NEET ಎಂಬ ಇಸ್ತ್ರೀಪೆಟ್ಟಿಗೆಯೂ… ಕೇಂದ್ರೀಕರಣದ ಒಕ್ಕೂಟ ವಿರೋಧಿಯೂ…

neet1

neet2

NEET ಅಂದರೆ ರಾಷ್ಟ್ರೀಯ ಸಾಮಾನ್ಯ ಅರ್ಹತಾ ಪ್ರವೇಶ ಪರೀಕ್ಷೆ (ನ್ಯಾಷನಲ್ ಎಲಿಜೆಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್)  ಬಗ್ಗೆ ಎದ್ದಿರುವ ಸಾಕಷ್ಟು ತಕರಾರುಗಳಿಗೆ ಉತ್ತರವನ್ನು ಕೊಟ್ಟು ಸರ್ವೋಚ್ಚ ನ್ಯಾಯಾಲಯವು ನೀಟಾಗಿ ಎಲ್ಲರ ಬಾಯಿಮುಚ್ಚಿಸುವಂತೆ ಇದೆ. ನ್ಯಾಯಾಂಗದಲ್ಲೇ ಅತ್ಯುನ್ನತವಾದದ್ದು ಸುಪ್ರೀಂಕೋರ್ಟು ಅನ್ನುವ ಹಿನ್ನೆಲೆಯಲ್ಲಿ ಈ ತೀರ್ಪನ್ನು ಎಲ್ಲರೂ ತೆಪ್ಪಗೆ ಒಪ್ಪಿದರೂ ನ್ಯಾಯಾಲಯವು ಕಾನೂನನ್ನು ಎತ್ತಿಹಿಡಿಯುತ್ತದೆಯೇ ಹೊರತು ನ್ಯಾಯವನ್ನು ಎತ್ತಿಹಿಡಿಯಲೇಬೇಕೆಂದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ ಮತ್ತು ಅದಕ್ಕಿಂತಾ ಮುಖ್ಯವಾಗಿ ಶಾಸಕಾಂಗ ನ್ಯಾಯಾಂಗಕ್ಕೂ ಮಿಗಿಲಾದದ್ದು ಎಂಬುದನ್ನು ಮರೆಯಬಾರದೆಂದು ಸಾರುತ್ತಿದೆ!

ಒಂದು ದೇಶ ಒಂದು ಪರೀಕ್ಷೆ ಎಂಬ ನೆಪ!

“ಒಂದು ದೇಶ.. ಒಂದು ಬಗೆ” ಎನ್ನುವ ನೆಪ ಮುಂದಿಟ್ಟುಕೊಂಡು ಭಾರತ ಸರ್ಕಾರ ಇಡೀ ದೇಶದ ವೈವಿಧ್ಯತೆಯನ್ನು “ಐರನ್ ಮಾಡಿ ಬಟ್ಟೆ ಸುಕ್ಕು ತೆಗೆದುಹಾಕುವಂತೆ” ನಿರ್ನಾಮ ಮಾಡಲು ಮುಂದಾಗಿದೆ ಎನ್ನುವುದರ ಮೊದಲ ಕುರುಹಾಗಿ ಸಿ.ಬಿ.ಎಸ್.ಇ ಎನ್ನುವ ಕೇಂದ್ರೀಯ ಪಠ್ಯಕ್ರಮದ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿರುವುದನ್ನು ಕಾಣಬಹುದಾಗಿದೆ. ವಿಕೇಂದ್ರೀಕರಣ ಎನ್ನುವುದು ನಿಜವಾದ ಸ್ವಾತಂತ್ರ್ಯ ಎನ್ನುವ ಅರಿವಿಲ್ಲದೆ ಅತಿಯಾದ ಕೇಂದ್ರೀಕರಣದ ಮೂಲಕ ಇಡೀ ಭಾರತವನ್ನು ಒಂದು ಮಾಡುತ್ತೇವೆ ಎನ್ನುವ ಭ್ರಮೆಯಲ್ಲಿಯೂ, ರಾಷ್ಟ್ರೀಯತೆಯ ಉನ್ಮಾದದಲ್ಲಿಯೂ ಇಡಲಾಗುತ್ತಿರುವ ಈ ಪ್ರತಿನಡೆಯೂ ಈ ಭಾರತದ ವೈವಿಧ್ಯತೆಯನ್ನು ಅಳಿಸುವ, ಆ ಮೂಲಕ ಏಕತೆಯ ಬುನಾದಿಯನ್ನು ಅಲುಗಿಸುವ, ಭಾರತವೆನ್ನುವ ಚಂದದ ಮನೆಯನ್ನೇ ಪುಡಿಪುಡಿ ಮಾಡುವ ನಡೆಗಳಾಗುತ್ತದೆ ಎನ್ನುವುದನ್ನು ಅರಿಯದ ಹುಂಬರೇ ೭೦ ವರ್ಷಗಳಿಂದ ದೇಶದಲ್ಲಿ ಆಡಳಿತ ನಡೆಸುತ್ತಿರುವುದು ನಿಜವಾದ ದುರಂತವಾಗಿದೆ. ಇದಕ್ಕೆ ಪೂರಕವಾಗಿಯೇ ಈ ನೀಟ್ ಪರೀಕ್ಷೆಯ ವ್ಯವಸ್ಥೆ ಹುಟ್ಟಿಕೊಂಡಿದೆ.

ಇಡೀ ದೇಶದ ವೈದ್ಯಕೀಯ ಶಿಕ್ಷಣ ಪಡೆಯುವವರು ಒಂದೇ ಪ್ರವೇಶ ಪರೀಕ್ಷೆಯನ್ನು ಬರೆದು ಗಳಿಸುವ ಅಂಕಗಳ ಆಧಾರದ ಮೇರೆಗೆ ಸೀಟು ಹಂಚಿಕೆ ಮಾಡುವುದು ಮೇಲ್ನೋಟಕ್ಕೆ ಅತ್ಯಂತ ನ್ಯಾಯಯುತವಾಗಿ ಕಂಡರು ಅದರಲ್ಲಿನ ತಾರತಮ್ಯವನ್ನು ಗುರುತಿಸಬೇಕಾಗಿದೆ. ಇಲ್ಲಿ ಎರಡು ಮೂರು ಆಯಾಮಗಳನ್ನು ಲೆಕ್ಕಿಸಬೇಕಿದೆ.

NEET ಒಡ್ಡಿರುವ ತೊಡಕುಗಳು!

ಇಡೀ ಪರೀಕ್ಷೆಗಳು ಹಿಂದೀ/ ಇಂಗ್ಲೀಷಿನಲ್ಲಿ ನಡೆಯುತ್ತವೆ: ಕನ್ನಡದಲ್ಲಿ ಪಿಯುಸಿ ಕಲಿಕೆ ಇಲ್ಲವೇ ಇಲ್ಲ ಎನ್ನುವ ಪರಿಸ್ಥಿತಿ ಇದೆ. ಆದರೆ ಹಿಂದೀಯಲ್ಲಿ ಅಂಥಾ ವ್ಯವಸ್ಥೆ ಇದೆ. ’ಅರೆರೆ, ಬೇಕಿದ್ದರೆ ನೀವೂ ಕನ್ನಡದಲ್ಲಿ ಕಟ್ಟಿಕೊಳ್ಳಬೇಕಿತ್ತು’ ಎನ್ನುವುದು ಸುಲಭದ ಪ್ರತಿಕ್ರಿಯೆ. ಹಿಂದೀಯಲ್ಲಿ ಪಿಯುಸಿ ಕಲಿಕೆ ಸಾಧ್ಯವಾದದ್ದು ಹೇಗೆ? ಕನ್ನಡ ಮತ್ತಿತರ ರಾಜ್ಯಭಾಷೆಗಳಲ್ಲಿ ಆಗದೇ ಹೋದದ್ದು ಯಾಕೆ? ಹಿಂದೀಯಲ್ಲಿ ಕಲಿತರೆ ಭವಿಷ್ಯವಿದೆ ಎನ್ನುವ ಭರವಸೆ ಹುಟ್ಟುವಂಥಾ ಏರ್ಪಾಟು ಕಟ್ಟಿದ್ದು, ಶಿಕ್ಷಣ ವ್ಯವಸ್ಥೆಯನ್ನು ರಾಜ್ಯಗಳಿಂದ ಕಸಿದ ಭಾರತ ಸರ್ಕಾರವೇ ತಾನೇ! ಹಾಗೆ ವಹಿಸಿಕೊಂಡ ಮೇಲೆ ಹಿಂದೀಯಲ್ಲಿನ ವಿಜ್ಞಾನ ಕಲಿಕೆಗೆ ಒತ್ತುಕೊಟ್ಟಷ್ಟೇ ಕನ್ನಡದಲ್ಲಿನ ವಿಜ್ಞಾನ ಕಲಿಕೆಗೂ ಭಾರತ ಸರ್ಕಾರ ಒತ್ತುಕೊಟ್ಟು, ಸಂಪನ್ಮೂಲ ಕೊಟ್ಟು ಪೊರೆದಿದ್ದರೆ ಇಲ್ಲಿಯೂ ಕನ್ನಡದಲ್ಲಿ ಪಿಯುಸಿ ಇರುತ್ತಿತ್ತಲ್ಲವೇ? ಹಾಗೆ ಮಾಡದೆ ಹಿಂದೀಯಲ್ಲಿ ವ್ಯವಸ್ಥೆ ಕಟ್ಟಿ ಹಿಂದೀ ಭಾಷಿಕರಿಗೆ ತಮ್ಮ ತಾಯ್ನುಡಿಯಲ್ಲೇ ಕಲಿಯುವ ಅವಕಾಶ ಕೊಟ್ಟು ಈಗ ಪ್ರವೇಶ ಪರೀಕ್ಷೆಯನ್ನು ಹಿಂದೀಯಲ್ಲಿ ಮಾಡಿದರೆ ಹಿಂದೀಯೇತರರ ಅವಕಾಶ ವಂಚನೆ ಮಾಡಿದಂತೆ ಆಗುವುದಿಲ್ಲವೇ? ನ್ಯಾಯವಾಗಿ ಎಲ್ಲರಿಗೂ ಅವರವರ ತಾಯ್ನುಡಿಯಲ್ಲಿ ಕಲಿಕೆ ಒದಗಿಸಲಾಗದ ಭಾರತ ಸರ್ಕಾರಕ್ಕೆ, ಕೆಲವರಿಗೆ ಅನುಕೂಲ ಮಾಡುವ, ಹಲವರಿಗೆ ಅನಾನುಕೂಲ ಮಾಡುವ ಪರೀಕ್ಷೆ ನಡೆಸುವ ನೈತಿಕತೆ ಎಲ್ಲಿದೆ?

ಸಿಬಿಎಸ್‌ಇ ಪದ್ದತಿ: ಕೇಂದ್ರೀಯ ಪಠ್ಯಕ್ರಮ ಎನ್ನುವ ವ್ಯವಸ್ಥೆಯೇ ಜನವಿರೋಧಿ, ತಾರತಮ್ಯದ ಮೊಟ್ಟೆ! ಕೇಂದ್ರೀಯ ಪಠ್ಯಕ್ರಮದಲ್ಲಿ ಓದಿರದ, ರಾಜ್ಯ ಪಠ್ಯಕ್ರಮದಲ್ಲಿ ಓದಿದ ಮಕ್ಕಳನ್ನು… ಅವರು ಕಲಿಯದ ಪಠ್ಯಕ್ರಮ ಆಧರಿಸಿದ ಪ್ರಶ್ನೆಗಳನ್ನು ಒಳಗೊಂಡ ಪ್ರವೇಶ ಪರೀಕ್ಷೆ ಎದುರಿಸುವಂತೆ ಮಾಡುವುದನ್ನು ಯಾವ ಕೋನದಿಂದ ಸಮಾನ ಅವಕಾಶ ಅನ್ನಲಾಗುತ್ತದೆ? ಇದು ನೇರವಾಗಿ ಸಿಬಿಎಸ್‌ಇ ಕ್ರಮದಲ್ಲಿ ಓದಿರದ ಮಕ್ಕಳನ್ನು ವೈದ್ಯಕೀಯ ಕಲಿಕೆಯಿಂದ ಹೊರಗಿಡಲೆಂದೇ ಮಾಡುವ ಯತ್ನವಲ್ಲವೇ?

ಕೇಂದ್ರೀಯ ಪರೀಕ್ಷೆ ಮತ್ತು ವೈದ್ಯರ ಗುಣಮಟ್ಟ: ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಬೇಕೆನ್ನುವ ಎಲ್ಲಾ ವಿದ್ಯಾರ್ಥಿಗಳೂ ಸಮಾನ ಪರೀಕ್ಷೆ ಎದುರಿಸಿ ಆಯ್ಕೆಯಾದರೆ ಸಮಾನ ಗುಣಮಟ್ಟದ ವೈದ್ಯರು ಹೊರಬರುತ್ತಾರೆ ಎನ್ನುವ ಭ್ರಮೆಯನ್ನು ಹರಡಲಾಗುತ್ತಿದೆ. ಹಾಗೆ ನೋಡಿದರೆ ಇಡೀ ಭಾರತದಲ್ಲಿ ಅತ್ಯುತ್ತಮ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ಅತ್ಯುತ್ತಮ ವೈದ್ಯರುಗಳು, ಅತ್ಯುತ್ತಮ ಆಸ್ಪತ್ರೆಗಳೂ ಹೆಚ್ಚಾಗಿರುವುದು ಹಿಂದೀಯೇತರ ರಾಜ್ಯಗಳಲ್ಲೇ! ನಮ್ಮ ಬೆಂಗಳೂರು ವೈದ್ಯಕೀಯ ರಂಗದಲ್ಲಿ ವಿಶ್ವದರ್ಜೆಯಲ್ಲಿದೆ. ನಮ್ಮ ವೈದ್ಯರುಗಳು ಜಗತ್ತಿನಲ್ಲೇ ಅತ್ಯಂತ ಹೆಸರುವಾಸಿಯಾಗಿದ್ದಾರೆ. ಹಾಗಿದ್ದಾಗ ಇಲ್ಲಿನ ಸಿಇಟಿ ಪದ್ದತಿ, ಇಲ್ಲಿನ ಪರೀಕ್ಷಾ ಮಟ್ಟಗಳನ್ನು, ಇಲ್ಲಿನ ಕಲಿಕೆಯ ಮಟ್ಟವನ್ನು ಭಾರತದಾದ್ಯಂತ ಅನುಸರಿಸಬೇಕಿತ್ತೇ ಹೊರತು ನಾವು ಅನುಸರಿಸದ ಸಿಬಿಎಸ್ಸಿ ಪದ್ದತಿಯಾಧಾರಿತ ಪ್ರವೇಶ ಪರೀಕ್ಷೆ ಮಾಡಿ ನಮ್ಮ ಮಕ್ಕಳನ್ನು ವೈದ್ಯಕೀಯ ಕಲಿಕೆಯಿಂದ ವಂಚಿತರನ್ನಾಗಿಸುವ ಹುನ್ನಾರ ಮಾಡಬಾರದಿತ್ತು!

ಇಡೀ ಭಾರತದಲ್ಲಿ ಯಾವ ಕಾಲೇಜಿಗೆ ಬೇಕಾದರೂ ಅರ್ಜಿಸಲ್ಲಿಸಬಹುದು: ಈ ನೀಟ್ ಏರ್ಪಾಡಿನಿಂದ ರಾಜ್ಯದ ವಿದ್ಯಾರ್ಥಿಗಳು ೮೫% ಸೀಟು ಉಳಿಸಿಕೊಳ್ಳಲಿದ್ದಾರೆ ಎನ್ನುವ ಮಾತನ್ನು ನೂರಕ್ಕೆ ೧೫ರಷ್ಟು ಸೀಟನ್ನು ಬೇರೆ ರಾಜ್ಯದವರಿಗೆ ಬಿಟ್ಟುಕೊಡಬೇಕಾಗುತ್ತದೆ ಎನ್ನುವಂತೆ ನೋಡಬೇಕಾಗಿದೆ. ಕೇಂದ್ರದ ಮಟ್ಟದಲ್ಲಿ ನಡೆಯುವ ಪರೀಕ್ಷೆಯಲ್ಲಿ ಹೊರರಾಜ್ಯಗಳ ಸೀಟುಗಳು ಕನ್ನಡಿಗರಿಗೂ ಅದೇ ಪ್ರಮಾಣದಲ್ಲಿ ಸಿಗುತ್ತದೆ ಎನ್ನಲಾಗದು. ನಮ್ಮಲ್ಲಿ ಎಷ್ಟು ಮಂದಿ, ಯಾಕಾದರೂ ಹೊರರಾಜ್ಯಗಳಲ್ಲಿ ಮೆಡಿಕಲ್ ಓದು ಓದಲು ಹೋಗುತ್ತಿದ್ದಾರೆ ಎಂಬುದನ್ನು ಗಮನಿಸಬೇಕಾಗಿದೆ. ವಾಸ್ತವವಾಗಿ ನಮ್ಮ ರಾಜ್ಯದ ಕಾಲೇಜುಗಳಿಗೆ ಹೊರನಾಡಿನಿಂದ ಬರುವವರು ಹೆಚ್ಚೇ ಹೊರತು ಇಲ್ಲಿಂದ ಅಲ್ಲಿಗೆ ಹೋಗುವವರಲ್ಲ. ಹಾಗಾಗಿ ಹೊರರಾಜ್ಯಗಳ ೧೫% ಭಾಗದಲ್ಲೂ ನಮ್ಮ ಹುಡುಗರಿಗೆ ಅವಕಾಶ ಇರದು, ನಮ್ಮೂರಿನ ೧೦೦%ರಲ್ಲೂ ೧೫% ಗೋವಿಂದಾ!

ಅಡಗಿರುವ ಮೂಲಸಮಸ್ಯೆ 

ಈ ಮೇಲಿನದ್ದೆಲ್ಲಾ ನೀಟ್ ಒಡ್ಡಿರುವ ತೊಡುಕುಗಳಾದರೆ, ಮೂಲಭೂತ ಸಮಸ್ಯೆ ಬೇರೆಯೇ ಇದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನ್ಯಾಯಾಂಗವು ಶಾಸಕಾಂಗದ ಕಾರ್ಯವ್ಯಾಪ್ತಿಯಲ್ಲಿ ಮೂಗುತೂರಿಸುವುದು ಸರಿಯೇ ಎನ್ನುವುದನ್ನು ನೋಡಬೇಕಿದೆ. ದೇಶದಲ್ಲೆಲ್ಲಾ ಒಂದೇ ಬಗೆಯ ಪ್ರವೇಶ ಪರೀಕ್ಷೆ ಮಾಡಬೇಕೋ ಬೇಡವೋ ಎನ್ನುವುದು ಶಾಸಕಾಂಗ ಕೈಗೊಳ್ಳಬೇಕಾದ ನೀತಿಯೇ ಹೊರತು ಸಂವಿಧಾನ, ಕಾನೂನು ಕಟ್ಟಲೆಗಳ ವ್ಯಾಖ್ಯಾನವಲ್ಲ! ಹಾಗಾಗಿ ನ್ಯಾಯಾಲಯದ ಈ ತೀರ್ಪಿನ ವಿರುದ್ಧವಾಗಿ ಸಂಸತ್ತು ಸುಗ್ರೀವಾಜ್ಞೆ ಹೊರಡಿಸುವುದಾದರೆ ಅದು ನಿಜಕ್ಕೂ ಒಳ್ಳೆಯದೇ ಆಗಿದೆ. ಇದು ಸಮಸ್ಯೆಯನ್ನು ಒಂದು ಸಿಕ್ಕಿನಿಂದ ಬಿಡಿಸುವುದಾದರೂ ಶಿಕ್ಷಣ ವ್ಯವಸ್ಥೆ ಸಂವಿಧಾನದ ಜಂಟಿಪಟ್ಟಿಯಲ್ಲಿರುವುದೇ ಸರಿಯಾಗಿಲ್ಲ. ತುರ್ತುಪರಿಸ್ಥಿತಿಯ ನೆಪದಲ್ಲಿ ಶ್ರೀಮತಿ ಇಂದಿರಾಗಾಂಧಿಯವರು ಸರ್ವಾಧಿಕಾರಿ ನಡೆಯಾಗಿ ರಾಜ್ಯಪಟ್ಟಿಯಿಂದ ಶಿಕ್ಷಣವನ್ನು ಜಂಟಿಪಟ್ಟಿಗೆ ಎಳೆದೊಯ್ದಿದ್ದನ್ನು ಮೊದಲು ಸರಿಪಡಿಸಬೇಕಾಗಿದೆ. ಅಧಿಕಾರ/ ಆಡಳಿತಗಳು ಹೆಚ್ಚು ಹೆಚ್ಚು ಕೇಂದ್ರೀಕೃತವಾದಷ್ಟೂ ದೇಶ ಬಲಹೀನವಾಗುತ್ತಾ ಹೋಗುತ್ತದೆ. ಇದನ್ನು ಮನಗಾಣದ ಮರುಳುತನವನ್ನು ಶಾಸಕಾಂಗ ಅರಿತು ನಡೆಯಬೇಕಾಗಿದೆ.

ನೆಗಡಿಗೆ ಮದ್ದು ಮೂಗು ಕುಯ್ಯೋದಲ್ಲ!

ಭಾರತದಲ್ಲಿ ತೊಂಬತ್ತಕ್ಕಿಂತಲೂ ಹೆಚ್ಚು ವೈದ್ಯಕೀಯ ಪ್ರವೇಶ ಪರೀಕ್ಷೆಗಳು ಸಂಸ್ಥೆಗಳ ಮನಸ್ಸಿಗೆ ತೋಚಿದಂತೆ ನಡೆಯುತ್ತಿದ್ದು ಇದರಿಂದಾಗಿ ವೈದ್ಯಕೀಯ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ತೊಡಕಾಗುತ್ತಿದೆ ಎನ್ನುವ ಮೂಲಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನವೇ ಈ ಸರ್ವೋಚ್ಚ ನ್ಯಾಯಾಲದಯ ತೀರ್ಪು. ಆದರೆ ನೆಗಡಿಗೆ ಮೂಗು ಕೊಯ್ಯುವಂತಾಗಬಾರದಲ್ಲವೇ! ಸಮಸ್ಯೆಗೆ ಪರಿಹಾರ ಒಂದೇ ಬಗೆಯ ಪರೀಕ್ಷೆಯೆಂದಾದರೂ ಅದು ಕೇಂದ್ರಸರ್ಕಾರ ನಡೆಸುವ ಪರೀಕ್ಷೆಯಾಗಬಾರದು ಎನ್ನುವುದನ್ನು ಮನಗಾಣಬೇಕಿದೆ. ತಮಿಳುನಾಡಿನಲ್ಲಿ ಪ್ರವೇಶ ಪರೀಕ್ಷೆಯೇ ಇಲ್ಲ! ಕರ್ನಾಟಕದಲ್ಲಿ ಸಿಇಟಿ ವ್ಯವಸ್ಥೆ ಇದೆ. ಹಾಗಾಗಿ ರಾಜ್ಯಗಳಿಗೆ ಒಂದು ಸ್ಥೂಲ ನಿರ್ದೇಶನ ಕೊಡಬಹುದೇ ಹೊರತು ಇಡೀ ಅಧಿಕಾರವನ್ನೇ ಮೊಟಕುಗೊಳಿಸುವ ಕೆಲಸಕ್ಕೆ ಕೈಹಾಕಬಾರದು.

ನಿಜವಾಗಿ, ಸಮಾನತೆಯನ್ನು ಎತ್ತಿಹಿಡಿದು ಎಲ್ಲರಿಗೂ ನ್ಯಾಯ ಒದಗಿಸಬೇಕೆಂದಿದ್ದರೆ ಕೇಂದ್ರಸರ್ಕಾರ ಈ ನೀಟ್ ಪರೀಕ್ಷೆಯನ್ನು ಕೈಬಿಡಬೇಕು. ತಮಿಳುನಾಡಿನಂತಹ ರಾಜ್ಯದಲ್ಲಿ ಪ್ರವೇಶ ಪರೀಕ್ಷೆಯೇ ಇಲ್ಲದಿರುವುದು ಸರಿಯಲ್ಲ ಅನ್ನಿಸಿದರೆ ಎಲ್ಲಾ ರಾಜ್ಯಗಳೂ ಆಯಾ ರಾಜ್ಯ ಪಠ್ಯಕ್ರಮ ಆಧರಿಸಿದ ನಿರ್ದಿಷ್ಟ ಗುಣಮಟ್ಟದ ಪ್ರವೇಶ ಪರೀಕ್ಷೆ ನಡೆಸುವಂತೆ ಹೇಳಬಹುದು. ಖಾಸಗಿಯವರ ಪ್ರವೇಶ ಪರೀಕ್ಷೆಗಳನ್ನು ನಿಶೇಧಿಸಿ ಸರ್ಕಾರಗಳು ಮಾತ್ರಾ ಪರೀಕ್ಷೆ ನಡೆಸುವಂತೆ ಕೇಳಬಹುದು! ಆದರೆ ಇವು ಯಾವುವೂ ವೈದ್ಯಕೀಯ ಶಿಕ್ಷಣ ಮುಗಿಸಿ ಪದವಿ ಪಡೆಯುವ ವೈದ್ಯರ ಗುಣಮಟ್ಟವನ್ನು ಸಮಾನಗೊಳಿಸುವುದಿಲ್ಲ. ಈಗಾಗಲೇ ಇರುವಂತೆ ವೈದ್ಯಕೀಯ ಪರೀಕ್ಷೆಗಳು ಗೊತ್ತುಪಡಿಸಲಾದ ಮಟ್ಟದಲ್ಲಿ ಆಯಾಯಾ ವಿಶ್ವವಿದ್ಯಾನಿಲಯಗಳು ನಡೆಸುವಂತೆಯೇ ಇರಬೇಕು. ಇಲ್ಲದಿದ್ದರೆ ನಾಳೆ ಎಲ್ಲಾ ರಾಜ್ಯಗಳ ಒಂದನೇ ತರಗತಿಯ ಪ್ರಶ್ನೆಪತ್ರಿಕೆಗಳೂ ಒಂದೇ ಆಗಿರಬೇಕು, ಆಗ ಮಾತ್ರಾ ಭಾರತದಲ್ಲಿ ಏಕತೆ, ಸಮಾನತೆ ಹುಟ್ಟುತ್ತದೆ ಎನ್ನುವ ಅತಿರೇಕದ ಅವಿವೇಕಗಳೂ ಜಾರಿಯಾಗಿಬಿಡಬಹುದು!

ಕೊನೆಹನಿ: ಕನ್ನಡದಲ್ಲಿ ನೀಟ್ ಪರೀಕ್ಷೆ ಬೇಡ ಎನ್ನುವ ಮೂಲಕ ನಮ್ಮ ರಾಜ್ಯದ ರಾಜಕಾರಣಿಗಳು ತಾವೆಷ್ಟು ಅವಿವೇಕಿಗಳು, ಅದೆಷ್ಟು ದೂರಾಲೋಚನೆ ಇಲ್ಲದವರು, ಸ್ವಾಭಿಮಾನ ಇಲ್ಲದವರು ಎನ್ನುವುದನ್ನು ಬಯಲು ಮಾಡಿಕೊಂಡಿದ್ದಾರೆ!

Advertisements

Posted on May 15, 2016, in ಗುಂಪಿಸದ್ದು and tagged , , . Bookmark the permalink. Leave a comment.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: