ಮಹದಾಯಿ: ವರುಷದ ಕೂಗು!

[೧೯೮೦ರ ರೈತಬಂಡಾಯಕ್ಕೆ ಹೆಸರಾದ ಗದಗ ಜಿಲ್ಲೆಯ ನರಗುಂದದಲ್ಲಿ, ಮಹದಾಯಿ ನದಿ ನೀರಿಗಾಗಿ ಆ ಭಾಗದ ರೈತಾಪಿ ಜನರು ನಡೆಸುತ್ತಿರುವ ಹೋರಾಟಕ್ಕೆ ಒಂದು ವರ್ಷ ತುಂಬಲಿದೆ. ಇದೇ ಸಂದರ್ಭದಲ್ಲಿ ಹೋರಾಟದ ಮುಂಚೂಣಿಯಲ್ಲಿರುವ ರೈತನಾಯಕ ಶ್ರೀ ಶಂಕರಪ್ಪ ಅಂಬಲಿಯವರನ್ನು ಭೇಟಿ ಮಾಡಿದ್ದು, ಮಹದಾಯಿ ಹೋರಾಟದ ಕಥನವನ್ನು ಹೋರಾಟಗಾರನ ಕಣ್ಣಿನ ಮೂಲಕ ಕಂಡಂತಾಗಿ ಅದರ ಬರಹದ ರೂಪ ನಿಮ್ಮ ಓದಿಗೆ..]

naragunda1ಹಿನ್ನೆಲೆ:

ಕಳಸಾ ಬಂಡೂರಿ ಯೋಜನೆಯನ್ನು ಮಹದಾಯಿ ಯೋಜನೆ ಎನ್ನಬೇಕೆಂದು ಆಗ್ರಹಿಸುವ ಶ್ರೀ ಶಂಕರಪ್ಪ ಅಂಬಲಿಯವರನ್ನು ಭೇಟಿಯಾಗಿ ಮಾತಿಗೆ ಕುಳಿತಾಗ ಪ್ರವಾಹದಂತೆ ಅಡೆತಡೆಯಿಲ್ಲದೆ ಹೊರಬಂದ ಮಾತುಗಳು ಮಹದಾಯಿ ನೀರಿಗಾಗಿ ರೈತರು ನಡೆಸುತ್ತಿರುವ ಹೋರಾಟದ ಹಿಂದುಮುಂದುಗಳನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟಿತು. ರೈತರ ಈ ಹೋರಾಟದ ಸಂಪೂರ್ಣ ಚಿತ್ರಣ ದೊರೆಯಲು ಇತಿಹಾಸದ ಪುಟಗಳನ್ನು ತಿರುಗಿಸುವುದು ಅನಿವಾರ್ಯ. ೧೯೦೮ರಲ್ಲೇ ಮಲಪ್ರಭಾ ನದಿಗೆ ಅಣೆಕಟ್ಟುವ ಯೋಜನೆ ಮಾಡಲಾಗಿತ್ತಾದರೂ ಅರ್ಧಶತಮಾನ ಅದು ಮುಂದುವರೆಯದೆ ತಣ್ಣಗೆ ಮಲಗಿತ್ತು. ಇದೀಗ ಭುಗಿಲೆದ್ದಿರುವ ಈ ಹೋರಾಟದ ಬೀಜ ಅಂದೇ ಅಂಕುರಿಸಿತ್ತು. ಈ ಸರಣಿ ಬರಹದ ಮೂಲಕ ಮಹದಾಯಿ ಹೋರಾಟದ ಬಗ್ಗೆ ತಿಳಿಯೋಣ.

ಕರ್ನಾಟಕದ ಉತ್ತರದ ಬಯಲುಸೀಮೆಯ ನೆಲ ಕರಿಮಣ್ಣು. ಇಲ್ಲಿ ಮಳೆಯ ಕೊರತೆಯೂ ತೀವ್ರ. ಈ ಭಾಗದಲ್ಲಿ ವ್ಯವಸಾಯವನ್ನು ನಂಬಿ ಬದುಕುತ್ತಿರುವವರೇ ಹೆಚ್ಚು. ಮಳೆರಾಯನನ್ನೇ ನಂಬಿದ ಈ ರೈತರು ಸತತ ಬರಗಾಲದಿಂದ ಬವಣೆ ಅನುಭವಸುತ್ತಿರುವವರು. ಹೀಗಿದ್ದಾಗ ಈ ಭಾಗದ ಜನರ ಬದುಕಲ್ಲಿ ತುಸು ಬೆಳಕು ಮೂಡುವ ಆಸೆ ಹುಟ್ಟಿದ್ದು ಮಲಪ್ರಭಾ ನದಿಗೆ ನವಿಲುಕೊಳ್ಳದಲ್ಲೊಂದು ಅಣೆಕಟ್ಟೆ ಕಟ್ಟಿ ಈ ಭಾಗದ ಬರಡು ನೆಲಕ್ಕೆ ನೀರು ಹರಿಸುವ ಯೋಜನೆ ರೂಪುಗೊಂಡಾಗ. ೧೯೬೨ರಲ್ಲಿ ಶುರುವಾದ ಈ ಅಣೆಕಟ್ಟೆಯ ಮೂಲ ಲೆಕ್ಕಾಚಾರದಲ್ಲಿ ೪೫ ಟಿಎಂಸಿ ನೀರು ಹಿಡಿದುಕೊಳ್ಳಬೇಕಿತ್ತು. ನವಿಲುತೀರ್ಥವೆಂಬಲ್ಲಿ ಹೀಗೆ ಕಟ್ಟಲಾದ ಅಣೆಕಟ್ಟೆಗೆ ರೇಣುಕಾ ಸಾಗರವೆಂದು ಹೆಸರಿಡಲಾಯ್ತು. ಒಂದುಲಕ್ಷ ತೊಂಬತ್ಮೂರು ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಕರ್ಯ ಒದಗಿಸುವ ಉದ್ದೇಶ ಹೊಂದಿದ್ದ ಈ ಯೋಜನೆ ಕಾರ್ಯಗತವಾಗುವ ಹೊತ್ತಿಗೆ ಯೋಜಿಸಿದ್ದ ೪೭ ಟಿಎಂಸಿ ನೀರಿಗೆ ಬದಲಾಗಿ ೩೭ ಟಿಎಂಸಿ ನೀರನ್ನಷ್ಟೇ ಹಿಡಿದಿಟ್ಟುಕೊಳ್ಳವಷ್ಟು ಸಾಮರ್ಥ್ಯಕ್ಕೆ ಕುಸಿಯಿತು. ಹೆಸರಾಂತ ನೀರಾವರಿ ಇಂಜಿನಿಯರ್ ಶ್ರೀ ಬಾಳೆಕುಂದ್ರಿಯವರು ಈ ಅಣೆಕಟ್ಟೆಯ ನಿರ್ವಹಣಾಧಿಕಾರಿಯಾಗಿದ್ದರು. ಈಗ ಹೂಳು ತುಂಬಿರುವ ಕಾರಣ ಇಂದು ಇದರ ಸಾಮರ್ಥ್ಯ ೩೪ ಟಿಎಂಸಿಯಷ್ಟು ಮಾತ್ರ. ಪಾತ್ರೆ ಎಷ್ಟು ದೊಡ್ಡದಿದ್ದರೇನು? ಹಿಡಿದಿಡಲು ನೀರು ಬೇಕಲ್ಲ! ೧೯೭೩ರಲ್ಲಿ ಪೂರ್ಣಗೊಂಡ ಈ ರೇಣುಕಾ ಸಾಗರ ಅಣೆಕಟ್ಟೆ ಇದುವರೆವಿಗೆ ಪೂರ್ತಿಯಾಗಿ ತುಂಬಿರುವುದು ಬರಿಯ ಮೂರು ಬಾರಿ ಮಾತ್ರ! ಒಂದು ಅಂದಾಜಿನಂತೆ ಇದುವರೆವಿಗೂ ಸುಮಾರು ಐವತ್ತು ಸಾವಿರ ಹೆಕ್ಟೇರ್ ಪ್ರದೇಶಕ್ಕಷ್ಟೆ ನೀರು ಒದಗಿಸಲು ಸಾಧ್ಯವಾಗಿದೆ.

