Blog Archives

ಸತ್ಯದೇವ ತೆರೆದಿಟ್ಟ ಸತ್ಯ!

review

(ಫೋಟೊ ಕೃಪೆ: ವಿಜಯ ಕರ್ನಾಟಕ ದಿನಪತ್ರಿಕೆ)

ಇಂದು ಕನ್ನಡ ಇತಿಹಾಸದಲ್ಲಿ ಮಹತ್ವದ ದಿನ. ಕಳೆದ ೫೦ಕ್ಕೂ ಹೆಚ್ಚು ವರ್ಷಗಳಿಂದ ಅಕ್ರಮವಾಗಿ, ಅಸಂವಿಧಾನಿಕವಾಗಿ, ಕಾನೂನು ಬಾಹಿರವಾಗಿ ತಡೆಹಿಡಿಯಲಾಗಿದ್ದ “ಡಬ್ಬಿಂಗ್” ಕನ್ನಡ ಹಿರಿತೆರೆಗೆ ಪ್ರವೇಶಿಸಿರುವುದನ್ನು ಕನ್ನಡನಾಡಿನ ಮುಂಚೂಣಿಯ ದಿನಪತ್ರಿಕೆಗಳಲ್ಲೊಂದಾದ “ವಿಜಯ ಕರ್ನಾಟಕ” ದಿನಪತ್ರಿಕೆಯಲ್ಲಿ, ಡಬ್ಬಿಂಗ್ ಚಿತ್ರವಾದ “ಸತ್ಯದೇವ್ IPS” ಚಿತ್ರಕ್ಕೆ ವಿಮರ್ಶೆಯನ್ನು ಬರೆಸಿ ಪ್ರಕಟಿಸುವ ಮೂಲಕ… ಡಬ್ಬಿಂಗ್ ಮತ್ತೆ ಶುರುವಾಗಿರುವುದಕ್ಕೆ ಅಧಿಕೃತ ಮಾನ್ಯತೆಯನ್ನು ಕೊಟ್ಟಿದ್ದಾರೆ. ಇದು ಮಹತ್ವದ ಬೆಳವಣಿಗೆ. ಧನ್ಯವಾದಗಳು – ವಿಜಯ ಕರ್ನಾಟಕ.

ವಿಮರ್ಶೆ ಬಂದಿರುವುದೇನೋ ಸರಿಯೇ! ಇದರ ಹಿಂದಿನ ಉದ್ದೇಶ? ಸದರಿ ವಿಮರ್ಶೆಯನ್ನೇ ವಿಮರ್ಶೆ ಮಾಡಿ ನೋಡಬೇಕಾದ ಸನ್ನಿವೇಶ ಬಂದಂತಿದೆ. ವಿಮರ್ಶಕರು  ಬರಹದ ತಲೆಬರಹದಲ್ಲೇ ತಮ್ಮ ಪೂರ್ವಾಗ್ರಹವನ್ನು ಕಾರಿಕೊಂಡಿದ್ದಾರೆ ಮತ್ತು ಕನ್ನಡ ಚಿತ್ರವಿಮರ್ಶೆಯಲ್ಲಿ ಹೊಸದೊಂದು ಮಾನದಂಡ ಹುಟ್ಟುಹಾಕಿದ್ದಾರೆ. ವಿಮರ್ಶೆಯಲ್ಲಿ “ಕನ್ನಡದ ನೇಟಿವಿಟಿ ಅಂತಾ ನೋಡಿದರೆ ನಿರಾಸೆಯಾಗುತ್ತೆ. ಪಾತ್ರಗಳೆಲ್ಲಾ ಕನ್ನಡ ಮಾತಾಡಿದರೂ ಅದು ಕನ್ನಡ ಅನ್ನಿಸದು, ಹಾಡುಗಳಲ್ಲಿ ಕನ್ನಡತನ ಒಂದಿಷ್ಟೂ ಇಲ್ಲ, ಡಬ್ ಮಾಡಿರುವ ಕಲಾವಿದರು ಸಾಕಷ್ಟು ಸರ್ಕಸ್ ಮಾಡಿದಂತೆ ತೋರುತ್ತದೆ. ಪಾತ್ರಗಳು ಪಕ್ಕಾ ತಮಿಳಾದ್ದರಿಂದ ಕನ್ನಡದ ಲೇಪ ಹಚ್ಚಲು ಕಷ್ಟಪಟ್ಟಿದ್ದಾರೆ. ಬಹುತೇಕ ಕಡೆ ನಮ್ಮ ಭಾಷೆಗೆ ಪಾತ್ರಗಳು ಸಿಂಕ್ ಆಗುವುದೇ ಇಲ್ಲ.” ಇಂತಿಷ್ಟು ಕೊಂಕುಗಳನ್ನೆತ್ತಿರುವ ಈ ಬರಹದ ಸಾರಾಂಶ “ಸತ್ಯದೇವ್ IPS ಎನ್ನುವ ಈ ಡಬ್ ಆದ ಚಿತ್ರದ ಮೂಲಚಿತ್ರ ಅದ್ಭುತವಾದ ತಾರಾಗಣ, ನಟನೆ, ಛಾಯಾಗ್ರಹಣ, ಸಂಗೀತ, ಕಥನಗಳಿಂದ ಕೂಡಿರುವ ದೃಶ್ಯಕಾವ್ಯವಾಗಿದೆ ಆದರೆ ಇದನ್ನು ಡಬ್ ಮಾಡುವ ಮೂಲಕ ನೇಟಿವಿಟಿ ಇಲ್ಲದ್ದು ಮನಸ್ಸಿಗೆ ತಟ್ಟಿ ಈ ಸಿನಿಮಾವನ್ನು ಕನ್ನಡ ಸಿನಿಮಾ ಎಂಬುದಾಗಿ ಒಪ್ಪಲಾಗುತ್ತಿಲ್ಲ” ಎಂಬುದಾಗಿದೆ.

ಸತ್ಯದೇವ್ ಚಿತ್ರ ತಮಿಳುನಾಡಿನ ನೇಟಿವಿಟಿಯಂತಿದೆ ಎಂದು ಹೇಳಲು ಸಾಧ್ಯವಿಲ್ಲ. ಮಹಾನಗರದಲ್ಲಿನ ಪೊಲೀಸು, ಗೂಂಡಾ, ಮಾಫ಼ಿಯಾ, ಹೊಡೆದಾಟಗಳು ಇದೀಗ ಯಾವುದೇ ಒಂದು ನೇಟಿವಿಟಿಯ ಮಾನದಂಡಕ್ಕೆ ಅನ್ವಯವಾಗುತ್ತದೆಯೇ ಎಂಬುದೇ ಪ್ರಶ್ನೆ. ರಿಮೇಕಿನ ಮೂಲಕ ಪರಭಾಷೆಯಿಂದ ಫ್ರೇಮ್ ಟು ಫ್ರೇಮ್ ಅಚ್ಚಾಗಿರುವ ನೂರಾರು ಕನ್ನಡ ಚಿತ್ರಗಳಲ್ಲಿ ಒಂದರ ಬಗ್ಗೆಯಾದರೂ ಇಂಥಾ ನೇಟಿವಿಟಿಯ ಮಾನದಂಡ ಬಳಸಿರುವುದು ಕಂಡಿಲ್ಲ. ಡಬ್ ಮಾಡಿರುವ ಕಲಾವಿದರ ಬಗ್ಗೆ ಕೊಂಕು ಮಾತಾದಿರುವುದರ ಬಗ್ಗೆಯೂ ಅಷ್ಟೇ! ಕನ್ನಡದಲ್ಲಿ ತಮ್ಮದೇ ಧ್ವನಿ ನೀಡುವ ಸಾಯಿಕುಮಾರ್, ರವಿಶಂಕರ್, ಪೂಜಾಗಾಂಧಿ ಮೊದಲಾದವರ ಸಂಭಾಷಣೆಯ ಬಗ್ಗೆ ಎಂದಾದರೋ ಇವರು ವಿಮರ್ಶೆ ಮಾಡಿದ್ದಾರಾ? ಪರಭಾಷೆಯ ಗಾಯಕರ ಕನ್ನಡ ಉಚ್ಚರಣೆಯ ಬಗ್ಗೆ ಬರೆದಿದ್ದಾರಾ? ಬಹುತೇಕ ಕನ್ನಡಚಿತ್ರಗಳ ನಾಯಕಿಯರ ಸಂಭಾಷಣೆಗಳಿಗೆ ಡಬ್ಬಿಂಗ್ ನಡೆದಿದೆಯಲ್ಲಾ ಅದರ ಸರ್ಕಸ್ ಬಗ್ಗೆ ಇವರ ಮಾತಿಲ್ಲ. ಯಾಕೆಂದರೆ ಸತ್ಯದೇವ್ ಚಿತ್ರಕ್ಕೆ ಡಬ್ ಮಾಡಿರುವ ಕಲಾವಿದರೆಲ್ಲಾ ಇಂಥಾ ನೂರಾರು ಚಿತ್ರಗಳ ಹಲವಾರು ಕನ್ನಡಬಾರದ ನಟರಿಗೆ ಡಬ್ಬಿಂಗ್ ಮಾಡಿ ಜೀವತುಂಬಿದ ಅನುಭವಿಗಳೇ ಆಗಿದ್ದಾರೆ. ಹೀಗಿರುವಾಗ ಸಂಭಾಷಣೆಗೆ ಕನ್ನಡ ಲೇಪಿಸಲು ಸರ್ಕಸ್ ಮಾಡಿದ್ದಾರೆ ಎನ್ನುವುದನ್ನು ಹೇಗೆ ತೀರ್ಮಾನಿಸಿಬಿಡುತ್ತಾರೆ?

ಹಾಡುಗಳಲ್ಲಿ ಕನ್ನಡತನ ಒಂದಿಷ್ಟೂ ಇಲ್ಲ ಎಂಬುದರ ಅರ್ಥವೇನು? ಇವರು ದೃಶ್ಯ, ಕುಣಿತ, ಜಾಗಗಳ ಕುರಿತು ಮಾತಾಡಿದ್ದರೆ ಈ ಮಾನದಂಡವನ್ನು ಇಂದಿನ  ಎಲ್ಲಾ ಕನ್ನಡ ಚಿತ್ರಗಳಿಗೂ ಅನ್ವಯಿಸಬೇಕಾಗುತ್ತದೆ. ಇನ್ನು ಹಾಡಿನ ಸಾಹಿತ್ಯದ ಬಗ್ಗೆ ಹೀಗೆ ಅಂದಿದ್ದರೆ ಈ ವಿಮರ್ಶಕರಿಗೆ ಡಬ್ಬಿಂಗ್ ಬಗ್ಗೆ ಪರಮದ್ವೇಶವಿದೆ, ಹೊಟ್ಟೆಕಿಚ್ಚಿದೆ ಎನ್ನಬೇಕಾಗುತ್ತದೆ. ಯಾಕೆಂದರೆ ತಿತಲಿ ತಿತಲಿ ಎಂದಾಗಲೀ, ಜೀನಾ ಜೀನಾ ಯಹಾ, ಮುಝೆ ಕುಚು ಕುಚು ಹೋಗಯಾ.. ಎಂದಾಗಲಾಗಲೀ ಕನ್ನಡ ಚಿತ್ರಗಳಲ್ಲಿ ಹಾಡಿನ ಸಾಹಿತ್ಯ ಬಂದಾಗ ಒಂದೇ ಒಂದು ಬಾರಿ ದನಿಯೆತ್ತದ ಇವರು ಕನ್ನಡವೇ ತುಂಬಿತುಳುಕುತ್ತಿರುವ ಸತ್ಯದೇವ್ ಚಿತ್ರದ ಹಾಡುಗಳಲ್ಲಿ ಅದ್ಯಾವ ಇಲ್ಲದ ಕನ್ನಡತನ ಹುಡುಕುತ್ತಿದ್ದಾರೋ ಏನೋ? ಇದೆಕ್ಕೆಲ್ಲಾ ಕಲಶವಿಟ್ಟಂತೆ ಇಲ್ಲಿನ ಪಾತ್ರಗಳು ಕನ್ನಡಕ್ಕೆ ಸಿಂಕ್ ಆಗುತ್ತಿಲ್ಲ ಎಂಬ ಟಿಪ್ಪಣಿ ಬೇರೆ! ಏನದು ಪಾತ್ರಗಳು ಕನ್ನಡಕ್ಕೆ ಸಿಂಕ್ ಆಗುವುದು ಅಂದರೆ? ಇದೂ ಕೂಡಾ ಚಿತ್ರವಿಮರ್ಶೆಯ ಹೊಸ ಮಾನದಂಡ!

ಇಂದು ಕನ್ನಡ ಇತಿಹಾಸದಲ್ಲಿ ಮಹತ್ವದ ದಿನ. ಯಾಕೆಂದರೆ ಡಬ್ಬಿಂಗ್ ವಿರೋಧಿ ಹತೋಟಿಕೂಟವೊಂದು ನಮ್ಮ ನಾಡಲ್ಲಿ ಕೆಲಸ ಮಾಡುತ್ತಿದೆ ಎನ್ನುವುದು ಅನುಮಾನಕ್ಕೆಡೆಯಿಲ್ಲದಂತೆ ಸಾಬೀತಾಗಿದೆ. ಈ ಹತೋಟಿ ಕೂಟ ಕನ್ನಡ ಹೋರಾಟಗಾರರೆಂಬ ಹೆಸರಿನ ಮುಸುಕಿನ ಕಳ್ಳರನ್ನು ಬಳಸಿ, ಡಬ್ ಮಾಡಿದ ಚಿತ್ರ ಪ್ರದರ್ಶಿಸಿದರೆ ಇನ್ಮುಂದೆ ನೇರ ಚಿತ್ರ ಕೊಡುವುದಿಲ್ಲ ಎಂದು ಬ್ಲಾಕ್ ಮೇಲ್ ಮಾಡಿ, ಚಿತ್ರಮಂದಿರಗಳಿಗೆ ಬೆಂಕಿ ಹಾಕುತ್ತೇನೆ ಎಂದೂ, ಚಿತ್ರಮಂದಿರಕ್ಕೆ ನುಗ್ಗಿ ಬಿಡುಗಡೆಯಾಗದಂತೆ ತಡೆಯಿರಿ ಎನ್ನುವ ಪ್ರಚೋದನೆಯನ್ನು ಮಾಧ್ಯಮಗಳ ಮೂಲಕ ಮಾಡಿ ತಾವಾಗೇ ಪುರಾವೆ ಒದಗಿಸಿದ್ದಾರೆ. ಕನ್ನಡ ನಾಡಿನ ಹಲವಾರು ಟಿವಿ ಮಾಧ್ಯಮಗಳು ಏಕಪಕ್ಷೀಯವಾಗಿ ನಡೆದುಕೊಳ್ಳುವ ಮೂಲಕ ಡಬ್ಬಿಂಗ್ ವಿರೋಧಿ ಹತೋಟಿಕೂಟದ ಮುಖವಾಣಿಗಳಾಗಿ ಹೊರಹೊಮ್ಮಿವೆ. ಇದೀಗ ಇಂಥಾ ಕಳಪೆ ಅನಿಸಿಕೆಯ ವಿಮರ್ಶೆಗಳ ಮೂಲಕ ವಿಜಯ ಕರ್ನಾಟಕದಂತಹ ಗಣ್ಯ ದಿನಪತ್ರಿಕೆಗಳ ಸಿನಿಮಾ ವಿಭಾಗದ ಒಳಗೆ ಕೂತಿರುವ ಕೆಲಮಂದಿಯೂ ಹತೋಟಿ ಕೂಟದ ತೆಕ್ಕೆಯಲ್ಲಿರುವವರೇ ಎಂಬುದನ್ನು ಸಾಬೀತು ಮಾಡಿದ್ದಾರೆ. ಈ ಬೆಳವಣಿಗೆಗಳೆಲ್ಲವೂ ಡಬ್ಬಿಂಗ್ ಹೋರಾಟದ ದೃಷ್ಟಿಯಿಂದ ಮೇಲ್ನೋಟದ ಹಿನ್ನಡೆಯಂತೆ ತೋರಿದರೂ ನಿಜ ಅರ್ಥದಲ್ಲಿ ಗೆಲುವುಗಳೇ ಆಗಿವೆ. ಇಲ್ಲದಿದ್ದರೆ ನಾಡಿನ ಮುಂಚೂಣಿ ಪತ್ರಿಕೆಗಳಲ್ಲಿ ಒಂದಾದ ವಿಜಯ ಕರ್ನಾಟಕದಂಥಾ ದೊಡ್ಡ ಪತ್ರಿಕೆಯಲ್ಲಿ ಡಬ್ ಆದ ಚಿತ್ರವೊಂದರ ವಿಮರ್ಶೆ ಪ್ರಕಟವಾಗೋದೂ ಅಂದರೇನು? ಅಲ್ಲವೇ!

ಡಬ್ಬಿಂಗ್ ಸಿನಿಮಾ ಬಿಡುಗಡೆಯ ಹೊಸಿಲಲ್ಲಿ…

ಡಬ್ಬಿಂಗ್.jpg

ಇಂದು ಜನಶ್ರೀ ವಾಹಿನಿಯವರು ಡಬ್ಬಿಂಗ್ ಕುರಿತಾಗಿ ನಡೆಸಿದ ನೇರ ಚರ್ಚೆಯಲ್ಲಿ ಪಾಲ್ಗೊಂಡಿದ್ದೆ. ಇದುವರೆವಿಗೂ ಡಬ್ಬಿಂಗ್ ಕುರಿತಾದ ಹಲವಾರು ಚರ್ಚೆಗಳಲ್ಲಿ ಪಾಲ್ಗೊಂಡಿದ್ದರೂ, ಹಿಂದೀ ಭಾಷೆಯ “ಮೈ ಹಸ್ಬೆಂಡ್ಸ್ ವೈಫ್” ಎಂಬ ಸಿನಿಮಾ “ನಾನು ನನ್ನ ಪ್ರೀತಿ” ಎಂಬ ಹೆಸರಲ್ಲಿ ಡಬ್ ಆಗಿ ತೆರೆಕಾಣಲು ಸಿದ್ಧವಾಗಿ ಬಿಡುಗಡೆಯ ಹೊಸ್ತಿಲಲ್ಲಿರುವಾಗ ನಡೆದ ಈ ಚರ್ಚೆ ತುಸು ಮಹತ್ವದ್ದಾಗಿತ್ತು. ಡಬ್ಬಿಂಗ್ ವಿರೋಧಿಗಳು ಹೊಂದಿರುವ ಗ್ರಹಿಕೆಯಲ್ಲಿನ ತೊಡಕು ಎದ್ದು ಕಾಣುತ್ತಿತ್ತು!

ಸಿನಿಮಾ ಗುಣಮಟ್ಟ ಮತ್ತು ಡಬ್ಬಿಂಗ್

ಡಬ್ಬಿಂಗ್ ವಿರೋಧ ಮಾಡುವ ಮಂದಿ ಮುಂದಿಡುವ ವಾದ ಇದೀಗ ಬಿಡುಗಡೆಗೆ ಸಿದ್ಧವಾಗಿರುವ “ನಾನು ನನ್ನ ಪ್ರೀತಿ” ಸಿನಿಮಾ ಕುರಿತಾಗಿ ಇದ್ದದ್ದು ಬಹಳ ಸೋಜಿಗವೆನ್ನಿಸಿತು. ಈ ಸಿನಿಮಾ ಗುಣಮಟ್ಟದ ಬಗ್ಗೆ, ಹೆಸರಿನ ಬಗ್ಗೆ ಚರ್ಚೆ ಮಾಡಲು ಮುಂದಾಗಿದ್ದೇ ವಿಚಿತ್ರ. ಸಿನಿಮಾ ಬಿಡುಗಡೆಯೇ ಆಗದೆ ಅದರ ಗುಣಮಟ್ಟದ ಬಗ್ಗೆ ಮಾತಾಡಿದ್ದೇ ತಪ್ಪು. ಆದರೆ ಅದಕ್ಕಿಂತಾ ಮುಖ್ಯವಾದದ್ದು, ಚರ್ಚೆ ಮಾಡುವವರು ಡಬ್ಬಿಂಗಿನ ಗುಣಮಟ್ಟದ ಬಗ್ಗೆ ಮಾತಾಡದೆ ಸಿನಿಮಾದ ಗುಣಮಟ್ಟದ ಬಗ್ಗೆ ಮಾಡಲು ಮುಂದಾಗಿದ್ದು! ಡಬ್ ಮಾಡಲು ಸಿನಿಮಾ ಆರಿಸಿಕೊಂಡಾಗಲೇ ಅದರ ಗುಣಮಟ್ಟ ಗೊತ್ತಾಗಿರುತ್ತದೆ. ಡಬ್ ಮಾಡುವವರು ಡಬ್ಬಿಂಗಿನ ಗುಣಮಟ್ಟಕ್ಕೆ ಹೊಣೆಗಾರರಾಗುತ್ತಾರೆ. ಇಷ್ಟಕ್ಕೂ ಸಿನಿಮಾ ಗುಣಮಟ್ಟಕ್ಕೂ ಡಬ್ಬಿಂಗಿಗೂ ಯಾವ ನೆಂಟೂ ಇಲ್ಲ. ಸಿನಿಮಾದ ಗುಣಮಟ್ಟದ ನೆಪ ಹೇಳಿ ಡಬ್ಬಿಂಗ್ ವಿರೋಧಿಸುವುದು ಬಾಲಿಶ!

ಕನ್ನಡ ಸಂಸ್ಕೃತಿ ಮತ್ತು ಡಬ್ಬಿಂಗ್

ನಮ್ಮ ಸಂಸ್ಕೃತಿಯನ್ನು ಡಬ್ಬಿಂಗ್ ಹಾಳು ಮಾಡುತ್ತದೆ ಎನ್ನುವ ವಾದದಲ್ಲೂ ಹುರುಳಿಲ್ಲ. ಡಬ್ಬಿಂಗ್ ಎನ್ನುವುದೇ ಬೇರೆ ಸಂಸ್ಕೃತಿಯನ್ನು ನಮ್ಮ ನುಡಿಯಲ್ಲಿ ತಿಳಿದುಕೊಳ್ಳುವ ಬಗೆ. ಇಷ್ಟಕ್ಕೂ ಫ್ರೇಮ್ ಟು ಫ್ರೇಮ್ ರಿಮೇಕು ಮಾಡುವಾಗ ಇಲ್ಲದ ಸಂಸ್ಕೃತಿಯ ಹಾಳಾಗುವಿಕೆ ಡಬ್ಬಿಂಗಿನಿಂದಾಗಿ ಆಗುತ್ತದೆ ಎನ್ನುವುದನ್ನು ಹೇಗೆ ಒಪ್ಪಲಾಗುತ್ತದೆ? ಸಿನಿಮಾ ಎನ್ನುವುದು ಸಂಸ್ಕೃತಿಗೆ ಕನ್ನಡಿಯಾಗಬಹುದೇ ಹೊರತು ಸಂಸ್ಕೃತಿ ರೂಪಿಸುವ ಸಾಧನವಾಗುವ ಕಾಲ ಈಗಿಲ್ಲ! ಇವರ ವಾದ ನೋಡಿದರೆ ಪರಭಾಷಾ ಚಿತ್ರಗಳು ಸಂಸ್ಕೃತಿ ಹೀನ ಮತ್ತು ಕನ್ನಡದ ಚಿತ್ರಗಳು, ಅವು ರಿಮೇಕಾಗಿದ್ದರೂ ಸಂಸ್ಕೃತಿಮಯವಾಗಿದೆ ಎನ್ನುವಂತಿದೆ. ವಾಸ್ತವವಾಗಿ ಮಚ್ಚು, ಲಾಂಗು, ಸೆಕ್ಸು, ಕ್ರೈಮುಗಳ.. ಕೀಳು ಅಭಿರುಚಿಯ ಹಾಸ್ಯಗಳನ್ನು ಚಿತ್ರಗಳಲ್ಲಿ ತೋರಿಸುವ ಯಾವುದೇ ಚಿತ್ರರಂಗದವರಿಗೆ ನಾಡಿನ ಸಂಸ್ಕೃತಿಯನ್ನು ತಾವು ಎತ್ತಿ ಹಿಡಿಯುತ್ತಿದ್ದೇವೆ ಎನ್ನುವ ನೈತಿಕತೆ ಇಲ್ಲಾ!

ನುಡಿಯ ಸೊಗಡು ಮತ್ತು ಡಬ್ಬಿಂಗ್

ಡಬ್ಬಿಂಗ್ ಬಂದರೆ ಬೇರೆ ಭಾಷೆಯವರ ಬಾಯಲ್ಲಿ ಕನ್ನಡ ತುರುಕಬೇಕಾಗುತ್ತದೆ. ತುಟಿಚಲನೆಯಂತೆ ಮಾತು ಬರೆಯಬೇಕಾಗುತ್ತದೆ. ಇದು ನಮ್ಮ ಕನ್ನಡ ಭಾಷೆಯನ್ನು ಹಾಳುಗೆಡುವುತ್ತದೆ. ಇದನ್ನು ನೋಡುವ ಕನ್ನಡಿಗರ ನುಡಿ ಹಾಳಾಗುತ್ತದೆ ಎನ್ನುವ ಮಾತಾಡಿದರು. ವಾಸ್ತವವಾಗಿ ಹೀಗೆ ಹಾಳಾದ ಕನ್ನಡಕ್ಕೆ ಉದಾಹರಣೆಯಾಗಿ ಜಾಹೀರಾತುಗಳಿವೆ ಎಂದರು. ವಾಸ್ತವವಾಗಿ ಕೆಟ್ಟದಾಗಿ ಡಬ್ ಮಾಡಿದರೆ ಜನ ಅಂಥವನ್ನು ತಿರಸ್ಕರಿಸುತ್ತಾರೆಯೇ ಹೊರತು ಅಂಥವನ್ನು ನೋಡಿ ತಮ್ಮ ಮಾತಿನ ಬಗೆ ಬದಲಿಸಿಕೊಳ್ಳುವುದಿಲ್ಲ! ಇವರು ಹೇಳುತ್ತಿರುವ ಕೆಟ್ಟ ಕನ್ನಡದ ಜಾಹೀರಾತುಗಳಿಂದ ಯಾವ ಕನ್ನಡಿಗರ ಮಾತಿನ ಶೈಲಿ ಬದಲಾಗಿದೆಯೋ ದೇವರೇ ಬಲ್ಲ! ಬದಲಿಗೆ ಅಂತಹ ಜಾಹೀರಾತುಗಳು ಜನರನ್ನು ಮುಟ್ಟುವಲ್ಲಿ ವಿಫಲವಾಗುತ್ತವೆ ಎನ್ನುವುದು ನಂಬಬಹುದಾದ ಮಾತಾಗಿದೆ. ಇಷ್ಟಕ್ಕೂ ತುಟಿಚಲನೆಗೆ ಮಾತು ಹೊಂದಿಸುವುದು ಎನ್ನುವುದೇ ಇಂದು ನಗಣ್ಯ ಎನ್ನಿಸುವಷ್ಟು ಚಿಕ್ಕ ವಿಷಯ. ಯಾಕೆಂದರೆ ಸಿನಿಮಾವೊಂದರಲ್ಲಿ ಎಷ್ಟು ದೃಶ್ಯಗಳಲ್ಲಿ ಮುಖವನ್ನು ಹತ್ತಿರದಿಂದ ತೋರಿಸಲಾಗುತ್ತದೆ, ಎಷ್ಟನ್ನು ದೂರದಿಂದ ತೋರಿಸಲಾಗುತ್ತದೆ ಎನ್ನುವುದು ಈ ತುಟಿಚಲನೆಯ ಹೊಂದಾಣಿಕೆಯ ಪ್ರಮಾಣಕ್ಕೆ ಸಂಬಂಧಿಸಿದೆ. ಇಷ್ಟಕ್ಕೂ ಹೊಂದಿಕೆಯಾಗದಿದ್ದರೆ ಜನ ಅಂಥವನ್ನು ಒಪ್ಪುವ ತಿರಸ್ಕರಿಸುವ ಅವಕಾಶವನ್ನು ಹೊಂದಿದ್ದಾರೆ ಎನ್ನುವುದನ್ನು ಮರೆಯಲಾಗದು.

ಕಾರ್ಮಿಕರ ಹೊಟ್ಟೆಪಾಡಿನ ಪ್ರಶ್ನೆ!

ಡಬ್ಬಿಂಗ್ ಸಿನಿಮಾ ಬಂದರೆ ಚಲನಚಿತ್ರ ಹತ್ತುಸಾವಿರ ಕಾರ್ಮಿಕರು ಬೀದಿಗೆ ಬೀಳುತ್ತಾರೆ ಎನ್ನುವ ವಾದ ಬಲು ಉತ್ಪ್ರೇಕ್ಷೆಯದ್ದು ಎನ್ನಬೇಕಾಗಿದೆ. ಇವರ ಮಾತಿನಂತೆ ಕನ್ನಡದಲ್ಲಿ ಮೂಲ ಚಿತ್ರಗಳನ್ನು ತೆಗೆಯುವುದನ್ನು ನಿಲ್ಲಿಸಿಬಿಡಲಾಗುತ್ತದೆ. ಅದೇ ರೀತಿ ಡಬ್ಬಿಂಗ್ ಬಂದೊಡನೆ ಎಲ್ಲಾರಿಗೂ ಕೆಲಸ ಸಿಕ್ಕುತ್ತದೆ ಎಂದೂ ಹೇಳಲಾಗದು. ಎರಡೂ ಕೂಡಾ ಊಹೆಯ ಮಾತಾದ್ದರಿಂದ ಕಾರ್ಮಿಕರ ರಕ್ಷಣೆಗೆ ತೊಂದರೆಯಾಗದ ಹಾಗೆ ಅವರಿಗೆ ಅನುಕೂಲವಾಗುವ ಬೇರೆ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗಿದೆಯೇ ಹೊರತು ಡಬ್ಬಿಂಗ್ ಬರುವುದನ್ನು ತಡೆಯುವುದಲ್ಲ ಎನ್ನಬೇಕಾಗಿದೆ. ತಂತ್ರಜ್ಞಾನ ಬೆಳೆದಂತೆ, ಹತ್ತುಜನರ ಕೆಲಸ ಯಂತ್ರವೊಂದು ಮಾಡಿಬಿಡುವಂಥಾ ಬೆಳವಣಿಗೆಗಳಿದ್ದಾಗ ಸಮಾಜ ಈ ಕೆಲಸ ಇಲ್ಲವಾಗಿಬಿಡುವ ಸಮಸ್ಯೆಗೆ (ಅಂಥದ್ದು ನಿಜಕ್ಕೂ ಉಂಟಾದರೆ) ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಸಿನಿಮಾಗಳು ಸೋಲುತ್ತಿದ್ದರೂ ಸರಿ, ನಿರ್ಮಾಪಕರು ನಷ್ಟ ಅನುಭವಿಸಿದರೂ ಸರಿ, ಸಿನಿಮಾ ಕಾರ್ಮಿಕರಿಗೆ ಕೆಲಸ ಸಿಗುತ್ತಿರಬೇಕು ಎನ್ನುವ ವಾದವನ್ನು ಒಪ್ಪಲಾಗದು.

ಡಬ್ಬಿಂಗ್ ಸಿನಿಮಾವನ್ನು ಯಾಕೆ ಸ್ವಾಗತಿಸಬೇಕು

ಡಬ್ಬಿಂಗ್ ಸಿನಿಮಾಗಳು ಇಂದು ಕನ್ನಡಿಗರಿಗೆ ಯಾಕೆ ಬೇಕಾಗಿದೆ ಎನ್ನುವುದನ್ನು ನೋಡಬೇಕಾಗಿದೆ. ತಮ್ಮ ಮನರಂಜನೆಗಾಗಿ ಬೇರೆ ಭಾಷೆಯನ್ನು ಅವಲಂಬಿಸಬೇಕಾದ ದುಃಸ್ಥಿತಿಯಿಂದ ಹೊರಬರಲು, ಕನ್ನಡದ ಮಕ್ಕಳು ಕನ್ನಡಕ್ಕೇ ಅಂಟಿಕೊಳ್ಳಲು ಇಂದು ಡಬ್ಬಿಂಗ್ ಅತ್ಯಗತ್ಯವಾಗಿದೆ. ಇದನ್ನೆಲ್ಲಾ ಮೀರಿ ನಮ್ಮ ನುಡಿಯಲ್ಲಿಯೇ ಎಲ್ಲವನ್ನೂ ಪಡೆದುಕೊಳ್ಳುವ ನಮ್ಮ ಆಯ್ಕೆಯ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ, ಕನ್ನಡದ ಸಾಧ್ಯತೆಗಳನ್ನೂ, ಮಾರುಕಟ್ಟೆಯನ್ನೂ ಹಿಗ್ಗಿಸಲು ಡಬ್ಬಿಂಗ್ ಸಹಕಾರಿಯಾಗಲಿದೆ. ಡಬ್ಬಿಂಗ್ ಗುಣಮಟ್ಟವು ಕಾಲ ಕಳೆದಂತೆ ಉತ್ತಮಗೊಳ್ಳುತ್ತಾ ಹೋಗುವುದರ ಜೊತೆಗೆ ಮೂಲ ಸಿನಿಮಾಗಳ ಗುಣಮಟ್ಟವೂ ಸ್ಪರ್ಧೆಯ ಕಾರಣದಿಂದ ಹೆಚ್ಚುವುದು ಖಚಿತ. ಹಾಗಾಗಿ ಪ್ರತಿಭೆ ಉಳ್ಳ ಯಾವ ಚಿತ್ರೋದ್ಯಮದ ವ್ಯಕ್ತಿಯೂ ಡಬ್ಬಿಂಗ್ ಬಗ್ಗೆ ಹೆದರುವುದಿಲ್ಲ! ಕನ್ನಡ ಕನ್ನಡಿಗ ಕರ್ನಾಟಕದ ಹಿತ ಎನ್ನುವುದು ಎಲ್ಲಕ್ಕಿಂತಾ ಮಿಗಿಲಾದದ್ದು ಮತ್ತು ಇದೇ ಕಾರಣದಿಂದಲೇ ಕನ್ನಡಕ್ಕೆ ಡಬ್ಬಿಂಗ್ ಬರಬೇಕಾಗಿದೆ. ಕನ್ನಡಿಗರು ಕನ್ನಡದಲ್ಲೇ ಎಲ್ಲವನ್ನೂ ಪಡೆದುಕೊಳ್ಳಲಿ ಎನ್ನುವುದು ಕನ್ನಡಪರವಾದ ನಿಲುವಾಗಿದ್ದು.. ಡಬ್ಬಿಂಗಿನಿಂದಾಗಿ ಹಾಳಾಗಿ ಹೋದ ಯಾವ ನಾಡು, ಯಾವ ನುಡಿಯೂ ಇಲ್ಲದಿರುವುದನ್ನು ಗಮನಿಸಬೇಕಾಗಿದೆ.

ಕೊನೆಹನಿ: ಡಬ್ಬಿಂಗ್ ಬರುವುದನ್ನು ತಡೆಯಲು ಚಿತ್ರಮಂದಿರಕ್ಕೆ ನುಗ್ಗುತ್ತೇವೆ, ಬೆಂಕಿ ಹಾಕುತ್ತೇವೆ ಎನ್ನುವ ಹೇಳಿಕೆಗಳನ್ನು ರಾಜಾರೋಷವಾಗಿ ಕೊಡುತ್ತಿರುವ ಕನ್ನಡ ಹೋರಾಟಗಾರರೆಂದು ಕರೆದುಕೊಳ್ಳುತ್ತಿರುವ ಮಂದಿಯನ್ನು ಸರ್ಕಾರ ಮತ್ತು ಪೊಲೀಸು ಸರಿಯಾಗಿ ನಿರ್ವಹಿಸಬೇಕಾಗಿದೆ. ನಾವು ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವೆ ಎನ್ನುವುದನ್ನು ಮರೆಯಲಾಗದು. ಡಬ್ಬಿಂಗ್ ಬಗ್ಗೆ ಆಕ್ಷೇಪಣೆಯಿದ್ದರೆ ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ, ಜಾಗೃತಿ ಮೂಡಿಸುವ ಅವಕಾಶ ಇದ್ದೇ ಇದೆ. ಅದು ಬಿಟ್ಟು ತಡೆಯುವ, ಹೊಡೆಯುವ, ಬಡಿಯುವ, ಸುಡುವ ಮಾತಾಡಿದರೆ ಅಂಥದ್ದನ್ನೆಲ್ಲಾ ನೋಡಿಕೊಂಡು ಸರ್ಕಾರ ಕಣ್ಣುಮುಚ್ಚಿ ಕೂರಲಾರದು! ಕೂರಬಾರದು!

ಪದನೆರಕೆ: ವಿಮರ್ಶೆಯ ತಲ್ಲಣ!

CNR

(ಚಿತ್ರಕೃಪೆ: ಕನ್ನಡಪ್ರಭ ಇ-ಪತ್ರಿಕೆ)

ಡಾ. ಡಿ ಎನ್ ಶಂಕರಬಟ್, ಬರತ್ ಕುಮಾರ್ ಮತ್ತು ವಿವೇಕ್ ಶಂಕರ್ ಅವರು ಕೂಡಿ ಹೊರತಂದಿರುವ “ಇಂಗ್ಲಿಶ್ – ಕನ್ನಡ ಪದನೆರಕೆ” ಹೊತ್ತಗೆಯು ನಾಡಿನ ವಿದ್ವಜ್ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದನ್ನು ಸಾಬೀತುಪಡಿಸುವಂತೆ ಇಂದಿನ (೩೧.೧೨.೨೦೧೫) ಕನ್ನಡಪ್ರಭ ದಿನಪತ್ರಿಕೆಯಲ್ಲಿ ಹಿರಿಯ ವಿಮರ್ಶಕರಾದ ಶ್ರೀ. ಸಿ ಎನ್ ರಾಮಚಂದ್ರನ್ ಅವರ ಒಂದು ಬರಹ ಪ್ರಕಟವಾಗಿದೆ.

ವಿಮರ್ಶೆಯಲ್ಲಿನ ಗೊಂದಲಗಳು

ಒಟ್ಟಾರೆಯಾಗಿ… “ನುಡಿಯೊಂದು ಹರಿಯುವ ನದಿಯಂತೆ, ತಾನಾಗೇ ಸಹಜವಾಗಿ ಹೆರನುಡಿಗಳೊಂದಿಗೆ ಮಿಳಿತವಾಗಿ ಹಿತವಾಗಿ ಸಾಗುತ್ತದೆ. ಕನ್ನಡಕ್ಕೆ ಸಂಸ್ಕೃತದಿಂದ ಅಧ್ಯಾತ್ಮ, ಸಾಹಿತ್ಯದ ಪದಗಳು ಇಂಗ್ಲೀಶಿನಿಂದ ವಿಜ್ಞಾನ ತಂತ್ರಜ್ಞಾನದ ಪದಗಳು ನದಿಯ ನೀರು ಹರಿದು ಬಂದಂತೆ ಸಹಜವಾಗಿ ಬಂದಿವೆ. ಕನ್ನಡವು ಇವನ್ನೆಲ್ಲಾ ತನ್ನದಾಗಿಸಿಕೊಂಡು (ಇಂಗ್ಲೀಶ್ ಬೇರೆ ಬೇರೆ ಭಾಷೆಯಿಂದ ಪದಗಳನ್ನು ಸ್ವೀಕರಿಸಿರುವ ಲೆಕ್ಕ ಕೊಡುತ್ತಾ) ಮುಂದೆ ಸಾಗಬೇಕೆ ಹೊರತು ಕನ್ನಡವನ್ನು ಶುದ್ಧೀಕರಿಸುವ ಪ್ರಯತ್ನ ಸಲ್ಲದು. ಹೀಗೆ ಶುದ್ಧೀಕರಿಸಲು ಭಾಷಿಕ ರಾಷ್ಟ್ರೀಯತೆ, ಪ್ರಾಚಿನತೆಯ ಬಗ್ಗೆ ಗೌರವ ಅಥವ ಗತಕ್ಕೆ ಹಂಬಲಿಸುವ ಮನಸ್ಥಿತಿಗಳು ಕಾರಣ” ಎನ್ನುವ ಅನಿಸಿಕೆಯನ್ನು ಶ್ರೀಯುತರು ಹೇಳಿದ್ದಾರೆ. ನುಡಿಯ ಸಹಜ ಹರಿವಿನ ಬಗ್ಗೆ ಇವರ ಅನಿಸಿಕೆ ಸರಿಯಾಗೇ ಇದೆ. ಇದನ್ನು ಯಾರೂ ಅಲ್ಲಗಳೆದಿಲ್ಲ. ಮೊದಲ ಸಹಸ್ರಮಾನದಲ್ಲಿ ಸಂಸ್ಕೃತವನ್ನು ಅವಲಂಬಿಸಿ ಕನ್ನಡ, ತೆಲುಗು, ಹಿಂದೀ ಮೊದಲಾದ ಆಗತಾನೇ ಬೆಳೆಯುತ್ತಿದ್ದ ಭಾಷೆಗಳು ಬೆಳೆದವು ಎಂಬ ಮಾತು ಮತ್ತಷ್ಟು ಸ್ಪಷ್ಟತೆಯನ್ನು ಬಯಸುತ್ತದೆ. ಹಿಂದೀ ಅನ್ನುವ ಭಾಷೆ ಆಗ ಹುಟ್ಟಿತ್ತೋ ಇಲ್ಲವೋ ಗೊತ್ತಿಲ್ಲಾ ಆದರೆ ಕನ್ನಡ, ತೆಲುಗು ಮೊದಲಾದ ನುಡಿಗಳನ್ನು ಸಂಸ್ಕೃತ ಪ್ರಭಾವಿಸಿತು ಎನ್ನುವ ಹೇಳಿಕೆ ತುಂಬ ಬೀಸುಹೇಳಿಕೆ. ಯಾಕೆಂದರೆ ಹಾಗೆ ಪ್ರಭಾವಕ್ಕೆ ಒಳಗಾಗಿದ್ದು ಇತರೆ ನುಡಿಗಳ ಸಾಹಿತ್ಯವೇ ಹೊರತು ಜನರ ನುಡಿಯಲ್ಲ! ಕನ್ನಡದ ಸಾಹಿತ್ಯ ಕೃತಿಗಳು ಹೆಚ್ಚಾಗಿ ಸಂಸ್ಕೃತದ ಕೃತಿಗಳ ರೂಪಾಂತರವೇ ಆಗಿದ್ದದು ವಾಸ್ತವವಾಗಿದೆ. ಇಂದು ಪರಿಸ್ಥಿತಿ ಬೇರೆಯಾಗಿದೆ. ಅಂದು ಕೆಲವೇ ಜನರ ಸ್ವತ್ತಾಗಿದ್ದ ಓದುಬರಹ ಇಂದು ಎಲ್ಲರ ಅನಿವಾರ್ಯತೆಯಾಗಿದೆ. ಹಾಗಾಗಿ ಎಲ್ಲರಿಗೂ ಎಟುಕುವ ನುಡಿಯನ್ನು ಬಳಸುವುದು ಇಂದಿನ ಅಗತ್ಯವಾಗಿದೆ.

ಮುಂದೆ ಸಿಎನ್ನಾರ್ ಅವರು ಬರೆಯುತ್ತಾ ಸಂಸ್ಕೃತದ ಯಾಜಮಾನ್ಯವನ್ನು ಮುರಿಯಬೇಕೆನ್ನುವವರ ಸಾಲಿನ ಹಲವರನ್ನು ಹೆಸರಿಸುತ್ತಾ ಶಂಕರಬಟ್ಟರನ್ನೂ ಅದೇ ಸಾಲಿನಲ್ಲಿ ನಿಲ್ಲಿಸಿದ್ದಾರೆ. ಶಂಕರಬಟ್ಟರು ಮೊದಲಿಗೆ ಆಂಡಯ್ಯ, ಪಂಪರ ಹಾಗೆ ಸಾಹಿತಿಯಲ್ಲ ಮತ್ತು ಅವರೊಬ್ಬ ವಿಜ್ಞಾನಿ ಎಂಬುದನ್ನು ಮರೆತಿದ್ದಾರೆ. ಶಂಕರಬಟ್ಟರು ಕನ್ನಡಕ್ಕೆ ಇಂತಿಷ್ಟೇ ಅಕ್ಷರಗಳು ಸಾಕು ಎಂದಿರುವುದನ್ನಾಗಲೀ, ಕನ್ನಡದ ವ್ಯಾಕರಣ ಸಂಸ್ಕೃತಕ್ಕಿಂತ ಬೇರೆಯಾಗಿದೆ ಎಂದಿರುವುದನ್ನಾಗಲೀ ವೈಜ್ಞಾನಿಕ ನೆಲೆಯಲ್ಲಿ ಸಿಎನ್ನಾರ್ ಅವರಿಗೆ ಅಲ್ಲಗಳೆಯಲು ಆಗಿಲ್ಲ. ಆದರೆ ಇವರು ಕನ್ನಡದಲ್ಲಿ ಪದಕಟ್ಟುವುದನ್ನು, ಕನ್ನಡವನ್ನು ಸಂಸ್ಕೃತದ ಹಿಡಿತದಿಂದ ಬಿಡಿಸುವ ಹುಚ್ಚಾಟದಂತೆ ಕಂಡಿದ್ದಾರೆಯೇ ಹೊರತು ಕನ್ನಡದ ಕಸುವು ಮತ್ತು ಹರವನ್ನು ಹರಡುವ ಪ್ರಯತ್ನವಾಗಿ ನೋಡಲು ಸೋತಿದ್ದಾರೆ. ಹಾಗಾಗೇ “ಈ ಹೊತ್ತಗೆಯ ಬರಹಗಾರರಿಗೆ ಇಂಗ್ಲಿಶ್ ಬಗ್ಗೆ ಇಲ್ಲದ ದ್ವೇಶ ಸಂಸ್ಕೃತದ ಬಗ್ಗೆ ಇದೆ” ಎನ್ನುವ ಅರ್ಥದ ಮಾತುಗಳನ್ನು ಇವರ ಬರಹ ಹೊಂದಲು ಸಾಧ್ಯವಾಗಿದೆ.

ಕನ್ನಡಿಗರು ಕನ್ನಡದ ಸಾಧ್ಯತೆಗಳನ್ನು ಹೆಚ್ಚಿಸಲು ಪ್ರಯತ್ನಿಸುವುದನ್ನು ಅನಗತ್ಯ ಎಂದು ಮೊಳಕೆಯನ್ನು ಚಿವುಟುವಂತೆ ಬರೆಯುತ್ತಾ, ಇಂಥಾ ಪದಗಳನ್ನು ಜನರು ಒಪ್ಪುವುದಿಲ್ಲ ಎಂದು ಫರ್ಮಾನನ್ನು ತಾವಾಗೇ ಹೊರಡಿಸಿದ್ದಾರೆ. ವಾಸ್ತವದಲ್ಲಿ ಹೊಸಪದಗಳನ್ನು ಕಟ್ಟಿದವರು ಕೂಡಾ ತಮ್ಮ ಪದಗಳನ್ನು ಬಳಕೆಯ ಮೂಸೆಗೆ ಒಡ್ಡಲು ಜನರ ಮುಂದಿಟ್ಟಿದ್ದಾರೆಯೇ ಹೊರತು ಇವರು ಉದಾಹರಿಸಿದ ಇತರೆ ಕೆಲದೇಶಗಳಂತೆ ಅಪ್ಪಣೆ ಮಾಡುತ್ತಿಲ್ಲ. ಇಡೀ ವಿಮರ್ಶೆಯ ಟೊಳ್ಳುತನ ಇರುವುದು ಶ್ರೀಯುತರು ಇಡೀ ಪ್ರಯತ್ನದ ಮೂಲಕಾರಣವನ್ನು ಗುರುತಿಸಲು ಎಡವಿರುವುದರಲ್ಲಿ. ಅವರು ತಿಳಿಸಿರುವಂತೆ ಈ ಪ್ರಯತ್ನದ ಹಿಂದಿರುವುದು ಗತಕಾಲಕ್ಕೆ ಸಾಗುವ ಹಂಬಲವಾಗಲೀ, ಪ್ರಾಚೀನತೆಯ ಬಗೆಗಿನ ಗೌರವವಾಗಲೀ, ಭಾಷಿಕ ರಾಷ್ಟ್ರೀಯತೆಯನ್ನು ಎತ್ತಿಹಿಡಿಯುವ ಉದ್ದೇಶವಾಗಲೀ, ಇಂಗ್ಲೀಶು ಸಂಸ್ಕೃತಗಳ ಮೇಲಿರಬಹುದಾದ ದ್ವೇಶವಾಗಲೀ ಅಲ್ಲ. ಈ ಪದನೆರಕೆಯು ಕನ್ನಡದ ಜನರು, ಏಳಿಗೆಯ ಬೆಟ್ಟ ಹತ್ತಬೇಕೆಂದರೆ ಈ ಹೆರನುಡಿಗಳನ್ನು ಕಟ್ಟಿಕೊಂಡೇ ಹತ್ತಬೇಕು ಎನ್ನುವ ಅನಿವಾರ್ಯತೆಯನ್ನು ಇಲ್ಲವಾಗಿಸಿ, ತಮ್ಮದೇ ನುಡಿಯ ಕಸುವನ್ನು ಹಿಗ್ಗಿಸುವ ದಾರಿ ತೋರುವ ಹೊತ್ತಗೆ ಎಂಬುದನ್ನು ಗುರುತಿಸಲು ವಿಫಲವಾಗಿದ್ದಾರೆ.

ಕನ್ನಡದ ಮಂದಿ ತಮ್ಮ ನುಡಿಯನ್ನು ಹೀಗೆ ಬಗ್ಗಿಸುವ, ದುಡಿಸಿಕೊಳ್ಳುವ ಪ್ರಯತ್ನಕ್ಕೆ ಕೈಹಾಕುವುದನ್ನೇ ಅಪರಾಧ ಎನ್ನುವಂತೆ ನೋಡುವ ಮಂದಿ ಇದೊಂದು ಅತ್ಯಂತ ಪ್ರಜಾಸತ್ತಾತ್ಮಕ ರೀತಿಯ ನಡೆ ಎಂಬುದನ್ನು ಗುರುತಿಸಲು ಎಡವಿದ್ದಾರೆ ಎಂದೇ ಅನ್ನಿಸುತ್ತದೆ. ಇಡೀ ಬರಹದಲ್ಲಿ ಪದನೆರಕೆಯ ಈ ಪ್ರಯತ್ನದ ಬಗ್ಗೆ ಆಳದಲ್ಲಿ ಅಸಹನೆಯಿರುವುದು, ಬರಹಗಾರರು ತಲ್ಲಣಗೊಂಡಿರುವುದು ಕಂಡು ಬರುತ್ತದೆ. ಈ ತಲ್ಲಣಕ್ಕೆ ಕಾರಣ ಕಾಲಾಂತರದಿಂದ ಬಂದ ಪರಂಪರೆಗೆ ಇದಿರಾಗಿ ಜನ ಒಲವು ತೋರಿಬಿಟ್ಟರೆ ಎಂಬ ದಿಗಿಲಿರಬಹುದೇ! ಕನ್ನಡ ನುಡಿಯು ಕಾಲಾಂತರದಿಂದ ಸಂಸ್ಕೃತ, ಇಂಗ್ಲೀಶುಗಳಂತಹ ಹೆರನುಡಿಗಳನ್ನೇ ತನ್ನಲ್ಲಿ ಅರಗಿಸಿಕೊಂಡು ಬೆಳೆಯುತ್ತಿದೆ ಎನ್ನುವ ಶ್ರೀಯುತರ ಅನಿಸಿಕೆಯನ್ನೇ ಒಪ್ಪುವುದಾದರೆ ಅಂತಹ ಕನ್ನಡವು ಕನ್ನಡ ಬೇರಿನ ಹೊಸಪದಗಳನ್ನು ಅರಗಿಸಿಕೊಳ್ಳುವುದರ ಬಗ್ಗೆ ಆತಂಕವಾದರೂ ಏಕಿರಬೇಕು? ಅಲ್ಲವೇ!

ಹೊರಬಂದ ಡಬ್ಬಿಂಗ್ ತೀರ್ಪು: ಮುಖ್ಯಮಂತ್ರಿಗಳಿಗೊಂದು ಮನವಿ

CCI

ಕನ್ನಡನಾಡಿನಲ್ಲಿದ್ದ ಅಘೋಷಿತ ಡಬ್ಬಿಂಗ್ ನಿಶೇಧದ ವಿರುದ್ಧವಾಗಿ ಕರ್ನಾಟಕ ಗ್ರಾಹಕರ ಕೂಟವು ಸಲ್ಲಿಸಿದ್ದ ದೂರಿನ ಅನ್ವಯ ಭಾರತೀಯ ಸ್ಪರ್ಧಾ ಆಯೋಗ(CCI)ವು ಸುದೀರ್ಘವಾದ ವಿಚಾರಣೆಯನ್ನು ನಡೆಸಿ ತನ್ನ ತೀರ್ಪನ್ನು ದಿನಾಂಕ ೨೭.೦೭.೨೦೧೫ರಂದು ನೀಡಿದ್ದು ಅದೀಗ ಹೊರಬಿದ್ದಿದೆ.

ಮೊಕದ್ದಮೆಯ ಸಾರಾಂಶ:

ಕರ್ನಾಟಕ ಸ್ಟೇಟ್ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ (ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ), ಕರ್ನಾಟಕ ಟಿವಿ ಅಸೋಸಿಯೇಷನ್, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ, ಕರ್ನಾಟಕ ಚಲನಚಿತ್ರ ಅಕಾಡಮಿ ಮತ್ತು ಕರ್ನಾಟಕ ಚಲನಚಿತ್ರ ಕಲಾವಿದರ, ಕಾರ್ಮಿಕರ ಮತ್ತು ತಂತ್ರಜ್ಞರ ಒಕ್ಕೂಟಗಳನ್ನು ಪ್ರತಿವಾದಿಗಳಾಗಿಸಿ, ಇವರುಗಳು ಕರ್ನಾಟಕದಲ್ಲಿ ಡಬ್ ಆದ ಕಾರ್ಯಕ್ರಮಗಳನ್ನು ಹತೋಟಿ ಕೂಟದ ಮೂಲಕ ತಡೆಯುತ್ತಿದ್ದಾರೆ ಎಂದು ನೀಡಲಾಗಿದ್ದ ದೂರಿನ ಅನ್ವಯ ಸಿಸಿಐ ಒಂದು ಮೊಕದ್ದಮೆಯನ್ನು ದಾಖಲುಮಾಡಿಕೊಂಡಿತು. ಸಿಸಿಐನಿಂದ ನೇಮಕವಾದ ಡೈರೆಕ್ಟರ್ ಜನರಲ್ ಅವರ ತನಿಖಾ ವರದಿಯನ್ನು ಆಧರಿಸಿ ವಾದ ವಿವಾದಗಳ ಮೂಲಕ ಸದರಿ ಮೊಕ್ಲದ್ದಮೆಯ ಸಂಪೂರ್ಣ ವಿಚಾರಣೆಯನ್ನು ನಡೆಸಲಾಯಿತು.

ನಿರ್ದೇಶಕರ ಸಂಘ, ಕಲಾವಿದರ ಸಂಘ ಮತ್ತು ಚಲನಚಿತ್ರ ಅಕಾಡಮಿಗಳನ್ನು, ಅವು ಸಿನೆಮಾ/ ಕಾರ್ಯಕ್ರಮಗಳ ತಯಾರಿಕೆ ಅಥವಾ ಹಂಚಿಕೆಗಳಂತಹ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿಲ್ಲವೆಂದೂ, ಇವುಗಳ ವಿರುದ್ಧವಾಗಿ ಗಟ್ಟಿಯಾದ ಸಾಕ್ಷಾಧಾರಗಳು ಇಲ್ಲವೆಂದೂ ಹೇಳಿ ಆರೋಪಮುಕ್ತಗೊಳಿಸಲಾಗಿದೆ. ಆದರೆ ಉಳಿದ ಮೂರೂ ಸಂಸ್ಥೆಗಳು ಅಸಾಂವಿಧಾನಿಕವಾಗಿ ಡಬ್ಬಿಂಗ್ ತಡೆ ಮಾಡಿದ್ದನ್ನು ಸಿಸಿಐ ವರದಿ ಎತ್ತಿಹಿಡಿದಿದೆ. ವಾಣಿಜ್ಯ ಮಂಡಳಿಯು ಚಲನಚಿತ್ರ ರಂಗದ ಮಾರುಕಟ್ಟೆಯಲ್ಲಿ ಹೊಂದಿರುವ ಪ್ರಭಾವ, ಉಳಿದ ಅಂಗಸಂಸ್ಥೆಗಳ ಮೇಲಿರುವ ಹಿಡಿತ ಮತ್ತು ಕರ್ನಾಟಕದಲ್ಲಿ ಮಾತ್ರಾ ಡಬ್ಬಿಂಗ್ ಚಿತ್ರಗಳು ಪ್ರದರ್ಶನ ಆಗದೇ ಇರುವುದನ್ನು ಪರಿಗಣಿಸಿ ದೋಷಿ ಎನ್ನಲಾಗಿದೆ. ಇದೇ ರೀತಿಯಲ್ಲಿ ಕರ್ನಾಟಕ ಟಿವಿ ಅಸೋಸಿಯೇಷನ್ನಿನವರು ಡಬ್ಬಿಂಗ್ ಆದ ಧಾರವಾಹಿಗಳಿಗೆ ಒಡ್ಡಿದ ತಡೆಯನ್ನು ಪರಿಗಣಿಸಿ ಅವರನ್ನೂ ದೋಷಿಯೆಂದು ಪರಿಗಣಿಸಲಾಗಿದೆ. ಉಳಿದಂತೆ ನಿರ್ಮಾಪಕರ ಸಂಘ ವಾಣಿಜ್ಯ ಮಂಡಲಿಯ ಆದೇಶಗಳಿಗೆ ಅನುಗುಣವಾಗಿ ನಡೆದುಕೊಂಡಿರುವುದನ್ನು ದಾಖಲೆಗಳನ್ನು ಪರಿಶೀಲಿಸಿ ಮನದಟ್ಟು ಮಾಡಿಕೊಂಡ ಸಿಸಿಐ ತನ್ನ ಅಂತಿಮ ತೀರ್ಪನ್ನು ನೀಡಿದೆ.

ಈ ತೀರ್ಪಿನ ಅನ್ವಯ ಈ ಮೂರೂ ಸಂಸ್ಥೆಗಳು ಸಿಸಿಐನ ಕೆಲವು ನಿಯಮಗಳನ್ನು ಮೀರಿವೆ. ಆ ನಿಯಮಗಳು ಇಂತಿವೆ.

3 (1) No enterprise or association of enterprises or person or association of persons shall enter into any agreement in respect of production, supply, distribution, storage, acquisition or control of goods or provision of services, which causes or is likely to cause an appreciable adverse effect on competition within India

3.3.(b) limits or controls production, supply, markets, technical development, investment or provision of services;

ಹೀಗಾಗಿ ಈ ಮೂರೂ ಸಂಸ್ಥೆಗಳು ದೋಷಿಗಳಾಗಿದ್ದು ಕರ್ನಾಟಕದಲ್ಲಿ ಪರಭಾಷೆಯಿಂದ ಡಬ್ ಆದ ಕಾರ್ಯಕ್ರಮಗಳಿಗೆ/ ಸಿನಿಮಾಗಳಿಗೆ ಅಸಂವಿಧಾನಿಕ ನಿಶೇಧವಿರುವುದು ಸಾಬೀತಾಗಿರುವುದಾಗಿ ಸಿಸಿಐ ತೀರ್ಪು ಹೇಳಿದೆ. ಈ ಡಬ್ಬಿಂಗ್ ನಿಶೇಧದ ಹಿಂದೆ ಹತೋಟಿಕೂಟವೊಂದು ಅಸ್ತಿತ್ವದಲ್ಲಿದ್ದು ಅದರಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ, ನಿರ್ಮಾಪಕರ ಸಂಘ ಮತ್ತು ಟೆಲಿವಿಷನ್ ಅಸೋಸಿಯೇಶನ್ ಗಳು ತೊಡಗಿವೆ ಎಂಬರ್ಥದಲ್ಲಿ ತೀರ್ಪು ಹೇಳಿದೆ.

ಈ ಸಂಸ್ಥೆಗಳಿಗೆ ತಕ್ಷಣದಿಂದ ಜಾರಿಯಾಗುವಂತೆ ಡಬ್ಬಿಂಗ್’ಗೆ ತಡೆಯೊಡ್ಡುವುದರಿಂದ ಹಿಂದೆ ಸರಿಯುವಂತೆ ಮತ್ತು ಇಂಥಾ ಚಟುವಟಿಕೆಗಳಲ್ಲಿ ಮತ್ತೆಂದೂ ತೊಡಗದಂತೆಯೂ ಆದೇಶ ನೀಡಿದೆ. ಈ ಮೂರು ಸಂಸ್ಥೆಗಳ ಮೇಲಿನ ಆರೋಪ ಸಾಬೀತಾದ್ದರಿಂದ ಮೂರಕ್ಕೂ ದಂಡ ವಿಧಿಸಲಾಗಿದ್ದು ಮೂರೂ ಸಂಸ್ಥೆಗಳು ತನ್ನ ಸದಸ್ಯರುಗಳಿಗೆ ಸ್ಪರ್ಧಾ ಆಯೋಗದ ನಿಯಮಾವಳಿಗಳ ಬಗ್ಗೆ, ನ್ಯಾಯಯುತ ವ್ಯಾಪಾರಿ ನಡವಳಿಕೆಗಳ ಬಗ್ಗೆ ಸೂಕ್ತ ಮಾಹಿತಿ ನೀಡಲು ಕಾಯಾವಾಚಾ ಮನಸಾ ಮುಂದಾಗಬೇಕೆಂದು ಸೂಚಿಸಿದೆ.

ಒಟ್ಟಾರೆ ಇಂದಿನ ಈ ತೀರ್ಪಿನ ಅನ್ವಯ ಇದುವರೆಗೆ ಕರ್ನಾಟಕದಲ್ಲಿ ಅಘೋಷಿತ ಡಬ್ಬಿಂಗ್ ನಿಶೇಧವೊಂದು ಜಾರಿಯಲ್ಲಿದ್ದು ಅದು ಸರಿಯಲ್ಲಾ ಎಂಬುದನ್ನು ಸಾರಿದಂತಾಗಿದೆ. ಹತೋಟಿ ಕೂಟದ ಮೂಲಕ ಹೇರಲಾಗಿದ್ದ ಇಂಥಾ ನಿಶೇಧಗಳು ಇನ್ಮುಂದೆ ಇರಲಾರವು ಎಂಬ ಭರವಸೆಗೆ ಕಾರಣವಾಗಿದೆ. ಕನ್ನಡದಲ್ಲಿ ಡಬ್ ಆದ ಕಾರ್ಯಕ್ರಮ ಬರಲು ಇದ್ದ ತಡೆಯೊಂದು ಇದೀಗ ತೆರವಾದಂತಾಗಿದೆ.

ಇಷ್ಟಕ್ಕೇ ಮುಗಿದಿಲ್ಲಾ!

ಈ ತೀರ್ಪಿನಿಂದಾಗಿ ದೊಡ್ಡ ತಡೆಯೊಂದು ನಿವಾರಣೆಯಾದರೂ ಕೆಲವು ಮಂದಿ ತೀರ್ಪು ಹೇಗೆ ಬಂದರೂ ಡಬ್ಬಿಂಗ್ ಚಿತ್ರ ಬಿಡುಗಡೆಯಾಗುವುದನ್ನೂ, ಪ್ರದರ್ಶಿಸುವುದನ್ನೂ ತಡೆಯುವುದಾಗಿ ಬೆದರಿಸುವ ಹೇಳಿಕೆಗಳನ್ನು ನೀಡಿವೆ. ಕರ್ನಾಟಕ ರಾಜ್ಯಸರ್ಕಾರವು ಇಂಥಾ ಬೆದರಿಕೆ ಒಡ್ಡುವವರನ್ನು ಗಂಭೀರವಾಗಿ ಪರಿಗಣಿಸಿ ಡಬ್ಬಿಂಗ್ ಚಿತ್ರಗಳ ತಯಾರಿಕೆ, ಬಿಡುಗಡೆ, ಪ್ರದರ್ಶನ ಮತ್ತು ವೀಕ್ಷಣೆಗೆ ಅನುವು ಮಾಡಿಕೊಡಬೇಕಾಗಿದೆ. ರಾಜ್ಯಸರ್ಕಾರ ಕನ್ನಡಿಗರ ಆಯ್ಕೆ ಸ್ವಾತಂತ್ರ್ಯದ ಹಕ್ಕನ್ನು ಎತ್ತಿಹಿಡಿಯಲು ಮುಂದಾಗಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಗೆ ಒಂದು ಮನವಿಯನ್ನು ಆರಂಭಿಸಲಾಗಿದ್ದು ಸಾಅರ್ವಜನಿಕರು ಇದಕ್ಕೆ ಸಹಿ ಹಾಕುವ ಮೂಲಕ ಇಂಥಾ ಬೆದರಿಕೆಗಳನ್ನು ಎದುರಿಸಬೇಕಾಗಿದೆ.

Petition

ಈ ನಮ್ಮ ಕೂಗಿಗೆ ನೀವೂ ಈ ಪಿಟಿಷನ್ನಿಗೆ ಸಹಿ ಹಾಕುವ ಮೂಲಕ ಬೆಂಬಲಿಸಿ: http://chn.ge/1IKwGH4

ಮೊಬೈಲ್ ಆಡಳಿತ ಸಾರ್ಥಕವಾಗಲು ಕನ್ನಡ ಬೇಕು!

aaa

ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಮುಂದಾಳ್ತನದ ರಾಜ್ಯಸರ್ಕಾರ ಇಂದು ನಾಡಿನ ಆಡಳಿತದಲ್ಲಿ ಮಹತ್ವದ ಹೆಜ್ಜೆಯನ್ನು ಇರಿಸಿದೆ. ನಾಗರೀಕ ಸೇವೆಗಳನ್ನು ಮೊಬೈಲ್ ಮೂಲಕವೇ ಪಡೆದುಕೊಳ್ಳಲು ಅನುವಾಗುವ “ಕರ್ನಾಟಕ ಮೊಬೈಲ್ – ಒನ್” ಸೇವೆಯನ್ನು ಇಂದು ಶುರು ಮಾಡಿದೆ. ಮೊದಲಿಗೆ ಶ್ರೀ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಪ್ರಾಯೋಗಿಕವಾಗಿ ಶುರುವಾಗಿದ್ದ ಈ ಸೇವೆಯು, ಇದೀಗ ಪೂರ್ಣಪ್ರಮಾಣದಲ್ಲಿ ಲೋಕಾರ್ಪಣೆಗೊಂಡಿದ್ದು, ಇದು ಜನರಿಗೆ ಬಹಳ ಉಪಕಾರಿಯಾಗಬಲ್ಲುದಾಗಿದೆ. ಇದರಿಂದಾಗಿ ಮೊಬೈಲ್ ಮೂಲಕವೇ ಸರ್ಕಾರದ ನಾಲ್ಕುನೂರಕ್ಕೂ ಹೆಚ್ಚು ಸೇವೆಗಳನ್ನು ಪಡೆಯಬಹುದಾಗಿದೆ. ಸರ್ಕಾರದ 37 ಇಲಾಖೆಗಳ 637 ಸೇವೆಗಳು (G2C) ಮೊಬೈಲ್‌ ಮೂಲಕ ಸಿಗಲಿದೆ. ಜೊತೆಗೆ ಉದ್ಯಮಿಗಳಿಂದ ಗ್ರಾಹಕರನ್ನು ತಲುಪಲು B2C ವಿಭಾಗದಲ್ಲಿಸುಮಾರು 3,644 ಸೇವೆಗಳನ್ನು ಒದಗಿಸಲಾಗುತ್ತಿದೆ.

ಕನ್ನಡದಲ್ಲಿ ಈ ಸೇವೆ ಇದ್ದೂ ಇಲ್ಲಾ!

ಈ ಸೇವೆಗಳು ಮೂರು ರೂಪದಲ್ಲಿ ಸಿಗುತ್ತದೆ. ಒಂದು ಐವಿಆರ್ ಸೇವೆ. ಇದರ ಮೂಲಕ ಯಾವುದೇ ದೂರವಾಣಿ ಬಳಸುವವರು ಸೇವೆ ಪಡೆಯಬಹುದು. ಇದರಲ್ಲಿ ಕನ್ನಡ ಮತ್ತು ಇಂಗ್ಲೀಶ್ ಆಯ್ಕೆಗಳಿವೆ. ಎರಡನೆಯದು ಅಂತರ್ಜಾಲ ತಾಣದ ಡೆಸ್ಕ್ ಟಾಪ್ ಸೇವೆ. ಇದರಲ್ಲೂ ಇಂಗ್ಲೀಶ್ ಮತ್ತು ಕನ್ನಡದ ಆಯ್ಕೆಯಿದ್ದು ಎರಡೂ ಕೆಲಸ ಮಾಡುತ್ತಿದೆ. ಮೂರನೆಯದು ಅಂದರೆ ಮೊಬೈಲ್ ಸೇವೆಯನ್ನು ನೀಡುವ ಅಪ್ಲಿಕೇಶನ್ (ಆಪ್) ಗೂಗಲ್ ಪ್ಲೇಸ್ಟೋರ್ ಮತ್ತು ಐಓಎಸ್ ಗಳಲ್ಲಿ ಸಿಗುತ್ತಿದ್ದು ಇದರಲ್ಲಿ ಕನ್ನಡದ ಆಯ್ಕೆ ಇದ್ದೂ ಇಲ್ಲಾ. ಇಲ್ಲಿ ಕನ್ನಡದ ಆಯ್ಕೆಯಿದ್ದರೂ ಬಳಕೆ ಬರಿಯ ನೋಂದಾವಣಿಗೆ ಮಾತ್ರಾ ಸೀಮಿತವಾಗಿದೆ. ಇಲ್ಲಿ ಕನ್ನಡವನ್ನು ಆರಿಸಿಕೊಳ್ಳುವುದೆಂದರೆ ಏಳು ಕಡಲು ಈಜಿದಷ್ಟೇ ತೊಡಕಿನ ಕೆಲಸ.

ಅಂದರೆ ಇಡೀ ಯೋಜನೆಯ ಹಿರಿಮೆ ಇರುವುದೇ ಮೊಬೈಲ್ ಬಳಸಿ ಸೇವೆ ಪಡೆದುಕೊಳ್ಳಿ ಎಂಬುದರಲ್ಲಿ. ಆದರೆ ಈ ಉದ್ದೇಶವೇ ಈಡೇರುತ್ತಿಲ್ಲಾ. ಏಕೆಂದರೆ ಮೊಬೈಲಿನಲ್ಲಿ ಈ ಸೇವೆ ಕನ್ನಡದಲ್ಲಿ ಸುಲಭವಾಗಿ ಸಿಗುತ್ತಿಲ್ಲಾ. ಈ ಕೊರತೆಯ ಕಾರಣದಿಂದಾಗಿ ಕರ್ನಾಟಕದ ಬಹುದೊಡ್ಡ ಪ್ರಮಾಣದ ಜನರನ್ನು ಈ ಯೋಜನೆ ಮುಟ್ಟೀತೆ ಎಂಬ ಅನುಮಾನ ಮೂಡುತ್ತದೆ. ಕರ್ನಾಟಕ ಸರ್ಕಾರ ತಾನು ಇಟ್ಟಿರುವ ಈ ಜನಪರ ಹೆಜ್ಜೆಯ ಯಶಸ್ಸಿನ ಬಗ್ಗೆ ತಲೆಕೆಡಿಸಿಕೊಳ್ಳುವುದಾದಲ್ಲಿ ಆದಷ್ಟು ಬೇಗ ಈ ಸೇವೆಗಳಲ್ಲಿ ಕನ್ನಡ ಸಿಗುವಂತೆ ಮಾಡಲಿ.

ಇಲ್ಲದಿದ್ದರೆ ಈ ಸೌಂದರ್ಯವೆಲ್ಲಾ ಶಿವನಿಲ್ಲದ ಸೌಂದರ್ಯದಂತೆಯೂ, ಶವ ಮುಖದ ಕಣ್ಣಿನಂತೆಯೂ ಆಗುತ್ತದೆ….