ಕನ್ನಡಕ್ಕೆ ತನ್ನತನವಿದೆ – ಇದು ಸಂಶೋಧನೆ: “ಭಾರತ ಭಂಜನ”ದ ಹುನ್ನಾರವಲ್ಲಾ!

halagannada3  

“ಹಳಗನ್ನಡ” ಎನ್ನುವ ಒಂದು ಹೊತ್ತಗೆಯನ್ನು ಪ್ರೊ. ಷಟ್ಟರ್ ಅವರು ಬರೆದಿದ್ದಾರೆ. ಇವರು ಮೂಲತಃ ಅಧ್ಯಾಪಕರು, ಸಂಶೋಧಕರು ಮತ್ತು ಬರಹಗಾರರು. ಮೊದಲಿಗೆ ಹೇಳಬೇಕಾದುದೇನೆಂದರೆ ಇಡೀ ಪುಸ್ತಕದಲ್ಲಿ ಅವರು ಕನ್ನಡದ ತನ್ನತನ ತೋರಿಸುವ ಪ್ರಯತ್ನವೇನೂ ಮಾಡಿಲ್ಲಾ. ಕನ್ನಡ ಶಾಸನಗಳನ್ನು ಅಧ್ಯಯನ ಮಾಡಿ, ಅದರ ಲಿಪಿ ಮತ್ತು ಲಿಪಿಕಾರರ ಕುರಿತಾಗಿ ಈ ಪುಸ್ತಕವನ್ನು ಬರೆದಿದ್ದಾರೆ. ಇದು ಅಪ್ಪಟ ಸಂಶೋಧನೆಯ ಕೃತಿ ಮತ್ತು ಯಾವುದೋ ಸಿದ್ಧಾಂತದ ಸಾಬೀತಿಗಾಗಿ ಬರೆದದ್ದಲ್ಲಾ… ಯಾಕೆಂದರೆ ಅಂತಹ ಯಾವ ನಿರ್ಣಯವನ್ನೂ ಷಟ್ಟರ್ ಅವರು ಇದರಲ್ಲಿ ಮಾಡಲು ಹೋಗಿಲ್ಲ.

ಈ ಪೀಠಿಕೆ ಯಾಕೆಂದರೆ ಮೊನ್ನೆ ತಾನೇ “ಭಾರತ ಭಂಜನ” ಕೃತಿಯ ಬಗ್ಗೆ ಬರೆದಿದ್ದೆ. ಅದರ ಲೇಖಕರು ಭಾವಿಸಿರುವಂತೆ “ಯಾವುದೇ ಭಾರತೀಯ ಭಾಷೆಯೂ ತನ್ನತನ ಹೊಂದಿಲ್ಲಾ, ಮೂಲದಲ್ಲಿ ಎಲ್ಲವೂ ಸಂಸ್ಕೃತದಿಂದಲೇ ಹುಟ್ಟಿದ್ದು… ಅವುಗಳ ನಡುವೆ ಚೂರುಪಾರು ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನೇ ದೊಡ್ಡದು ಮಾಡಿ ಅದು ಬೇರೆಯದೇ ಮೂಲದ್ದು ಎಂದು ಹೇಳುವುದು ಭಾರತವನ್ನು ಒಡೆಯಲು ಮಾಡುವ ಸಂಚು” ಎಂಬುದು ನಿಜವಲ್ಲಾ ಎನ್ನುವ ವಾದಕ್ಕೆ ಪೂರಕವಾಗಿ ಈ ಸಂಶೋಧನೆಗಳಿವೆ. ಯಾವುದೇ ನುಡಿಯ ಹಳಮೆ, ಬೇರ್ಮೆ ಮತ್ತು ತನ್ನತನದ ಹುಡುಕಾಟ ಭಾರತವನ್ನು ಒಡೆಯಲಿಕ್ಕಾಗೇ ಎಂಬ ಭೀತಿಯ ವಾದ ಭಾರತ ಭಂಜನ ಪುಸ್ತಕದಲ್ಲಿದೆ. ಆ ವಾದ/ ಅನಿಸಿಕೆ ಎಷ್ಟು ಪೊಳ್ಳಿನದು ಎಂಬುದನ್ನು ಹಳಗನ್ನಡ ಪುಸ್ತಕದ ಹಲಭಾಗಗಳನ್ನು ನೋಡಿದಾಗ ಅನ್ನಿಸುತ್ತದೆ.

ವಾಸ್ತವವಾಗಿ ಈ ಹಳಗನ್ನಡ ಪುಸ್ತಕವು ಅರಿಮೆಯ ಹೊತ್ತಗೆಯಾಗಿದ್ದು, ಶಾಸನಗಳ ಅಧ್ಯಯನ, ಬರೆದವರ ಬಗೆಗಿನ ವಿಶ್ಲೇಷಣೆಯೇ ಮೊದಲಾದ ವಿಷಯಗಳನ್ನು ಮಾತ್ರಾ ಚರ್ಚಿಸುತ್ತದೆ. ಈ ಪುಸ್ತಕದ ಕೆಲಸಾಲುಗಳನ್ನು ಕೆಳಗೆ ನೀಡಲಾಗಿದೆ. ಅಧ್ಯಯನದ ವಿಧಾನ ಏನು, ಇಲ್ಲಿ ಹೇಗೆ ಶಾಸನಗಳನ್ನು ಅಧ್ಯಯನ ಮಾಡಲಾಗಿದೆ ಎಂಬುದಕ್ಕೆ ಉದಾಹರಣೆಯಾಗಿ ಈ ಪುಟವಿದೆ ನೋಡಿರಿ.

IMG_20150401_134306007

ಮೂಲ ಕಲ್ಬರಹ/ ತಾಮ್ರಪಟದಲ್ಲಿ ಹೇಗಿದೆಯೋ ಹಾಗೆ ಬರೆದ ಸಾಲುಗಳನ್ನು ಮೊದಲಿಗೆ ಕೊಡಲಾಗಿದ್ದು (ಬ್ರಾಹ್ಮಿ/ ಹಳಗನ್ನಡ ಲಿಪಿ) ಅದರ ಕೆಳಗೆ ಈಗಿನ ಲಿಪಿಯಲ್ಲಿ ಅದೇ ಬರಹವನ್ನು ಬರೆಯಲಾಗಿದೆ. ನಂತರ ಇಡೀ ಶಾಸನವನ್ನು ಓದಲು ಪ್ರಯತ್ನಿಸಲಾಗಿದ್ದು ಅದರಲ್ಲಿ ಎಷ್ಟು ಪದಗಳಿವೆ, ಸಾಲುಗಳಿವೆ, ವಾಕ್ಯಗಳಿವೆ ಎಂದು ವಿವರಿಸಲಾಗಿದೆ. ಹೀಗೆ ವಿವರಿಸುವಾಗ ಸಂದರ್ಭ, ಸನ್ನಿವೇಶ, ಅರ್ಥಗಳನ್ನೂ ತಿಳಿದುಕೊಳ್ಳುವ ಪ್ರಯತ್ನ ಮಾಡಿರುವುದನ್ನೂ ನಾವು ಕಾಣಬಹುದು. ಬರಹಗಳ ವಿಶ್ಲೇಷಣೆಯಲ್ಲಿ ಎಷ್ಟು ಪದಗಳು ಕನ್ನಡದಲ್ಲಿವೆ, ಎಷ್ಟು ಸಾಲುಗಳು ಕನ್ನಡದಲ್ಲಿವೆ, ಸಂಸ್ಕೃತ ಪದಗಳ ಎಣಿಕೆ ಏನು, ಹೇಗೆ ಅವುಗಳನ್ನು ಬರೆಯಲಾಗಿದೆ ಎಂಬುದನ್ನು ವಿಸ್ತರಿಸುತ್ತಾ ಅಂದಿನ ಸಮಾಜವನ್ನು ಅರಿಯುವ ಪ್ರಯತ್ನ ಮಾಡಿರುವುದನ್ನು ಕಾಣಬಹುದಾಗಿದೆ.

ಇಂತಹ ನೂರಾರು ಶಾಸನಗಳನ್ನು ಶಾಸ್ತ್ರಬದ್ಧವಾಗಿ ಅಧ್ಯಯನ ಮಾಡಿದ ಮೇಲೆ ಕನ್ನಡ ಲಿಪಿ/ ನುಡಿಗಳು ಹೇಗೆ ಶಾಸನಗಳನ್ನು ಪ್ರಭಾವಿಸಿವೆ ಎಂಬುದನ್ನು ವಿವರಿಸಲಾಗಿದೆ. ಕನ್ನಡವೆಂಬ ಜನನುಡಿ ಮತ್ತು ಶಾಸನದ ಹೆರನುಡಿಗಳು ಶಾಸನ ಬರಹಗಳಲ್ಲಿ ಒಂದನ್ನೊಂದು ಹೇಗೆ ಪ್ರಭಾವಿಸಿದವು ಎಂಬುದನ್ನು ಅಚ್ಚುಕಟ್ಟಾಗಿ ವಿವರಿಸಲಾಗಿದೆ. ಕಾಲಾಂತರದಲ್ಲಿ ಕನ್ನಡ ಲಿಪಿ ಹೆರನುಡಿಗಳಿಗೆ ಹೊಂದಿಕೆಯಾಗುವಂತೆ ಹೇಗೆ ತನ್ನ ಸ್ವರೂಪವನ್ನು ಹೊಂದಿಸಿಕೊಂಡಿತು ಎಂಬುದನ್ನು ಹೀಗೆ ಬರೆಯಲಾಗಿದೆ.

ಪ್ರಾಕೃತದ ಏಕಸ್ವಾಮ್ಯವು ಮುಕ್ತಾಯವಾಗಿ ಸಂಸ್ಕೃತವು ಕಾಲಿಡುವಾಗ ಬ್ರಾಹ್ಮೀಯ ಏಕಸ್ವಾಮ್ಯವೂ ಮುಕ್ತಾಯವಾಗಿ ಮುಂಚೂಣಿ (ಹಳಗನ್ನಡ) ಕನ್ನಡಲಿಪಿ ಕಾಣಿಸಿಕೊಂಡಿತು. ಆವರೆಗೂ ಪ್ರಾಕೃತದ ವಾಹಕವಾಗಿದ್ದ ಕೆಳದಖ್ಖಣದ ಲಿಪಿಯ ಗುಣಗಳೇ ಹಳಗನ್ನಡ ಲಿಪಿಯಲ್ಲಿರುವುದನ್ನು ಗುರುತಿಸಬಹುದು. ಅಂದರೆ ಸ್ವರಾಕ್ಷರಗಳಲ್ಲಿ ’ಏ’, ’ಐ’, ’ಓ’, ’ಔ’ಗಳು, ಅವರ್ಗೀಯಗಳಲ್ಲಿ ’ಶ’, ’ಷ’, ’ಹ’ಗಳು, ವರ್ಗೀಯ ವ್ಯಂಜನಗಳಲ್ಲಿ ವರ್ಗ ದ್ವಿತೀಯ ಮತ್ತು ಚತುರ್ಥ (ಮಹಾಪ್ರಾಣಾಕ್ಷರ)ಗಳು, ಅನುನಾಸಿಕದ ಸ್ಥಾನದಲ್ಲಿ ಬಿಂದು, ಇವೆಲ್ಲಕ್ಕಿಂತಾ ಮುಖ್ಯವಾಗಿ ಅನುಸ್ವಾರಕ್ಕೊಂದು ನಿಶ್ಚಿತ ಸ್ಥಾನ ಇಲ್ಲದಿರುವ ಕಾಲ ಇದಾಗಿತ್ತು. ಆದರೆ ಮುಂಚೂಣಿ ಕನ್ನಡಲಿಪಿ ಸಂಸ್ಕೃತದ ವಾಹನವಾಗತೊಡಗಿದೊಡನೆ, ತನಗೆ ಅವಶ್ಯವಿರಲಿ-ಬಿಡಲಿ, ಇವೆಲ್ಲವನ್ನೂ ತನ್ನ ತೆಕ್ಕೆಯೊಳಗೆ ತಂದುಕೊಂಡಿತಲ್ಲದೆ, ಇವುಗಳೊಡನೆ ನಾಲಿಗೆಗೆ ಒಗ್ಗದ ’ಋ’ ಸ್ವರಾಕ್ಷರವನ್ನು (ತಾನು ಮುಂದೆಂದೂ ಬಳಸದೆ ಇಂದಿನವರೆಗೂ ಪೋಷಿಸಿಕೊಂಡು ಬಂದಿರುವ ಕೂಳುಬಾಕ ’ೠ’ ದೀರ್ಘಾಕ್ಷರವನ್ನು) ಒಡಲಿನಲ್ಲಿ ತುಂಬಿಕೊಂಡು ತನ್ನ ಕಾಯವನ್ನು ವಿಸ್ತರಿಸಿಕೊಂಡಿತು.

ಶಾಸನ ಬರಹಗಳ ಅಧ್ಯಯನವು ಬರಿಯ ಲಿಪಿಯ ವಿಕಾಸದ ಕಥೆಯನ್ನು ಮಾತ್ರಾ ಹೇಳದೆ ಅಂದಿನ ಸಮಾಜವು ಶಾನ್ಸನ ಬರೆಯುವುದರ ಮೇಲೆ ಉಂಟುಮಾಡಿದ್ದ ಪ್ರಭಾವವನ್ನೂ ಬಣ್ಣಿಸುತ್ತಾ ಬಂದಿರುವದನ್ನು ಕಾಣಬಹುದು. ಶಾಸನದ ಬರಹವು ಸಂಸ್ಕೃತ ಪ್ರಾಕೃತಗಳಿಂದ ಸಾಗಿ ಮಿಶ್ರ ಬರಹವಾಗಿ, ದ್ವಿಭಾಷಾ ಬರಹವಾಗಿ ಕನ್ನಡ ಲಿಪಿ ಬಳಕೆಯ ಹರವು ಹಿಗ್ಗಿರುವುದನ್ನು ಹೀಗೆ ಗುರುತಿಸಲಾಗಿದೆ. ಕದಂಬರ ಕಾಲಘಟ್ಟದಲ್ಲಿ ಇದ್ದ ಕನ್ನಡದ ಸ್ಥಿತಿಗತಿಗಳನ್ನು ಇಂತಹ ಶಾಸನಗಳ ಮೂಲಕ ಮಾಡಲಾಗಿದ್ದು ಸಮಾಜವು ಹೇಗಿತ್ತು ಎನ್ನುವುದನ್ನು ಅರಿಯಬಹುದಾಗಿದೆ. ಈ ಕೆಳಗಿನ ಬರಹದಲ್ಲಿ ಅಂತಹ ಬೆಳವಣಿಗೆಯ ಬಗೆಯನ್ನು ವಿವರಿಸಲಾಗಿದೆ.

ಲಿಪಿ ಮತ್ತು ಭಾಷೆಯಲ್ಲಾದ ಬದಲಾವಣೆ: ಬನವಾಸಿಯ ಕದಂಬರೇನೂ ರಾಜಕೀಯವಾಗಿ ಮಹಾಶಕ್ತಿಯಾಗಿರಲಿಲ್ಲ. ಸಾತವಾಹನರ ನಂತರ ಆಳಿದ ದಖ್ಖಣದ ಸ್ಥಳೀಯ ಅರಸರಲ್ಲಿವರು ಎದ್ದು ಕಾಣುವುದೇನೋ ನಿಜ. ಆದರೆ ಬಾದಾಮಿ ಚಾಳುಕ್ಯರಂತಾಗಲೀ ತಲಕಾಡಿನ ಗಂಗರಂತಾಗಲೀ ಇವರು ರಾಜ್ಯವನ್ನು ವಿಸ್ತರಿಸಲಿಲ್ಲ. ರಾಜಕೀಯ ಇತಿಹಾಸದಲ್ಲಿ ಇವರ ಸ್ಥಾನ ಗೌಣವೆನಿಸಿದರೂ ಕನ್ನಡ ಲಿಪಿ ಮತ್ತು ಭಾಷಾ ಇತಿಹಾಸದಲ್ಲಿ ಅದು ಗುರುತರವಾಗಿದೆ.

ಕದಂಬರ ಕಾಲದಲ್ಲಾದ ನಾಲ್ಕು ಪ್ರಮುಖ ಭಾಷಾ ಬದಲಾವಣೆಗಳನ್ನು ಗುರುತಿಸಬಹುದು. ಒಂದು, ಸುಮಾರು ಅರ್ಧ ಸಹಸ್ರಮಾನಕ್ಕಿಂತ ಹೆಚ್ಚುಕಾಲ ಬಳಕೆಯಲ್ಲಿದ್ದ ಬ್ರಾಹ್ಮೀಲಿಪಿ ಮತ್ತು ಪ್ರಾಕೃತ ಭಾಷೆಯ ವಹಿವಾಟು ಅಂತ್ಯಗೊಳ್ಳುವುದು: ಎರಡು, ಬ್ರಾಹ್ಮೀ ಸ್ಥಾನವನ್ನು ಮುಂಚೂಣಿ ಕನ್ನಡಲಿಪಿ ಪಡೆದುಕೊಂಡು ಸಂಸ್ಕೃತ ಭಾಷಾ ವ್ಯವಹಾರವನ್ನು ನಿಭಾಯಿಸತೊಡಗುವುದು: ಮೂರು, ದಖ್ಖಣದ ಪ್ರತಿಷ್ಠಿತರ ವ್ಯವಹಾರ ಭಾಷೆಯಾಗಿ ಸಂಸ್ಕೃತ ಹೊರಹೊಮ್ಮುವುದು: ನಾಲ್ಕು, ಕನ್ನಡ ಭಾಷೆ ಮತ್ತು ಲಿಪಿ ಸಂಸ್ಕೃತದೊಡನೆ ನುಡಿ ಕಾರ್ಯಭಾರವನ್ನು ಹಂಚಿಕೊಳ್ಳಲಾರಂಭಿಸುವುದು. ಮಾಧ್ಯಮದ ಇತಿಹಾಸದಲ್ಲಿ ಇದೊಂದು ಸಂಕ್ರಮಣ ಕಾಲ.

ಇಡೀ ಹಳಗನ್ನಡ ಪುಸ್ತಕವು ಹೀಗೆ ಎಳೆಎಳೆಯಾಗಿ ಕನ್ನಡ ಮತ್ತು ಸಂಸ್ಕೃತ, ಪ್ರಾಕೃತಗಳ ಇರುವನ್ನು ಗುರುತಿಸುತ್ತಾ, ನುಡಿಯ, ಲಿಪಿಯ ಮತ್ತು ಸಮಾಜವನ್ನು ಅಧ್ಯಯನವನ್ನು ಮಾಡಿರುವ ಪರಿ ಅತ್ಯಂತ ವೈಜ್ಞಾನಿಕವಾದುದಾಗಿದೆ ಮತ್ತು ಅಲ್ಲಗಳೆಯಲು ಆಗದ್ದಾಗಿದೆ. ಈ ಪುಸ್ತಕದ ಕಂಡುಕೊಳ್ಳುವಿಕೆಗಳನ್ನು ನೋಡಿದಾಗ ಕನ್ನಡ ನಾಡಲ್ಲಿ ಎಂದಿಗೂ ಸಂಸ್ಕೃತವು ಜನಸಾಮಾನ್ಯರ ಭಾಷೆಯಾಗಿರಲಿಲ್ಲ ಎನ್ನುವುದು ತಿಳಿಯುತ್ತದೆ. ಕನ್ನಡ ಮತ್ತು ಸಂಸ್ಕೃತದ ನಡುವಿನ ಅಂತರವು ಇಂದಿಗಿಂತಲೂ ಹಿಂದೆಯೇ ಹೆಚ್ಚಿತ್ತು ಎನ್ನುವುದು ತಿಳಿಯುತ್ತದೆ. ಕನ್ನಡ ನುಡಿಯು ಸಂಸ್ಕೃತ ಜನ್ಯವಲ್ಲವೆಂದೂ, ಅದಕ್ಕೆ ತನ್ನತನವಿದೆಯೆಂದೂ ವೇದ್ಯವಾಗುತ್ತದೆ! “ಭಾರತ ಭಂಜನ” ಕೃತಿಕಾರರು ಕನ್ನಡಕ್ಕೆ, ತಮಿಳಿಗೆ, ತೆಲುಗಿಗೆ ಅಥವಾ ಇನ್ನಾವುದೇ ಭಾರತೀಯ ನುಡಿಗೆ ತನ್ನತನವಿರುವುದು ಭಾರತ ಒಡೆಯಲು ಕಾರಣವಾಗುತ್ತದೆ ಎನ್ನುವ ಭೀತಿಯ ಕಾರಣದಿಂದ ಎಲ್ಲಾ ಒಂದೇ ಎಂದುಬಿಡುವುದು ಅಪಚಾರವಾಗುತ್ತದೆಯಲ್ಲದೆ, ಅವರು ಹಂಬಲಿಸುತ್ತಿರುವ ಏಕತೆಗೆ ನಿಜಕ್ಕೂ ಮಾರಕವಾಗಬಲ್ಲುದಾಗಿದೆ. ಇರುವ ವೈವಿಧ್ಯತೆಯನ್ನು ಒಪ್ಪಿ ಗೌರವಿಸಿ ಸಮಾನ ಗೌರವ, ಸಮಾನ ಸ್ಥಾನಮಾನ, ಸಮಾನ ಅವಕಾಶ ಒದಗಿಸುವುದೊಂದೇ ಏಕತೆಗೆ ದಾರಿ ಎಂಬುದನ್ನು ಮನಗಾಣುವುದು ಅವಶ್ಯಕವಾಗಿದೆ.

ಒಟ್ಟಿನಲ್ಲಿ ಈ ಅಧ್ಯಯನವು ಸಂಪೂರ್ಣವಾಗಿ ಆಧಾರಸಹಿತವಾಗಿದ್ದು ಕನ್ನಡಕ್ಕೆ ತನ್ನತನವಿದ್ದು ಅದು ಸಂಸ್ಕೃತಕ್ಕಿಂತ ಬೇರೆಯಾಗಿತ್ತು ಎಂಬುದನ್ನು ಎತ್ತಿ ತೋರುತ್ತದೆ. ಇಡೀ ಪುಸ್ತಕವನ್ನು ಓದುವಾಗ ಬರಹಗಾರರ ಪ್ರಾಮಾಣಿಕತೆ, ವಿದ್ವತ್ತು ಹಾಗೂ ವಿನಯಗಳು ಎದ್ದೆದ್ದು ಕಾಣುತ್ತದೆ. ತಾವು ಕಂಡುಕೊಂಡು ಮಾಡಿರುವ ವಿಶ್ಲೇಷಣೆಯು ಅದ್ಭುತವಾಗಿದ್ದು ಸ್ಪಷ್ಟವಾದ ನಿರ್ಣಯಗಳೆಡೆ ಒಯ್ದಿದ್ದರೂ, ನಿಸ್ಸಂದಿಗ್ಧವಾಗಿ ಷಟ್ಟರ್ ಅವರ ಮಾತುಗಳನ್ನು ಸಂಪೂರ್ಣವಾಗಿ ಸಮರ್ಥಿಸುತ್ತಿದ್ದಾಗಲೂ ಕೂಡಾ ಅವರು “ಇರುವಷ್ಟನ್ನೇ ಇಟ್ಟುಕೊಂಡು ಇದಮಿತ್ಥಂ ಎನ್ನುವುದು ಸೂಕ್ತವಲ್ಲವೇನೋ, ಇದರ ಬಗ್ಗೆ ಬೇರೆ ಬೇರೆ ಕ್ಷೇತ್ರಗಳ ತಜ್ಞರುಗಳು ಒಗ್ಗೂಡಿ ಕೆಲಸ ಮಾಡಬೇಕು” ಎಂದು ತಮ್ಮ ವಿನಯವನ್ನು ತೋರಿಸುತ್ತಾರೆ. ಇಂತಹ ಅಧ್ಯಯನಗಳನ್ನೇ “ಭಾರತ ಒಡೆಯುವ ಹುನ್ನಾರ, ಭಾಷಾಶಾಸ್ತ್ರ ಎನ್ನುವುದು ಶಾಸ್ತ್ರವೇ ಅಲ್ಲಾ” ಎಂದೆಲ್ಲಾ ಬರೆಯುವುದನ್ನು “ಭಾರತ ಭಂಜನ” ಪುಸ್ತಕದ ಬರಹಗಾರರು ಮಾಡುತ್ತಿರುವುದನ್ನು ಕಂಡಾಗ ಭಾಷೆಗಳ ಬಗ್ಗೆ ಇವರಿಗಿರುವ ಜ್ಞಾನದ ಕೊರತೆ, ಭಾರತ ಒಂದಾಗಿ ಉಳಿಯದು ಎನ್ನುವ ಭೀತಿ ಇರುವ ವೈವಿಧ್ಯತೆಗಳನ್ನು ನಿರಾಕರಿಸುವ ಮನಸ್ಥಿತಿಗೆ ದೂಡಿದೆಯೇನೋ ಎಂಬ ಅನುಮಾನ ಹುಟ್ಟಿಸುತ್ತದೆ.

Posted on April 5, 2015, in ಗುಂಪಿಸದ್ದು and tagged , , . Bookmark the permalink. Leave a comment.

Leave a comment