ಉದ್ದೇಶಿತ ೧೯೩೦೦೦ ಹೆಕ್ಟೇರ್ ಪ್ರದೇಶವನ್ನು ಮುಟ್ಟಲು ಸುಮಾರು ೩೫೦ ಕಿಮೀ ಕಾಲುವೆಯನ್ನು ಕೂಡಾ ತೋಡಲಾಯಿತು. ಆದರೆ ಬಹುತೇಕ ಜಮೀನುಗಳಿಗೆ ನೀರು ಮಾತ್ರಾ ಹರಿಯಲೇ ಇಲ್ಲ. ಸರ್ಕಾರವು ಈ ೧೯೩೦೦೦ ಹೆಕ್ಟೇರ್ ಪ್ರದೇಶವನ್ನು ನೀರಾವರಿ ಪ್ರದೇಶವೆಂದು ಘೋಷಿಸಿ ಇಲ್ಲಿನ ರೈತರ ಮೇಲೆ ಬೆಟರ್ಮೆಂಟ್ ಲೆವಿ ಎನ್ನುವ ತೆರಿಗೆಯನ್ನು ಕೂಡಾ ಹೇರಿತು. ರೈತರು ನೀರೇ ಬರದೆ ಇದೆಂಥ ಕರವೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿ ಪ್ರತಿಭಟನೆ ಮಾಡಿದರು. ಕೊನೆಗೆ ಇತಿಹಾಸ ಪ್ರಸಿದ್ಧವಾದ ನರಗುಂದ ರೈತ ಬಂಡಾಯ ನಡೆದು ೨೧ನೇ ಜುಲೈ ೧೯೮೦ರಲ್ಲಿ ಶ್ರೀ ಈರಪ್ಪ ಬಸಪ್ಪ ಕಡ್ಲಿಕೊಪ್ಪ ಎಂಬ ಯುವಕ ಪೊಲೀಸರ ಗುಂಡಿಗೆ ಬಲಿಯಾಗುವ ಮೂಲಕ ಕರ್ನಾಟಕದಲ್ಲಿ ರೈತ ಚಳವಳಿ ದೊಡ್ಡಪ್ರಮಾಣದಲ್ಲಿ ಶುರುವಾಯ್ತು. ಈ ಚಳವಳಿ ಮುಂದೆ ದೊಡ್ಡದಾಗಿ ಬೆಳೆದು ಅಂದಿನ ಕಾಂಗ್ರೆಸ್ ಸರ್ಕಾರವು ಚುನಾವಣೆಯಲ್ಲಿ ಸೋಲುಕಂಡು ಶ್ರೀ ರಾಮಕೃಷ್ಣ ಹೆಗ್ಡೆಯವರ ಮುಂದಾಳ್ತನದ ಜನತಾ ಸರಕಾರ ಅಧಿಕಾರಕ್ಕೇರಲು ಕಾರಣವಾಯ್ತು. ಜನತಾ ಸರ್ಕಾರ ರೈತರ ಮೇಲೆ ಹೇರಿದ್ದ ಅನ್ಯಾಯದ ತೆರಿಗೆಯನ್ನು ತೆಗೆದುಹಾಕಿತು. ಆದರೇನು, ರೈತರ ಜಮೀನಿಗೆ ನೀರು ಹರಿಯುವ ಕನಸು, ನನಸಾಗದೆ ಹಾಗೇ ಉಳಿಯಿತು.

ಮಹದಾಯಿ ಯೋಜನೆ

ಈ ನಡುವೆ ೧೯೭೫~೧೯೭೮ರ ನಡುವೆ ಗುಳೇದಗುಡ್ದದಿಂದ ಶಾಸಕರಾಗಿದ್ದ ಶ್ರೀ ಬಿ ಎಂ ಹೊರಕೇರಿಯವರು ಶ್ರೀ ಬಾಳೆಕುಂದ್ರಿಯವರ ಜೊತೆಗೂಡಿ ಮಲಪ್ರಭಾ ಅಣೆಕಟ್ಟೆ ತುಂಬಲು ಈಗಿರುವ ನೀರು ಸಾಲದು, ಇದಕ್ಕೆ ಪಶ್ಚಿಮಘಟ್ಟದ ಮಹದಾಯಿ ನದಿಯ ನೀರಿನಿಂದ, ಸಾಮಾನ್ಯ ಕೊರತೆಯನ್ನು ತುಂಬುವಷ್ಟು ನೀರನ್ನು ಮಲಪ್ರಭೆಗೆ ಹರಿಸಬೇಕು ಎನ್ನುವ ಯೋಜನೆಯನ್ನು ಮೊದಲ ಬಾರಿಗೆ ರೂಪಿಸಿ, ಫೆಬ್ರವರಿ ೧೯೭೬ರಲ್ಲಿ ವಿಧಾನ ಮಂಡಲದಲ್ಲಿ ಪ್ರಸ್ತಾಪ ಮಂಡಿಸಿದರು. ವಿರೋಧ ಪಕ್ಷದ ನಾಯಕರಾಗಿದ್ದ ಶ್ರೀ ಎಸ್. ಆರ್. ಬೊಮ್ಮಾಯಿ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಯ್ತು. ಈ ಸಮಿತಿಯು ಮಹದಾಯಿ ನದಿಯಿಂದ ನೀರನ್ನು ಮಲಪ್ರಭೆಗೆ ಸೇರಿಸುವ ಯೋಜನೆಯನ್ನು ಮಂಡಿಸಿತು.

೧೯೮೯ರಲ್ಲಿ ಶ್ರೀ ಎಸ್. ಆರ್ ಬೊಮ್ಮಯಿಯವರು ಮುಖ್ಯಮಂತ್ರಿಗಳಾದ ನಂತರ ಯೋಜನೆಗೆ ಚಾಲನೆ ಸಿಕ್ಕಿತು. ಬೆಳಗಾವಿ ಜಿಲ್ಲೆಯ ಖಾನಾಪುರದ ಸಮೀಪದ  ದೇವಗಾಂವ್ ಎಂಬಲ್ಲಿ ಹುಟ್ಟುವ ಮಹದಾಯಿ ನದಿಯು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ. ಕೇಂದ್ರೀಯ ನೀರು ಆಯೋಗದ ಪ್ರಕಾರ ಈ ನದಿಯಲ್ಲಿ ಸುಮಾರು ೧೮೦ರಿಂದ ೨೨೦ ಟಿಎಂಸಿ ನೀರಿದ್ದು ನದಿಪಾತ್ರದ ಹರವು (ಜಲಾನಯನ ಪ್ರದೇಶ: ಕರ್ನಾಟಕ – ೩೭೫ ಚ.ಕಿ.ಮಿ, ಮಹಾರಾಷ್ಟ್ರ – ೭೭ ಚ.ಕಿ,ಮಿ. ಗೋವಾ – ೧೫೮೦ ಚ.ಕಿ.ಮಿ), ಮಹದಾಯಿ ನದಿಗೆ ಹಲವಾರು ತೊರೆಗಳು, ಉಪನದಿಗಳಿವೆ. ಸರಳಾ ನದಿ, ಕೊಟ್ಟೆ, ಬಯಲುನಾಡು, ಬಂಡೂರಾ ನಾಲೆ, ಕಾರಂಜೋಳ ಇವುಗಳು ಪ್ರಮುಖವಾದವುಗಳು, ನದಿಗೆ ಸೇರುವ ನೀರಿನ ಲೆಕ್ಕದಂತೆ ಕರ್ನಾಟಕದ ಪಾಲು ಸುಮಾರು ೪೭ ಟಿಎಂಸಿಯಷ್ಟಿದೆ. ಈ ಕಾರಣದಿಂದಾಗಿ ಕರ್ನಾಟಕದ ಮಲಪ್ರಭೆಗೆ ಇಲ್ಲಿನ ನೀರು ಹರಿಯುವಂತೆ ಮಾಡುವುದು ಮತ್ತು ಇದಕ್ಕಾಗಿ ಅಣೆಕಟ್ಟನ್ನು ಕಟ್ಟುವುದು ಎಂದು ಯೋಜಿಸಿತು. ಆ ಮೂಲಕ ವಿದ್ಯುತ್ ಉತ್ಪಾದಿಸಿ, ಸದರಿ ವಿದ್ಯುತ್ತನ್ನು ಗೋವೆಗೆ ಕೊಡುವುದೆಂದೂ ನೀರನ್ನು ಮಲಪ್ರಭೆಗೆ ಹರಿಸುವುದೆಂದೂ ಯೋಜನೆ ಮಾಡಿಕೊಂಡು, ಅಂದು ಗೋವಾದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಪ್ರತಾಪ್ ಸಿಂಗ್ ರಾಣೆಯವರ ಸರ್ಕಾರದ ಜೊತೆಯಲ್ಲಿ ಒಪ್ಪಂದಕ್ಕೂ ಸಹಿ ಹಾಕಲಾಯಿತು. ದುರದೃಷ್ಟವಶಾತ್ ರಾಷ್ಟ್ರಪತಿಗಳ ಆಳ್ವಿಕೆ ಹೇರಲ್ಪಟ್ಟು ಬೊಮ್ಮಾಯಿಯವರ ಸರ್ಕಾರ ಬಿದ್ದುಹೋದದ್ದು ಇಡೀ ಯೋಜನೆ ನೆನೆಗುದಿಗೆ ಬೀಳಲು ಕಾರಣವಾಯ್ತು.

ಕಳಸಾ ಬಂಡೂರಿ ಯೋಜನೆ

kalasa-mapಮುಂದೆ ಎಸ್.ಎಂ ಕೃಷ್ಣ ಅವರ ಸರ್ಕಾರ ಅಧಿಕಾರಕ್ಕೆ ಬಂದು ಶ್ರೀ ಎಚ್. ಕೆ ಪಾಟೀಲರು ನೀರಾವರಿ ಸಚಿವರಾದ ನಂತರ ಮಹದಾಯಿ ನದಿಗೆ ತಿರುವು ಕೊಡುವುದಕ್ಕೆ ಗೋವಾ ಎತ್ತಿದ ತಕರಾರನ್ನು ಪರಿಗಣಿಸಿ, ಕಡೆಯ ಪಕ್ಷ ಹುಬ್ಬಳ್ಳಿ ಧಾರವಾಡ ಸೇರಿದಂತೆ ಹಲವು ಊರುಗಳ ಜನರಿಗೆ ಕುಡಿಯುವ ನೀರಿಗಾದರೂ ಅನುಕೂಲವಾಗಲೆಂದು, ಕರ್ನಾಟಕವು ತನ್ನ ನೆಲದಲ್ಲಿ ಹುಟ್ಟಿ ಮಹದಾಯಿಗೆ ಸೇರುವ ಸುಮಾರು ಹದಿನೆಂಟು ತೊರೆಗಳಲ್ಲಿ ಕೆಲವುಗಳನ್ನು ಜಾಲವಾಗಿಸಿ, ಬಂಡೂರಾ ನಾಲಾ, ಸಿಂಗಾರ ನಾಲಾ ಮತ್ತು ನರ್ಸಾ ನಾಲೆಗಳಿಂದ ನೀರನ್ನು ಬಂಡೂರಾ ಸಮೀಪದ ಕಟ್ಟಲಾಗುವ ಅಣೆಕಟ್ಟೆಗೆ ಹರಿಸಿ ಅಲ್ಲಿಂದ ಮಲಪ್ರಭ ನದಿಗೆ ಸೇರಿಸುವ ಯೋಜನೆಯನ್ನೂ ರೂಪಿಸಲಾಯಿತು. ಇದಕ್ಕಾಗಿ ಬಂಡೂರಿಯಲ್ಲೊಂದು ಅಣೆಕಟ್ಟೆ ಕಟ್ಟುವುದೆಂದು ತೀರ್ಮಾನಿಸಲಾಯಿತು. ಇದರಿಂದಾಗಿ ಕಳಸಾ ನಾಲೆಯಿಂದ ೩.೫೬ ಟಿಎಂಸಿ (ಕಳಸಾದಿಂದ ೨.೧೬ ಟಿಎಂಸಿ, ಸುರ್ಲಾ ನಾಲೆಯಿಂದ ೦.೫೫ ಹಲ್ತಾರದಿಂದ ೦.೮೫ ಟಿಎಂಸಿ) ಹಾಗೂ ಬಂಡೂರಿಯಿಂದ ೪ ಟಿಎಂಸಿ ನೀರನ್ನು ಪಡೆಯಲು ಯೋಜಿಸಲಾಯ್ತು. ಇದಕ್ಕಾಗೆ ಕಳಸ ಮತ್ತು ಬಂಡೂರಿ ಎಂಬ ಎರಡು ಕಡೆ ಅಣೆಕಟ್ಟುಗಳನ್ನು ನಿರ್ಮಿಸಲು ಉದ್ದೇಶಿಸಲಾಯ್ತು.

ಕಾಲಾಂತರದಲ್ಲಿ ಇದಕ್ಕೆ ದೊರೆತ ಹುಸಿಪ್ರಚಾರದಿಂದಾಗಿ ಮಹದಾಯಿ ಯೋಜನೆ ಎರಡೂ ರಾಜ್ಯಗಳಲ್ಲಿ ರಾಜಕೀಯ ಬಣ್ಣ ಪಡೆದುಕೊಂಡು ಇದನ್ನು ಗೋವಾ ವಿರೋಧಿಸಲು ಮುಂದಾಯಿತು. ಮಹದಾಯಿಯಲ್ಲಿರುವ ೨೧೦ ಟಿಎಂಸಿ ನೀರಲ್ಲಿ ಕರ್ನಾಟಕದ ನ್ಯಾಯಯುತವಾದ ಪಾಲು ೪೭ ಟಿಎಂಸಿ ನೀರನ್ನು ಕರ್ನಾಟಕ ಬಳಸಿಕೊಳ್ಳುವುದಕ್ಕೆ ಗೋವಾ ತಕರಾರು ಎತ್ತುತ್ತಿರುವುದಕ್ಕೆ – ಈ ಯೋಜನೆಯಿಂದಾಗಿ ಗೋವಾದ ಜೈವಿಕ ವೈವಿಧ್ಯಕ್ಕೆ ಧಕ್ಕೆತರುವ ಮಟ್ಟದಲ್ಲಿ ಅರಣ್ಯ ನಾಶವಾಗಲಿದೆ ಎನ್ನುವುದು, ಗೋವಾದ ಸಾಂಪ್ರದಾಯಿಕ ಸಿಹಿನೀರು ಮೀನುಗಾರಿಕೆಗೆ ಧಕ್ಕೆಯಾಗುತ್ತದೆ ಎನ್ನುವುದು ಪ್ರಮುಖವಾದ ಕಾರಣಗಳಾಗಿದ್ದವು. ನ್ಯಾಷನಲ್ ಎನ್ವಿರಾನ್ಮೆಂಟ್ ಎಂಜಿನಿಯರಿಂಗ್ ರೀಸರ್ಚ್ ಇನ್ಸ್ಟಿಟ್ಯೂಟ್ (ನೀರಿ) ಸಂಸ್ಥೆಯು ಅಧ್ಯಯನ ನಡೆಸಿ ಕರ್ನಾಟಕದ ಈ ಯೋಜನೆ ಪರಿಸರಕ್ಕೆ ಹಾನಿ ಮಾಡದೆಂದು ವರದಿಯನ್ನು ನೀಡಿತು. ಇದಕ್ಕೆ ಗೋವಾ ತಕರಾರು ಎತ್ತಿ ಸದರಿ ಅಧ್ಯಯನವನ್ನು ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಒಶನಾಲಜಿ ಸಂಸ್ಥೆಯೇ ಮಾಡಬೇಕೆಂದಿತು. ಆ ಸಂಸ್ಥೆಯೂ ಕೂಡಾ ನೀರಿ ವರದಿಯನ್ನು ಅಕ್ಷರಶಃ ಅನುಮೋದಿಸಿತು. ಗೋವಾ ರಾಜ್ಯವು ಅರಣ್ಯ ಇಲಾಖೆ, ಪರಿಸರ ಇಲಾಖೆಗಳ ಅನುಮೋದನೆಯಲ್ಲೂ ಕೈಯ್ಯಾಡಿಸಿತು. ಒಂದು ಹಂತದಲ್ಲಿ ಗೋವಾ ಅರಣ್ಯ ಇಲಾಖೆಯ ಅನುಮೋದನೆಯನ್ನು ಕರ್ನಾಟಕಕ್ಕೆ ತಲುಪಿಸುವುದನ್ನು ಕೂಡಾ ವಿಳಂಬಿಸುವ ಕುತಂತ್ರ ಮಾಡಿತು ಎನ್ನುತ್ತಾರೆ ಅಂದಿನ ನೀರಾವರಿ ಮಂತ್ರಿಗಳಾಗಿದ್ದ ಶ್ರೀ ಎಚ್. ಕೆ ಪಾಟೀಲರು. ಕರ್ನಾಟಕವು ಕೇಂದ್ರಸರ್ಕಾರದ ಜೊತೆ ನಿರಂತರ ಸಂವಾದ ನಡೆಸಿ ಅನುಮತಿಯನ್ನು ಪಡೆದುಕೊಂಡಿತು. ಕೇಂದ್ರದ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಮುಂದಾಳ್ತನದ ಸರ್ಕಾರ ಕುಡಿಯುವ ನೀರಿಗಾಗಿ ಸದ್ಯಕ್ಕೆ ೭.೫೬ ಟಿಎಂಸಿ ನೀರು ಬಳಸಿಕೊಳ್ಳುವ ಕಳಸಾ ಬಂಡೂರ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿತು. ಅದರಂತೆ ಮುಂದೆ ನದಿನೀರು ಹಂಚಿಕೆಯಾದಾಗ ದೊರೆಯುವ ೪೭ ಟಿಎಂಸಿ ನೀರಿನಲ್ಲಿ ೭.೫೬ ಟಿಎಂಸಿಯನ್ನು ಕಳೆದುಕೊಂಡು ಬಾಕಿ ಹಂಚಿಕೆ ಮಾಡಬಹುದು, ಮಾನ್ಸೂನ್ ಋತುವಿನಲ್ಲಿ ಅಂದರೆ ಮಳೆಗಾಲದಲ್ಲಿ ಮಾತ್ರಾ ನೀರನ್ನು ಹರಿಸಿಕೊಳ್ಳಬಹುದೆಂಬ ಕರಾರುಗಳು ಅದರಲ್ಲಿತ್ತು.

ಆದರೆ ಗೋವಾ ರಾಜ್ಯವು ಎಲ್ಲಾ ವೈಜ್ಞಾನಿಕ ಅಧ್ಯಯನದ ವರದಿಗಳ ಮೇಲೂ ಅವಿಶ್ವಾಸ ವ್ಯಕ್ತಪಡಿಸುತ್ತಾ ಯೋಜನೆಯನ್ನು ವಿರೋಧಿಸಿತು. ಈ ವಿರೋಧದ ಕಾರಣದಿಂದಾಗಿ ತಾನೇ ನೀಡಿದ್ದ ತಾತ್ವಿಕ ಒಪ್ಪಿಗೆಯನ್ನು ನಾಲ್ಕೇ ತಿಂಗಳ ಅಂತರದಲ್ಲಿ ಭಾರತ ಸರ್ಕಾರ ವಾಪಸ್ಸು ಪಡೆದುಕೊಂಡಿತು. ಇದಾದ ನಂತರ ಗೋವಾ ನಿರಂತರವಾಗಿ ವಿರೋಧ ತೋರಿಸುತ್ತಲೇ ನದಿನೀರು ಹಂಚಿಕಗಾಗಿ ಟ್ರಿಬ್ಯೂನಲ್ ಒಂದನ್ನು ರಚಿಸುವಂತೆ ಬೇಡಿಕೆಯಿಟ್ಟಿತು. ಇತ್ತ ಕರ್ನಾಟಕದಲ್ಲಿ ಜಾತ್ಯಾತೀತ ಜನತಾದಳ ಮತ್ತು ಭಾರತೀಯ ಜನತಾ ಪಕ್ಷಗಳ ಜಂಟಿ ಸರ್ಕಾರ ಶ್ರೀ ಕುಮಾರಸ್ವಾಮಿಯವರ ಮುಂದಾಳ್ತನದಲ್ಲಿ ಅಧಿಕಾರಕ್ಕೆ ಬಂತು. ಅಂದು ನೀರಾವರಿ ಮಂತ್ರಿಗಳಾಗಿದ್ದ ಶ್ರೀ ಕೆ ಎಸ್ ಈಶ್ವರಪ್ಪನವರು ೨೦೦೬ರಲ್ಲಿ ಕಣಕುಂಬಿಯಲ್ಲಿ ಕಳಸಾ ಬಂಡೂರಾ ನಾಲೆಯ ಯೋಜನೆಗೆ ಶಂಕುಸ್ಥಾಪನೆಯನ್ನೂ ಮಾಡಿದರು. ಇದುವರೆವಿಗೆ ಕರ್ನಾಟಕ ಸರ್ಕಾರವೂ ಕೂಡಾ ಮಹದಾಯಿಯ ನೀರನ್ನು ಕೃಷಿಗಾಗಿ ಎಂಬುದಾಗಿ ಎಲ್ಲಿಯೂ ಕೇಳಿಲ್ಲದಿರುವುದರಿಂದ ಇದನ್ನು ಬರಿಯ ಕುಡಿಯುವ ನೀರಿನ ಯೋಜನೆಯೆಂದೇ ಪರಿಗಣಿಸುವಂತಾಯ್ತು. ಕಣಕುಂಬಿಯಲ್ಲಿನ ಶಂಕುಸ್ಥಾಪನೆಯಿಂದ ಕನಲಿದ ಗೋವಾ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ಮುಂದೆ ಮತ್ತೆ ದೂರನ್ನು ಒಯ್ದಿತು. ಮೂರೂ ರಾಜ್ಯಗಳ ಒಪ್ಪಿಗೆಯ ನಂತರ, ೨೦೦೯ರಲ್ಲಿ ಮಹದಾಯಿ ನದಿನೀರು ಹಂಚಿಕೆಗಾಗಿ ನ್ಯಾಯಾಧಿಕರಣವನ್ನು ರಚಿಸುವಂತೆ ಸರ್ವೋಚ್ಚ ನ್ಯಾಯಾಲಯ ನಿರ್ದೇಶಿಸಿತು. ಇದರಂತೆ ಭಾರತ ಸರ್ಕಾರ ೨೦೧೦ರಲ್ಲಿ ನ್ಯಾಯಾಧಿಕರಣದ ಸ್ಥಾಪನೆಯನ್ನೂ ಮಾಡಿತು.

ನ್ಯಾಯಾಧಿಕರಣದತ್ತ ಮಹದಾಯಿ

ಮಹದಾಯಿಯಲ್ಲಿ ನಮ್ಮ ಪಾಲು ೪೭ ಟಿಎಂಸಿಯಷ್ಟಿದ್ದರೂ, ಕರ್ನಾಟಕದ ರೈತ ಸಮುದಾಯ ಬಳಸಲು ಬಯಸುತ್ತಿರುವುದು ಇದಿಷ್ಟೂ ನೀರನ್ನಲ್ಲ. ಮಲಪ್ರಭೆಗೆ ಕೊರತೆಯಿರುವ ೧೬ ಟಿಎಂಸಿ ನೀರನ್ನು ಮಾತ್ರಾ. ಕರ್ನಾಟಕ ಸರ್ಕಾರ ತನ್ನ ಯೋಜನೆಯಲ್ಲಿ ಕೇಳಿದ್ದು ಕುಡಿಯುವ ಸಲುವಾಗಿ ೭.೫೬ ಟಿಎಂಸಿ, ಕಾಳಿ ನದಿ ಯೋಜನೆಗಾಗಿ ೫.೨೫, ೧೫ ಟಿಎಂಸಿ ಮಹದಾಯಿ ಪಾತ್ರದಲ್ಲಿ ಜಲವಿದ್ಯುತ್ ಯೋಜನೆಗಾಗಿ ೧೫ ಟಿಎಂಸಿ ಸೇರಿದಂತೆ ಒಟ್ಟಾಗಿ ೨೪ ಟಿಎಂಸಿ ನೀರನ್ನು ಬಳಸಲು ಯೋಜನೆಯನ್ನು ರೂಪಿಸಿ ಅಷ್ಟನ್ನು ಬೇಡಿತು. ಇದುವರೆವಿಗೂ ಕರ್ನಾಟಕ ಸರ್ಕಾರ, ನೀರಾವರಿಗಾಗಿ ಮಹದಾಯಿ ನೀರು ಬೇಕೆಂಬುದಾಗಿ ಎಲ್ಲಿಯೂ ಕೇಳಿರಲಿಲ್ಲ ಎನ್ನುತ್ತಾರೆ ಹೋರಾಟಗಾರರು. ನಮ್ಮ ರಾಜ್ಯಕ್ಕೆ ಪರಿಶೀಲನೆಗೆ ಭೇಟಿ ಕೊಟ್ಟ ಅಧಿಕಾರಿಗಳ ತಂಡ, ಯಾಕಾಗಿ ನೀವು ಕಾಲುವೆ ತೋಡುತ್ತಿದ್ದೀರಿ ಎಂದಾಗ ಸರ್ಕಾರವು ಕಳಸಾ ನಾಲೆಯಿಂದ ಬರುವ ಹೆಚ್ಚುವರಿ ನೀರಿಗಾಗಿ ಎಂದಿತ್ತು. ಕೊನೆಗೆ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಅಲ್ಲೊಂದು ತಡೆಗೋಡೆಯನ್ನು ಕಟ್ಟಿತು. ಆ ಮೂಲಕ ಸಾಂಕೇತಿಕವಾಗಿ ತಾನು ನೀರನ್ನು ಅಕ್ರಮವಾಗಿ ಹರಿಸುವುದಿಲ್ಲ ಎಂಬುದನ್ನು ಸಾರಿತು. ಇದೇ ಅಧಿಕಾರಿಗಳ ಸಮ್ಮುಖದಲ್ಲಿ ರೈತ ಮುಖಂಡರು ಕರ್ನಾಟಕ ಸರ್ಕಾರವು ನೀರಾವರಿಗಾಗಿ ನೀರನ್ನು ಕೇಳಿಲ್ಲದಿರುವುದನ್ನು ಗಮನಕ್ಕೆ ತಂದಾಗ, ಅದಕ್ಕಾಗಿ ಬೇಡಿಕೆ ಇಟ್ಟಲ್ಲಿ ಪರಿಗಣಿಸಬಹುದು ಎಂದು ಅಧಿಕಾರಗಳು ನುಡಿದು, ಅದರ ಆಧಾರದ ಮೇಲೆ ಬೇಡಿಕೆಗೆ ತಿದ್ದುಪಡಿಯನ್ನು ಮಾಡಿಸಲಾಯಿತು. ನದಿನೀರು ಹಂಚಿಕೆಯಲ್ಲಿ ಆದ್ಯತೆಯ ಲೆಕ್ಕದಲ್ಲಿ ಮೊದಲಿಗೆ ಕುಡಿಯುವ ನೀರು, ನಂತರ ವ್ಯವಸಾಯ, ಮೀನುಗಾರಿಕೆ, ಜಲಸಾರಿಗೆ ಮತ್ತು ಕೈಗಾರಿಕೋದ್ಯಮ ಬರುತ್ತದೆ. ಇದರ ಅರ್ಥ ನೀರಾವರಿಗೆ ಕೇಳಬಾರದು ಅಂತೇನಿಲ್ಲ. ಕರ್ನಾಟಕದ ಬೇಡಿಕೆಯಲ್ಲಿ ನೀರಾವರಿಗಾಗಿ ನೀರನ್ನು ೨೦೧೪ರ ಡಿಸೆಂಬರ್ ತಿಂಗಳಲ್ಲಿ ಸೇರಿಸಲಾಯ್ತು. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಅದುವರೆವಿಗೆ ಆಗಿದ್ದ ಕಳಸಾ ಬಂಡೂರ ನಾಲೆಯ ಕಾಮಗಾರಿ ನಿಂತುಹೋಯಿತು.

ಮಹದಾಯಿ ನ್ಯಾಯಾಧಿಕರಣವನ್ನು ೨೦೧೦ರಲ್ಲಿ ಶುರುಮಾಡಿ ಅದಕ್ಕೆ ಆರು ವರ್ಷಗಳ ಕಾಲಾವಧಿಯನ್ನು ನೀಡಲಾಯಿತು. ಬಹುದಿನಗಳ ಕಾಲ ನ್ಯಾಯಾಧಿಕರಣಕ್ಕೆ ಸೂಕ್ತ ಸವಲತ್ತುಗಳನ್ನು ಒದಗಿಸದ ಕಾರಣ ವಿಚಾರಣೆಯೇ ಮಂದಗತಿಯಲ್ಲಿ ಸಾಗುತ್ತಿತ್ತು. ಇದೇ ಹೊತ್ತಿನಲ್ಲಿ ನರಗುಂದ ಭಾಗದ ರೈತರು “ರೈತ ಸೇನೆ ಕರ್ನಾಟಕ”ದ ಹೆಸರಿನ ಸಂಘಟನೆಯನ್ನು ಮಾಡಿಕೊಂಡು ಮಹದಾಯಿ ನೀರಿಗಾಗಿ ಹೋರಾಟ ಶುರುಮಾಡಿದರು. ಈ ಹೋರಾಟ ಸಮಿತಿಯ ವತಿಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಅಕ್ಟೋಬರ್ ೩, ೨೦೧೩ರಂದು ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯನ್ನು ಹೂಡಲಾಗಿ ನ್ಯಾಯಾಧಿಕರಣದ ಚಟುವಟಿಕೆ ಚುರುಕುಗೊಂಡಿತು. ಇದಾದ ನಂತರ ರೈತಸೇನೆ ತನ್ನ ಅರ್ಜಿಯನ್ನು ಹಿಂಪಡೆಯಿತು.

ರೈತರ ಹೋರಾಟ: ಮಹದಾಯಿ ವರುಶದ ಕೂಗು

ಜುಲೈ ೧೬, ೨೦೧೫ರಂದು ರೈತ ಸೇನೆ ಕರ್ನಾಟಕದ ವತಿಯಿಂದ ಕಳಸಾ ಬಂಡೂರ ಹೋರಾಟ ಸಮನ್ವಯ ಸಮಿತಿಯು ನರಗುಂದದ ರೈತ ಸ್ಮಾರಕದ ಎದಿರು ಧರಣಿ ಸತ್ಯಾಗ್ರಹವನ್ನು ಶುರುಮಾಡಿತು. ಈ ಪ್ರತಿಭಟನೆಗೆ ಇದೀಗ ಒಂದು ವರ್ಷ ತುಂಬಲಿದೆ. ಇಷ್ಟು ಸಮಯದಲ್ಲಿ ಮಲಪ್ರಭೆಯಲ್ಲಿ ಸಾಕಷ್ಟು ನೀರು ಹರಿದುಹೋಯಿತು ಎನ್ನಲಾಗದಂತೆ ಇಲ್ಲಿ ನೀರೇ ಇಲ್ಲದ ಪರಿಸ್ಥಿತಿ ಇನ್ನೂ ಇರುವುದು ದುರಂತ.

ಧರಣಿ ಸತ್ಯಾಗ್ರಹ ಶುರುವಾದ ಮೂರ್ನಾಲ್ಕು ದಿನಗಳ ಕಾಲ ನೀರಸವಾಗಿದ್ದ ಜನಸ್ಪಂದನೆ ನಂತರ ತುರುಸು ಪಡೆಯಿತು. ಸಾವಿರಾರು ಜನರು ಬಂದು ಸೇರತೊಡಗಿದರು. ೬೦೦ಕ್ಕೂ ಹೆಚ್ಚು ಸಂಘಸಂಸ್ಥೆಗಳು ಈ ಹೋರಾಟಕ್ಕೆ ಬೆಂಬಲ ಕೊಟ್ಟವು. ೩೭ನೇ ದಿವಸ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಯಿತು. ಹಿಂದೆ ತೆಲುಗುಗಂಗಾ, ನರ್ಮದಾ, ಚನ್ನೈಗೆ ಕೃಷ್ಣಾ ನೀರು ಕೊಟ್ಟ ಘಟನೆಗಳ ಉದಾಹರಣೆಯ ಹಿನ್ನೆಲೆಯಲ್ಲಿ ಮಹದಾಯಿ ವಿವಾದವನ್ನು ಪ್ರಧಾನಮಂತ್ರಿಗಳ ಮಧ್ಯಸ್ಥಿಕೆಯಲ್ಲಿ ಬಗೆಹರಿಸಬೇಕೆಂಬ ಮನವಿ ನೀಡಲಾಯಿತು. ಉಪವಾಸ, ಧರಣಿ ಮೊದಲಾದವುಗಳ ಬೆನ್ನಲ್ಲೇ ಸುಮಾರು ೭೩೦ ಕಿಮೀ ದೂರದಷ್ಟು ಜಾಗೃತಿ ಜಾಥಾವನ್ನು ಕೂಡಲ ಸಂಗಮದಿಂದ ಕಣಕುಂಬಿಯವರೆಗೆ, ಮಹದಾಯಿ ಜಲಾನಯನ ಪ್ರದೇಶದ ನೂರೈವತ್ತಾರು ಹಳ್ಳಿಗಳ ಮೂಲಕ ನಡೆಸಲಾಯ್ತು. ಚಳವಳಿಯ ಅಂಗವಾಗಿ ರಾಜಧಾನಿ ಬೆಂಗಳೂರಲ್ಲಿ ಒಂದುವಾರ ಕಾಲ ಧರಣಿ ಸತ್ಯಾಗ್ರಹವನ್ನು ನಡೆಸಲಾಯ್ತು. ಆಗಸ್ಟ್ ೨೪ರಂದು ಪ್ರಧಾನಮಂತ್ರಿಗಳನ್ನು ಭೇಟಿಮಾಡಿ ಮಧ್ಯಸ್ಥಿಕೆ ವಹಿಸುವಂತೆ ಕೋರಲು ಒಂದು ನಿಯೋಗವನ್ನು ದೆಹಲಿಗೆ ಒಯ್ದು ಭೇಟಿ ಮಾಡಲಾಯಿತಾದರೂ ಅದರಿಂದ ನಿರೀಕ್ಷಿತ ಫಲವೇನೂ ಸಿಗಲಿಲ್ಲ. ಆ ಭಾಗದ ಸಂಸದರ, ಪ್ರಮುಖ ರಾಜಕಾರಣಿಗಳಿಗೆ ಘೇರಾವ್ ಹಾಕುವ ಮೂಲಕ, ಮುತ್ತಿಗೆ ಹಾಕುವ ಕಾರ್ಯಕ್ರಮಗಳೂ ನಡೆದವು. ರೈಲು ತಡೆಯ ಕಾರ್ಯಕ್ರಮಗಳೂ ನಡೆದವು. ನರಗುಂದದ ರೈತ ಹುತಾತ್ಮ ಮೈದಾನದಲ್ಲಿ ರೈತ ಸೇನೆಯ ವತಿಯಿಂದ ದಿನಾಂಕ ೨೧ನೇ ಜುಲೈ ೨೦೧೫ರಿಂದ ನಡೆಸಲಾಗುತ್ತಿರುವ ಮಹದಾಯಿಗಾಗಿ ಹೋರಾಟವು ವಾಸ್ತವವಾಗಿ ಬರಿಯ ಕಳಸ ಬಂಡೂರಿ ಹೋರಾಟವಲ್ಲ. ಇದು ೭.೫೬ ಟಿಎಂಸಿ ಪ್ರಮಾಣದ ಕುಡಿಯುವ ನೀರಿಗಾಗಿ ನಡೆಯುತ್ತಿರುವ ಹೋರಾಟವಲ್ಲ. ಇದು ೧೯೬೨ರಲ್ಲೇ ಯೋಜಿಸಿ ಅಣೆಕಟ್ಟೆ ಕಟ್ಟಿ, ಕಾಲುವೆಗಳನ್ನು ತೋಡಿ, ನೀರಾವರಿ ಪ್ರದೇಶವೆಂದು ಕರ ವಸೂಲಿ ಮಾಡಿ ಮೂಗಿಗೆ ತುಪ್ಪ ಸವರಿದ ಮೂಲ ಮಲಪ್ರಭಾ ಯೋಜನೆಯನ್ನು, ಮಹದಾಯಿ ನೀರನ್ನು ತರುವ ಮೂಲಕ ಸಂಪೂರ್ಣವಾಗಿ ಜಾರಿಮಾಡಬೇಕೆಂದು ನಡೆಸುತ್ತಿರುವ ಹೋರಾಟ.

ನರಗುಂದ ಹೋರಾಟಗಾರರು, ಕೆಲ ಸ್ವಘೋಷಿತ ನಾಯಕರುಗಳು ಕಳಸಾ ನಾಲೆಯ ಗೋಡೆ ಒಡೆದೆವು, ಒಡೆಯುತ್ತೇವೆ ಮುಂತಾಗಿ ನೀಡುವ ಹೇಳಿಕೆಗಳನ್ನು ಹೋರಾಟದ ದಾರಿ ತಪ್ಪಿಸುವ ದುರುದ್ದೇಶದ ಕ್ರಮ ಎಂದೇ ಪರಿಗಣಿಸುತ್ತಾರೆ. ಹಾಗೆ ಗೋಡೆ ಒಡೆಯುವುದರಿಂದ ನೀರು ಸಿಗುವುದಾದರೆ ರೈತರು ಈ ಕೆಲಸವನ್ನು ಯಾವಾಗಲೋ ಮಾಡುತ್ತಿದ್ದರು. ನಮ್ಮ ಹೋರಾಟವಿರುವುದು ಸರ್ಕಾರಗಳು ನ್ಯಾಯಾಧಿಕರಣದ ಕಲಾಪಗಳನ್ನು ಬೇಗ ಬೇಗ ಮಾಡುವಂತೆ ಎಲ್ಲಾ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸುವುದಕ್ಕಾಗಿ ಮಾತ್ರಾ ಎನ್ನುತ್ತಾರೆ. ಇದುವರೆವಿಗೆ ಮಹದಾಯಿ ನೀರು ತರುತ್ತೇವೆ ಎಂದು ಭಾವುಕವಾಗಿ ಮಾತನ್ನಾಡಿ ಜನರಿಂದ ಮತ ಗಳಿಸಿ ಗೆದ್ದ ರಾಜಕಾರಣಿಗಳನ್ನು ನಂಬದೆ, ನ್ಯಾಯಾಲಯದ ತೀರ್ಪಷ್ಟೇ ನಂಬಿ ಇನ್ಮುಂದೆ ಯಾವುದೇ ರಾಜಕಾರಣಿ ಮಹದಾಯಿಯನ್ನು ಮತಕ್ಕಾಗಿ ಬಳಸಿಕೊಳ್ಳದಂತೆ ನೋಡಿಕೊಳ್ಳುತ್ತೇವೆ ಎನ್ನುತ್ತಾರೆ, ಈ ನಡುವೆ ಕೆಲವು ನಾಯಕರು ಮಹದಾಯಿ ಹೋರಾಟವನ್ನು ಬಳಸಿಕೊಂಡು ಪ್ರತ್ಯೇಕತೆಯ ಮಾತನ್ನಾಡಿರುವುದನ್ನು ಖಂಡಿಸಿ “ಬೇರೆ ರಾಜ್ಯವಾದರೆ ಮಹದಾಯಿ ಬಂದುಬಿಡುತ್ತಾಳೇನು? ಇದೆಲ್ಲಾ ಕಿಡಿಗೇಡಿತನಕ್ಕೆ ನಮ್ಮ ಸಹಮತವಿಲ್ಲ” ಎನ್ನುತ್ತಾರೆ ಶಂಕರಪ್ಪ ಅಂಬಲಿಯವರು. ಈ ಹೋರಾಟ ಆರಂಭವಾದಂದಿನಿಂದ ನಮ್ಮ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳವರೂ ಬಂದು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಎನ್ನುವ ಇವರು, ಹಾಗಾದರೆ ಯೋಜನೆಯನ್ನು ಜಾರಿಮಾಡಬೇಕಾದವರು ಇವರಲ್ಲದೆ ಪಾಕಿಸ್ತಾನದವರಾ? ಅಥವಾ ಅಮೇರಿಕದವರಾ? ಎನ್ನುವ ಮೂಲಕ ಎಲ್ಲಾ ರಾಜಕೀಯ ಪಕ್ಷಗಳ ಬಣ್ಣ ಬಯಲು ಮಾಡುತ್ತಾರೆ. ಈ ಹೋರಾಟವನ್ನು ಹತ್ತಿಕ್ಕುವ, ನಾಯಕರುಗಳನ್ನು ಬಗ್ಗುಬಡಿಯುವ ಅನೇಕ ಯತ್ನಗಳು ನಡೆದಿವೆ, ಇವಕ್ಕೆಲ್ಲಾ ನಾವು ಬಗ್ಗುವುದಿಲ್ಲಾ ಎನ್ನುತ್ತಾರೆ ಅಂಬಲಿಯವರು. ಪ್ರಧಾನಮಂತ್ರಿಯವರು ಮಧ್ಯಸ್ಥಿಕೆ ವಹಿಸಲು ನಿರಾಕರಿಸಲು ಕಾರಣ ಮಹದಾಯಿ ಸಮಸ್ಯೆಯನ್ನು ವಿವರಿಸಲು ನಮ್ಮ ಸಂಸದರು ಎಡವಿದ್ದೇ ಕಾರಣ ಎನ್ನುತ್ತಾರೆ. ಇದೇ ಸಮಯದಲ್ಲಿ ಈ ಹೋರಾಟದ ಒಂದುವರ್ಷದ ಅವಧಿಯಲ್ಲಿ ಪ್ರಾಣ ಬಿಟ್ಟ ಧರ್ಮಣ್ಣ ಮತ್ತು ಚಿತ್ತರಂಜನ್ ಎಂಬುವರ ತ್ಯಾಗವನ್ನೂ ನೆನೆಯುತ್ತಾರೆ.

ಮುಂದಿನ ನಡೆ

ಕರ್ನಾಟಕ ಸರ್ಕಾರ ತನ್ನ ವಿಸ್ತೃತ ಮೂಲಯೋಜನೆಯಲ್ಲಿ ಹುಬ್ಬಳ್ಳಿ ಧಾರವಾಡದ ಕುಡಿವ ನೀರಿಗಾಗಿ ೨.೫ ಟಿಎಂಸಿ ಬೇಕು ಎಂಬುದಾಗಿ ಹೇಳಿದ್ದರೂ ವಾಸ್ತವವಾಗಿ ಇಂದು ಅದಕ್ಕಿಂತ ಹೆಚ್ಚು ನೀರು ಬಳಕೆಯಾಗುತ್ತದೆ. ಇಂದಿನ ಲೆಕ್ಕದಲ್ಲಿ ಈ ಭಾಗದ ಜನರ ಕುಡಿಯುವ ನೀರಿನ ಅಗತ್ಯಕ್ಕಾಗೇ ಸುಮಾರು ೧೫ ಟಿಎಂಸಿಯಷ್ಟು ನೀರು ಬೇಕು. ಇನ್ನು ನೀರಾವರಿಗೆ ನೀರೆಲ್ಲಿದೆ ಎನ್ನುವುದು ರೈತ ಹೋರಾಟಗಾರರ ಪ್ರಶ್ನೆ. ಇದೀಗ ಕಾನೂನು ಹೋರಾಟದಲ್ಲಿ ತಾನೂ ತೊಡಗಿಕೊಳ್ಳುವ ಮೂಲಕ, ಸರ್ಕಾರ ತಪ್ಪುಹಾದಿ ಹಿಡಿಯದಂತೆ ಕಾಯುವ ಕೆಲಸವನ್ನು ಒಂದೆಡೆ ಮಾಡುತ್ತಿದ್ದರೆ ಮತ್ತೊಂದೆಡೆ ಜನರಲ್ಲಿ ಅವರಿಗೆ ಆಗಿರುವ ಅನ್ಯಾಯದ ಬಗ್ಗೆ ಜಾಗೃತಿಯನ್ನು ಮೂಡಿಸುವತ್ತ ಗಮನ ಹರಿಸಿದೆ. ಈಗ ಹೋರಾಟಗಾರರ ಗಮನ ಮಹದಾಯಿ ನ್ಯಾಯಾಧಿಕರಣ ನೀಡಬಹುದಾದ ತೀರ್ಪಿನತ್ತ ನೆಟ್ಟಿದೆ. ಇದೇ ಜುಲೈ ೧೨ರಂದು ಆಯೋಗಕ್ಕೆ ವಿಚಾರಣೆ ಮುಂದೂಡಲು ಮನವಿ ಸಲ್ಲಿಸುವ ಮೂಲಕ ನ್ಯಾಯಾಧಿಕರಣದ ಕೆಂಗಣ್ಣಿಗೆ ಗುರಿಯಾದ ಗೋವಾದ ಬೂಟಾಟಿಕೆಯನ್ನು ಬಯಲುಮಾಡಬೇಕಾಗಿದೆ. ಪರಿಸರ ನಾಶವಾಗುವುದೆನ್ನುವ ಕಾರಣವನ್ನು ಮುಂದಿಟ್ಟಿರುವ ಇದೇ ಗೋವಾ, ಮಹದಾಯಿ ನದಿಯ ತಟದಲ್ಲಿ ಜಲವಿದ್ಯುತ್ ಯೋಜನೆ ಯೋಜಿಸಿರುವ, ಜಲಸಾರಿಗೆಗಾಗಿ ನಾಲೆ ತೋಡಿರುವ, ಬೆಳಗಾವಿ ಪಣಜಿಯ ನಡುವೆ ರಸ್ತೆ ಅಗಲಿಸುವ ಕೆಲಸಕ್ಕಾಗಿ ೪೦೦೦ಕ್ಕೂ ಹೆಚ್ಚು ಮರಗಳನ್ನು ಕಡಿಯುವುದಕ್ಕೆ ಕೇಂದ್ರವು ಒಪ್ಪಿಗೆ ಕೊಡುವಾಗ ತೋರಿಸದ ಕಾಳಜಿಯನ್ನು ಮಹದಾಯಿ ಯೋಜನೆ ಮಾಡುವಾಗ ಯಾಕೆ ತೋರಿಸುತ್ತಿದೆ ಎನ್ನುವುದನ್ನು ಬಯಲುಮಾಡಬೇಕಿದೆ. ಬರುವ ನವೆಂಬರ್ ತಿಂಗಳ ೨೦ನೇ ತಾರೀಕಿಗೆ ಈ ನ್ಯಾಯಾಧಿಕರಣಕ್ಕೆ ಆರು ವರ್ಷವಾಗಲಿದ್ದು ಅವಧಿ ಪೂರ್ಣಗೊಳ್ಳಲಿದೆ. ಈಗ ಮುಂದಿರುವ ಆಯ್ಕೆಯೆಂದರೆ ಹೆಚ್ಚುವರಿ ಅವಧಿ ನೀಡುವುದು ಅಥವಾ ನವೆಂಬರ್ ಇಪ್ಪತ್ತಕ್ಕೆ ಮೊದಲು ತೀರ್ಪು ನೀಡುವುದು ಮಾತ್ರವೇ ಆಗಿದೆ. ಹೀಗೆ ಅವಧಿಯನ್ನು ನ್ಯಾಯಾಧಿಕರಣದ ಅವಧಿಯನ್ನು ವಿಸ್ತರಿಸುವುದಕ್ಕೆ ರೈತ ಮುಖಂಡರು ವಿರೋಧ ತೋರಿಸುತ್ತಾ ನವೆಂಬರ್ ೨೦ಕ್ಕೆ ಮೊದಲೇ ತೀರ್ಪು ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಕರ್ನಾಟಕದ ಜನಪ್ರತಿನಿಧಿಗಳು ಗೋವಾದ ಜೊತೆ, ಪ್ರಧಾನಮಂತ್ರಿಗಳ ಮಧ್ಯಸ್ಥಿತಿಯ ಮೂಲಕ ಮಾತುಕತೆಯನ್ನಾಡಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿನ ಜನಪ್ರತಿನಿಧಿಗಳ ವಿರುದ್ಧವಾಗಿ ಪ್ರತಿಭಟಿಸುವ, ಹಳ್ಳಿಹಳ್ಳಿಗಳಿಗೆ ರಾಜಕಾರಣಿಗಳು ಕಾಲಿಡದಂತೆ ಮಾಡುವ ಮೂಲಕ ಈ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆಯಿದೆ. ಸದಾ ಬರಗಾಲದಿಂದ ನರಳುವ, ಹೊಟ್ಟೆಪಾಡಿಗಾಗಿ ಹಪಹಪಿಸುವ ಜನರ ಪಾಲಿಗೆ ಮಹದಾಯಿ ಮಹಾತಾಯಿ ಆಗಬೇಕಾಗಿದೆ. ಕುಡಿಯುವ ನೀರಿನ ದಾಹ ತಣಿಸುವ ಅಮೃತಮಯಿ ಆಗಬೇಕಿದೆ. ಇದೆಲ್ಲಕ್ಕಿಂತಾ ಮಿಗಿಲಾಗಿ ಪ್ರಾದೇಶಿಕ ರಾಜಕೀಯ ಪಕ್ಷವೊಂದರ ಕೊರತೆಯನ್ನು ಕನ್ನಡನಾಡು ತುಂಬಿಕೊಳ್ಳಬೇಕಾದ ಅಗತ್ಯ ಹಿಂದೆಂದಿಗಿಂತಲೂ ತೀವ್ರವಾಗಿದೆ.

Advertisements

Posted on July 24, 2016, in ಗುಂಪಿಸದ್ದು. Bookmark the permalink. Leave a comment.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: