ಡಬ್ಬಿಂಗ್ ಸಿನಿಮಾ ಬಿಡುಗಡೆಯ ಹೊಸಿಲಲ್ಲಿ…

ಡಬ್ಬಿಂಗ್.jpg

ಇಂದು ಜನಶ್ರೀ ವಾಹಿನಿಯವರು ಡಬ್ಬಿಂಗ್ ಕುರಿತಾಗಿ ನಡೆಸಿದ ನೇರ ಚರ್ಚೆಯಲ್ಲಿ ಪಾಲ್ಗೊಂಡಿದ್ದೆ. ಇದುವರೆವಿಗೂ ಡಬ್ಬಿಂಗ್ ಕುರಿತಾದ ಹಲವಾರು ಚರ್ಚೆಗಳಲ್ಲಿ ಪಾಲ್ಗೊಂಡಿದ್ದರೂ, ಹಿಂದೀ ಭಾಷೆಯ “ಮೈ ಹಸ್ಬೆಂಡ್ಸ್ ವೈಫ್” ಎಂಬ ಸಿನಿಮಾ “ನಾನು ನನ್ನ ಪ್ರೀತಿ” ಎಂಬ ಹೆಸರಲ್ಲಿ ಡಬ್ ಆಗಿ ತೆರೆಕಾಣಲು ಸಿದ್ಧವಾಗಿ ಬಿಡುಗಡೆಯ ಹೊಸ್ತಿಲಲ್ಲಿರುವಾಗ ನಡೆದ ಈ ಚರ್ಚೆ ತುಸು ಮಹತ್ವದ್ದಾಗಿತ್ತು. ಡಬ್ಬಿಂಗ್ ವಿರೋಧಿಗಳು ಹೊಂದಿರುವ ಗ್ರಹಿಕೆಯಲ್ಲಿನ ತೊಡಕು ಎದ್ದು ಕಾಣುತ್ತಿತ್ತು!

ಸಿನಿಮಾ ಗುಣಮಟ್ಟ ಮತ್ತು ಡಬ್ಬಿಂಗ್

ಡಬ್ಬಿಂಗ್ ವಿರೋಧ ಮಾಡುವ ಮಂದಿ ಮುಂದಿಡುವ ವಾದ ಇದೀಗ ಬಿಡುಗಡೆಗೆ ಸಿದ್ಧವಾಗಿರುವ “ನಾನು ನನ್ನ ಪ್ರೀತಿ” ಸಿನಿಮಾ ಕುರಿತಾಗಿ ಇದ್ದದ್ದು ಬಹಳ ಸೋಜಿಗವೆನ್ನಿಸಿತು. ಈ ಸಿನಿಮಾ ಗುಣಮಟ್ಟದ ಬಗ್ಗೆ, ಹೆಸರಿನ ಬಗ್ಗೆ ಚರ್ಚೆ ಮಾಡಲು ಮುಂದಾಗಿದ್ದೇ ವಿಚಿತ್ರ. ಸಿನಿಮಾ ಬಿಡುಗಡೆಯೇ ಆಗದೆ ಅದರ ಗುಣಮಟ್ಟದ ಬಗ್ಗೆ ಮಾತಾಡಿದ್ದೇ ತಪ್ಪು. ಆದರೆ ಅದಕ್ಕಿಂತಾ ಮುಖ್ಯವಾದದ್ದು, ಚರ್ಚೆ ಮಾಡುವವರು ಡಬ್ಬಿಂಗಿನ ಗುಣಮಟ್ಟದ ಬಗ್ಗೆ ಮಾತಾಡದೆ ಸಿನಿಮಾದ ಗುಣಮಟ್ಟದ ಬಗ್ಗೆ ಮಾಡಲು ಮುಂದಾಗಿದ್ದು! ಡಬ್ ಮಾಡಲು ಸಿನಿಮಾ ಆರಿಸಿಕೊಂಡಾಗಲೇ ಅದರ ಗುಣಮಟ್ಟ ಗೊತ್ತಾಗಿರುತ್ತದೆ. ಡಬ್ ಮಾಡುವವರು ಡಬ್ಬಿಂಗಿನ ಗುಣಮಟ್ಟಕ್ಕೆ ಹೊಣೆಗಾರರಾಗುತ್ತಾರೆ. ಇಷ್ಟಕ್ಕೂ ಸಿನಿಮಾ ಗುಣಮಟ್ಟಕ್ಕೂ ಡಬ್ಬಿಂಗಿಗೂ ಯಾವ ನೆಂಟೂ ಇಲ್ಲ. ಸಿನಿಮಾದ ಗುಣಮಟ್ಟದ ನೆಪ ಹೇಳಿ ಡಬ್ಬಿಂಗ್ ವಿರೋಧಿಸುವುದು ಬಾಲಿಶ!

ಕನ್ನಡ ಸಂಸ್ಕೃತಿ ಮತ್ತು ಡಬ್ಬಿಂಗ್

ನಮ್ಮ ಸಂಸ್ಕೃತಿಯನ್ನು ಡಬ್ಬಿಂಗ್ ಹಾಳು ಮಾಡುತ್ತದೆ ಎನ್ನುವ ವಾದದಲ್ಲೂ ಹುರುಳಿಲ್ಲ. ಡಬ್ಬಿಂಗ್ ಎನ್ನುವುದೇ ಬೇರೆ ಸಂಸ್ಕೃತಿಯನ್ನು ನಮ್ಮ ನುಡಿಯಲ್ಲಿ ತಿಳಿದುಕೊಳ್ಳುವ ಬಗೆ. ಇಷ್ಟಕ್ಕೂ ಫ್ರೇಮ್ ಟು ಫ್ರೇಮ್ ರಿಮೇಕು ಮಾಡುವಾಗ ಇಲ್ಲದ ಸಂಸ್ಕೃತಿಯ ಹಾಳಾಗುವಿಕೆ ಡಬ್ಬಿಂಗಿನಿಂದಾಗಿ ಆಗುತ್ತದೆ ಎನ್ನುವುದನ್ನು ಹೇಗೆ ಒಪ್ಪಲಾಗುತ್ತದೆ? ಸಿನಿಮಾ ಎನ್ನುವುದು ಸಂಸ್ಕೃತಿಗೆ ಕನ್ನಡಿಯಾಗಬಹುದೇ ಹೊರತು ಸಂಸ್ಕೃತಿ ರೂಪಿಸುವ ಸಾಧನವಾಗುವ ಕಾಲ ಈಗಿಲ್ಲ! ಇವರ ವಾದ ನೋಡಿದರೆ ಪರಭಾಷಾ ಚಿತ್ರಗಳು ಸಂಸ್ಕೃತಿ ಹೀನ ಮತ್ತು ಕನ್ನಡದ ಚಿತ್ರಗಳು, ಅವು ರಿಮೇಕಾಗಿದ್ದರೂ ಸಂಸ್ಕೃತಿಮಯವಾಗಿದೆ ಎನ್ನುವಂತಿದೆ. ವಾಸ್ತವವಾಗಿ ಮಚ್ಚು, ಲಾಂಗು, ಸೆಕ್ಸು, ಕ್ರೈಮುಗಳ.. ಕೀಳು ಅಭಿರುಚಿಯ ಹಾಸ್ಯಗಳನ್ನು ಚಿತ್ರಗಳಲ್ಲಿ ತೋರಿಸುವ ಯಾವುದೇ ಚಿತ್ರರಂಗದವರಿಗೆ ನಾಡಿನ ಸಂಸ್ಕೃತಿಯನ್ನು ತಾವು ಎತ್ತಿ ಹಿಡಿಯುತ್ತಿದ್ದೇವೆ ಎನ್ನುವ ನೈತಿಕತೆ ಇಲ್ಲಾ!

ನುಡಿಯ ಸೊಗಡು ಮತ್ತು ಡಬ್ಬಿಂಗ್

ಡಬ್ಬಿಂಗ್ ಬಂದರೆ ಬೇರೆ ಭಾಷೆಯವರ ಬಾಯಲ್ಲಿ ಕನ್ನಡ ತುರುಕಬೇಕಾಗುತ್ತದೆ. ತುಟಿಚಲನೆಯಂತೆ ಮಾತು ಬರೆಯಬೇಕಾಗುತ್ತದೆ. ಇದು ನಮ್ಮ ಕನ್ನಡ ಭಾಷೆಯನ್ನು ಹಾಳುಗೆಡುವುತ್ತದೆ. ಇದನ್ನು ನೋಡುವ ಕನ್ನಡಿಗರ ನುಡಿ ಹಾಳಾಗುತ್ತದೆ ಎನ್ನುವ ಮಾತಾಡಿದರು. ವಾಸ್ತವವಾಗಿ ಹೀಗೆ ಹಾಳಾದ ಕನ್ನಡಕ್ಕೆ ಉದಾಹರಣೆಯಾಗಿ ಜಾಹೀರಾತುಗಳಿವೆ ಎಂದರು. ವಾಸ್ತವವಾಗಿ ಕೆಟ್ಟದಾಗಿ ಡಬ್ ಮಾಡಿದರೆ ಜನ ಅಂಥವನ್ನು ತಿರಸ್ಕರಿಸುತ್ತಾರೆಯೇ ಹೊರತು ಅಂಥವನ್ನು ನೋಡಿ ತಮ್ಮ ಮಾತಿನ ಬಗೆ ಬದಲಿಸಿಕೊಳ್ಳುವುದಿಲ್ಲ! ಇವರು ಹೇಳುತ್ತಿರುವ ಕೆಟ್ಟ ಕನ್ನಡದ ಜಾಹೀರಾತುಗಳಿಂದ ಯಾವ ಕನ್ನಡಿಗರ ಮಾತಿನ ಶೈಲಿ ಬದಲಾಗಿದೆಯೋ ದೇವರೇ ಬಲ್ಲ! ಬದಲಿಗೆ ಅಂತಹ ಜಾಹೀರಾತುಗಳು ಜನರನ್ನು ಮುಟ್ಟುವಲ್ಲಿ ವಿಫಲವಾಗುತ್ತವೆ ಎನ್ನುವುದು ನಂಬಬಹುದಾದ ಮಾತಾಗಿದೆ. ಇಷ್ಟಕ್ಕೂ ತುಟಿಚಲನೆಗೆ ಮಾತು ಹೊಂದಿಸುವುದು ಎನ್ನುವುದೇ ಇಂದು ನಗಣ್ಯ ಎನ್ನಿಸುವಷ್ಟು ಚಿಕ್ಕ ವಿಷಯ. ಯಾಕೆಂದರೆ ಸಿನಿಮಾವೊಂದರಲ್ಲಿ ಎಷ್ಟು ದೃಶ್ಯಗಳಲ್ಲಿ ಮುಖವನ್ನು ಹತ್ತಿರದಿಂದ ತೋರಿಸಲಾಗುತ್ತದೆ, ಎಷ್ಟನ್ನು ದೂರದಿಂದ ತೋರಿಸಲಾಗುತ್ತದೆ ಎನ್ನುವುದು ಈ ತುಟಿಚಲನೆಯ ಹೊಂದಾಣಿಕೆಯ ಪ್ರಮಾಣಕ್ಕೆ ಸಂಬಂಧಿಸಿದೆ. ಇಷ್ಟಕ್ಕೂ ಹೊಂದಿಕೆಯಾಗದಿದ್ದರೆ ಜನ ಅಂಥವನ್ನು ಒಪ್ಪುವ ತಿರಸ್ಕರಿಸುವ ಅವಕಾಶವನ್ನು ಹೊಂದಿದ್ದಾರೆ ಎನ್ನುವುದನ್ನು ಮರೆಯಲಾಗದು.

ಕಾರ್ಮಿಕರ ಹೊಟ್ಟೆಪಾಡಿನ ಪ್ರಶ್ನೆ!

ಡಬ್ಬಿಂಗ್ ಸಿನಿಮಾ ಬಂದರೆ ಚಲನಚಿತ್ರ ಹತ್ತುಸಾವಿರ ಕಾರ್ಮಿಕರು ಬೀದಿಗೆ ಬೀಳುತ್ತಾರೆ ಎನ್ನುವ ವಾದ ಬಲು ಉತ್ಪ್ರೇಕ್ಷೆಯದ್ದು ಎನ್ನಬೇಕಾಗಿದೆ. ಇವರ ಮಾತಿನಂತೆ ಕನ್ನಡದಲ್ಲಿ ಮೂಲ ಚಿತ್ರಗಳನ್ನು ತೆಗೆಯುವುದನ್ನು ನಿಲ್ಲಿಸಿಬಿಡಲಾಗುತ್ತದೆ. ಅದೇ ರೀತಿ ಡಬ್ಬಿಂಗ್ ಬಂದೊಡನೆ ಎಲ್ಲಾರಿಗೂ ಕೆಲಸ ಸಿಕ್ಕುತ್ತದೆ ಎಂದೂ ಹೇಳಲಾಗದು. ಎರಡೂ ಕೂಡಾ ಊಹೆಯ ಮಾತಾದ್ದರಿಂದ ಕಾರ್ಮಿಕರ ರಕ್ಷಣೆಗೆ ತೊಂದರೆಯಾಗದ ಹಾಗೆ ಅವರಿಗೆ ಅನುಕೂಲವಾಗುವ ಬೇರೆ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗಿದೆಯೇ ಹೊರತು ಡಬ್ಬಿಂಗ್ ಬರುವುದನ್ನು ತಡೆಯುವುದಲ್ಲ ಎನ್ನಬೇಕಾಗಿದೆ. ತಂತ್ರಜ್ಞಾನ ಬೆಳೆದಂತೆ, ಹತ್ತುಜನರ ಕೆಲಸ ಯಂತ್ರವೊಂದು ಮಾಡಿಬಿಡುವಂಥಾ ಬೆಳವಣಿಗೆಗಳಿದ್ದಾಗ ಸಮಾಜ ಈ ಕೆಲಸ ಇಲ್ಲವಾಗಿಬಿಡುವ ಸಮಸ್ಯೆಗೆ (ಅಂಥದ್ದು ನಿಜಕ್ಕೂ ಉಂಟಾದರೆ) ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಸಿನಿಮಾಗಳು ಸೋಲುತ್ತಿದ್ದರೂ ಸರಿ, ನಿರ್ಮಾಪಕರು ನಷ್ಟ ಅನುಭವಿಸಿದರೂ ಸರಿ, ಸಿನಿಮಾ ಕಾರ್ಮಿಕರಿಗೆ ಕೆಲಸ ಸಿಗುತ್ತಿರಬೇಕು ಎನ್ನುವ ವಾದವನ್ನು ಒಪ್ಪಲಾಗದು.

ಡಬ್ಬಿಂಗ್ ಸಿನಿಮಾವನ್ನು ಯಾಕೆ ಸ್ವಾಗತಿಸಬೇಕು

ಡಬ್ಬಿಂಗ್ ಸಿನಿಮಾಗಳು ಇಂದು ಕನ್ನಡಿಗರಿಗೆ ಯಾಕೆ ಬೇಕಾಗಿದೆ ಎನ್ನುವುದನ್ನು ನೋಡಬೇಕಾಗಿದೆ. ತಮ್ಮ ಮನರಂಜನೆಗಾಗಿ ಬೇರೆ ಭಾಷೆಯನ್ನು ಅವಲಂಬಿಸಬೇಕಾದ ದುಃಸ್ಥಿತಿಯಿಂದ ಹೊರಬರಲು, ಕನ್ನಡದ ಮಕ್ಕಳು ಕನ್ನಡಕ್ಕೇ ಅಂಟಿಕೊಳ್ಳಲು ಇಂದು ಡಬ್ಬಿಂಗ್ ಅತ್ಯಗತ್ಯವಾಗಿದೆ. ಇದನ್ನೆಲ್ಲಾ ಮೀರಿ ನಮ್ಮ ನುಡಿಯಲ್ಲಿಯೇ ಎಲ್ಲವನ್ನೂ ಪಡೆದುಕೊಳ್ಳುವ ನಮ್ಮ ಆಯ್ಕೆಯ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ, ಕನ್ನಡದ ಸಾಧ್ಯತೆಗಳನ್ನೂ, ಮಾರುಕಟ್ಟೆಯನ್ನೂ ಹಿಗ್ಗಿಸಲು ಡಬ್ಬಿಂಗ್ ಸಹಕಾರಿಯಾಗಲಿದೆ. ಡಬ್ಬಿಂಗ್ ಗುಣಮಟ್ಟವು ಕಾಲ ಕಳೆದಂತೆ ಉತ್ತಮಗೊಳ್ಳುತ್ತಾ ಹೋಗುವುದರ ಜೊತೆಗೆ ಮೂಲ ಸಿನಿಮಾಗಳ ಗುಣಮಟ್ಟವೂ ಸ್ಪರ್ಧೆಯ ಕಾರಣದಿಂದ ಹೆಚ್ಚುವುದು ಖಚಿತ. ಹಾಗಾಗಿ ಪ್ರತಿಭೆ ಉಳ್ಳ ಯಾವ ಚಿತ್ರೋದ್ಯಮದ ವ್ಯಕ್ತಿಯೂ ಡಬ್ಬಿಂಗ್ ಬಗ್ಗೆ ಹೆದರುವುದಿಲ್ಲ! ಕನ್ನಡ ಕನ್ನಡಿಗ ಕರ್ನಾಟಕದ ಹಿತ ಎನ್ನುವುದು ಎಲ್ಲಕ್ಕಿಂತಾ ಮಿಗಿಲಾದದ್ದು ಮತ್ತು ಇದೇ ಕಾರಣದಿಂದಲೇ ಕನ್ನಡಕ್ಕೆ ಡಬ್ಬಿಂಗ್ ಬರಬೇಕಾಗಿದೆ. ಕನ್ನಡಿಗರು ಕನ್ನಡದಲ್ಲೇ ಎಲ್ಲವನ್ನೂ ಪಡೆದುಕೊಳ್ಳಲಿ ಎನ್ನುವುದು ಕನ್ನಡಪರವಾದ ನಿಲುವಾಗಿದ್ದು.. ಡಬ್ಬಿಂಗಿನಿಂದಾಗಿ ಹಾಳಾಗಿ ಹೋದ ಯಾವ ನಾಡು, ಯಾವ ನುಡಿಯೂ ಇಲ್ಲದಿರುವುದನ್ನು ಗಮನಿಸಬೇಕಾಗಿದೆ.

ಕೊನೆಹನಿ: ಡಬ್ಬಿಂಗ್ ಬರುವುದನ್ನು ತಡೆಯಲು ಚಿತ್ರಮಂದಿರಕ್ಕೆ ನುಗ್ಗುತ್ತೇವೆ, ಬೆಂಕಿ ಹಾಕುತ್ತೇವೆ ಎನ್ನುವ ಹೇಳಿಕೆಗಳನ್ನು ರಾಜಾರೋಷವಾಗಿ ಕೊಡುತ್ತಿರುವ ಕನ್ನಡ ಹೋರಾಟಗಾರರೆಂದು ಕರೆದುಕೊಳ್ಳುತ್ತಿರುವ ಮಂದಿಯನ್ನು ಸರ್ಕಾರ ಮತ್ತು ಪೊಲೀಸು ಸರಿಯಾಗಿ ನಿರ್ವಹಿಸಬೇಕಾಗಿದೆ. ನಾವು ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವೆ ಎನ್ನುವುದನ್ನು ಮರೆಯಲಾಗದು. ಡಬ್ಬಿಂಗ್ ಬಗ್ಗೆ ಆಕ್ಷೇಪಣೆಯಿದ್ದರೆ ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ, ಜಾಗೃತಿ ಮೂಡಿಸುವ ಅವಕಾಶ ಇದ್ದೇ ಇದೆ. ಅದು ಬಿಟ್ಟು ತಡೆಯುವ, ಹೊಡೆಯುವ, ಬಡಿಯುವ, ಸುಡುವ ಮಾತಾಡಿದರೆ ಅಂಥದ್ದನ್ನೆಲ್ಲಾ ನೋಡಿಕೊಂಡು ಸರ್ಕಾರ ಕಣ್ಣುಮುಚ್ಚಿ ಕೂರಲಾರದು! ಕೂರಬಾರದು!

Advertisements

Posted on May 22, 2016, in ಗುಂಪಿಸದ್ದು and tagged , , . Bookmark the permalink. Leave a comment.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: