಅಧಿಕಾರದಾಹ! ಅಧಿಕಾರದಲ್ಲಿದ್ದು ಹೇಗೆಲ್ಲಾ ಲಾಭ ಮಾಡಿಕೋಬೇಕೆಂಬ ಲೆಕ್ಕಾಚಾರ!

ಆದರೆ ಈಗ ಅಧಿಕಾರಕ್ಕೆ ಬಂದಿರುವ ಭಾರತೀಯ ಜನತಾಪಕ್ಷದ ಕಥೆ ಹಾಗಿಲ್ಲ! ಭಾರತವನ್ನು ಬಲಿಷ್ಟ ಮಾಡಬೇಕು. ಹಾಗೆ ಆಗದಿರಲು ಮುಖ್ಯಕಾರಣವೇ ಇಲ್ಲಿರುವ ಭಾಷಾವಾರು ಪ್ರಾಂತ್ಯಗಳು, ಭಾರತೀಯರಿಗೆ ತಾನು ಭಾರತೀಯ ಎನ್ನುವ ಒಂದೇ ಗುರುತಿರಬೇಕು, ತನ್ನ ನುಡಿ ಪ್ರದೇಶಗಳಿಂದ ಗುರುತಿಸಿಕೊಳ್ಳುವುದು ರಾಷ್ಟ್ರೀಯತೆಗೆ ಮಾರಕ ಎನ್ನುವ ಭಯಂಕರ ರಾಷ್ಟ್ರೀಯವಾದದ ಸಿದ್ಧಾಂತದ ಮನೆಯಿಂದ ಬಂದ ಪಕ್ಷ ಅದು. ದುರದೃಷ್ಟವೆಂದರೆ ವಿದೇಶಿ ಇಂಗ್ಲೀಷಿನ ಮೇಲಿನ ದ್ವೇಷದಲ್ಲಿ, ಸ್ವದೇಶಿ ಹಿಂದೀಯನ್ನು ಆ ಜಾಗದಲ್ಲಿರಿಸಬೇಕು ಎನ್ನುವ ಸಿದ್ಧಾಂತದ ಪಕ್ಷ ಅದು. ಇದರ ರಾಜಕಾರಣಿಗಳು ನಿಸ್ವಾರ್ಥತೆಯನ್ನು ಕಲಿಸಿಕೊಡುವ ಸಂಘದ ಮೂಸೆಯಿಂದ ಬಂದಿದ್ದರಂತೂ ಈ ಹುಸಿ ರಾಷ್ಟ್ರೀಯತೆಯ ಉಗ್ರಪ್ರತಿಪಾದನೆ ಮಾಡುವವರಾಗಿಬಿಡುತ್ತಾರೆ. ಸಹಜವಾಗೇ ರಾಷ್ಟ್ರಪ್ರೇಮದ ಉನ್ಮಾದಿಗಳಾದ ಇವರು ತಮ್ಮ ಸಿದ್ಧಾಂತವನ್ನು ಎಲ್ಲ ಪ್ರತಿರೋಧಗಳನ್ನು ಬಗ್ಗು ಬಡಿದಾದರೂ ಜಾರಿ ಮಾಡಲು ಮುಂದಾಗುವುದು ನಿರೀಕ್ಷಿತ.

ಈ ಕಾರಣಗಳಿಗಾಗಿಯೇ ಕಳೆದೆರಡು ವರ್ಷಗಳಲ್ಲಿ ದೇಶ ಮೊದಲು, ಎಲ್ಲಾ ಕಡೆ ಹಿಂದೀ ಬರಬೇಕು, ಎಲ್ಲಾ ಕೇಂದ್ರಸರ್ಕಾರಿ ಕಚೇರಿಗಳೂ ಹಿಂದೀಲೆ ಕಾರ್ಯ ನಿರ್ವಹಿಸಬೇಕು ಎನ್ನುವ ನಡೆಗಳನ್ನು ಕೇಂದ್ರಸರ್ಕಾರ ತೀವ್ರಗೊಳಿಸಿರುವುದನ್ನು ಕಾಣಬಹುದು. ಸಿದ್ಧಾಂತದಲ್ಲಿಯೇ ರಾಜ್ಯಗಳ ಒಕ್ಕೂಟವೆನ್ನುವ ಭಾರತದ ಸ್ವರೂಪಕ್ಕೆ ವಿರೋಧಿಗಳಾಗಿರುವ ಈ ಮಂದಿ, ಅಧಿಕಾರದ ತೀವ್ರವಾದ ಕೇಂದ್ರೀಕರಣವನ್ನು ಮಾಡುವವರು. ಇದಕ್ಕಾಗೇ ಇವರ ಸರ್ಕಾರ “ಒಂದು ದೇಶ, ಒಂದು ನೀತಿ” ಎನ್ನುವುದನ್ನು ಸಾಕಾರ ಮಾಡುವ ಹುಚ್ಚಿನಲ್ಲಿ ಇಡೀ ದೇಶಕ್ಕೊಂದೇ ವೈದ್ಯಕೀಯ ಪ್ರವೇಶ ಪರೀಕ್ಷೆ, ಶಿಕ್ಷಣದ ಕೇಂದ್ರೀಕರಣ, ಇಂಜಿನೀಯರಿಂಗ್ ಪರೀಕ್ಷೆಗೆ ಒಂದೇ ಪ್ರವೇಶ ಪರೀಕ್ಷೆ, ಎಗ್ಗು ಸಿಗ್ಗಿಲ್ಲದೆ ಕನ್ನಡನೆಲದಲ್ಲೂ ಹಿಂದೀ ಭಾಷಣ, ಕನ್ನಡದ ದಿನಪತ್ರಿಕೆಗಳಲ್ಲಿ ಹಿಂದೀ ಜಾಹೀರಾತು..ಹೀಗೆ ನಡೆದುಕೊಳ್ಳುತ್ತಿದೆ.

ಭ್ರಷ್ಟ ಕಾಂಗ್ರೆಸ್ಸಿಗಿಂತಾ ಹುಸಿ ರಾಷ್ಟ್ರೀಯತೆಯ ಬಿಜೆಪಿ, ಹಾಗಾಗೇ ಹೆಚ್ಚು ಆಕ್ರಮಣಕಾರಿ, ಹೆಚ್ಚು ಭಂಡತನದ್ದು. ಇವರಿಗೆ ಭಾರತ್ ಮಾತಾ ಕೀ ಜೈ ಘೋಷಣೆಯ ಸದ್ದಿನಲ್ಲಿ ಜನಾಭಿಪ್ರಾಯ ಕಿವಿಗೇ ಬೀಳದು. ನಾಡೊಳಗಿನ ವೈವಿಧ್ಯತೆಗಳನ್ನು ಅಳಿಸುತ್ತಾ, ಹಿಂದೀ ಭಾಷಿಕರಿಗೆ ಅನುಕೂಲವಾಗುವ ವ್ಯವಸ್ಥೆ ಕಟ್ಟುತ್ತಾ, ಕನ್ನಡಿಗರೇ ಮೊದಲಾದ ಹಿಂದೀಯೇತರರ ಮೂಲಭೂತಹಕ್ಕುಗಳನ್ನು ನಿರಾಕರಿಸುತ್ತಾ ತಮ್ಮತನದ ಉಳಿಯುವಿಕೆಗೆ ಎತ್ತುವ ಧ್ವನಿಗಳನ್ನೆಲ್ಲಾ ದೇಶದ್ರೋಹದ ಕೂಗೆಂದುಕೊಳ್ಳುತ್ತಾ ಭಾರತದ ಏಳಿಗೆಗೆ ದುಡಿಯುತ್ತೇವೆಂದು ಭ್ರಮಿಸುತ್ತಾ ಸಾಗುವ ಪಕ್ಷ ಇದು. ಇಂಗ್ಲೀಷಿನ ಬದಲು ಹಿಂದೀ ಭಾರತವನ್ನಾಳಬೇಕೆಂದು ಬಯಸುವ ಈ ಮಂದಿಗೆ ತಮ್ಮ ಈ ನಂಬಿಕೆ ನಿಜವಾಗಿ ಭಾರತ ವಿರೋಧಿ ಎನ್ನುವುದು ಅರಿವಾಗುತ್ತಿಲ್ಲ. ನಾಡೊಂದರಲ್ಲಿ ಜನರ ಸಹಜ ನೈಸರ್ಗಿಕವಾದ ಗುರುತು ಮತ್ತು ಒಗ್ಗಟ್ಟಿನ ಸಾಧನ ಆ ಜನರ ನುಡಿಯಾಗಿದೆ ಎನ್ನುವುದು ಇವರಿಗೆ ತಿಳಿದಿರುವಂತಿಲ್ಲ. ಏಕ್ ಭಾರತ್ ಹೆಸರಲ್ಲಿ ದೊಡ್ಡ ಪ್ರಮಾಣದ ಭಾರತೀಯ ಜನತೆಯನ್ನು ಎರಡನೇ ದರ್ಜೆಯ ನಾಗರೀಕರನ್ನಾಗಿಸುವ, ನಮ್ಮ ನಾಡುಗಳಿಗೆ ಅನಿಯಂತ್ರಿತವಾಗಿ ಉತ್ತರದ ಜನರು ವಲಸೆಯಾಗುವುದನ್ನು ಉತ್ತೇಜಿಸುವ ನಡೆಗಳು ಭಾರತವನ್ನು ಒಡಕಿನತ್ತ ಒಯ್ಯುವುದು ನಿಶ್ಚಿತ. ಇವರು ನಮ್ಮತನಕ್ಕೆ ಧಕ್ಕೆ ತರಲು ಪ್ರಯತ್ನಿಸಿದಷ್ಟೂ ಪ್ರತಿರೋಧ ಹೆಚ್ಚುವುದೂ ನಿಶ್ಚಿತ!

ಒಬ್ಬ ಕನ್ನಡಿಗ, ಒಬ್ಬ ತಮಿಳ, ಒಬ್ಬ ಗುಜರಾತಿ, ಒಬ್ಬ ಹಿಂದೀಯವ, ಒಬ್ಬ ಬೆಂಗಾಲಿ…ತಾನು ತಾನಾಗಿದ್ದುಕೊಂಡೇ ಏಳಿಗೆ ಸಾಧಿಸುವ ಮೂಲಕ ಮಾತ್ರವೇ ಭಾರತ ಏಳಿಗೆಯಾಗಬಲ್ಲದು. ಹಾಗಾಗೇ ರಾಜ್ಯಗಳ ಮೇಲೆ ಯಾವ ಹೇರಿಕೆಯನ್ನೂ ಮಾಡದ, ಪ್ರತಿಯೊಂದು ಪ್ರದೇಶದ ನುಡಿ, ಜನಲಕ್ಷಣ, ಸಂಸ್ಕೃತಿ, ಇತಿಹಾಸಗಳಿಗೆ ಪೂರಕವಾಗುವಂತೆ ರೀತಿನೀತಿ ರೂಪಿಸುವಲ್ಲೇ ಈ ದೇಶದ ಒಗ್ಗಟ್ಟಿರುವುದು. ಪ್ರತಿಯೊಬ್ಬ ಪ್ರಜೆಗೂ, ಪ್ರತಿಯೊಂದು ನುಡಿಗೂ ತನ್ನ ನೆಲದಲ್ಲಿ ಪ್ರಶ್ನಾತೀತವಾದ ಸಾರ್ವಭೌಮತ್ವ ಇರುವಂತಹ ವ್ಯವಸ್ಥೆ ಕಟ್ಟಬೇಕಾದ್ದು ಬಲು ಮುಖ್ಯ. ಅನನ್ಯತೆಯನ್ನು ಪೊರೆಯದೆ ಬಾಯಲ್ಲಿ ವೈವಿಧ್ಯತೆಯಲ್ಲಿ ಏಕತೆ ಎನ್ನುವ ಮಂತ್ರ ಹೇಳುವುದು ಬೋಗಸ್! ಇಂತಹ ಬದಲಾವಣೆಗೆ ಬೇಕಿರುವುದು ಸಂವಿಧಾನ ತಿದ್ದುಪಡಿ. ಆಳುವ ಸರ್ಕಾರಕ್ಕೆ ಈ ಬಗ್ಗೆ ಕಾಳಜಿ, ಸಮಾನ ಗೌರವ ಸಮಾನ ಅವಕಾಶದ ವ್ಯವಸ್ಥೆ ಕಟ್ಟದಿದ್ದರೆ ದೇಶದ ಒಗ್ಗಟ್ಟು ಅಸಾಧ್ಯ ಎಂಬುದರ ಮನವರಿಕೆ ಆಗಬೇಕಾದ್ದು ಮುಖ್ಯ!