ಡಬ್ಬಿಂಗ್ ವಿರುದ್ಧದ ಕೊನೆಯ ಪ್ರಲಾಪ: ಈ ಕೆಸರೆರಚಾಟ!

Vishwavani_Dub

(ಚಿತ್ರಕೃಪೆ: ವಿಶ್ವವಾಣಿ ಇ ಪತ್ರಿಕೆ)

ಕಳೆದೊಂದು ವಾರ ಡಬ್ಬಿಂಗ್ ವಿಷಯವಾಗಿ ಆದ ಬೆಳವಣಿಗೆಗಳಲ್ಲಿ ಮಹತ್ವದ್ದು “ಕರ್ನಾಟಕ ಡಬ್ಬಿಂಗ್ ವಾಣಿಜ್ಯ ಮಂಡಳಿ”ಯ ಮೂಲಕ ಟೈಟಲ್ ಪಡೆದ ಅಜ್ಜಿ ಲೇಹ್ಯ ಎನ್ನುವ ಸಿನಿಮಾವೊಂದನ್ನು ಸೆನ್ಸಾರ್ ಮಂಡಳಿಯು ಸೆನ್ಸಾರ್ ಮಾಡಲು ಅಂಗೀಕರಿಸಿದ್ದು. ಹಾಗೆ ಸೆನ್ಸಾರ್ ಆದ ಸಿನಿಮಾ ಇದೀಗ ಬಿಡುಗಡೆಯಾಗಲು ತಯಾರಾಗಿದೆ. ಈ ಒಂದು ಬೆಳವಣಿಗೆಯು ಡಬ್ಬಿಂಗ್ ವಿರೋಧಿಗಳ ಹೊಟ್ಟೆಯಲ್ಲಿ ಸಂಕಟ ತಳಮಳದ ಅಲೆಯೇಳಲು ಕಾರಣವಾಗಿದೆ. ಇಂತಹ ತಳಮಳವಿಂದು ಕಾರ್ಕೋಟಕ ವಿಷವಾಗಿ ಕಾರಿಕೊಳ್ಳುವ ಹಂತಕ್ಕೆ ಬಂದಿದೆ ಎನ್ನುವುದು ವಿಶ್ವವಾಣಿ ಪತ್ರಿಕೆಯಲ್ಲಿ ಹರಿ ಎನ್ನುವವರು ಬರೆದಿರುವ ಅಂಕಣ ಬರಹ ನೋಡಿದಾಗ ಅರಿವಾಗುತ್ತದೆ.

ಒಂಚೂರು ಹಿಂದಿನ ಕಥೆ!

ಕನ್ನಡ ಚಿತ್ರರಂಗದ ಮಂದಿಯ ಡಬ್ಬಿಂಗ್ ವಿರೋಧವು ಸಂವಿಧಾನ ಬಾಹಿರ – ಕಾನೂನು ಬಾಹಿರ – ಕನ್ನಡ ವಿರೋಧಿಯಾಗುವುದರ ಜೊತೆಗೆ ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದ್ದರೂ ಕೂಡಾ… ಅದನ್ನೇ ಉಸಿರಾಡಿಕೊಂಡು ಬಂದಿರುವ ಜನರಿಗೆ ಕನ್ನಡದ ಸಾಮಾನ್ಯ ಜನರು ಡಬ್ಬಿಂಗ್ ಪರವಾಗಿ ದನಿಯೆತ್ತಿದಾಗ ಅವರನ್ನು ಅವಹೇಳನೆ ಮಾಡುವ, ಇದು ಐಟಿ-ಬಿಟಿ ಹೈಕಳ ತಲೆತಿರುಕುತನ ಎನ್ನುವ ಭಾವನೆ ಮೂಡಿದ್ದು ನಿಜ. ಹಾಗಾಗಿ ಡಬ್ಬಿಂಗ್ ವಿರೋಧಿಗಳಿಗೆ ಕನ್ನಡ ವಿರೋಧಿ ಪಟ್ಟ ಕಟ್ಟಿ ಮಣ್ಣುಮುಕ್ಕಿಸುವ ಹೆಜ್ಜೆ ಇಟ್ಟರು. ಕನ್ನಡದ ಹೆಮ್ಮೆ ಡಾ. ರಾಜ್‍ಕುಮಾರ್ ಅವರ ಹೆಸರು ಮುಂದುಮಾಡಿದರು. ಕಲಾವಿದರ ಹೊಟ್ಟೆಪಾಡಿನ ಪ್ರಶ್ನೆ ಎಂದರು. ಕನ್ನಡ ಸಂಸ್ಕೃತಿಯನ್ನು, ಭಾಷಾಶುದ್ಧತೆಯನ್ನು ಮುಂದುಮಾಡಿದರು. ಡಬ್ಬಿಂಗ್ ಬೇಕೆಂದು ದನಿಯೆತ್ತಿರುವವರ ಕನ್ನಡದ ಕೆಲಸಗಳ ಪ್ರಖರತೆಯ ಮುಂದೆ ಈ ಜನರ ಸೋಗಲಾಡಿ ಕನ್ನಡಪ್ರೇಮ ಬಯಲಾದದ್ದು ಇತಿಹಾಸ. ಸಿನಿಮಾರಂಗದ ಬುದ್ಧಿಜೀವಿ ಸಮಾಜವಾದಿ ನಿರ್ದೇಶಕ ಗಣ್ಯರುಗಳೊಂದಿಗೆ ಚರ್ಚೆ, ವಾದವಿವಾದಗಳು ನಡೆದವು. ಮುಂದೆ ಡಬ್ಬಿಂಗ್ ಕುರಿತಾದ ಜನರ ದನಿ ದೊಡ್ಡದಾಗುತ್ತಿದ್ದಂತೆಯೇ ಡಬ್ಬಿಂಗ್ ತಡೆಯುವವರೂ ನಾನಾ ಕುತಂತ್ರಗಳನ್ನು ಮಾಡಿದರು. ಡಬ್ ಆದ ಕಾರ್ಯಕ್ರಮಗಳನ್ನು ಅಂತರ್ಜಾಲದಲ್ಲಿ ನೋಡುವುದನ್ನೂ ಈ ಹತೋಟಿಕೂಟ ತಡೆದಾಗ ಜನರಿಗೆ ನ್ಯಾಯಾಲಯದ ಮೊರೆ ಹೋಗದೆ ಬೇರಾವ ದಾರಿ ಇಲ್ಲದಾಯ್ತು. ಸುದೀರ್ಘ ತನಿಖೆ ನಡೆಸಿ, ಕೇಸ್ ದಾಖಲಿಸಿ, ವಾದವಿವಾದಗಳನ್ನು ಆಲಿಸಿದ ನಂತರ ಭಾರತೀಯ ಸ್ಪರ್ಧಾ ಆಯೋಗ ಈ ಡಬ್ಬಿಂಗ್ ವಿರೋಧಿ ಹತೋಟಿಕೂಟದ ಬಣ್ಣ ಬಯಲು ಮಾಡಿ, ದಂಡ ವಿಧಿಸಿ, ಎಚ್ಚರಿಕೆಯನ್ನೂ ನೀಡಿ ಆದೇಶ ಹೊರಡಿಸಿತು. ಇದೇ ಸಮಯದಲ್ಲಿ ಡಬ್ಬಿಂಗ್ ಪರವಾದ ಚಿತ್ರರಂಗದ ಕೆಲಮಂದಿಯೂ ಧೈರ್ಯವಾಗಿ ದನಿಯೆತ್ತಲು ಶುರುಮಾಡಿದರು. ಜನರ ಆಶಯ, ಚಿತ್ರರಂಗದ ಅನೇಕರು, ಹಲವಾರು ಮಾಧ್ಯಮದ ಮಂದಿ, ಹಲವಾರು ಸಾಹಿತಿಗಳು, ಕಲಾವಿದರು, ನಿರ್ದೇಶಕ ಗಣ್ಯರುಗಳು ಡಬ್ಬಿಂಗ್ ಪರವಾಗಿ ದನಿಯೆತ್ತುವುದರ ಜೊತೆಯಲ್ಲೇ ಸಿಸಿಐ ನೀಡಿದ ತೀರ್ಪುಗಳು ಡಬ್ಬಿಂಗ್ ಇನ್ನೇನು ಬಂದೇಬಿಟ್ಟಿತೆಂಬ ಭಾವನೆ ಜನರಲ್ಲಿ ಮೂಡಲು ಕಾರಣವಾಯ್ತು. ಆದರೆ ನಿಜವಾದ ತೊಡಕು ಬೇರೆಯೇ ಇತ್ತು!

ನಿಜವಾದ ತೊಡಕು!

ಸಿನಿಮಾಗಳು ಜನರ ಮುಂದೆ ಬರಬೇಕಾದರೆ ದಾಟಿ ಬರಬೇಕಾದ ಹತ್ತಾರು ಹಂತಗಳೆನ್ನೆಲ್ಲಾ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದೇವೆ ಎಂದು ಭ್ರಮಿಸಿರುವ ಡಬ್ಬಿಂಗ್ ಹತೋಟಿ ಕೂಟದ ಮಂದಿ “ಇಡೀ ಇಂಡಸ್ಟ್ರಿ ನಮ್ಮ ಕೈಯ್ಯಲ್ಲಿರುವಾಗ ಡಬ್ಬಿಂಗಿಗೆ ಯಾವ ಸಿಸಿಐ, ಯಾವ ನ್ಯಾಯಾಲಯ ಯಾವ ತೀರ್ಪು ಕೊಟ್ಟರೇನು” ಎಂದುಕೊಂಡೇ ಡಬ್ಬಿಂಗ್ ಸಿನಿಮಾ ಬಾರದಂತೆ ತಡೆಯಲು ತಮ್ಮ ಬತ್ತಳಿಕೆಯ ಬೇರೆ ಬೇರೆ ಶಸ್ತ್ರಾಸ್ತ್ರಗಳನ್ನು ಮುಟ್ಟಿ ಮುಟ್ಟಿ ಸವರಿಕೊಳ್ಳುತ್ತಿದ್ದರು. ಕನ್ನಡದಲ್ಲಿ ಒಂದು ಸಿನಿಮಾ ಬಿಡುಗಡೆಯಾಗಬೇಕಾದರೆ ಅದರ ಟೈಟಲ್ ನೋಂದಾಯಿಸಬೇಕು. ಹಾಗೆ ಮಾಡುವ ಮೊದಲು ಅಂಥವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯತ್ವ ಹೊಂದಿರಬೇಕು. ಚಿತ್ರದ ಟೈಟಲ್‌ಗೆ, ಪ್ರಚಾರ ಸಾಮಾಗ್ರಿಗೆ ಒಪ್ಪಿಗೆ ವಾಣಿಜ್ಯ ಮಂಡಳಿಯಿಂದಲೇ ತೆಗೆದುಕೊಳ್ಳಬೇಕು… ಇವೆಲ್ಲಾ ಆದರೆ ಮಾತ್ರಾ ಸೆನ್ಸಾರ್ ಮಂಡಳಿ ಸಿನಿಮಾವನ್ನು ನೋಡಲು ಒಪ್ಪುವುದು. ಇಷ್ಟೆಲ್ಲಾ ಹಿಡಿತ ನಮ್ಮದಾಗಿರುವಾಗ ಯಾವನು ತಾನೇ ಡಬ್ಬಿಂಗ್ ಸಿನಿಮಾ ಬಿಡುಗಡೆ ಮಾಡಲು ಸಾಧ್ಯ ಎನ್ನುವ ನಂಬಿಕೆ ಇವರದ್ದು! ಇದಾದ ನಂತರ ಹಾಗೂ ಡಬ್ಬಿಂಗ್ ಸಿನಿಮಾ ತಯಾರಾದರೆ ಅದ್ಯಾವ ಚಿತ್ರಮಂದಿರದವರು ಬಿಡುಗಡೆ ಮಾಡುತ್ತಾರೆ? ಅದ್ಯಾವ ಮಾಧ್ಯಮದವರು ಇಂತಹ ಸಿನಿಮಾದ ಜಾಹೀರಾತು ಹಾಕ್ತಾರೆ? ಇದೆಲ್ಲಾ ಮೀರಿ ಸಿನಿಮಾ ಚಿತ್ರಮಂದಿರಕ್ಕೆ ಬಂದರೆ ಕನ್ನಡ ಹೋರಾಟಗಾರರ ಹೆಸರಲ್ಲಿ ದಾಂಧಲೆ ಎಬ್ಬಿಸಿಯಾದರೂ ತಡೆದುಬಿಡುತ್ತೇವೆ ಎನ್ನುವ ನಂಬಿಕೆ ಇವರದ್ದು! ಇಷ್ಟು ವರ್ಷ ತಮ್ಮ ವ್ಯಾಪಾರದ ಲಾಭಕ್ಕಾಗಿ ಡಬ್ಬಿಂಗ್ ಬಾರದಂತೆ ತಡೆದ ಹತೋಟಿಕೂಟ ಕನ್ನಡಿಗರ ಭಾವುಕತೆಯನ್ನು ಇವೆಲ್ಲಕ್ಕಿಂತಲೂ ದೊಡ್ಡ ಅಸ್ತ್ರವಾಗಿ ಬಳಸುತ್ತಾ ಬಂದಿರುವ ಈ ಹತೋಟಿಕೂಟದ ಮತ್ತೊಂದು ಅಸ್ತ್ರ ಮಾಧ್ಯಮದ ’ಕೆಲವರು’. ಒಂದು ಸಿನಿಮಾ ಜಾಹೀರಾತು ಯಾವ ಪತ್ರಿಕೆಗೆ ಹೋಗಬೇಕು, ಹೋಗಬಾರದು ಎನ್ನುವುದನ್ನೂ ಈ ಹತೋಟಿಕೂಟ ತೀರ್ಮಾನಿಸುವ ಪರಿಸ್ಥಿತಿ ಕನ್ನಡನಾಡಿನದ್ದು. ಹಿಂದೆಲ್ಲಾ ಶುಕ್ರವಾರ ಬಂತೆಂದರೆ ಸಿನಿಮಾ ಜಾಹೀರಾತುಗಳಿಗಾಗಿ ಮಾರಾಟದಲ್ಲಿ ತೀವ್ರ ಹೆಚ್ಚಳ ಕಾಣುತ್ತಿದ್ದ ದಿನಪತ್ರಿಕೆಗಳಿಂದ ಇದ್ದಕ್ಕಿದ್ದಂತೆ ಜಾಹೀರಾತುಗಳು ಮರೆಯಾಗಿ ಮತ್ತೊಂದು ಪತ್ರಿಕೆಗೆ ಇಡಿಇಡಿಯಾಗಿ ಹೋದ ಉದಾಹರಣೆಯಿದೆ. ಇದು ಆದದ್ದೂ ಕೂಡಾ ಹತೋಟಿಕೂಟದ ಕೆಲವು ಮುಖ್ಯಸ್ಥರಿಗೆ ಯಾವುದೋ ಕಾರಣಕ್ಕೆ ಸದರಿ ಪತ್ರಿಕೆಯ ಮೇಲುಂಟಾದ ಅಸಮಾಧಾನ ಕಾರಣದಿಂದ ಎನ್ನುವುದನ್ನು ನೋಡಿದರೆ ಈ ಹತೋಟಿಕೂಟದ ಕಬಂಧಬಾಹುವಿನ ಉದ್ದ ವ್ಯಾಪ್ತಿ ತಾಕತ್ತುಗಳ ಅಂದಾಜು ಸಿಗುತ್ತದೆ. ಇಂತಿಪ್ಪ ಕನ್ನಡ ಚಿತ್ರರಂಗಕ್ಕೆ ಸಡ್ಡು ಹೊಡೆಯುವುದು ಎಂದರೆ ಅದೆಷ್ಟು ದೊಡ್ಡ ಸವಾಲಿನ ಕೆಲಸ ಎನ್ನುವುದನ್ನು ಊಹಿಸಬಹುದು.

ಕುಸಿಯುತ್ತಿರುವ ಕೋಟೆ!

ಇದರ ಹಿನ್ನೆಲೆಯಲ್ಲಿ ಡಬ್ಬಿಂಗ್ ತರುವ ಹೋರಾಟವನ್ನು ನೋಡಬೇಕಾಗಿದೆ. ಒಂದೆಡೆ ಸಾಮಾನ್ಯ ನೋಡುಗರು ಇಂಥಾ ಹತೋಟಿಕೂಟದ ವಿರುದ್ಧವಾಗಿ ಭಾರತೀಯ ಸ್ಪರ್ಧಾ ಆಯೋಗದ ಮೊರೆ ಹೋಗುವ ಮೂಲಕ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ದಕ್ಕಿಸಿಕೊಳ್ಳಲು ಮುಂದಾದರೆ ಮತ್ತೊಂದೆಡೆ ಹತೋಟಿಕೂಟದ ಏಕಸ್ವಾಮ್ಯ ಮುರಿಯಲು ಚಿತ್ರರಂಗದ ಒಳಗಿನಿಂದಲೇ ಪ್ರಯತ್ನಗಳು ನಡೆದವು. ಇಡೀ ಚಿತ್ರರಂಗದಲ್ಲಿ ಅತಿ ಹೆಚ್ಚು ರಿಸ್ಕ್ ಇರುವುದು ಯಾವ ಕಲಾವಿದರಿಗೂ, ನಿರ್ದೇಶಕರಿಗೂ, ನಾಯಕ ನಾಯಕಿರಿಗೂ, ಪ್ರದರ್ಶಕರಿಗೂ ಅಲ್ಲ. ಇವರೆಲ್ಲಾ ತಮ್ಮ ಸಂಭಾವನೆ ಪಡೆದು ಸಂಭಾವಿತರಾಗಿ ಬೆಚ್ಚಗಿರುವಾಗ ನಿಜವಾದ ರಿಸ್ಕ್ ಇರುವುದು ನಿರ್ಮಾಪಕರಿಗೆ ಮಾತ್ರವೇ ಆಗಿದೆ. ಒಂದು ಸಿನಿಮಾ ಗೆದ್ದಾದರೂ ಗೆಲ್ಲಲಿ, ಸೋತಾದರೂ ಸೋಲಲಿ.. ಆದರೆ ನಿರಂತರವಾಗಿ ಚಿತ್ರೀಕರಣಗಳು ನಡೆದು ಕಾರ್ಮಿಕರ ಹೊಟ್ಟೆ ತುಂಬುತ್ತಿರಲಿ ಎನ್ನುವ ವ್ಯವಸ್ಥೆಗೆ ಸಡ್ಡು ಹೊಡೆಯಬಲ್ಲವರು ನಿರ್ಮಾಪಕರೇ ಆದ್ದರಿಂದ ಸದರಿ ಹತೋಟಿಕೂಟಕ್ಕೆ ಸಡ್ಡು ಹೊಡೆದವರು ಕೂಡಾ ನಿರ್ಮಾಪಕರೇ! ಇವರ ಪ್ರತಿನಿಧಿಗಳಾಗಿ ಮುಂದೆಬಂದವರು ಶ್ರೀ ಕೃಷ್ಣಮೂರ್ತಿ ಮತ್ತು ಶ್ರೀ ಕೃಷ್ಣೇಗೌಡರು. ಮೊದಲ ಹೆಜ್ಜೆಯಾಗಿ ವಾಣಿಜ್ಯ ಮಂಡಳಿ ಚುನಾವಣೆಗೆ ನಿಂತ ಇವರು ಗೆಲ್ಲದಂತೆ ನೋಡಿಕೊಳ್ಳಲಾಯಿತು.ಡಬ್ಬಿಂಗ್ ವಿರೋಧಿ ಕರ್ನಾಟಕ ವಾಣಿಜ್ಯ ಮಂಡಳಿಯ ಒಳಗಿರುವ ತನಕ ಡಬ್ಬಿಂಗ್ ಸಿನಿಮಾ ಬಿಡುಗಡೆ ಸಾಧ್ಯವಿಲ್ಲ ಎಂದು ಬಲ್ಲ ಇವರುಗಳು ಡಬ್ಬಿಂಗ್ ವಾಣಿಜ್ಯ ಮಂಡಲಿ ಆರಂಭಿಸಿದರು. ಆಗಲೂ ಕೂಡಾ ವಾಣಿಜ್ಯ ಮಂಡಳಿಗೆ ತಾವು ಮಾಡುತ್ತಿರುವ ಸರ್ವಾಧಿಕಾರ ಸರಿಯಿಲ್ಲ ಎಂಬುದರ ಬಗ್ಗೆ ಜ್ಞಾನೋದಯವಾಗಲಿಲ್ಲ. ಡಬ್ಬಿಂಗ್ ವಾಣಿಜ್ಯ ಮಂಡಳಿಯ ವತಿಯಿಂದ ಸಿನಿಮಾಗಳ ಟೈಟಲ್ ನೋಂದಣಿಯಾದಾಗ ಕೂಡಾ ಇವರನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಇಲ್ಲಿ ಟೈಟಲ್ ಪಡೆದ ಅಜ್ಜಿ ಲೇಹ್ಯ ಹೆಸರಿನ ನೇರ ಸಿನಿಮಾವೊಂದು ಸೆನ್ಸಾರ್ ಮಂಡಳಿಯ ಮುಂದೆ ಸರ್ಟಿಫಿಕೇಟಿಗಾಗಿ ಸಲ್ಲಿಕೆಯಾದಾಗ ಹತೋಟಿಕೂಟ ವ್ಯಂಗ್ಯದ ನಗೆ ನಕ್ಕಿದ್ದು ನಿಜ. ಮೊದಲಿಗೆ ಸೆನ್ಸಾರ್ ಮಂಡಳಿಗೂ ಈ ಹೊಸ ಸಂಸ್ಥೆಯಿಂದ ಟೈಟಲ್ ನೋಂದಣಿಯಾದ ಸಿನಿಮಾವನ್ನು ಸೆನ್ಸಾರ್ ಮಾಡಬೇಕೋ ಬೇಡವೋ ಗೊಂದಲವಿದ್ದು, ಈಗಿರುವ ಕಾನೂನುಗಳ ಅಡಿಯಲ್ಲಿ ಹಾಗೆ ಸೆನ್ಸಾರ್ ನಿರಾಕರಿಸಲಾಗದು ಎನ್ನುವುದು ಮನವರಿಕೆಯಾಗಿ ಸಿನಿಮಾವನ್ನು ಸೆನ್ಸಾರ್ ಮಾಡಿಯೇಬಿಟ್ಟಿತು. ಇದರಿಂದಾಗಿ ಹತೋಟಿಕೂಟ ಕಟ್ಟಿಕೊಂಡ ಕೋಟೆ ಕುಸಿದು ಬಿದ್ದಿರುವುದು ಜಾಹೀರಾಯಿತು!

ಕೊನೆಯ ತಂತ್ರ!

ಇದರಿಂದಾಗಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಹೊಟ್ಟೆಯಲಿ ಹುಟ್ಟಿತು ತಳಮಳ. ಕನ್ನಡ ಬಾರದ ಸೆನ್ಸಾರ್ ಅಧಿಕಾರಿಯನ್ನು ತೆಗೆದುಹಾಕಿ ಎನ್ನುವ ಕೂಗೆಬ್ಬಿಸಿದರು ಅದರ ಅಧ್ಯಕ್ಷರು! ಕಾನೂನಿನ ಮೂಲಕ ಏನೂ ಮಾಡಲಾಗದಿದ್ದಾಗ ಶುರುವಾದದ್ದೇ ಈ ಕೆಸರೆರಚುವ ತಂತ್ರ! ಈ ಬರಹ ಬರೆದ ಬರಹಗಾರರು “ಪತ್ರಕರ್ತರೆಂದಿರಲಿ, ಒಬ್ಬ ಸಾಮಾನ್ಯ ಮನುಷ್ಯನೆಂದೂ ಪರಿಗಣಿಸಲು ಯೋಗ್ಯರಲ್ಲ” ಎಂಬುದನ್ನು ಅವರ ಅಂಕಣ ಓದಿದವರು ಅಂದುಕೊಳ್ಳದೆ ಇರರು! ಒಬ್ಬ ಸಾಟಿ ಮನುಷ್ಯನನ್ನು ಅವನು ಇವನು ಎಂದು ಏಕವಚನದಲ್ಲಿ ಸಂಬೋಧಿಸಬಾರದು ಎಂಬ ಸೌಜನ್ಯವೂ ಇಲ್ಲದ ಬರಹ ಅದು. ಕೃಷ್ಣೇಗೌಡರ ನಿನ್ನೆಗಳ ನಿಜಾನಿಜಗಳು ಏನೇ ಇರಲಿ, ಅದನ್ನು ಎತ್ತಿ ಆಡಿ ವೈಯುಕ್ತಿಕವಾಗಿ ದಾಳಿಗಿಳಿದ ನಡೆ ಮಾತ್ರಾ ತೀರಾ ಹೀನವಾದದ್ದು. ಇವರ ಸಿಟ್ಟಿದ್ದದ್ದು ಡಬ್ಬಿಂಗ್ ಸಿನಿಮಾಗಳ ಬಗ್ಗೆಯಾದರೆ ಬೌದ್ಧಿಕವಾಗಿ ಚರ್ಚೆಮಾಡಲಿ, ವಾದ ಮಾಡಬೇಕಿತ್ತು. ಅದನ್ನೆಲ್ಲಾ ಮಾಡಿ ಗೆಲ್ಲುವ ಸಾಮರ್ಥ್ಯ ಇಲ್ಲದೆ ಇಂಥಾ ಕೆಸರೆರಚುವ ಆಟಕ್ಕಿಳಿದಿದ್ದು ಹತಾಶೆಯ ಪ್ರತೀಕ. ಇದು ಇಲ್ಲಿಗೆ ನಿಲ್ಲುವುದೂ ಇಲ್ಲ. ಡಬ್ಬಿಂಗ್ ಚಿತ್ರ ಬಿಡುಗಡೆಗೆ ಇದ್ದ ವಿಘ್ನಗಳೆಲ್ಲಾ ಪರಿಹಾರವಾದಂತೆ ಎಂದೂ ಅಂದುಕೊಳ್ಳಲಾಗದು. ಇನ್ನೂ ಚಿತ್ರ ಬಿಡುಗಡೆಗೆ ಎದುರಾಗುವ ತೊಡಕುಗಳು ಬಾಕಿ ಇದೆ. ಡಬ್ಬಿಂಗ್ ಪರವಾಗಿ ದನಿಯೆತ್ತಿದವರ ಸುರಕ್ಷತೆಗೂ ಬೆದರಿಕೆ ಉಂಟಾಗಬಹುದು. ಈಗಾಗಲೇ ಈ ನಿಟ್ಟಿನಲ್ಲಿ ಪೊಲೀಸ್ ದೂರು ದಾಖಲಾಗಿದೆ. ಒಟ್ಟಿನಲ್ಲಿ ಡಬ್ಬಿಂಗ್ ಸಿನಿಮಾಗಳು ತೆರೆಕಾಣಬೇಕೆಂದರೆ ದೊಡ್ಡ ಸಾಹಸವನ್ನೇ ಮಾಡಲಾಗುತ್ತಿದೆ. ಇದೇ ಕಾರಣದಿಂದಾಗಿ ಒಂದೊಂದೇ ಅಡೆತಡೆಗಳನ್ನು ನಿವಾರಿಸಲು ಅನುವಾಗುವಂತೆ ಕಡಿಮೆ ಹೂಡಿಕೆ ಮಾಡಿದ ಸಿನಿಮಾವೊಂದನ್ನು ಡಬ್ ಮಾಡಿ ತೆರೆಗೆ ತರಲಾಗುತ್ತಿದೆ. ಮುಂದೆ ಒಂದೊಂದಾಗಿ ಸಿನಿಮಾಗಳು ಬರಲಿವೆ. ಕನ್ನಡಿಗರಿಂದ ಕಸಿಯಲಾಗಿದ್ದ ಆಯ್ಕೆಸ್ವಾತಂತ್ರ್ಯವು ಮತ್ತೆ ನಮ್ಮದಾಗುವ ದಿನಗಳು ಹತ್ತಿರವಾಗುತ್ತಿವೆ.

ಬರಹದ ಬಗ್ಗೆ!

ವಿಶ್ವವಾಣಿ ಪತ್ರಿಕೆಯ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ಟರು ಹಿರಿಯ ಪತ್ರಕರ್ತರು. ಸಾಕಷ್ಟು ಜೀವನ ಅನುಭವ ಹೊಂದಿದ್ದು ಬದುಕಿನಲ್ಲಿ ಸಾಕಷ್ಟು ಸಾಧಿಸಿರುವ ಹಿರಿಯರು. ಪ್ರಬುದ್ಧತೆಯ ಸಾಕಾರ ಮೂರ್ತಿ. ಇಂಥವರು ತಮ್ಮ ನೆರಳಿನಲ್ಲಿ ತಾವು ಸಲಹುತ್ತಿರುವ ಬರಹಗಾರರ ಬರಹಗಳ ಬಗ್ಗೆ ಸಾಕಷ್ಟು ಎಚ್ಚರವಹಿಸಬೇಕಾಗಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಮನುಷ್ಯನನ್ನು ದ್ವೇಷಿಸುವ, ನಿಂದಿಸುವ ಮಟ್ಟಕ್ಕೆ ಒಯ್ಯುವುದಾದರೆ ಮತ್ತು ಪತ್ರಿಕೆ ಅಂತಹ ಬರಹಗಳನ್ನು ಪ್ರಕಟಿಸುವುದಾದರೆ ಸಮಾಜದ ಕಣ್ಣಲ್ಲಿ ಕೆಳಗೆ ಬೀಳುವುದು ಬೈದವರೇ ಹೊರತು ಬೈಸಿಕೊಂಡವರಲ್ಲ! ಸಿಸಿಐ ತೀರ್ಪು, ಡಬ್ಬಿಂಗ್ ತಡೆಯುವ ಹತೋಟಿ ಕೂಟದ ಹತ್ಯಾರಗಳು, ಹುನ್ನಾರಗಳ ಬಗ್ಗೆ ಪ್ರಜಾಪ್ರಭುತ್ವ, ಸಹಜನ್ಯಾಯಗಳ ದೃಷ್ಟಿಯಿಂದ.. ಸಾಮಾನ್ಯ ಕನ್ನಡಿಗರ ಆಯ್ಕೆಯ ದೃಷ್ಟಿಯಿಂದ, ಡಬ್ಬಿಂಗ್ ಇಲ್ಲದ ಕಾರಣದಿಂದಾಗಿ ಕನ್ನಡ ಜನರು ಮನರಂಜನೆಗಾಗಿ ಪರಭಾಷೆಗಳತ್ತ ವಾಲುತ್ತಿರುವ ದೃಷ್ಟಿಯಿಂದ ನೋಡಿದರೆ ಡಬ್ಬಿಂಗ್ ಬೇಕೆನ್ನುವವರ ಬಗ್ಗೆ ಈ ಪರಿಯ ಆಕ್ರೋಶದ ಅಗತ್ಯವಿಲ್ಲ ಎನ್ನುವುದನ್ನು ಮನಗಾಣಬಹುದು. ಅದೇನೆ ಇರಲಿ ವಿಶ್ವವಾಣೀಯ ಸಂಪಾದಕರಿಗೆ/ ಆಡಳಿತಮಂಡಳಿಗೆ “ಮಡಿಲಲ್ಲಿ ಕಟ್ಟಿಕೊಂಡ ಕೆಂಡ ಮಡಿಲ ಸುಡದಲ್ಲದೆ ಮನೆಯ ಸುಟ್ಟೀತೇ” ಎಂಬ ಗಾದೆ ತಿಳಿದೇ ಇರುತ್ತದೆಯಲ್ಲವೇ!

Advertisements

Posted on April 24, 2016, in ಗುಂಪಿಸದ್ದು. Bookmark the permalink. 1 Comment.

  1. pradeep shanbogh

    V bhattaru sampadakaragiddaga Kannada prabha patrikeyalli bandha ” ulidavaru kandanthe” chitra vimarshey oddidavaryaru, ivattina e lekhanakke avrinda tiddupadiyagli, athava vivechitha prathikriyennagali nirikshisalararu. Dina pathrikheya bhasheyannu tabuloid patrikeya mattakke ilisida keerthi avarige sallabeku.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: